ಬೊಂಬೆ ಆಡ್ಸೋನು ಸುಮ್ನೆ ಕುಂತವ್ನೆ
ಈ ಬೊಂಬೆಯ ಬಗ್ಗೆ ತಿಳಿಯಲು 'ಕಸ್ತೂರಿ ನಿವಾಸ' ನೋಡಬೇಕಿಲ್ಲ, 'ಆಡಿಸಿ ನೋಡು ಬೀಳಿಸಿ ನೋಡು, ಉರುಳಿ ಹೋಗದು' ಎಂಬ ಪದ್ಯವನ್ನೂ ಕೇಳಬೇಕಿಲ್ಲ. ಅಮೆರಿಕ ಅಧ್ಯಕ್ಷರಿಗೆ ಅದರ ಸೊಗಸು ಗೊತ್ತಾದದ್ದು ಮೊನ್ನೆ ಮೊನ್ನೆ ಇರಬಹುದು, ಆದರೆ ರಾಜ್ಯದವರಿಗೆಲ್ಲ ಚೆನ್ನಾಗಿಯೇ ಗೊತ್ತು.
ಪುರಾತನ ಕಾಲದಿಂದಲೂ ಚನ್ನಪಟ್ಟಣ ಬೊಂಬೆಗಳ ತವರು. ಪ್ರಾಥಮಿಕ ಶಾಲಾ ಪಠ್ಯದಲ್ಲಿ 'ಅಂದದ ಗೊಂಬೆ ಚಂದದ ಗೊಂಬೆ, ಚನ್ನಪಟ್ಟಣದ ಬಣ್ಣದ ಗೊಂಬೆ' ಎಂಬ ಪದ್ಯ ಓದಿದ್ದು ನಿಮಗೂ ನೆನಪಿರಬಹುದು. ಬೊಂಬೆಗಳ ಉದ್ಯಮ ಅದರಲ್ಲೂ ದಂತ, ಗಂಧ, ತೇಗ, ಆಲದಮರ ಇತ್ಯಾದಿ ಬೆಲೆಬಾಳುವ ಮರಮುಟ್ಟುಗಳನ್ನು ಕುಸುರಿಗೆ ಒಳಪಡಿಸಿ ಮನಸೂರೆಗೊಳ್ಳುವ ಬೊಂಬೆಗಳನ್ನೂ ಚಿತ್ರಕಲಾಕೃತಿಗಳನ್ನೂ ವೈವಿಧ್ಯಮಯ ರೀತಿಯಲ್ಲಿ ಮಹಾಭಾರತ ಮತ್ತು ರಾಮಾಯಣದ ಪೌರಾಣಿಕ ಹಿನ್ನಲೆ ದೃಶ್ಯ ಹಾಗೂ ಚಿತ್ರಪಟಗಳ ಮೂಲಕ ಕಣ್ತುಂಬಿಕೊಳ್ಳುವಂತೆ ಕಟ್ಟಿಕೊಟ್ಟಿದ್ದನ್ನು ನೋಡಿ ಕುಣಿದಿದ್ದೇವೆ.
ದೇಶ-ವಿದೇಶಗಳಲ್ಲೂ ತನ್ನ ಚೆಲುವಿನ ಕಂಪು ಬೀರಿರುವ ಬೊಂಬೆಗಳು ಅಮೆರಿಕದ ಶ್ವೇತಭವನಕ್ಕೂ ಲಗ್ಗೆ ಇಟ್ಟಿವೆ. ಅಲ್ಲಿಯ ಅಧ್ಯಕ್ಷರ ಕುಟುಂಬದವರ ಮನಸೂರೆಗೊಳಿಸಿ, ಪ್ರಥಮ ಮಹಿಳೆ ಮಿಶೆಲ್ ಒಬಾಮ ಅವರ ಬ್ಯಾಗಿನಲ್ಲಿ ಪ್ರಯಾಣಿಸಿ ವೈಟ್ಹೌಸ್ನಲ್ಲಿ ನೆಲೆಯೂರಿವೆ.
ಇಂತಿಪ್ಪ ನಮ್ಮ ಚಲುವ ಚನ್ನಪಟ್ಟಣದಲ್ಲಿ ಬೊಂಬೆ ಮಾರುಕಟ್ಟೆ ಬೇಡಿಕೆ ಕಡಿಮೆಯಾಗಿದ್ದು, ಇದನ್ನೇ ನಂಬಿಕೊಂಡಿರುವ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ. ಜೀವನ ನಡೆಸಲು ಹೆಣಗಾಡುವ ಸ್ಥಿತಿ ಎದುರಾಗಿದೆ. ಕಾಲಮಾನಕ್ಕೆ ತಕ್ಕಂತೆ ಬೊಂಬೆ ಕಸುರಿ ಮಾಡಿದರೂ, ಮಾರಾಟದಲ್ಲಿ ಹೋರಾಟ ಮಾಡಬೇಕಾದ ಪರಿಸ್ಥಿತಿ. ಅದಕ್ಕೆ ಕಾರಣ ಜಾಗತೀಕರಣ. ಚೀನಾ ತಯಾರಿಕೆಯ ಅಗ್ಗದ ದರದ ಆಟಿಕೆಗಳು ಎಲ್ಲೆಡೆ ಲಗ್ಗೆಯಿಟ್ಟಿರುವುದು ದೊಡ್ಡ ಹೊಡೆತ. ಕುಶಲಕರ್ಮಿಗಳ ಕೊರತೆ, ನಿರಾಸಕ್ತಿಗಳು ಕೂಡ ಬೊಂಬೆ ಉದ್ಯಮ ಕುಂಟಲು ಕೊಡುಗೆ ನೀಡಿವೆ.
ಏನೇನು ಲಭ್ಯ?
ಮೈಸೂರು ರಸ್ತೆಯಲ್ಲಿ ಸಾಗುವಾಗ ಚನ್ನಪಟ್ಟಣಕ್ಕೆ ಕಾಲಿಡುತ್ತಿದ್ದಂತೆ ಮಾರ್ಗದ ಇಕ್ಕೆಲಗಳಲ್ಲೂ ಬಣ್ಣ-ಬಣ್ಣದ ನಯನಮನೋಹರ ಬೊಂಬೆಗಳು, ಕಲಾಕೃತಿಗಳು, ಮಕ್ಕಳಾಡುವ ಕುದುರೆಗಳಿಂದ ಹಿಡಿದು, ನಾಲ್ಕು ಚಕ್ರದ ವಾಹನಗಳ ಆಸನಗಳಿಗೆ ಹಾಕಲಾಗುವ ವಿವಿಧ ಮಾದರಿಯ ಮಣಿಕವಚಗಳನ್ನೂ ಇಲ್ಲಿ ಕಾಣಬಹುದು. ನವರಾತ್ರಿಯಲ್ಲಿ ಮನೆಮನೆಗಳಲ್ಲಿ ಕೂರಿಸುವ ಬೊಂಬೆಗಳ ಮಾದರಿಗಳು ಕೂಡ ಇಲ್ಲಿ ಲಭ್ಯ. ಎಳೆಯ ಮಕ್ಕಳ ಆಟಿಕೆಯಿಂದ ದೊಡ್ಡವರ ಗೃಹಾಲಂಕಾರ ಸಾಮಗ್ರಿವರೆಗೆ ಬೇಕೆಂದದ್ದು ಇಲ್ಲಿದೆ. ಚನ್ನಪಟ್ಟಣದಲ್ಲೇ ಕಲಾಗ್ರಾಮವಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರಿನ ಕಡೆಗೆ ಮದ್ದೂರಿನವರೆಗೆ, ಬೆಂಗಳೂರು ಕಡೆಗೆ ರಾಮನಗರ, ಬಿಡದಿವರೆಗೂ ಈ ಉದ್ಯಮ ಚಾಚಿಕೊಂಡಿದೆ.
ಬೊಂಬೆ ಇತಿಹಾಸ
ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ 200 ವರ್ಷಗಳ ಇತಿಹಾಸ ಇದೆ. ಮೈಸೂರು ಹುಲಿ ಟಿಪ್ಪು ಈ ಉದ್ಯಮ ಬೆಳವಣಿಗೆಗೆ ಕಾರಣಕರ್ತ ಎಂಬ ಮಾತಿದೆ. ಪರ್ಷಿಯಾ ದೇಶದಿಂದ ಕುಶಲಕರ್ಮಿಗಳನ್ನು ಕರೆ ತಂದು ಈ ಭಾಗದ ಜನತೆಗೆ ಕುಶಲ ಕಲೆ ತಿಳಿಸಿಕೊಟ್ಟಿದ್ದರಿಂದ ಇಲ್ಲಿ ಬೊಂಬೆ ಉದ್ಯಮ ಬೆಳೆಯಿತು. ನಂತರ ಇಲ್ಲಿನ ಬಾಬಾ ಸಾಹೇಬ್ಮಿಯಾ ಎಂಬ ಕುಶಲಕರ್ಮಿ ಜಪಾನ್ಗೆ ಹೋಗಿ ಆಧುನಿಕ ವಿಧಾನದ ಬೊಂಬೆ ಕೆತ್ತನೆ ಬಗ್ಗೆ ತಿಳಿದುಕೊಂಡು ಬಂದರು. ಅವರು ಆಗಿನ ಮೈಸೂರು ದಿವಾನರಿಗೆ ತಮ್ಮ ಕಲೆ ಬಗ್ಗೆ ತಿಳಿಸಿದರು. ಇದರಿಂದ ಪ್ರೇರಿತರಾದ ಮೈಸೂರು ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮ ತರಬೇತಿ ಸಂಸ್ಥೆ ಆರಂಭಿಸಿದರು. ಇಲ್ಲಿ ಅರಗು, ಬಣ್ಣ, ತೆಂಗಿನ ನಾರಿನಿಂದ ಬೊಂಬೆಗಳ ತಯಾರಿ. ಮಡಕೆ, ಎಣ್ಣೆ, ಮೊದಲಾದ ಬಗೆಯ ಕುಶಲ ಕಲೆ ತರಬೇತಿ ನೀಡಲಾಗುತ್ತಿತ್ತು. ಇಂದು ತರಬೇತಿ ಕೇಂದ್ರ ಅವಸಾನದ ಅಂಚು ತಲುಪಿದೆ.
-ಶ್ರುತಿ ಎಂ.ಪಿ. ಮಳೂರುಪಟ್ಟಣ