ಮತ್ತೆ ಐಶ್ವರ್ಯ
ಬಣ್ಣದ ಜಗತ್ತಿನ ಬಗ್ಗೆ ಆಸಕ್ತಿ ಇಲ್ಲದವರು ಯಾರಾದಾರೂ ಇದ್ದಾರೆಯೇ? ಬ್ಯಾಟರಿ ಹಾಕಿ ಹುಡುಕಿದರೆ ಸಾವಿರಕ್ಕೆ ಒಬ್ಬರೋ, ಇಬ್ಬರೋ ಸಿಗಬಹುದೇನೋ! ನಟನೆ, ಸಿನಿಮಾ ಅಂದಾಕ್ಷಣ ಬಹುತೇಕ ಹುಡುಗರು ಸಲ್ಮಾನ್ ಖಾನ್ ಆಗಿಬಿಡುತ್ತಾರೆ. ಹುಡುಗಿಯರು ಕೂಡ ತಾವು ಕತ್ರಿನಾ ಕೈಫ್, ಕರೀನಾ ಕಪೂರ್ ಹಾಗೂ ಐಶ್ವರ್ಯ ರೈಗಿಂತ ಕಡಿಮೆ ಇಲ್ಲ ಅಂದುಕೊಂಡು ಸೀದಾ ಬ್ಯೂಟಿಪಾರ್ಲರ್‌ಗೆ ಹೋಗಿ ಸಿನಿಮಾ ಸೆಟ್‌ಗೆ ಬರ್ತಾರೆ. ಇವರ ಪೈಕಿ ಬಣ್ಣದ ಜಗತ್ತು ಯಾರನ್ನು ಅಪ್ಪಿಕೊಳ್ಳುತ್ತೋ ತಿಳಿಯದು. ಆದರೂ ಕನಸುಗಳ ಮೂಟೆ ಹೊತ್ತು ಬರುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಹಾಗೆ ನಟನೆಯ ವ್ಯಾಕರಣದ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡು ತಾನೂ ಕೂಡ ಕ್ಯಾಮೆರಾ ಮುಂದೆ ನಿಲ್ಲಬೇಕು ಎಂದುಕೊಂಡು ಬಂದಿರುವ ಈಕೆಯ ಹೆಸರು ಐಶ್ವರ್ಯ. ಅಲ್ಲಿಗೆ ಕನ್ನಡದಲ್ಲಿ ಐಶ್ವರ್ಯ ನಾಗ್ ಜೊತೆಗೆ ಮತ್ತೊಂದು ಐಶ್ವರ್ಯ ಹೆಸರು ಸೇರುತ್ತಿದೆ. ಇದರ ನಡುವೆ ಮೈಸೂರಿನಿಂದ ಮತ್ತೊಬ್ಳು ಐಶ್ವರ್ಯ ಗಾಂಧಿನಗರಕ್ಕೆ ಬಂದಿದ್ದಾಳೆ ಎನ್ನುವುದು ನಿಮ್ಮ ಗಮನಕ್ಕಿರಲಿ. ಸದ್ಯ ನಟನೆಯ ಕನಸು ಕಟ್ಟಿಕೊಂಡು ಈಗಷ್ಟೆ ಗಾಂಧಿನಗರದತ್ತ ಮುಖ ಮಾಡಿರುವ ಈ ಐಶ್ವರ್ಯ ಎಸಿಟಿ ಎನ್ನುವ ಖಾಸಗಿ ಕೇಬಲ್ ವಾಹಿನಿಯಲ್ಲಿ ನಿರೂಪಕಿಯಾಗಿದ್ದವಳು. ನಿರೂಪಕಿಯಾಗಿದ್ದಾಗಲೇ ಚಿತ್ರರಂಗದವರ ಮುಖ ನೋಡುತ್ತಿದ್ದ ಐಶ್ವರ್ಯ ಈಗ ಅದೇ ರಂಗವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ಆದರೆ, ಯಾವುದೇ ತರಬೇತಿ ಇಲ್ಲದೆ ಬಂದರೆ ಅವಕಾಶಗಳು ಸಿಗಲ್ಲ ಎಂದುಕೊಂಡು ಒಂದೆರಡು ವರ್ಷ ಅಭಿನಯ ತರಬೇತಿ ತೆಗೆದುಕೊಂಡು ಗಾಂಧಿನಗರಕ್ಕೆ ಬಂದ ಐಶ್ವರ್ಯಳ ನಟನೆಯ ಕನಸನ್ನು ಕೈ ಹಿಡಿದಿದ್ದು 'ಆಕಾಶದೀಪ' ಎನ್ನುವ ಧಾರಾವಾಹಿ. ಇಲ್ಲಿ, ಚಂದ್ರಿಕಾ ಪಾತ್ರವನ್ನು ಮಾಡುತ್ತಿದ್ದಾಗಲೇ ಕಿರುತೆರೆ ಪ್ರೇಕ್ಷಕರ ನಡುವೆ ಒಳ್ಳೆಯ ಹೆಸರು ಸಂಪಾದಿಸಿಕೊಂಡವಳಿಗೆ ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳು ಸಿಕ್ಕರೂ ಯಾಕೋ ಧಾರಾವಾಹಿಗಳಲ್ಲೇ ನಾಯಕಿ ಪಾತ್ರ ಮಾಡುವ ತವಕ. 'ಗ್ಲಾಮರ್ ಇದೆ ಅಂತ ಇಲ್ಲಿಗೆ ಬಂದೆ. ನಟನೆಗೆ ಬೇಕಾದ ತಯಾರಿ ಮಾಡಿಕೊಂಡೇ ಬಂದೆ. ಆದರೆ, ನಾನು ಅಂದುಕೊಂಡಷ್ಟು ಸುಲಭವಲ್ಲ ಅವಕಾಶ ಸಿಗುವುದು. ಈಗಷ್ಟೆ ರವಿ ಗರಣಿ ಅವರ 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಆಯ್ಕೆ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ನಾಯಕಿಯ ತಂಗಿ ಪಾತ್ರ ಸಿಕ್ಕಿದೆ. ಮುಂದೆ ಮತ್ತಷ್ಟು ದೊಡ್ಡ ಪಾತ್ರಗಳು ಸಿಗುತ್ತಾವೆಂಬ ನಂಬಿಕೆ' ಇದೆ ಎನ್ನುತ್ತಾರೆ ಐಶ್ವರ್ಯ. ನೋಡಕ್ಕೆ ಚೆನ್ನಾಗಿದ್ದಾಳೆ ಎನ್ನುವ ಕಾರಣಕ್ಕೆ ಅಭಿನಯಿಸಲು ಬಂದಿರುವ ಐಶ್ವರ್ಯ ಓದಿದ್ದು, ಬಿಎಸ್ಸಿ. ಆಗಿದ್ದು ಟಿವಿಯಲ್ಲಿ ನಿರೂಪಕಿ. ಈಗ ಬಂದು ಸೇರಿದ್ದು ಕಿರುತೆರೆ ಜಗತ್ತಿಗೆ. ಮುಂದೆ ಚಿತ್ರರಂಗಕ್ಕೆ.
= ಆರ್.ಕೇಶವಮೂರ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.