ದೇಶ ಕಾಯುವ ರಕ್ಷಕ ಬೇಕು
ಜಾತ್ಯಾತೀತ ರಾಷದ ಪ್ರಧಾನಿಯಾಗುವವರು ನಾವೆಲ್ಲ ಭಾರತೀಯರೆಂಬ ಪರಿಕಲ್ಪನೆ ಮೂಡಿಸುವಂತಿರಬೇಕು. ಆಡಳಿತದಲ್ಲಿ ಮತ್ತೊಬ್ಬರ ಸಲಹೆ ಪಡೆಯಬೇಕೇ ಹೊರತು ಹಸ್ತಕ್ಷೇಪಕ್ಕೆ ಬಲಿಯಾಗಬಾರದು. ನಿರುದ್ಯೋಗ, ಭ್ರಷ್ಟಾಚಾರ, ಗಡಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಸ್ವಾವಲಂಬಿ ರಾಷ್ಟ್ರಕ್ಕೆ ಸ್ವಾಭಿಮಾನಿಯಾದ ನಾಯಕ ಬೇಕು. ಕೃಷಿ, ಕೈಗಾರಿಕೆ ವೃದ್ಧಿಸಿ, ಪ್ರತಿಭಾವಂತರಿಗೆ ಪ್ರಾಶಸ್ತ್ಯ ನೀಡಬೇಕು. ಮಹಿಳೆಯರಿಗೆ, ದುರ್ಬಲರಿಗೆ ರಕ್ಷಣೆ ನೀಡಬೇಕು. ಒಟ್ಟಿನಲ್ಲಿ ಜನರ ಸೇವಕನಾಗಬಲ್ಲ ಪಾರದರ್ಶಕ ಹಾಗೂ ದಕ್ಷ ಅಡಳಿತಗಾರರಾಗಿರಬೇಕು. ನಮ್ಮ ಆಶೋತ್ತರ ಈಡೇರಿಸುವ, ಸದೃಢ ದೇಶ ಕಟ್ಟುವ ನೇತಾರಬೇಕು.
-ಆನಂದ ಕೆ.ಎಸ್, ಮೈಸೂರು
ಚಿಂತನಶೀಲ ವ್ಯಕ್ತಿ ಬೇಕು
ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರದಲ್ಲಿಯೂ, ಸಾಧನೆ ಮಾಡಿದ ವ್ಯಕ್ತಿ ಪ್ರಧಾನಿಯಾಗಬೇಕು. ಆತನಿಗೆ ಪ್ರತಿಯೊಂದು ವಿಷಯವೂ ಅರ್ಥವಾಗಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸುವಂಥವನಾಗಿರಬೇಕು. ಜಾತಿ, ಮತ, ಭೇದ, ಲಿಂಗ, ಸಮುದಾಯ, ಪಕ್ಷ ಯಾವುದೇ ಭೇದವಿಲ್ಲದೇ ಜನರಿಗೆ ಉತ್ತಮವಾದ ಆಡಳಿತ ನೀಡಿ ದೇಶವನ್ನು ಅಭಿವೃದ್ಧಿಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕು. ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ಯೋಜನಾಬದ್ಧವಾಗಿ ವಿರ್ವಹಿಸುವ ಚಿಂತನಶೀಲನಾಗಿರಬೇಕು. ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುವುದರ ಜತೆಗೆ ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ತೆಗೆದುಕೊಳ್ಳುವ ಚಾಣಾಕ್ಷ ಪ್ರಧಾನಿ ಬೇಕು. ಟಿ
-ಶೃತಿ ಎಂ. ಪಿ., ಮಳೂರುಪಟ್ಟಣ
ಪ್ರಾಮಾಣಿಕ ವ್ಯಕ್ತಿ ಪ್ರಧಾನಿಯಾಗಲಿ
ಜಗತ್ತಿನಲ್ಲಿಯೇ ಬಹು ದೊಡ್ಡ ಪ್ರಜಾಪ್ರಭುತ್ವ ಹೊಂದಿದ ನಮ್ಮ ದೇಶದ ಮುಂದಿನ ಪ್ರಧಾನಿಗೆ ನಮ್ಮಲ್ಲಿನ ಸಂಪದ್ಭರಿತ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳುವ ಕಲೆ ಗೊತ್ತಿರಬೇಕು. ಕೃಷಿಗೆ, ಸಾಂಪ್ರದಾಯಿಕ ಕಲೆ, ಸಂಸ್ಕೃತಿಗಳಿಗೆ ಒತ್ತು ನೀಡುವಂಥವನಾಗಿರಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಬಡತನವನ್ನು ಬೇರು ಸಹಿತ ಕಿತ್ತೊಗೆಯಲು ಸನ್ನದ್ಧನಾಗಿರಬೇಕು. ಯಾವುದೇ ಜಾತಿ-ಮತ ಪಕ್ಷಗಳಿಗೆ ಮಣಿಯದೆ ಪ್ರಜೆಗಳ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು. ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲಲು ಪ್ರೇರಣೆ ನೀಡಬೇಕು. ತಂತ್ರಜ್ಞಾನದ ಜತೆ ಜತೆಗೆ ನೈತಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವಂಥ ಪ್ರಾಮಾಣಿಕ ವ್ಯಕ್ತಿ ಬೇಕು.
-ಜಯಶ್ರೀ ಜೆ. ಕಟಕೋಳ, ಅಬ್ಬಿಗೇರಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಈ ರಜೆಯಲ್ಲಿ ಮುಂದಿನ ತರಗತಿಗೆ ಮಕ್ಕಳನ್ನು ಹೇಗೆ ಸಜ್ಜುಗೊಳಿಸುವುದು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com