ಚೀತಾ ಬಾಯಿ
ಬೆಕ್ಕು ಸಾಕಿ ಅನ್ನಿ, ಸಹಿಸಿಕೊಳ್ಳುತ್ತೇವೆ. ನಾಯಿ ಸಾಕಿ ಅನ್ನಿ, ಗುರಾಯಿಸುತ್ತೇವೆ. ಇನ್ನು ಚಿರತೆ ಸಾಕಿ ಅಂದರೆ? ಇವನಿಗೇನು ಹುಚ್ಚಾ ಎಂದುಕೊಳ್ಳಬೇಡಿ. ಇಲ್ಲೊಬ್ಬಳಿದ್ದಾಳೆ ಆಂಟಿ. ಇವಳ ಮನೆ ತುಂಬಾ ಚಿರತೆ, ಸಿಂಹ, ಹುಲಿಗಳೇ ಇವೆ.
ಇವಳ ಹೆಸರು ಕರೆಯಲು ನಿಮಗೆ ಆಗೊಲ್ಲ ಬಿಡಿ- ರಿಯಾನಾ ವಾನ್ ನಿಯುವೆನ್ಹ್ಯೂಸೆನ್. ಈಕೆಯ ಮನೆಯಲ್ಲಿರುವ ಸದಸ್ಯರು- ನಾಲ್ಕು ಚೀತಾಗಳು, 5 ಸಿಂಹಗಳು ಮತ್ತು ಎರಡು ಹುಲಿಗಳು. ದಕ್ಷಿಣ ಆಫ್ರಿಕದ ಅಭಯಾರಣ್ಯವೊಂದರ ಪರಿಚಾರಿಕೆಯಾಗಿರುವ ಈಕೆಗೀಗ 49 ವರ್ಷ.
ಈ ಪ್ರಾಣಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಾಳೆ. ಚೀತಾಗಳ ಸಂಖ್ಯೆ ದಕ್ಷಿಣ ಆಫ್ರಿಕದಲ್ಲಿ ಸಾವಿರಕ್ಕಿಳಿದಿದೆಯಂತೆ. ಅದನ್ನು ರಕ್ಷಿಸುವ ಉದ್ದೇಶದಿಂದ 2006ರಲ್ಲಿ ತಂದು ಮನೆಯಲ್ಲಿ ಸಾಕಲು ಶುರುಮಾಡಿದಳು. ಅದಕ್ಕಾಗಿ 22 ವರ್ಷಗಳಿಂದ ಮಾಡುತ್ತಿದ್ದ ಉದ್ಯೋಗ ಬಿಟ್ಟಳು.
ಚಿರತೆಗಳೆಲ್ಲ ಈಕೆಯ ಮನೆಯಲ್ಲಿ ಸ್ವೇಚ್ಛೆಯಿಂದ ತಿರುಗಾಡುತ್ತವೆ. ಅಡುಗೆ ಮಾಡುತ್ತಿದ್ದರೆ ಬಂದು ಹಸಿವಾಗಿದೆ ಎಂದು ಗುರುಗುಟ್ಟಿ ಸೂಚಿಸುತ್ತವೆ. ಪುಣ್ಯ, ಈಕೆ ಸಾಕುವ ಎರಡು ನಾಯಿಗಳು ಇವುಗಳ 'ಮೆನು'ವಿನಲ್ಲಿಲ್ಲ. ಅವೂ ಕೂಡ ಈ ಚಿರತೆಗಳೊಂದಿಗೆ ಹಾಯಾಗಿ ಮಲಗಿ ನಿದ್ದೆಹೋಗುತ್ತವೆ. ಚೀತಾಗಳನ್ನು ರಕ್ಷಿಸುವ ಸಲುವಾಗಿ ಎನ್ಜಿಒ ಒಂದನ್ನು ಕೂಡ ಈಕೆ ಸ್ಥಾಪಿಸಿದ್ದಾಳೆ. ನೀವು ಅಲ್ಲಿ ಹೋಗಿ ಶುಲ್ಕ ಕೊಟ್ಟು ಮೃಗಗಳೊಂದಿಗೆ ನಿಮ್ಮ ನಾನಾ ಭಂಗಿಯ ಫೋಟೋ ತೆಗೆಸಿಕೊಳ್ಳಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.