ತೆರೆಯ ಮೇಲಿನ ಹುಡುಗಾಟ
ಭಾರತೀಯ ಸಿನಿಮಾಕ್ಕೆ 100 ವರ್ಷ ತುಂಬಿರುವ ಸಂದರ್ಭಕ್ಕೊಂದು ಕೊಡುಗೆ ಎಂದು ಬಿಂಬಿತವಾಗುತ್ತಿರುವ 'ಬಾಂಬೆ ಟಾಕೀಸ್' ಚಿತ್ರದಲ್ಲಿ ಹುಡುಗ, ಹುಡುಗಿಯ ಬದಲು, ಹುಡುಗ, ಹುಡುಗನನ್ನು ಕಿಸ್ ಮಾಡುವ ದೃಶ್ಯ ಇದೆಯಂತೆ...
'ಮುತ್ತೇ ಪ್ರಥಮ, ಅದುವೇ ಜಗದ ನಿಯಮ, ಮದುವೆ ಪ್ರಥಮ ಅದುವೇ ಜನರ ನಿಯಮ' ಎಂಬ ಮುತ್ತಿನ ಮೇಲಿನ ಮುತ್ತಿನಂಥ ಮಾತುಗಳನ್ನು ನಮ್ಮ ಸಿನಿಮಾಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇದು ಜಗದ ನಿಯಮ ಮತ್ತು ಜನರ ನಿಯಮ ಎರಡನ್ನೂ ಗಾಳಿಗೆ ತೂರಿದ ಕಥೆ. ಎಷ್ಟೇ ಆದರೂ ಇದು ನಿರ್ದೇಶಕ ಕರಣ್ ಜೋಹರ್ಗೆ ಸಂಬಂಧಪಟ್ಟ ವಿಷಯ.
ಮುತ್ತು ಎಂದಾಕ್ಷಣ 'ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು' ಎನಿಸಿದರೆ ಈ ವಿಷಯದಲ್ಲಿ ಅದು ತಪ್ಪಾಗುತ್ತದೆ. ಭಾರತೀಯ ಸಿನಿಮಾಕ್ಕೆ 100 ವರ್ಷ ತುಂಬಿರುವ ಸಂದರ್ಭಕ್ಕೊಂದು ಕೊಡುಗೆ ಎಂದು ಬಿಂಬಿತವಾಗುತ್ತಿರುವ 'ಬಾಂಬೆ ಟಾಕೀಸ್' ಚಿತ್ರದಲ್ಲಿ ಹುಡುಗ, ಹುಡುಗಿಯ ಬದಲು, ಹುಡುಗ, ಹುಡುಗನನ್ನು ಕಿಸ್ ಮಾಡುವ ದೃಶ್ಯ ಇದೆಯಂತೆ. ಈ ರೀತಿಯ 'ಹುಡುಗಾಟ' ಮಾಡಲು ಹೆಸರುವಾಸಿಯಾಗಿರುವ ಕರಣ್ ಜೋಹರ್ ತಮ್ಮ ಅತಿರಂಜಿತ ಕಲ್ಪನೆಯನ್ನು ಬಾಂಬೆ ಟಾಕೀಸ್ನಲ್ಲಿ ಸಾಕಾರಗೊಳಿಸಿಕೊಂಡಿದ್ದಾರೆ. 'ನಟ' ರಣ್ದೀಪ್ ಹೂಡಾ ಮತ್ತು 'ನಟ' ಸಾಕಿಬ್ ಸಲೀಮ್ ನಡುವಿನ ಈ ಮುತ್ತಿಗೆ ದೃಶ್ಯ ನೋಡಲು ಈಗ ಚಿತ್ರಮಂದಿರಗಳಿಗೆ ಜನ ಮುತ್ತಿಗೆ ಹಾಕುವ ಸಮಯ.
ಕರಣ್ ಜೋಹರ್, ಅನುರಾಗ್ ಕಶ್ಯಪ್, ದಿವಾಕರ್ ಬ್ಯಾನರ್ಜಿ, ಜೋಯಾ ಅಖ್ತರ್ 'ಬಾಂಬೆ ಟಾಕೀಸ್' ಚಿತ್ರದ ನಾಲ್ವರು ನಿರ್ದೇಶಕರು. ಆದರೆ ಇಂಥ ದೃಶ್ಯಗಳಿಗೆ ಲಾಯಕ್ಕು ಎಂಬ ಕಾರಣಕ್ಕೋ ಏನೋ ಈ ಮುತ್ತಿನ ದೃಶ್ಯ ಕರಣ್ ಜೋಹರ್ ಅವರ ಹೆಗಲಿಗೆ ಬಿದ್ದಿದೆ. ಹಾಗಾಗಿ, ಕರಣ್ ಮುಂದಾಳತ್ವದಲ್ಲಿ ಇಬ್ಬರೂ ನಟರು ತಮ್ಮ ತಮ್ಮ ಮೂಗಿನ ನೇರಕ್ಕೆ ತುಟಿಗಳಲ್ಲೇ ಮಾತನಾಡಿಕೊಂಡಿದ್ದಾರಂತೆ.
ಆದರೆ, ತುಟಿಗೆ ತುಟಿ ಸೇರಿಸುವ ಈ ಹಾಟ್ ದೃಶ್ಯದ ಬಗ್ಗೆ ಇಬ್ಬರೂ ನಟರು, ತುಟಿಕ್ ಪಿಟಿಕ್ ಎನ್ನುತ್ತಿಲ್ಲ. 'ದೋಸ್ತಾನ' ಚಿತ್ರದಲ್ಲಿ ಈ ಮೊದಲು ಎಲ್ಲವನ್ನೂ ತೋರಿಸಿದ್ದ ಕರಣ್ಗೆ ಇದೇನೂ ಕಷ್ಟವಾಗಿರಲಿಕ್ಕಿಲ್ಲ. ಆದರೆ ನಿಮಗೆ ಏನಾದರೂ ಕಷ್ಟವಾಯಿತೇ ಎಂದು ನಟ ಸಾಕಿಬ್ ಸಲೀಮ್ ಅವರನ್ನು ಕೇಳಿದಾಗ, 'ಈ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ, ಆದರೆ, ಅದೊಂದು ತುಂಬ ವಿಚಿತ್ರವಾದ ಸನ್ನಿವೇಶವಾಗಿದ್ದರೂ, ರಣ್ದೀಪ್ ಹೂಡಾ ಅದನ್ನು ಸಹಜವಾಗಿ ನಿಭಾಯಿಸಿದರು. ಅದರ ಜೊತೆಗೆ ಕರಣ್ ಜೋಹರ್ ಅವರ ಸೆನ್ಸಿಟಿವಿಟಿ ಕೂಡ ಸಹಾಯ ಮಾಡಿತು' ಎಂದಿದ್ದಾರೆ. ಆದರೆ 'ಬಾಂಬೆ ಟಾಕೀಸ್'ನ ಇಂಥ ಕಿಸ್ಸಿಂಗ್ ದೃಶ್ಯ ನೋಡಿ ಬಾಲಿವುಡ್ನ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಇನ್ಮೇಲೆ ನಾನು ಕಿಸ್ಸಿಂಗ್ ಸನ್ನಿವೇಶಗಳಲ್ಲಿ ಅಭಿನಯಿಸುವುದಿಲ್ಲ ಎಂದು ಶಪಥ ಮಾಡಿದ್ದರೆ ಅಚ್ಚರಿಯೇನಿಲ್ಲ.ಟಿ
-ಹರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.