ಪುದೀನಾ-ಮಾವಿನಕಾಯಿ ಚಟ್ನಿ
ಬೇಸಿಗೆಯು ದೇಹವನ್ನು ಬಿಸಿ ಮಾಡುವುದರೊಂದಿಗೆ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ...
ಬೇಸಿಗೆಯು ದೇಹವನ್ನು ಬಿಸಿ ಮಾಡುವುದರೊಂದಿಗೆ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ದೇಹವನ್ನು ಆದಷ್ಟು ತಂಪಾಗಿರುವಂತೆ ನೋಡಿಕೊಳ್ಳಬೇಕು. ಪುದೀನಾ ದೇಹಕ್ಕೆ ತಂಪನ್ನು ಒದಗಿಸುವ ಸೊಪ್ಪು. ಬೇಸಿಗೆ ಆಹಾರದಲ್ಲಿ ಈ ಸೊಪ್ಪನ್ನು ಹೆಚ್ಚು ಬಳಸುವುದು ಒಳ್ಳೆಯದು. ಜತೆಗೆ ಮಾವಿನಕಾಯಿ ಸೇರಿಸಿದರೆ ರುಚಿ ಹಾಗೂ ಸುವಾಸನೆ ಹೆಚ್ಚುವುದು.
ಬೇಕಾಗುವ ಸಾಮಗ್ರಿಗಳು: ಹಸಿ ಮಾವಿನಕಾಯಿ 1(ಮಧ್ಯಮ ಗಾತ್ರದ್ದು), ಪುದೀನಾ 1 ಕಟ್ಟು, ಬೆಳ್ಳುಳ್ಳಿ ಎಸಳು 4, ಹಸಿಮೆಣಸಿನಕಾಯಿ 3, ಹುರಿದ ಜೀರಿಗೆ 2 ಚಮಚ, ಬ್ಲ್ಯಾಕ್ ಸಾಲ್ಟ್ ಅರ್ಧ ಚಮಚ, ಸಾಸಿವೆ 1 ಚಮಚ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಪುದೀನಾವನ್ನು ತೊಳೆದಿಟ್ಟುಕೊಳ್ಳಿ. ಮಾವಿನ ಹೋಳು, ಪುದೀನಾ ಎಲೆ ಹಾಗೂ ಬೆಳ್ಳುಳ್ಳುಯನ್ನು ಜತೆಯಾಗಿ ರುಬ್ಬಿಟ್ಟುಕೊಳ್ಳಿ. ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಹುರಿದ ಜೀರಿಗೆ ಪುಡಿ, ಬ್ಲ್ಯಾಕ್ ಸಾಲ್ಟ್ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಈಗ ಮಾವಿನಕಾಯಿ-ಪುದೀನಾ ಚಟ್ನಿ ಸಿದ್ಧ. ಈ ಚಟ್ನಿ ಅನ್ನದ ಜತೆ ತಿಂದರೆ ಸೊಗಸಾಗಿರುತ್ತದೆ. ದೋಸೆ-ಚಪಾತಿ ಜತೆಯೂ ತಿನ್ನಬಹುದು.