ಚಂದ್ರಬಾಬು ನಾಯ್ಡು ಮರಳಿ ಯತ್ನವ ಮಾಡು...
ನಾರಾ ಚಂದ್ರಬಾಬು ನಾಯ್ಡು, ಭಾರತದ ರಾಜಕಾರಣದ ಹಾಗೂ ಆಡಳಿತದ ಸ್ವರೂಪವನ್ನೇ ಬದಲಾಯಿಸಲು ಹೊರಟಿದ್ದ ಮಹತ್ವಾಕಾಂಕ್ಷಿ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ತಂತ್ರಜ್ಞಾನ ಆಧರಿತ, ಸುಗಮ, ದಕ್ಷ ಆಡಳಿತ ವ್ಯವಸ್ಥೆಯನ್ನು ರೂಪಿಸಲು ಅವರು ಭಗೀರಥ ಪ್ರಯತ್ನ ಮಾಡಿದ್ದರು.
ಆದರೆ ಅದರಿಂದ ಹೈದರಾಬಾದ್- ಸಿಕಂದರಾಬಾದ್ ನಗರಗಳು ಉದ್ಧಾರವಾಗಿದ್ದು ನಿಜ. ಅಷ್ಟೇ ರಾಯಲಸೀಮೆ, ತೆಲಂಗಾಣದ ಹಳ್ಳಿಗಳು ಸೊರಗಿದವು. ಕೇಂದ್ರದಲ್ಲಿ ಮೂರನೇ ರಂಗದ ಸರ್ಕಾರದ ಪ್ರಯೋಗವಾಗುವ ಸನ್ನಿವೇಶದಲ್ಲಿ ಸಂಯುಕ್ತ ರಂಗದ ಸಂಚಾಲಕರಾಗಿ ಚಂದ್ರಬಾಬು ನಾಯ್ಡು ರಾಜಕಾರಣದ ಸ್ವರೂಪವನ್ನೇ ಬದಲಾಯಿಸಲು ಹೊರಟರು. ಆದರೆ ಆ ಸರ್ಕಾರಗಳು ಬಹುಕಾಲ ಉಳಿಯಲಿಲ್ಲ.
ಅನಂತರದ ದಿನಗಳಲ್ಲಿ ಚಂದ್ರಬಾಬು ನಾಯ್ಡು ಆಂಧ್ರದಲ್ಲೂ ಸೋತರು. ವಿರೋಧ ಪಕ್ಷದ ನಾಯಕರಾಗಿ ಹತಾಶರಾಗಿದ್ದರು. ಪ್ರತಿ ಚುನಾವಣೆಯ ಸಮಯದಲ್ಲೂ ಅವರು ತೃತೀಯ ರಂಗ, ನಾಲ್ಕನೇ ರಂಗಗಳ ರಚನೆಗೆ ಮುಂದಾದರೂ ಯಾವುದಾದರೊಂದು ಕಾರಣಕ್ಕೆ, ಯಾರಾದರೊಬ್ಬರ ಹಠಮಾರಿತನದಿಂದ ಆ ಪ್ರಯತ್ನ ವಿಫಲವಾಗಿದೆ. ಅದರಲ್ಲಿ ಕರ್ನಾಟಕದ ದೇವೇಗೌಡರೂ ಪಾಲುಗೊಂಡಿದ್ದಾರೆ.
ಈಗಲೂ ಆಂಧ್ರದಲ್ಲಿ ಅವರು ಪ್ರತಿಪಕ್ಷದ ನಾಯಕರೇ. ಅಲ್ಲಿನ ರಾಜಕಾರಣಿ, ದಿವಂಗತ ರಾಜಶೇಖರ ರೆಡ್ಡಿ ಅವರ ಪುತ್ರ ಸಂಗಮೇಶ್ವರ ರೆಡ್ಡಿ ಅವರ ಅವಾಂತರಗಳು, ತೆಲಂಗಾಣದಲ್ಲಿ ಚಂದ್ರಶೇಖರರಾವ್ ಅವರ ಸತ್ಯಾಗ್ರಹ ದೆಹಲಿಯಾತ್ರೆ, ಉಪವಾಸಗಳ ರಾದ್ಧಾಂತದಲ್ಲಿ ಮುಳುಗಿ ಹೋಗಿದೆ ಎಂದು ಚಂದ್ರಬಾಬು ನಾಯ್ಡು ಭಾವಿಸಿದ್ದಾರೆ. ಅಲ್ಲಿನ ಕಾಂಗ್ರೆಸ್, ಮುಖ್ಯಮಂತ್ರಿ ಕಿರಣ ರೆಡ್ಡಿಯವರ ನೇತೃತ್ವದಲ್ಲಿ ಮುಖರಹಿತ ಪಕ್ಷವಾಗಿದೆಯಂತೆ.
ಅದನ್ನೆಲ್ಲ ಸರಿಪಡಿಸುವುದು ಹೇಗೆ? ಅದೇ ಚಂದ್ರಬಾಬು ನಾಯ್ಡು ಚಿಂತೆ, ಹಾಗೂ ಚಿಂತನೆ. ಒಂದು ಕಾಲದಲ್ಲಿ ಹೈದರಾಬಾದ್- ಸಿಕಂದರಾಬಾದ್ಗಳಲ್ಲಿ, ಆಂಧ್ರಪ್ರದೇಶದ ಜಿಲ್ಲಾಡಳಿತದಲ್ಲಿ ಮುಖ್ಯಮಂತ್ರಿಯಾಗಿ ಕೈಗೊಂಡ ಕ್ರಮಗಳ ಪರಿಣಾಮವಾಗಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ, ಪ್ರಶಸ್ತಿ, ಕೀರ್ತಿ ಸಿಕ್ಕಿತ್ತು.
ಆದರೆ ಈಗ ಅದೆಲ್ಲ ಹಳೆಯ ಕತೆ. ಮತ್ತೆ ತಮಗೆ, ತಮ್ಮ ತೆಲುಗುದೇಶಂ ಪಕ್ಷಕ್ಕೆ ಹೊಸ ರೂಪ, ಹೊಸ ಉತ್ಸಾಹವನ್ನು ತುಂಬಲು ಅವರು ಆರಿಸಿಕೊಂಡ ಮಾರ್ಗ ಒಂದು ಮಹಾನ್ ಪಾದಯಾತ್ರೆ. ತಿರುಪತಿಯಿಂದ ವಿಶಾಖಪಟ್ಟಣಂವರೆಗೆ ಸುಮಾರು ಎರಡು ಸಹಸ್ರ ಕಿಲೋಮೀಟರ್ಗಳಷ್ಟು ದೂರವನ್ನು ಇನ್ನೂರು ದಿನಗಳಲ್ಲಿ ಪಾದಯಾತ್ರೆಯಲ್ಲೇ ಮುಗಿಸಿದ್ದಾರೆ.
ಅದರಿಂದ ಅವರಲ್ಲಿ ಹೊಸ ಚೈತನ್ಯ ಮೂಡಿದೆಯಂತೆ. ಜ್ಞಾನೋದಯವೂ ಆಗಿದೆಯಂತೆ. ಭಾರತದ ಆರ್ಥಿಕ - ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ ಬರಬೇಕು ನಿಜ. ಆದರೆ ಅದನ್ನು ದಿಢೀರನೆ ಒಂದೇ ಬಾರಿಗೆ ತರುವಂತಿಲ್ಲ, ನಿಧಾನವಾಗಿ ತರಬೇಕು ಎನ್ನುವ ಜ್ಞಾನ ಅವರಲ್ಲಿ ಮೂಡಿದೆಯಂತೆ.
ಸುಧಾರಣೆ, ಗ್ರಾಮ ಕಲ್ಯಾಣ ಎರಡೂ ದೇಶದ ಎಲ್ಲ ಕಡೆ ಒಟ್ಟಿಗೇ ನಡೆಯಬೇಕೆನ್ನುವ ಮಹದಾಸೆ ಅವರಲ್ಲಿ ಈಗ ಮೂಡಿದೆ. ಅದನ್ನು ಜಾರಿಗೆ ತರುವುದಕ್ಕೆ ಒಂದು ಪಕ್ಷದಿಂದ ಸಾಧ್ಯವಿಲ್ಲ, ರಾಷ್ಟ್ರಮಟ್ಟದಲ್ಲೇ ಅಧಿಕಾರ ಗ್ರಹಣ ಮಾಡಬಲ್ಲ ರಾಜಕೀಯ ಸಂಘಟನೆ ರಚನೆಯಾಗಬೇಕಾಗಿದೆ. ಅದನ್ನು ಮೂರನೇ ರಂಗ, ನಾಲ್ಕನೇ ರಂಗವೆಂದು ಕರೆಯಬಹುದು. ಹೆಸರು ಮುಖ್ಯವಲ್ಲ, ಉದ್ದೇಶ ಮುಖ್ಯ.
ದೇಶದಲ್ಲಿ ಈಗಾಗಲೇ ಮುಲಾಯಂ ಸಿಂಗ್ ಯಾದವ್ ಅವರು ಸಮಾಜವಾದಿ ಚಿಂತನೆಯ ಒಂದು ರಾಷ್ಟ್ರೀಯ ರಂಗವನ್ನು ರಚಿಸಲು ಮುಂದಾಗಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಒಂದು ರಾಷ್ಟ್ರೀಯ ಐಕ್ಯರಂಗದ ರಚನೆಯ ಉದ್ದೇಶವನ್ನು ಪ್ರಕಟಿಸಿದ್ದಾರೆ. ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕ ಪ್ರಕಾಶ್ ಕಾರಟ್ ಆ ಉದ್ದೇಶವನ್ನು ನಿರಂತರವಾಗಿ ಪ್ರಕಟಿಸಿಕೊಂಡೇ ಬರುತ್ತಿದ್ದಾರೆ.
ಪ್ರಾದೇಶಿಕ ಪಕ್ಷಗಳು ಎಷ್ಟೇ ಪ್ರಯತ್ನ ಪಟ್ಟರೂ, ಅಂತಿಮ ಹಂತದಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ನೆರವನ್ನು ಕೇಳಲೇಬೇಕು, ಆ ಎರಡೂ ಪಕ್ಷಗಳು ಜನಸಾಮಾನ್ಯ ವರ್ಗಗಳ ನಿತ್ಯ ಜೀವನದ ಬವಣೆಯನ್ನು ಮರೆತು ಉಡುಗೊರೆ, ಕೊಡುಗೆ, ಪುಕ್ಕಟೆ ಸೌಲಭ್ಯಗಳನ್ನು ನೀಡುವ ಮೂಲಕವೇ ಸುಧಾರಣೆಯನ್ನು ಜಾರಿಗೆ ತರುವ ಚಿಂತನೆಯನ್ನು ಪ್ರಕಟಿಸಿರುವುದರಿಂದ ಕಮ್ಯುನಿಸ್ಟರ ಕಲ್ಪನೆಯ ರಾಷ್ಟ್ರೀಯ ರಂಗಕ್ಕೆ ಆ ಪಕ್ಷಗಳ ನೆರವು ಸಿಗುವುದಿಲ್ಲ.
ಚಂದ್ರಬಾಬು ನಾಯ್ಡು ಅವರಂತೂ ಸುಮ್ಮನೆ ಕೂಡುವವರಲ್ಲ. ಅವರಿಗೆ ಈಗ 63 ವರ್ಷ. ರಾಜಕೀಯದಲ್ಲಿ ಅದೇನೂ 'ಮುದಿವಯಸ್ಸಲ್ಲ'. ಮರಳಿ ಪ್ರಯತ್ನ ಮಾಡುವ ಛಲ ಅವರದ್ದು, ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಂತೆ.
1950ರಲ್ಲಿ ಚಿತ್ತೂರು ಜಿಲ್ಲೆಯ ನಾರಾವಾರಿ ಗ್ರಾಮದಲ್ಲಿ ಜನನ. ಆರಂಭದ ವಿದ್ಯಾಭ್ಯಾಸ ಅಲ್ಲೇ, ಮುಂದೆ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದ ಬಿ.ಎ. ಪದವಿಧರ. ಅರ್ಥಶಾಸ್ತ್ರದಲ್ಲಿ ಅಪಾರವಾದ ಆಸಕ್ತಿ, ಪಿಎಚ್ಡಿಗೆ ಆರಿಸಿಕೊಂಡ ವಿಷಯ ಆಚಾರ್ಯ ಎನ್.ಜಿ. ರಂಗಾ ಅವರ ಗ್ರಾಮೀಣ ಆರ್ಥಿಕ ಚಿಂತನೆ. ಅದು ಮುಗಿಯಲಿಲ್ಲ.
ಯುವಕರಾಗಿದ್ದಾಗಲೇ ಕಾಂಗ್ರೆಸ್ ಸಂಪರ್ಕ. ಸಂಜಯಗಾಂಧಿಯ ಸಂಗಾತಿಯಾದರು. ಚಿಕ್ಕವಯಸ್ಸಿನಲ್ಲೇ (28) ಚಂದ್ರಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ವಿಧಾನಸಭೆಗೆ ಆಯ್ಕೆ. ಅದೇ ವರ್ಷ ತಾಂತ್ರಿಕ ಶಿಕ್ಷಣದ ಸಚಿವ. ಆ ಸಮಯದಲ್ಲೇ ತೆಲುಗು ಚಿತ್ರರಂಗದ ಪ್ರಮುಖ ನಂದಮೂರಿ ತಾರಕ ರಾಮರಾವ್ (ಎನ್ಟಿಆರ್) ಪರಿಚಯ. ಅವರ ಪುತ್ರಿ ಭುವನೇಶ್ವರಿಯನ್ನೇ ಮದುವೆಯಾದರು. ಪಿಎಚ್ಡಿ ಪದವಿಯ ಆಸೆ ಬಿಟ್ಟರು. ಸಮಯ ಸಿಕ್ಕಾಗ, ಆರ್ಥಿಕ ವಿಚಾರಗಳನ್ನು ಕುರಿತು ಬೆಂಗಳೂರಿನ ಸದರ್ನ್ ಎಕಾನಮಿಸ್ಟ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಹೊಸ ಚಿಂತನೆಯ ಪ್ರಬುದ್ಧ ಲೇಖನ ಮಾಲೆ ಅದು.
ಮುಂದೆ ರಾಜಕೀಯವೇ ಅವರ ಸರ್ವಸ್ವ. 1987ರ ಸುಮಾರಿನಲ್ಲಿ ತೆಲುಗರ ಆತ್ಮಗೌರವದ ರಕ್ಷಣೆಗೆ ಎನ್ಟಿಆರ್ ತೆಲುಗುದೇಶಂ ಪಕ್ಷ ಸ್ಥಾಪಿಸಿ, ಚೈತನ್ಯ ರಥವನ್ನೇರಿದಾಗಲೂ, ಅಳಿಯ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಬಿಡಲಿಲ್ಲ. ಚುನಾವಣೆಯಲ್ಲಿ ಚಂದ್ರಬಾಬು ಸೋತರು, ಎನ್ಟಿಆರ್ ಸರ್ಕಾರ ಅಸ್ತಿತ್ವದಲ್ಲಿ ಬಂದಿತ್ತು.
ಆಗಲೇ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಬಿಟ್ಟು ತೆಲುಗುದೇಶಂ ಸೇರಿದ್ದು, ಅದರ ಪ್ರಧಾನ ಕಾರ್ಯದರ್ಶಿಯೂ ಆದರು. ಎನ್ಟಿಆರ್ ಸರ್ಕಾರವನ್ನು ನಾದೆಂಡ್ಲ ಭಾಸ್ಕರರಾಯರ ಬಂಡಾಯದ ಮೂಲಕ, ಸಂವಿಧಾನಕ್ಕೆ ವಿರುದ್ಧವಾಗಿ ಇಂದಿರಾಗಾಂಧಿ ಪದಚ್ಯುತಿಗೊಳಿಸಿದಾಗ, ಚಂದ್ರಬಾಬು ನಾಯ್ಡು ಅವರ ಸಂಘಟನಾ ಶಕ್ತಿಯ ದರ್ಶನ ಜಗತ್ತಿಗೆ ಆಯಿತು. ಪಕ್ಷದ ಎಲ್ಲ ಶಾಸಕರನ್ನು ಎದುರಾಳಿಗಳ ದಾಳಿಯಿಂದ ರಕ್ಷಿಸಲು ಹೈದರಾಬಾದಿನ ರಾಮಕೃಷ್ಣ ಸ್ಟುಡಿಯೋದಿಂದ ಬೆಂಗಳೂರಿನ ಹೋಟೆಲ್ ಬೆಂಗಳೂರು ಇಂಟರ್ ನ್ಯಾಷನಲ್, ಮೈಸೂರಿನ ದಾಸಪ್ರಕಾಶ ಹೋಟೆಲ್ಗಳಲ್ಲೇ ಕೂಡಿಹಾಕಿಕೊಂಡು, ವಿಧಾನಸಭೆಯ ಮತದಾನದ ದಿನವೇ ಹೈದರಾಬಾದ್ ಪಟ್ಟಣ ಪ್ರವೇಶವಾಗುವಂತೆ ನೋಡಿಕೊಂಡರು ಚಂದ್ರಬಾಬು ನಾಯ್ಡು. ಆಗ ಅವರಿಗೆ ಜೈಪಾಲರೆಡ್ಡಿ, ವೆಂಕಯ್ಯ ನಾಯ್ಡು, ಅಶೋಕ ಗಜಪತಿರಾಜು ಅವರೆಲ್ಲರ ಬೆಂಬಲ ಇದ್ದಿದ್ದು ನಿಜ.
ಈ ಪ್ರಕರಣದಿಂದ ಚಂದ್ರಬಾಬು ನಾಯ್ಡು ವಿಶ್ವದಲ್ಲೇ ಖ್ಯಾತಿ ಪಡೆದರು. ಇಂದಿರಾ ಗಾಂಧಿ ವಿರುದ್ಧದ ದೊಡ್ಡಹೋರಾಟದಲ್ಲಿ ವಿಜಯಗಳಿಸಿದ ವ್ಯಕ್ತಿಯಾಗಿ ಕಂಗೊಳಿಸಿದರು. ಮುಂದೆ, ಎನ್ಟಿಆರ್ರ ಎರಡನೇ ಹೆಂಡತಿ ಲಕ್ಷ್ಮೀಪಾರ್ವತಿ ಅಧಿಕಾರವನ್ನು ಕಬಳಿಸಲು ಪ್ರಯತ್ನಿಸಿದಾಗ ಚಂದ್ರಬಾಬು ನಾಯ್ಡು ಪಕ್ಷವನ್ನು ಸರ್ಕಾರವನ್ನೂ ಉಳಿಸಿದರು. ಆದರೆ ಎನ್ಟಿಆರ್ ಕುಟುಂಬವನ್ನು ಎದುರು ಹಾಕಿಕೊಂಡರು. ಅದರಲ್ಲಿ ಚಂದ್ರಬಾಬು ನಾಯ್ಡು ಅವರ ಮಾವ ಎನ್ಟಿಆರ್ ಪುತ್ರ ಹರಿಕೃಷ್ಣ ಅವರೂ ಒಬ್ಬರು.
1995ರಲ್ಲಿ ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿ- ತೆಲುಗು ದೇಶಂನ ಅಧ್ಯಕ್ಷರು. ಆ ಕಾಲದಲ್ಲೇ ಅವರು ಸುಧಾರಣಾವಾದಿ ಮುಖ್ಯಮಂತ್ರಿ ಎನ್ನುವ ಖ್ಯಾತಿ ಗಳಿಸಿದ್ದು. ಅದೇ ಮುಂದೆ ರಾಜಕೀಯವಾಗಿ ಅದೇ ಅವರಿಗೆ ಶಾಪವಾಯಿತು.
2004ರ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಆಂಧ್ರಪ್ರದೇಶದ 294 ವಿಧಾನಸಭೆ ಸ್ಥಾನಗಳಲ್ಲಿ ಗೆದ್ದಿದ್ದು 47 ಕ್ಷೇತ್ರಗಳಲ್ಲಿ ಮಾತ್ರ. ಚಂದ್ರಬಾಬು ನಾಯ್ಡು ಗೆದ್ದರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ವೈ.ಎಸ್. ರಾಜಶೇಖರ ರೆಡ್ಡಿ ಅವರ ಪತ್ನಿ ವಿಜಯಮ್ಮ ಅವರು ಹೊರಿಸಿದ್ದು ಒಂದು ದೊಡ್ಡ ಪ್ರಕರಣ. ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ರಾಜಕಾರಣದಲ್ಲಿ ಯಶಸ್ಸು ಗಳಿಸದೇ ರಾಷ್ಟ್ರೀಯ ರಾಜಕಾರಣಕ್ಕೆ ಹೋಗುವ ಪ್ರಯತ್ನ ಒಂದು ರೀತಿಯಲ್ಲಿ ಆತ್ಮಹತ್ಯೆಯೇ ಎನ್ನುವುದು ಅವರಿಗೂ ಗೊತ್ತು.
ಆಂಧ್ರದಲ್ಲಿ ವೈಎಸ್ಸಾರ್ ಸಹಾನುಭೂತಿ, ತೆಲಂಗಾಣದ ಹೋರಾಟಗಳಲ್ಲಿ ಅಲ್ಪಾವಧಿಯ ಚಟುವಟಿಕೆ - ದೀರ್ಘಕಾಲದ ಹೋರಾಟಕ್ಕೆ ತೆಲುಗುದೇಶಂ ಪಕ್ಷವನ್ನು ಸಜ್ಜುಗೊಳಿಸುವ ಕೆಲಸಕ್ಕೆ ಅವರು ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ.
ಮುಂದಿನದ್ದು ರಾಜಕೀಯ ಹೋರಾಟವೇ. ಪಾದಯಾತ್ರೆಗೆ ಹೋರಾಟದ ಉದ್ದೇಶ ಇರಲಿಲ್ಲ ರಾಜಕೀಯಕ್ಕೆ ಇದೆ ಎನ್ನುತ್ತಾರೆ.
-ಸತ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.