ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಲ್ಚೆಂಡೂ...

Mainashree
Updated On : 18 May 2014, 12:48 pm

ಫ್ರೆಂಚ್ ಗಡ್ಡ ಬಿಟ್ಟು ಅವನೊಬ್ಬ ನಮ್ಮಲ್ಲಿಗೆ ಬರುತ್ತಾನೆ. ಅವನ ಆಟ, ಫುಟ್ಬಾಲ್ ಬಲೆಗೂಡಿನ ನಡುವೆ ಮುಂದಿನ ಅವನ ಓಟವನ್ನು ನಾವೇನು ಅಷ್ಟು ಸೀರಿಯಸ್ಸಾಗಿ ಕಂಡಿಲ್ಲ. ಆದರೂ, ಡೀಗೋ ಮರಡೋನಾ ನಮ್ಮ ಸಚಿನ್ ಲೆವೆಲ್ಲಿಗೆ ಹೆಸರು ಮಾಡಿದವ ಅನ್ನೋದು ಚೆನ್ನಾಗಿ ಬಲ್ಲೆವು. ಹೀಗಾಗಿ, ನಮ್ಮ ಟಿವಿ ಕ್ಯಾಮೆರಾಗಳೂ ಆತನಿಗೆ ಟೈಟ್ 'ಸೆಕ್ಯೂರಿಟಿ' ಕೊಡುತ್ತವೆ. ಕೋಲ್ಕತ್ತಾದ 'ಸಾಲ್ಟ್‌ಲೇಕ್‌' ಸ್ಟೇಡಿಯಮ್ ಅರ್ಧ ತುಂಬುತ್ತದೆ.
ನಮ್ಮೊಳಗಿನ ಈ ಫುಟ್ಬಾಲ್ ಪ್ರೇಮಕ್ಕೆ ಅರೆಕ್ಷಣದ ಆಯುಸ್ಸು. ವರ್ಲ್ಡ್‌ಕಪ್ಪಿಗೋ, ಭೈಚುಂಗ್ ಭುಟಿಯಾನ ಮುಂದೆಯಷ್ಟೇ ಮೈಮುರಿಯುವಂಥದ್ದು. ವರ್ಲ್ಡ್‌ಕಪ್ಪಿಗೊಮ್ಮೆ ನಾವೂ ಬರಿಗಾಲಲ್ಲಿ ಹೋಗಿ, ಅಲ್ಲಿನ ಶೂಗಳನ್ನು ಕಂಡು ಹೆದರಿಬಂದ ಮೇಲೂ ಆ ಕ್ರೀಡೆ ಮೇಲೆ ಮತ್ತೇನೋ ಪ್ರೀತಿ. ಈಗ ಫುಟ್ಬಾಲ್‌ನ ಮಹಾ ಹಬ್ಬಕ್ಕೆ ಬ್ರೆಜಿಲ್ ಸಿದ್ಧಗೊಳ್ಳುತ್ತಿರುವುದು ಕಂಡಾಗಲೂ, ಅಲ್ಲಿ ನಮ್ಮ ತಂಡ ಇಲ್ಲವಲ್ಲ ಎಂಬ ದುಗುಡ ಮೋಡ ಒಳಗೆ ಹರಡಿಕೊಂಡಿದ್ದಾಗಲೂ, ಅದೇ ಫುಟ್ಬಾಲ್ ನಮ್ಮನ್ನು ಸೆಳೆಯುತ್ತಿದೆ.
ಅಷ್ಟಕ್ಕೂ ಈ ವರ್ಷ ಫುಟ್ಬಾಲ್ ವರ್ಲ್ಡ್‌ಕಪ್ ಹಾಗೂ ಇನ್ನೆರಡು ವರ್ಷ ಬಿಟ್ಟು ಒಲಿಂಪಿಕ್ ಅನ್ನೇ ಆಡಿಸುತ್ತಿರುವ ಬ್ರೆಜಿಲ್‌ನ ಆರ್ಥಿಕ ತಾಕತ್ತು ಕೂಡ ನಮ್ಮಷ್ಟೇ. ಅಲ್ಲಿ ಫುಟ್ಬಾಲ್ ಆಡಲು ಹೊರಟಿರುವ ದೇಶಗಳ ಎಲ್ಲ ಬೇಡಿಕೆಗಳನ್ನು ಪೂರೈಸ ಹೊರಟಿರುವ ಬ್ರೆಜಿಲ್‌ನ ಮುಖದಲ್ಲಿ ದಣಿವು ಕಾಣಿಸುತ್ತಿಲ್ಲ. ಆದರೆ, ಕೆಲವೊಮ್ಮೆ ಆ ದೇಶಕ್ಕೆ ನಗು ಬರುತ್ತದೆ... ಆ ದೇಶಗಳ ವಿಚಿತ್ರ ಡಿಮ್ಯಾಂಡ್‌ಗಳನ್ನು ಕೇಳಿ. ಅಂಥ ಒಂದಿಷ್ಟು ಬೇಡಿಕೆ ಪಟ್ಟಿ ಇಲ್ಲಿ...

ಸ್ವಿಸ್‌ಗೆ ಸ್ಪೀಡ್ ಇಂಟರ್ನೆಟ್
ಸ್ವಿಜ್ಜರ್ಲೆಂಡ್‌ಗೆ ಫೇಸ್‌ಬುಕ್, ಟ್ವಿಟ್ಟರ್‌ನ ಸಹವಾಸ ಸದಾ ಬೇಕೇಬೇಕು. ಹೀಗಾಗಿ, ಅದು ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆ ಕೇಳಿದೆ. ಅಲ್ಲದೆ, ಸ್ವಿಸ್ ಚಾನೆಲ್‌ಗಳು ತಮ್ಮೆಲ್ಲ ಕೊಠಡಿಗಳ ಟಿವಿಯಲ್ಲೂ ಬರಬೇಕೆನ್ನುವುದು ಇವರ ಇನ್ನೊಂದು ಡಿಮ್ಯಾಂಡ್.
ಕಾಂಡೋಮ್ ಕೊಡಿ ಅಂದ್ರು...
ಇಷ್ಟೆಲ್ಲದರ ಮಧ್ಯೆ ನೈಜೀರಿಯನ್ನರು ಕೇಳಿದ ವ್ಯವಸ್ಥೆಯೇ ಬೇರೆ. ಅವರಿಗೆ, ಅವರ ದೇಶದಿಂದ ಬರುವ ಫುಟ್ಬಾಲ್ ಪ್ರೇಮಿಗಳಿಗೆ ಕಾಂಡೋಮ್ ಪ್ಯಾಕೆಟ್ಟುಗಳ ಬೇಡಿಕೆಯಿಟ್ಟಿದೆ. ಈ ಮೂಲಕ ಮೈದಾನದಲ್ಲೂ, ಮೈದಾನದ ಹೊರಗೂ 'ಆಡುವ' ದೇಶ ಎಂಬ 'ಡಬಲ್‌' ಖ್ಯಾತಿಗೆ ತೃಪ್ತಿಪಟ್ಟಿದೆ.

ಈಕ್ವೆಡಾರ್‌ಗೆ ಬಾಳೆಹಣ್ಣು
ಈಕ್ವೆಡಾರ್ ಆಟಗಾರರಿಗೆ ಬಾಳೆಹಣ್ಣು ತಿಂದೇ ತಾಕತ್ತು ಬರೋದಂತೆ. ಬ್ರೆಜಿಲ್‌ನ ಪಕ್ಕದ ದೇಶವಾದರೂ ಅದಕ್ಕೆ ಅಲ್ಲಿನ ಬಾಳೆಹಣ್ಣು ಹಿಡಿಸೋದಿಲ್ಲ. ಈಕ್ವೆಡಾರ್‌ನ ಹಣ್ಣೇ ಬೇಕು. ಅದಕ್ಕಂತಲೇ ಎರಡು ಟನ್ ಬಾಳೆಹಣ್ಣುಗಳನ್ನು ಹೊತ್ತ ಹಡಗು ಈಕ್ವೆಡಾರ್ ತೀರವನ್ನು ಈಗಾಗಲೇ ಬಿಟ್ಟಿದೆ. ಆಟಗಾರರ ರೂಮಿಗೆ ನಿತ್ಯ ಬಾಳೆಹಣ್ಣು ಸಪ್ಲೈ ಮಾಡಲು ಈಕ್ವೆಡಾರ್ ಹುಡುಗರೇ ಬರುತ್ತಾರೆ.
ಕುರಾನ್ ತಂದಿಡಿ...
ಫುಟ್ಬಾಲ್‌ನಲ್ಲೂ ಧರ್ಮದ ಕಲರವ ಕೇಳಿದೆ. ಆಫ್ರಿಕಾ ಖಂಡದ ಅಲ್ಗೇರಿಯಾ ಎಂಬ ಪುಟ್ಟ ಮುಸ್ಲಿಂ ದೇಶದ ಆಟಗಾರರು ಕುರಾನ್ ಓದದೆ, ಅದಕ್ಕೆ ನಮಸ್ಕರಿಸದೆ ಮೈದಾನಕ್ಕಿಳಿಯುವುದಿಲ್ಲ. ಆ ಕುರಾನ್ ಗ್ರಂಥವನ್ನೂ ಬ್ರೆಜಿಲ್ಲೇ ತಂದುಕೊಡಬೇಕು. ಅಷ್ಟೂ ಆಟಗಾರರ ಖಾಸಗಿ ರೂಮಿನಲ್ಲಿಡಬೇಕಂತೆ.

ಒಳ್ಳೆಯ ಹಾಸಿಗೆ ಕೊಡಿ...
ಆಟದಷ್ಟೇ ಮುಖ್ಯವಾಗಿ ಮಲಗೋದಿಕ್ಕೆ ಆದ್ಯತೆ ಕೊಡುವಂತಿರುವ ಚಿಲಿ ದೇಶ ತನಗಾಗಿ ಅತ್ಯುತ್ತಮ ಬ್ರ್ಯಾಂಡಿನ ಹಾಸಿಗೆ ಕೇಳಿದೆ. ತುಂಬಾ ಸೈಲೆಂಟಾಗಿರುವ ತಾಣದಲ್ಲಿ ಎಸಿಯೊಂದಿಗೆ, ಹೋಟೆಲ್ ಬೇಕು ಅನ್ನೋದೂ ಇವರ ಒಕ್ಕೊರಲ ದನಿ. ಅಲ್ಲದೆ, ಪ್ರತಿ ರೂಮಿನಲ್ಲೂ ಟಿವಿ ವ್ಯವಸ್ಥೆಗೆ ಮನವಿ ಮಾಡಿದೆ.
ಜಪಾನ್‌ಗೆ ಸ್ಪಾ
ತುಂಬಾ ಕ್ರಿಯೇಟಿವ್ ದೇಶವಾದರೂ ಜಪಾನ್ ದೇಹಸುಖವನ್ನು ಮರೆಯುವುದಿಲ್ಲ. ಅದು ಆಟಗಾರರ ಪ್ರತಿ ಕೊಠಡಿಗೂ ಸುಸಜ್ಜಿತ ಸ್ಪಾ ಕ್ಯಾಬೀನ್ ಅನ್ನು ಕೇಳಿದೆ. ಬ್ರೆಜಿಲ್ ಸುಂದರಿಯರೇ ನಮಗೆ ಸ್ಪಾ ಮೂಲಕ 'ಮೈ ಸುಖ' ನೀಡಬೇಕೆನ್ನುವುದು ತೀರಾ ಓವರ್ರಾದ ಡಿಮ್ಯಾಂಡೇ ಇರಬಹುದು.

ಬಿಗ್ 'ಕಾಫಿ' ಬೇಕು...
ಇದು ಆಸ್ಟ್ರೇಲಿಯಾ ಇಟ್ಟ ಬೇಡಿಕೆ. ಆಟಗಾರರ ರೂಮಿನ ಪಕ್ಕವೇ ಕಾಫಿ ಮಶೀನ್ ಇಡುವಂತೆ ಮನವಿ ಮಾಡಿದೆ. ಅಲ್ಲದೆ, ಈ ದೇಶಕ್ಕೆ ಜಗತ್ತಿನ ಎಲ್ಲ ಪ್ರಮುಖ ನ್ಯೂಸ್‌ಪೇಪರ್‌ಗಳೂ ಬೆಳಗ್ಗೆ ಮುಂಚೆಯೇ ಟೇಬಲ್ಲಿನ ಮೇಲಿರಬೇಕಂತೆ. ಇದಕ್ಕಾಗಿಯೇ ಬ್ರೆಜಿಲ್ ನಾಲ್ಕು ಏಜೆನ್ಸಿಗಳನ್ನು ಬುಕ್ ಮಾಡಿ, ವ್ಯವಸ್ಥೆ ಕಲ್ಪಿಸಿದೆ.

ವಿಡಿಯೋಗೇವ್ ಪ್ಲೀಸ್...
ಇದು ಪೋರ್ಚ್‌ಗಲ್‌ನ ಡಿಮ್ಯಾಂಡ್. ಫುಟ್ಬಾಲ್‌ಗೆ ಬೇಕಾದ ಚುರುಕುತನವನ್ನೆಲ್ಲ ವಿಡಿಯೋಗೇವ್‌ನಲ್ಲೇ ಸಂಪಾದಿಸುವವರು ಪೋರ್ಚ್‌ಗೀಸರು. ಹೀಗಾಗಿ, ಪ್ರತಿ ಆಟಗಾರರೂ ವಿಡಿಯೋಗೇವ್‌ನ ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೆ, ಈ ದೇಶಕ್ಕೆ ಬ್ರೆಜಿಲ್‌ನ ಸೆಕ್ಯೂರಿಟಿ ಬಗ್ಗೆಯೂ ನಂಬಿಕೆ ಇಲ್ವಂತೆ. ಹೆಚ್ಚುವರಿ ಬಾಡಿಗಾರ್ಡ್ಸ್ ಕೊಟ್ಟರಷ್ಟೇ ಪಾಲ್ಗೊಳ್ತೀವಿ ಅನ್ನೋದು ಮತ್ತೊಂದು ಬೇಡಿಕೆ. ಸದ್ಯ ಬ್ರೆಜಿಲ್ 6 ಸೆಕ್ಯೂರಿಟಿ ಗಾರ್ಡ್‌ಗಳನ್ನು ಕೊಟ್ಟಿದೆ. ಅದರಲ್ಲಿ 4 ಮಂದಿ ಕ್ರಿಸ್ಟಿಯಾನೋ ರೊನಾಲ್ಡೋಗೆ, ಮಿಕ್ಕ ಚಿಲಿ ಆಟಗಾರರಿಗೆ ಕೇವಲ ಇಬ್ಬರಷ್ಟೇ ರಕ್ಷಣೆ.

ಫ್ರಾನ್ಸ್‌ಗೆ ಒಳ್ಳೆಯ ಸೋಪ್‌ನಲ್ಲಿ ಸ್ನಾನದಾಸೆ
ಫ್ರಾನ್ಸ್ ಕಣ್ಣಿಗೆ ಬ್ರೆಜಿಲ್ ಒಂದು ಕೊಳಕು ದೇಶವಂತೆ. ಅದು ಈ ಹಿಂದೆಯೇ ಅಂಥ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿದೆ. ಈಗ ಕೊಳಕು ದೇಶದಲ್ಲೇ ಫುಟ್ಬಾಲ್ ನಡೆಯುತ್ತಿರುವುದರಿಂದ, ಉತ್ಕೃಷ್ಟ ಸೋಪ್‌ಗೆ ಅದು ಡಿಮ್ಯಾಂಡ್ ಇಟ್ಟಿದೆ.

= ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments