ಕುಟುಂಬ ಸನ್ಯಾಸ!
ಕುಟುಂಬ ರಾಜಕಾರಣ ಕಂಡಿದ್ದೀರಿ. ಕುಟುಂಬ ಕಲಾವಿದರನ್ನೂ ನೋಡಿದ್ದೀರಿ. ಆದರಿದು ಕುಟುಂಬ ಸನ್ಯಾಸತ್ವ! ಒಂದೇ ಕುಂಟುಂಬದ ಐವರು ಸನ್ಯಾಸಿಗಳು! ಹಿಂದೆ ಶ್ರೀಮಂತಿಕೆ ಹೊಂದಿದ್ದ ಕುಟುಂಬ ವೈರಾಗ್ಯ ಹೊಂದಿ ಸಿರಿತನಕ್ಕೇ ಇತಿಶ್ರೀ ಹೇಳಿರೋ ಸ್ಟೋರಿ.
ಗದಗ ಜಿಲ್ಲೆ ಗಜೇಂದ್ರಗಡ ಮೂಲದ ಗೌತಮಚಂದ ಬಾಗಮಾರ ಅವರ ಕುಟುಂಬವೇ ಆಸೆ ಆಕಾಕ್ಷೆಗಳನ್ನು ಬದಿಗೊತ್ತಿ ಸರಳ ಬದುಕಿನತ್ತ ಮುಖ ಮಾಡಿರುವುದು. ಸದ್ಯ ಹುಬ್ಬಳ್ಳಿಯಲ್ಲಿರುವ ಗೌತಮಚಂದ 62ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಗೌತಮಚಂದ ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು. ಈ ಪೈಕಿ ಇಬ್ಬರು ಪುತ್ರಿಯರು, ಪುತ್ರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಇತ್ತೀಚೆಗಷ್ಟೇ ಮತ್ತೊಬ್ಬ ಮಗ ಬ್ರಿಜೇಶ್ ಬ್ರಹ್ಮಚರ್ಯ ಸ್ವೀಕರಿಸಿದ್ದಾರೆ.
ಗೌತಮಚಂದ ಅವರ ಕುಟುಂಬದಲ್ಲಿ ಮೊದಲು ಸನ್ಯಾಸ ಸ್ವೀಕರಿಸಿದ್ದು ಸಂದೇಶ (ಸಂದೇಶ ಮುನಿ). ಬಿಕಾಂ ಪದವೀಧರನಾಗಿದ್ದು 24ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಪುತ್ರಿ ಪ್ರಿಯಾ (ಪ್ರಜ್ಞಾಜಿ) ಬಿಕಾಂ ದ್ವಿತೀಯ ವರ್ಷದಲ್ಲಿದ್ದಾಗಲೇ ದೀಕ್ಷೆ. ಮತ್ತೊಬ್ಬ ಮಗಳು ಗುಣವಂತಿ (ಸುಪ್ರಜ್ಞಾಜಿ) 19ನೇ ವಯಸ್ಸಿನಲ್ಲೇ ದೀಕ್ಷೆ ಸಿಕ್ಕಿತು. ನಂತರ ಈ ಎಲ್ಲ ಸನ್ಯಾಸಿಗಳ ತಂದೆ ಗೌತಮಚಂದ ಬಾಗಮಾರ ಅವರೂ ದೀಕ್ಷೆ ಪಡೆದರು. ಮೊನ್ನೆಯಷ್ಟೇ ಮತ್ತೊಬ್ಬ ಮಗ ಬ್ರಿಜೇಶ್ ಬ್ರಹ್ಮಚರ್ಯದತ್ತ ಸರಿದಿದ್ದಾನೆ. ಕಠಿಣ ಮನಃಸ್ಥಿತಿ, ತ್ಯಾಗ ಮನೋಭಾವದಿಂದ ಜೈನ ಧರ್ಮದಲ್ಲಿ ದೀಕ್ಷೆ ಪಡೆದಿದ್ದಾರೆ.
= ಶಿವಕುಮಾರ ಕುಷ್ಟಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.