ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಎದೆಯ ನಭದ ಗಾಳಿಪಟ

Srinivasa Murthy VN
Updated On : 4 May 2013, 1:05 am

ಆಫ್ಘಾನಿಸ್ತಾನ, ಇರಾಕ್- ಇರಾನ್, ಇಸ್ರೇಲ್, ಪ್ಯಾಲೆಸ್ತೀನ್ ಎಂದಾಗ ನೆನಪಾಗುವುದು ಯುದ್ಧದ ಕಾರ್ಮೋಡಗಳು ಹಾಗೂ ಕದನ ಕ್ರೌರ್ಯವನ್ನು ಬಿಂಬಿಸುವ ದೃಶ್ಯಗಳು. ಬಂದೂಕಿನ ಸದ್ದಿನ ಆಚೆಗೆ ಈ ದೇಶಗಳ ಸ್ಥಿತಿಯನ್ನು ಕಲ್ಪಿಸಿಕೊಳ್ಳಲಾಗದು. ಹೀಗಾಗಿ ಬೆಳ್ಳಿತೆರೆಯಲ್ಲೂ ಗುಂಡಿನ ಸದ್ದು, ಅಮಾಯಕರ ಆಕ್ರಂದನ, ಸಾವು, ನೋವುಗಳೇ ತುಂಬಿಕೊಂಡು ಬಿಳಿಪರದೆ ಮೇಲೆ ರಕ್ತಚರಿತೆ ಮೂಡಿಸಿವೆ. ಅದರಲ್ಲೂ ಆಫ್ಘಾನಿಸ್ತಾನ, ಬದುಕಿಗಿಂತ ಸಾವಿನ ಯುದ್ಧಕ್ಕೆ ಸೆರಗೊಡ್ಡಿದ್ದೇ ಹೆಚ್ಚು. ಆದರೆ ಯುದ್ಧಭೂಮಿಯ ಭೀಕರತೆಯನ್ನು ಎಲ್ಲೂ ತೋರಿಸದೆ ಅದು ಸೃಷ್ಟಿಸುವ ಸಂಕಟಗಳ ಪರಿಣಾಮಗಳನ್ನು ಅತ್ಯಂತ ಗಾಢವಾಗಿ ಚಿತ್ರಿಸುತ್ತ ಸಾಗುವ ಸಿನಿಮಾ 'ದಿ ಕೈಟ್ ರನ್ನರ್‌'.
ಒಂದು ಗಾಳಿಪಟ. ಇಬ್ಬರು ಬಾಲ್ಯದ ಗೆಳೆಯರು. ಇವಿಷ್ಟೇ ಚಿತ್ರದ ಪ್ರಮುಖ ಪಾತ್ರಗಳು. ಇಲ್ಲಿ ಮುಗಿಲೆತ್ತರಕ್ಕೆ ಹಾರುವ ಗಾಳಿಪಟ ಗೆಳೆತನದ ಜೊತೆ ಜೊತೆಗೆ ಎರಡು ತಲೆಮಾರಿನ ಕಥೆ ಹೇಳುತ್ತದೆ. ಆರಂಭದಲ್ಲಿ ಮಕ್ಕಳ ಚಿತ್ರದಂತೆ ಸಾಗುತ್ತಲೇ ಹೋಗುವ 'ದಿ ಕೈಟ್ ರನ್ನರ್‌' ಚಿತ್ರದಲ್ಲಿ ಮಕ್ಕಳು ಹಾರಿಸುವ ಗಾಳಿಪಟ ಆಫ್ಘಾನಿಸ್ತಾನದ ಅಂತರಂಗಕ್ಕಿಳಿಯುತ್ತದೆ. ಆ ಮೂಲಕ ಗೆಳೆತನದ ಜೊತೆಗೆ ಆಫ್ಘಾನಿಸ್ತಾನದ ಬಂದೂಕಿನ ರಾಜಕೀಯವನ್ನು ಚಿತ್ರ ಕಟ್ಟಿಕೊಡುತ್ತದೆ. ಬಾಲ್ಯದ ಗೆಳೆತನದ ಆಟಗಳು, ಯುದ್ಧದ ಭೀತಿಯಿಂದ ಹೆದರಿ ಹುಟ್ಟೂರು ಬಿಡುವ ಕುಟುಂಬಗಳು, ಹೆಜ್ಜೆ ಹೆಜ್ಜೆಗೂ ಕಾಡುವ ಗುಂಡಿನ ಸದ್ದು, ಬಾಲ್ಯದಲ್ಲೇ ಬೇರೆಯಾದ ಗೆಳೆತನದ ಮರು ಹುಡುಕಾಟ... ಹೀಗೆ ಹತ್ತಾರು ರಸ್ತೆಗಳಲ್ಲಿ ಸಾಗುವ ಈ ಚಿತ್ರದಲ್ಲಿ ನಿರ್ದೇಶಕ ಮಾರ್ಕ್ ಫಾರ್ಸ್ಟರ್, ಪ್ರೇಕ್ಷಕನೆದುರು ಮೂರು ಕಾಲಘಟ್ಟದಲ್ಲಿ ಸಂಭವಿಸುವ ಕಥಾಹಂದರವನ್ನು ತೆರೆದಿಡುತ್ತಾನೆ. ಮಾರ್ಕ್ ಫಾರ್ಸ್ಟರ್ ಜರ್ಮನ್- ಸ್ವಿಸ್ ಫಿಲ್ಮ್ ಮೇಕರ್. ಚಿತ್ರಕಥೆ ಬರೆಯುವುದರಲ್ಲೂ ವಿಶೇಷ ಪರಿಣತಿ ಪಡೆದುಕೊಂಡಿರುವ ಮಾರ್ಕ್ ನಿರ್ದೇಶನದಲ್ಲಿ 'ಎವೆರಿಥಿಂಗ್ ಪುಟ್ ಟುಗೆದರ್‌', 'ಮೌನ್ಸ್‌ಸ್ಟಾರ್ಸ್ ಬಾಲ್‌', 'ಫೆಡಿಂಗ್ ನೆವರ್‌ಲ್ಯಾಂಡ್‌', 'ಸ್ಟೇ', 'ಸ್ಟ್ರೇಂಜರ್ ದೆನ್ ಫಿಕ್ಷನ್‌', 'ವರ್ಲ್ಡ್ ವಾರ್ ಝಡ್‌' ಸೇರಿದಂತೆ ಒಂಬತ್ತು ಚಿತ್ರಗಳು ಮೂಡಿಬಂದಿವೆ. ಈ ಪೈಕಿ ಕೆಲ ಚಿತ್ರಗಳು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿವೆ. ಈತನ ಪ್ರತಿ ಚಿತ್ರವೂ ವಿಮರ್ಶಕರಿಂದ ಪ್ರಶಂಸೆಗಳನ್ನು ಗಿಟ್ಟಿಸಿಕೊಂಡಿವೆ.
ಸಾಕಷ್ಟು ವಿವಾದ ಮತ್ತು ಕುತೂಹಲ ಮೂಡಿಸಿ ಚಿತ್ರಜಗತ್ತಿನಲ್ಲಿ ಬಹುಚರ್ಚೆಗೆ ಒಳಗಾಗಿರುವ 'ದಿ ಕೈಟ್ ರನ್ನರ್‌' ಚಿತ್ರವೂ ಗೋಲ್ಡನ್ ಗ್ಲೋಬ್ ಅವಾರ್ಡ್, ಬ್ರಿಟಿಷ್ ಆಕಾಡೆಮಿ ಫಿಲ್ಮ್ ಅವಾರ್ಡ್ ಹಾಗೂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಖಲೀದ್ ಹೊಸೇನಿ ಬರೆದಿರುವ 'ದಿ ಕೈಟ್ಸ್ ರನ್ನರ್‌' ಎಂಬ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರವಿದು. ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ನಲ್ಲಿ 'ದಿ ಬೆಸ್ಟ್ ಸೆಲ್ಲರ್‌' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಾದಂಬರಿ, ಅಮೀರ್‌ಜಾನ್ ಮತ್ತು ಹಾಸನ್ ಎಂಬ ಇಬ್ಬರ ಹುಡುಗರ ನಡುವೆ ಸಾಗುತ್ತದೆ. ಯಥಾವತ್ತಾಗಿ ಕಾದಂಬರಿಯನ್ನು ಬಳಸಿಕೊಂಡು ಮಾರ್ಕ್ ಫಾರ್ಸ್ಟರ್, ಕೃತಿಗೆ ದಕ್ಕೆಯಾಗದಂತೆ ಅದನ್ನು ದೃಶ್ಯ ರೂಪಕ್ಕಿಳಿಸಿದ್ದಾನೆ. ಆದರೆ ಪುಸ್ತಕಕ್ಕೆ ಸಿಕ್ಕ ಜನಪ್ರಿಯತೆ ಅದರ ಚಿತ್ರರೂಪಕ್ಕೆ ದೊರತಿಲ್ಲ ಎಂಬುದು ಸತ್ಯ. ಇನ್ನು 'ದಿ ಕೈಟ್ ರನ್ನರ್‌' ಚಿತ್ರದ ವಿಷಯಕ್ಕೆ ಬಂದರೆ, 2000ದಲ್ಲಿ ಆರಂಭಗೊಳ್ಳುವ ಚಿತ್ರ, ಕೆಲವೇ ಕ್ಷಣಗಳಲ್ಲಿ 1978-79ರ ದಶಕಕ್ಕೆ ಕಾಲಿಡುತ್ತದೆ. ಅಲ್ಲಿಂದ ಮತ್ತೆ 1988ರ ದಶಕವನ್ನು ತೋರಿಸುತ್ತಲೇ ಮತ್ತೆ 2000 ಇಸವಿಯಲ್ಲಿ ಮುಕ್ತಾಯಗೊಳ್ಳುವ ಚಿತ್ರ, ಅಕಾಶಕ್ಕೆ ಹಾರುವ ಗಾಳಿಪಟದಂತೆ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ.
ಅಮೀರ್ ಜಾನ್ ಮತ್ತು ಹಾಸನ್ ಇಬ್ಬರು ಬಾಲ್ಯದ ಗೆಳೆಯರು. ಅಮೀರ್ ಶ್ರೀಮಂತ ಕುಟುಂಬದ ಕುಡಿ. ತಾಯಿ ಇಲ್ಲದ ಹಾಸನ್‌ಗೆ ತಂದೆಯೇ ಎಲ್ಲವೂ ಆಗಿದ್ದು, ಈತ ಅಮೀರ್ ಮನೆಯ ಕೆಲಸದಾಳು. ಆದರೂ ಅಮೀರ್ ಮತ್ತು ಹಾಸನ್ ಅವರದ್ದು ಪರಸ್ಪರ ಬಿಟ್ಟಿರಲಾಗದ ಸ್ನೇಹ. 'ಶ್ರೀಮಂತನೊಂದಿಗೆ ನಿನಗೇನು ಸ್ನೇಹ' ಎಂದು ಹಾಸನ್ ಮೇಲೆ ಶ್ರೀಮಂತ ಹುಡುಗರ ಗುಂಪು ಮಾರಣಾಂತಿಕ ಹಲ್ಲೆ ಮಾಡಿ ಕೆಟ್ಟದಾಗಿ ಬಳಸಿಕೊಳ್ಳುತ್ತದೆ. ಇಲ್ಲಿಂದ ಕಥೆ ಮತ್ತೊಂದು ತಿರುವು ಪಡೆದು, ಇಬ್ಬರ ಸ್ನೇಹ ನೀನೊಂದು ತೀರ, ನಾನೊಂದು ತೀರ ಎನ್ನುವಂತಾಗುತ್ತದೆ. ಈ ನಡುವೆ ಇಬ್ಬರೂ ಸೇರಿ ಹಾರಿಸುವ ಗಾಳಿಪಟ, ಬೇರೆಯೊಬ್ಬರ ಗಾಳಿಪಟಗಳನ್ನು ಸೋಲಿಸುವುದರಲ್ಲಿ ಚಾಣಕ್ಷತನ ಮರೆಯುವ ಹಾಸನ್... ಹೀಗೆ ಬಾಲ್ಯ ಸಹಜ ಆಟಗಳು ಪ್ರಧಾನ ಅಂಶಗಳಾಗಿ ನಿಲ್ಲುತ್ತವೆ. ಆದರೆ ತನ್ನ ಮನೆಯಲ್ಲಿ ತನ್ನ ಗೆಳೆಯನನ್ನು ಕೆಲಸಗಾರನಾಗಿ ನೋಡಬಾರದೆಂಬ ಅಮೀರ್, ಸ್ನೇಹಿತನ ಮೇಲೆ ಕಳ್ಳತನದ ಆರೋಪ ಮಾಡಿ ಮನೆಯಿಂದ ಹೊರಹಾಕುವಾಗ, 'ನೀನು ನನಗೆ ವಾಪಸು ಹೊಡಿಯೋ. ನೀನು ದಡ್ಡ, ಎಲ್ಲವನ್ನೂ ಮುಚ್ಚಿಟ್ಟುಕೊಳ್ತೀಯ' ಎನ್ನುವ ಅಮೀರ್‌ನ ಮಾತುಗಳು ಆಪ್ತವಾಗುತ್ತವೆ.
ಇಬ್ಬರು ಬಾಲ್ಯದಲ್ಲೇ ಬೇರೆ ಬೇರೆಯಾದ ಮೇಲೆ ಅಮೀರ್, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಸಿದ್ಧ ಬರಹಗಾರನಾಗಿರುತ್ತಾನೆ. ಆದರೆ ಹಾಸನ್ ಕುಟುಂಬ ಕಾಬೂಲ್ ಬಿಟ್ಟು ಪಾಕಿಸ್ತಾನಕ್ಕೆ ಬಂದಿರುತ್ತದೆ. ಹಲವು ದಶಕಗಳ ನಂತರ ಪಾಕಿಸ್ತಾನಕ್ಕೆ ಹೋಗುವ ಅಮೀರ್‌ಗೆ ಸ್ನೇಹಿತ ಹಾಸನ್ ಸತ್ತಿರುವ ಸುದ್ದಿ ಗೊತ್ತಾಗುತ್ತದೆ. ಹಾಸನ್‌ರ ತಂದೆಯ ಒತ್ತಾಯದ ಮೇರೆಗೆ ಸ್ನೇಹಿತನ ಮಗನನ್ನು ಹುಡುಕಿಕೊಂಡು ಕಾಬೂಲ್‌ಗೆ ಹೋಗುವ ಅಮೀರ್, ತಾಲಿಬಾನ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಸ್ನೇಹಿತನ ಮಗನಿಗೆ ಹೊಸ ಜೀವನ ಕೊಡುವ ಅಮೀರ್‌ನ ಪಯಣ, ಆಫ್ಘಾನಿಸ್ತಾನದ ಭಯ ಭೀತಿಯ ಬದುಕು, ಗಾಳಿಪಟದಷ್ಟೇ ಮಕ್ಕಳ ಬಣ್ಣ ಬಣ್ಣದ ಆಟಗಳು, ಅಮೀರ್‌ನ ಪ್ರೀತಿ 'ದಿ ಕೈಟ್ ರನ್ನರ್‌'ನಲ್ಲಿ ಮೇಳೈಸಿವೆ.ಟಿ

ಚಿತ್ರ: ದಿ ಕೈಟ್ ರನ್ನರ್ (2007)
ಭಾಷೆ: ಇಂಗ್ಲಿಷ್
ನಿರ್ದೇಶನ: ಮಾರ್ಕ್ ಫಾರ್ಸ್ಟರ್
ಅವಧಿ: 128 ನಿಮಿಷ
ತಾರಾಗಣ: ಖಾಲಿದ್ ಅಬ್ದಲ್ಲಾ, ಝೆಕೆರಿಯಾ ಇಬ್ರಾಹಿಮಿ, ಅಹ್ಮದ್ ಖಾನ್ ಮಹ್ಮಿದ್ಝಾದಾ, ಹೊಮಯೊನ್ ಇರ್ಷದಿ.

-ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement