ಶಿಬಿರಗಳ ಮೂಲಕ ಸದೃಢಗೊಳಿಸಿ
ಮಕ್ಕಳಿಗೆ ರಜೆಯಲ್ಲಿ ಆಟಗಳ ಜತೆ ಪಾಠಗಳನ್ನು ಕಲಿಸುವ ಪರಿಪಾಠ ನಡೆದುಬರಬೇಕು. ರಂಗಾಟಗಳ (ಶಿಬಿರ)...
ಮಕ್ಕಳಿಗೆ ರಜೆಯಲ್ಲಿ ಆಟಗಳ ಜತೆ ಪಾಠಗಳನ್ನು ಕಲಿಸುವ ಪರಿಪಾಠ ನಡೆದುಬರಬೇಕು. ರಂಗಾಟಗಳ (ಶಿಬಿರ) ಮುಖೇನ ಮಕ್ಕಳಲ್ಲಿ ಶ್ರದ್ದೆ, ತಿಳಿವಳಿಕೆ, ಕುತೂಹಲ, ಹಾಗೂ ಏಕಾಗ್ರತೆಯನ್ನು ಬೆಳೆಸುವ ನಿಟ್ಟಿನಲ್ಲಿ ಮುನ್ನೆಡಸಬೇಕು, ಇದರಿಂದ ಮಕ್ಕಳಲ್ಲಿ ಚೈತನ್ಯ ಮೂಡುತ್ತದೆ. ಏಕಾಗ್ರತೆಯನ್ನು ಕಲಿಸಿದರೆ ಯಾವುದೇ ಸಮಸ್ಯೆಯನ್ನು ಎದುರಿಸುವಂತಹ ದಿಟ್ಟತನ ಬರುತ್ತದೆ. ಅವರಲ್ಲಿ ಒಬ್ಬ ದಿಟ್ಟ ನಾಯಕ ಹುಟ್ಟಲು ಬುನಾದಿಯಾಗುತ್ತದೆ. ಯಾವುದೇ ರೀತಿಯ ಕೆಟ್ಟ ಆಲೋಚನೆಗಳಿಗೆ ಬಲಿಯಾಗದೆ ತರಗತಿಯಲ್ಲೂ ಒಳ್ಳೆಯ ಹೆಸರು ಸಂಪಾದಿಸುತ್ತಾರೆ. ಅದರ ಜತೆಗೆ ಪರೀಕ್ಷೆಗಳಲ್ಲೂ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
- ರಂಜನ್ ಕುಮಾರ್ ಎಲ್.ವೈ, ಮೈಸೂರು
ಮಕ್ಕಳಿಗೆ ರಜಾ ಮಜವಾಗಿರಲಿ
ಬಿಡುವಿಲ್ಲದ ವಿದ್ಯಾಭ್ಯಾಸದ ನಡುವೆಯೂ ಅಲ್ಪ ಸ್ವಲ್ಪ ಬಿಡುವಿನ ವೇಳೆಯನ್ನು ಮಕ್ಕಳು ಬಳಸಿಕೊಳ್ಳಲು ಪೋಷಕರು ಬಿಡಬೇಕು. ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಜಾ ಕೊಡುವಂತಹ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರು ಆಡುವಷ್ಟು ವೇಳೆಯೂ ಅವರೊಂದಿಗೆ ಪೋಷಕರು ಆಡಿ ಅವರ ಬೇಸರವನ್ನು ಹೋಗಲಾಡಿಸಬೇಕು. ಇದರಿಂದ ಮಕ್ಕಳಿಗೆ ಒಂದು ರೀತಿಯ ರಿಲ್ಯಾಕ್ಸ್ ಸಿಗುತ್ತದೆ. ಇವೆಲ್ಲವು ಮಕ್ಕಳ ಮನಸ್ಸಲ್ಲಿ ಉಲ್ಲಾಸ ಮೂಡಿಸುತ್ತದೆ. ಆಗಾಗ ಅವರಿಗೆ ಬೇಸರವಾಗದಂತೆ ಮುಂದಿನ ತರಗತಿಯ ಕುರಿತು ಚರ್ಚೆ ಮಾಡುತ್ತಾ ಹೋದಾಗ ಪ್ರೀತಿಯಿಂದಲೇ ಅವನ್ನು ಸ್ವೀಕರಿಸುತ್ತಾರೆ. ಅಲ್ಲದೆ ಪೋಷಕರ ಮಾತುಗಳನ್ನು ಗೌರವಿಸುತ್ತಾರೆ.ಟಿ
- ಡಿ. ಆರ್. ಸುರೇಂದ್ರನಾಥ್,
ಹಂಪಿ
ಮೋಜು ಮಜಾಕ್ಕೆ ಕಡಿವಾಣ ಹಾಕಿ
ಶಾಲಾ ಕಾಲೇಜುಗಳ ರಜೆಯ ನಂತರ ಬೇಸಿಗೆಯಲ್ಲಿ ಮಕ್ಕಳು ಮೋಜು ಮಜಾ ಬಯಸುವುದು ಸಾಮಾನ್ಯ. ಆದರೆ ಆಟದಷ್ಟೇ ಪ್ರಾಮುಖ್ಯತೆಯನ್ನು ಓದಿನ ಕಡೆಗೂ ಕೊಡಲು ಪೋಷಕರು ಮುಂದಾಗಬೇಕು. ಇದೇ ಸಮಯದಲ್ಲಿ ಪೋಷಕರು ಉತ್ತಮ ಭವಿಷ್ಯದತ್ತ ದಾರಿ ತೋರಬೇಕು. ಸಮಯದ ಮಹತ್ವವನ್ನು ತಿಳಿಸಬೇಕು. ಆಟವಲ್ಲದೆ ದಿನವು ಅಲ್ಪ ಸ್ವಲ್ಪ ಸಮಯ ಮುಂದಿನ ತರಗತಿಗಳ ಪುಸ್ತಕಗಳನ್ನು ತಿರುವಿ ಹಾಕಿ ಮುಂದಿನ ತರಗತಿಗೆ ಬುನಾದಿ ಹಾಕಿಕೊಳ್ಳಲು ನೆರವಾಗಬೇಕು. ಮುಂದಿನ ತರಗತಿಯಲ್ಲಿ ಪ್ರತಿಭಾವಂತನಾಗು ಎಂದು ಹುರಿದುಂಬಿಸಬೇಕು. ಹೀಗೆ ಅವರಿಗೆ ತಿಳಿವಳಿಕೆ ನೀಡದಿದ್ದರೆ ಬೇಸಿಗೆಯ ಬಿಡುವಿನ ಸಮಯವನ್ನು ವೃಥಾ ಹಾಳುಮಾಡಿಕೊಂಡು ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.ಟಿ
- ನಿರ್ಮಲಾ ಮಹಾಂತೇಶ ರಾಜಗೋಳಿ,
ಬೈಲಹೊಂಗಲ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಈ ರಜೆಯಲ್ಲಿ ಮುಂದಿನ ತರಗತಿಗೆ ಮಕ್ಕಳನ್ನು ಹೇಗೆ ಸಜ್ಜುಗೊಳಿಸುವುದು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com