ಸೌಂದರ್ಯ ಸಮರ
ಆಕೆ ಫೋಟೋ ರಿಯಲಿಸ್ಟಿಕ್ ಚಿತ್ರವೊಂದನ್ನು ನಿರ್ದೇಶಿಸಿ, ಗ್ರಾಫಿಕ್ ಡಿಸೈನ್ ಮಾಡಿದ ದೇಶದ ಮೊದಲ ವ್ಯಕ್ತಿ. ..
ಆಕೆ ಫೋಟೋ ರಿಯಲಿಸ್ಟಿಕ್ ಚಿತ್ರವೊಂದನ್ನು ನಿರ್ದೇಶಿಸಿ, ಗ್ರಾಫಿಕ್ ಡಿಸೈನ್ ಮಾಡಿದ ದೇಶದ ಮೊದಲ ವ್ಯಕ್ತಿ. ಅದರಲ್ಲೂ ಮಹಿಳೆ ಈ ಸಾಧನೆ ಮಾಡಿದ್ದೆಂದರೆ ನಂಬಲು ಹಿಂದೆ ಮುಂದೆ ನೋಡುತ್ತೀರಿ ಅಲ್ಲವೇ? ಆದರೆ ಆಕೆ ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಎಂದ ಮೇಲೆ ನಂಬುವುದು ಕಷ್ಟಸಾಧ್ಯವೇನಲ್ಲ.
ರಜನಿಯ ದ್ವಿತೀಯ ಪುತ್ರಿ ಸೌಂದರ್ಯ ಆರ್. ಅಶ್ವಿನ್ ತಮಿಳು ಹಾಗೂ ಹಿಂದಿಯಲ್ಲಿ 'ಕೊಚಾಡಿಯನ್' ಚಿತ್ರ ನಿರ್ದೇಶಿಸಿದ್ದಾಳೆ. ಅಪ್ಪನನ್ನು ತ್ರಿಪಾತ್ರದಲ್ಲಿ ಹಾಕಿಕೊಂಡು ಅನಿಮೇಶನ್ ಚಿತ್ರ ತೆಗೆದ ಹೆಗ್ಗಳಿಕೆ ಅವಳದ್ದು. ಇದುವರೆಗೂ ಶಿವಾಜಿ, ಶಿವಕಾಶಿ, ಸಂಡಕೋಜಿ ಇತ್ಯಾದಿ ಚಿತ್ರಗಳಿಗೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಸೌಂದರ್ಯ ಕಳೆದ ವರ್ಷ ಮೊದಲ ಬಾರಿಗೆ 'ಗೋವಾ' ಚಿತ್ರಕ್ಕೆ ನಿರ್ಮಾಪಕಿಯಾಗಿದ್ದರು. ಇದೀಗ ನಿರ್ದೇಶನಕ್ಕೂ ಕೈ ಹಾಕಿ ದೇಶದ ಚಿತ್ರೋದ್ಯಮಕ್ಕೆ ಹೊಸ ಹಾಗೂ ಮೇರು ಮಟ್ಟದ ತಾಂತ್ರಿಕತೆಯನ್ನು ತಂದುಕೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಟೆಕ್ನಿಕಲ್ ಇನ್ನೋವೇಶನ್ಗೆ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಅಮಿತಾಭ್ ಬಚ್ಚನ್ರಿಂದ ಪ್ರಶಂಸೆ ಕೇಳಿ ಥ್ರಿಲ್ ಆಗಿರುವ ಸೌಂದರ್ಯ, ಯಾವುದೇ ಕ್ಷೇತ್ರದಲ್ಲಾಗಲೀ, ಅಯ್ಯೋ ಮಹಿಳೆಯೊಬ್ಬಳು ಮಾಡಿದ್ದಂತೆ ಎಂದು ಕಣ್ಣಗಲಿಸಿ ಹೇಳುವ ಸಮಯ ಹಿಂದೆ ಸರಿದಿದೆ. ಈಗ ಯಾಕೆ ಮಹಿಳೆ, ಹೇಗೆ ಮಹಿಳೆ ಎಂಬ ಪ್ರಶ್ನೆಗಳೆಲ್ಲ ಅಪ್ರಸ್ತುತ ಎನ್ನುತ್ತಾರೆ. 125 ಕೋಟಿ ವೆಚ್ಚದಲ್ಲಿ ಕೋಚಾಡಿಯನ್ ನಿರ್ಮಾಣಗೊಂಡಿದ್ದು, ಮೊನ್ನೆ 23ರಂದು ಚಿತ್ರ ಎಲ್ಲೆಡೆ ಬಿಡುಗಡೆಯಾಗಿದೆ. ರಜನಿ- ದೀಪಿಕಾ ಅನಿಮೇಟೆಡ್ ಜೋಡಿ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ.
ಎಲ್ಲರೂ ಹೇಳುವಂತೆ ನನ್ನಪ್ಪ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ. ಅವರ ಬಗ್ಗೆಯ ಪ್ರತಿ ಜೋಕನ್ನೂ ನಮ್ಮ ಕುಟುಂಬ ಖುಷಿಯಿಂದ ಓದಿದೆ. ಅವೆಲ್ಲವೂ ಅಪ್ಪನಿಗೆ ಅಭಿಮಾನಿಗಳು ಸಲ್ಲಿಸಿದ ಗೌರವ ಎಂದೇ ನಾವೆಲ್ಲ ಸ್ವೀಕರಿಸಿದ್ದೇವೆ. ರಜನಿ ಮಗಳಾಗಿ ಹುಟ್ಟಲು ಅದೆಷ್ಟು ಪುಣ್ಯ ಮಾಡಿದ್ದೆನೋ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸೌಂದರ್ಯ.
- ರೇಶ್ಮಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.