ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೊನೇ ಬಾರಿ ಮಜಾ

Vishwanath S
Updated On : 28 May 2014, 1:57 am

ಮದುವೆ! ಸ್ವಾತಂತ್ರ್ಯ ಹರಣ, ಪಾತಾಳ, ಸಂ'ಸಾರ'ವಿಲ್ಲದ ಗುಂಡಿ, ಆತ್ಮೀಯರನ್ನೂ ದೂರವಿಡಬೇಕಾದ ದುಸ್ಥಿತಿ ಇತ್ಯಾದಿ ಹಲವಾರು ವ್ಯಾಖ್ಯಾನಗಳು ಮದುವೆಯ ಸುತ್ತ ರಿಂಗಣಿಸುತ್ತವೆ. ಮದುವೆ ಆಯ್ತಂದ್ರೆ ಲೈಫೇ ಹೋಯ್ತು! ಎಂದು ಭಯಂಕರವಾಗಿ ಹೆದರಿಸುವವರೂ ಇದ್ದಾರೆ. ಒಟ್ಟಿನಲ್ಲಿ ಅದೊಂದು ಹೊಸ ಬದುಕು. ಮದುವೆ ಆಗದವರು ಒಂಟಿ ಜೀವನ ಸಾಕು, ಬೇಗನೆ ಮದುವೆಯಾಗಬೇಕೆಂದು ಹಂಬಲಿಸುತ್ತಾರೆ. ಮದುವೆಯಾದವರು ಮದುವೆಯಾಗಿ ತಪ್ಪು ಮಾಡಿದೆ ಎಂದು ಕೊರಗುತ್ತಾರೆ. ಇರುವುದನ್ನು ಬಿಟ್ಟು ಇರದುದರೆಡೆಗೆ ತುಡಿಯುವ ತವಕ ಇದ್ದದ್ದೇ.
ಹುಡುಗನಾಗಿರಲಿ, ಹುಡುಗಿಯಾಗಿರಲಿ, ಸಂಸಾರ ಎಂಬ ಜಂಟೀ ಜೀವನ ಪ್ರವೇಶಿಸುವ ಮುನ್ನ ಬ್ಯಾಚುಲರ್ ಲೈಫ್ ಕೊನೆಗೊಂಡಿತಲ್ಲಾ ಎಂಬ ವೇದನೆ ಪ್ರತಿಯೊಬ್ಬರಿಗೂ ಬರುವಂಥದ್ದೇ. ಅದೇನೋ ಕಳೆದುಕೊಂಡೆವು ಎನ್ನುವ ಬೇಸರ. ಮತ್ತೆ ಆ ಜೀವನ ಸಿಗುವುದಿಲ್ಲವಲ್ಲ ಎಂಬ ದುಗುಡ. ಮಿಡ್ಲಿಸ್ಕೂಲ್‌ನಲ್ಲಿ ಚಡ್ಡಿ ಹಾಕುತ್ತಿದ್ದವರು ಹೈಸ್ಕೂಲ್‌ಗೆ ಬಂದ ಮೇಲೆ ಚಡ್ಡಿ ಹಾಕುವ ಭಾಗ್ಯ ಕಳೆದುಕೊಂಡೆವು ಎಂಬ ಮರುಕ ಪಡುವುದಿಲ್ಲವೇ? ಕಾಲೇಜು ಲೈಫು ಮುಗಿಯುತ್ತಿದ್ದಂತೆ 'ಸ್ಟುಡೆಂಟ್ ಲೈಫ್ ಇಸ್ ರಿಯಲ್ಲಿ ಗೋಲ್ಡನ್ ಲೈಫ್!' ಎಂದು ಪದೇ ಪದೆ ಗುನುಗುತ್ತ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುವುದು ಎಲ್ಲರ ಪರಿಪಾಠ. ಕಾಲೇಜು ಮೆಟ್ಟಿಲೇರಿದ ಮೇಲೆ ಪಾರ್ಟಿ ಗೀರ್ಟಿ ಅಂತ ಮಾಮೂಲು. ಕಾಲೇಜು ದಿನಗಳನ್ನ ಕೊನೆಗೊಳಿಸುವ ನೆಪದಲ್ಲಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿ ಬೀಳ್ಕೊಡುವುದು ಸಹಜ. ಹಾಗಿದ್ದ ಮೇಲೆ ಬ್ಯಾಚುಲರ್ ಜೀವನ ಕೊನೆಗೊಳ್ಳುವುದಕ್ಕೆ ಒಂದೊಳ್ಳೆ ಪಾರ್ಟಿ ಮಾಡದಿದ್ದರೆ ಹೇಗೆ?
ಬ್ಯಾಚುಲರ್ ಜೀವನವನ್ನು ಬೀಳ್ಕೊಡುವ ಕಾರ್ಯಕ್ರಮ ಆಚರಿಸುವುದು ಅಷ್ಟೇ ಸಹಜ ಎಂಬಂತೆ ಪ್ರಚಲಿತದಲ್ಲಿದೆ. ಮೋಜು ಮಸ್ತಿ ಮಾಡಿ 'ನಾಳೆಯಿಂದ ಎಲ್ಲಾ ಹುಡುಗಾಟವನ್ನೂ ಬಿಟ್ಟು ಸಭ್ಯತೆಯಿಂದ ಸಂಗಾತಿಯೊಂದಿಗೆ ಜೀವಿಸಬೇಕು!' ಎಂಬ ಸಂಕಲ್ಪ ಮಾಡಿಬಿಡುತ್ತಾರೆ. ಸ್ಟಾಗ್ ಪಾರ್ಟಿ, ಸ್ಟಾಗ್ ನೈಟ್, ಸ್ಟಾಗ್ ಡು, ಬಕ್ಸ್ ನೈಟ್, ಮಾನ್‌ಹಾರ್ ಪಾರ್ಟಿಟ್ಜಿ ಮುಂತಾದ ಹೆಸರುಗಳಲ್ಲಿ ಇದು ಚಾಲ್ತಿಗೆ ಬಂದಿದೆ. ಇದು ಭಾರತದಲ್ಲಿ ಇತ್ತೀಚೆಗೆ ಬಲಿಯುತ್ತಿರುವ ಟ್ರೆಂಡ್.
ಜರ್ಮನಿಯಲ್ಲಿ 'ಜಂಗ್ಗೆಸೆಲ್ಲೆನಾ ಬಾಸ್ಚಿಯೆದ್‌' ಎಂಬ ಹೆಸರಿನಲ್ಲಿ ಬ್ಯಾಚುಲರ್ ಪಾರ್ಟಿ ಆಚರಿಸುತ್ತಾರೆ. ಇದಲ್ಲದೆ ಜೋಡಿಗಳು ಬ್ಯಾಚುಲರ್ ಪಾರ್ಟಿಯನ್ನು 'ಪೋಲ್ಟೆರಾಬೆಂಡ್‌' ಎಂಬ ಹೆಸರಿನಲ್ಲಿ ಮದುವೆಯಾದ ದಿನದ ಸಂಜೆ ಒಟ್ಟಿಗೆ ಆಚರಿಸುತ್ತಾರೆ. ಅಲ್ಲಿನ ಸಂಪ್ರದಾಯ ಮುಖೇನ ಅಂತಹ ಆಚರಣೆ ಚಾಲ್ತಿಗೆ ಬಂದಿದೆ. ಆಚರಣೆಯ ಹಿಂದೆ ದುಷ್ಟ ಶಕ್ತಿ ಓಡಿಸುವುದು, ಯಾರ ಅಸೂಯೆಯೂ ತಗುಲದಂತೆ ಪ್ರಾರ್ಥಿಸುವುದು ವಾಡಿಕೆ.
ಫ್ರೆಂಚ್‌ನಲ್ಲಿ 'ಎಂಟೆರ್ರೆಮೆಂಟ್ ಡಿ ವೈ ಡಿ ಗಾರ್ಕಾನ್‌' ಎಂಬ ಹೆಸರಿನಲ್ಲಿ ಬ್ಯಾಚುಲರ್ ಪಾರ್ಟಿ ಆಚರಿಸಲಾಗುತ್ತದೆ. ಬ್ಯಾಚುಲರ್ ಬದುಕಿನ ಸಾವು ಎಂಬರ್ಥದಲ್ಲಿ ಆಚರಿಸಲಾದರೂ ಅದೇನು ಶೋಕಾಚರಣೆಯಲ್ಲ. ಬದಲಿಗೆ ಸಂಭ್ರಮಾಚರಣೆ. ಮಹಿಳೆಯರು 'ಎಂಟೆರ್ರೆಮೆಂಟ್ ಡಿ ವೈ ಡಿ ಜ್ಯೂನೆ ಫಿಲ್ಲೆ' ಎಂದು ಆಚರಿಸಿಕೊಳ್ಳುತ್ತಾರೆ. ಅವಿವಾಹಿತೆ ಅಥವಾ ಹುಡುಗಿಯ ಅಂತ್ಯಕ್ರಿಯೆ ಎಂಬರ್ಥ ಕೊಡುತ್ತದೆ. ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಕಂಠ ಪೂರ್ತಿ ಕುಡಿದು ಕುಪ್ಪಳಿಸುವುದು ಸಾಮಾನ್ಯ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ 'ಸ್ಟಾಗ್ ಪಾರ್ಟಿ' ಎಂಬುದು ತೀರಾ ಸಾಮಾನ್ಯ. ಅಲ್ಲಿ ಕೇವಲ ಒಂದು ಸಂಜೆಯನ್ನಷ್ಟೇ ಆಚರಿಸಿಕೊಳ್ಳುವುದಿಲ್ಲ. ಕೆಲವು ರಾತ್ರಿಗಳು ಬ್ಯಾಚುಲರ್ ಪಾರ್ಟಿ ಹೆಸರಿನಲ್ಲಿ ಮೋಜು ಮಸ್ತಿಯ ಅತಿರೇಕದ ಹಂತಕ್ಕೆ ತಲುಪಿಬಿಡುತ್ತಾರೆ. ಕಾರಕೌ, ಡುಬ್ಲಿನ್, ರಿಗಾ, ಪೆರುಗ್ವೇ, ಆಮ್ಸಟರ್‌ಡಾಮ್ ಸೇರಿದಂತೆ ಇತರೆಡೆಗಳಿಗೆ ಪ್ರವಾಸ ಹಾಕಿಕೊಳ್ಳುತ್ತಾರೆ. ವೇಶ್ಯಾಗೃಹಗಳಿಗೆ ಭೇಟಿ ನೀಡಿ ವೇಶ್ಯೆಯರೊಂದಿಗೆ ರಾತ್ರಿ ಕಳೆದು ಬರುವುದು ಅಲ್ಲಿನ ಸಂಪ್ರದಾಯ. ಮದುವೆಯ ನಂತರದ ಲೈಂಗಿಕ ಜೀವನ ಸುಖಕರವಾಗಿ ಇರಬೇಕು ಎಂಬ ಮಹದಾಸೆಯಿಂದ ವೇಶ್ಯೆಯರ ಬಳಿ ಹೋಗುವ ರೂಢಿಯಂತೆ!
ಯುನೈಟೆಡ್ ದೇಶಗಳಲ್ಲಿ ಲಾಸ್ ವೇಗಾಸ್ ಬ್ಯಾಚುಲರ್ ಪಾರ್ಟಿಗೆ ಬಹಳ ಪ್ರಸಿದ್ಧಿ ಪಡೆದಿದೆ. ಮದುವೆಯ ದಿವಸವೇ ಬ್ಯಾಚುಲರ್ ಪಾರ್ಟಿ ಹಮ್ಮಿಕೊಳ್ಳಲಾಗುತ್ತದೆ. ಮದುವೆಯಷ್ಟೇ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಾಂಟ್ರಿಯಲ್, ಕ್ಯೂಬೆಕ್ ಅಥವಾ ಮೆಕ್ಸಿಕೋಗೆ ಪ್ರವಾಸ ಹಮ್ಮಿಕೊಳ್ಳುತ್ತಾರೆ. ಅಮೆರಿಕನ್ನರ ಸ್ಟಾಗಿಂಗ್ ಪಾರ್ಟಿಯಲ್ಲಿ ಹೇರಳವಾದ ಆಲ್ಕೋಹಾಲ್, ಚೀರಾಟ, ಗಲಬೆ ಇರುತ್ತದೆ. ಹಿಂದೆ ಮದುಮಗಳಿಗೆ ಹಿಂಸೆ ನೀಡುವುದು ಪಾರ್ಟಿಯ ಲಕ್ಷಣವಾಗಿತ್ತು. ವ್ಯಾನ್‌ಕೋವಾರ್ ಅಥವಾ ನಯಾಗರ ಫಾಲ್ಸ್ ಬ್ಯಾಚುಲರ್ ಪಾರ್ಟಿಗೆ ಹೇಳಿ ಮಾಡಿಸಿದ ತಾಣವೆಂದು ಪ್ರಸಿದ್ಧಿ ಪಡೆದಿದೆ. ಬಹುತೇಕ ಅಮೆರಿಕನ್ನರು ತಮ್ಮ ಬ್ಯಾಚುಲರ್ ಜೀವನಕ್ಕೆ ಬೀಳ್ಕುಡುವುದು ಇಲ್ಲೇ.
ಇತ್ತೀಚೆಗೆ ಆಲ್ಕೋಹಾಲ್ ಸೇವನೆಯ ಪ್ರಮಾಣ ಕಡಿಮೆ ಆಗಿದೆ. ಮದುಮಗಳಿಗೆ ಹಿಂಸೆ ನೀಡುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಬ್ಯಾಚುಲರ್ ಪಾರ್ಟಿಯನ್ನು ಮಿತ್ರರೇ ಸೇರಿಕೊಂಡು ಆಚರಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಸ್ನೇಹಿತರೊಂದಿಗೆ ಚಾರಣ, ಪ್ರವಾಸ ಹೋಗುವುದು, ಮೀನು ಹಿಡಿಯಲು ಹೋಗುವುದು, ಬೇಸ್‌ಬಾಲ್ ಸೇರಿದಂತೆ ಇತರ ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದು ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಭಾರತದ ಮೆಟ್ರೊ ನಗರಗಳಲ್ಲಿ ಯುವಕ ಯುವತಿಯರು ಬ್ಯಾಚುಲರ್ ಪಾರ್ಟಿ ಮಾಡುವುದು ಸಾಕಷ್ಟು ಕಾಣಸಿಗುತ್ತದೆ. 'ಮಗಾ, ಮದುವೆ ಆದ ಮೇಲೆ ಹೀಗೆ ಒಟ್ಟಿಗೆ ಪಾರ್ಟಿ ಮಾಡೋಕೆ ಆಗಲ್ಲ! ಇವತ್ತೇ ಕೊನೆ!' ಎಂದು ಒಂದೆರಡು ಹೆಚ್ಚಿನ ಬಾಟಲಿ, ತಿನಿಸು ತಂದು ತಿಂದರೂ ಬ್ಯಾಚುಲರ್ ಪಾರ್ಟಿ ಮಾಡಿದಂತೇ!
ಬ್ಯಾಚುಲರ್ ಪಾರ್ಟಿ ಮಾಡುವುದರಲ್ಲಿ ತಪ್ಪೇನು ಇಲ್ಲ. ಆದರೆ ಅತಿರೇಕ ಕುಡಿತ, ಮೋಜು, ಮಸ್ತಿ ಮಾಡುವುದು ಉಚಿತವಲ್ಲ. ಇದೇ ಕೊನೆ ಸಲ ಎಂಬ ಸಂಕಲ್ಪ ತೊಟ್ಟು ಕುಡಿದರೆ ಅಥವಾ ದಮ್ಮು ಎಳೆದರೆ ಅದೆಂದೂ ಕೊನೆಯಗುವುದಿಲ್ಲ. ಮತ್ತೆ ಮತ್ತೆ ಮಾಡುವಂತೆ ಪ್ರೇರೇಪಿಸುತ್ತದೆ. ಹೆಚ್ಚಿನ ಎಚ್ಚೆರಿಕೆಯಿಂದ ಮುಂದುವರಿಯುವುದು ಒಳಿತು.


-ಮಂಜುನಾಥ್ ಎಲ್. ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments