ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಫ್ಯಾನು

Srinivasa Murthy VN
Updated On : 4 May 2013, 12:55 pm

2013 ಮೆಚ್ಚುಗೆ ಪಡೆದ ಕಥೆ
'ಇವತ್ಯಾಕೋ ಈ ಸೀನಿಂಗ್ ಫ್ಯಾನ್‌ನನ್ನೇ ನುಂಗೋ ರೀತಿ ನೋಡ್ತಿದೆ. ನನ್ನ ಮೇಲಿಂದಾನೆ ತಿರಗ್ತಾ ತಿರಗ್ತಾ ಒಳಗೆ ಎಳೆದುಕೊಳ್ಳುತ್ತೇನೋ ಅನಿಸ್ತಿದೆ' ಎಂದು ಆ ಕಚೇರಿಯ ದೊಡ್ಡ ಕೊಠಡಿಯಲ್ಲಿ ಕೆಲಸ ಮಾಡುತ್ತಿರುವ ಮೂರ್ನಾಲ್ಕು ಜನ ಸಿಬ್ಬಂದಿಗಳಲ್ಲಿ, ತನ್ನ ತಲೆ ಮೇಲೆಯೇ ತಾನು ವರ್ಗಾವಣೆಯಾಗಿ ಬಂದಾಗಿನಿಂದ ಇರುವ ಫ್ಯಾನನ್ನು ನೋಡಿ ಹೆಮ್ಮೆಪಟ್ಟುಕೊಂಡಿದ್ದ ಗುಮಾಸ್ತ ನರಸಿಂಗರಾಯಪ್ಪ, ಆವತ್ತು ಕುರ್ಚಿಗೆ ತಲೆ ಆನಿಸಿ ಆ ಫ್ಯಾನನ್ನು ನೋಡುತ್ತ ಎದುರಿಗೆ ಕುಳಿತುಕೊಂಡಿದ್ದ ಗುತ್ತಿಗೆದಾರನೊಬ್ಬನಿಗೆ ಹೇಳುತ್ತಾ ಇದ್ದ.
'ಸಾರ್, ಅಷ್ಟ್ಯಾಕೆ ಬೇಜಾರು ಮಾಡಿಕೊಳ್ತೀರಾ, ನೀವು 10 ವರ್ಷದಿಂದ ಈ ಕಚೇರೀಲಿ ಇದೀರಾ, ನನ್ನ ಕೆಲಸ ಮಾಡಿದ್ದಕ್ಕೆ ನೀವು ನಿವೃತ್ತಿಯಾಗುತ್ತಿರುವ ಈ ಸಮಯದಲ್ಲಾದರೂ ನನ್ನ ಸಂತೋಷಕ್ಕಾಗಿ ನಿಮಗೆ ಆ ದುಡ್ಡನ್ನು ನಿಮ್ಮ ಮಗಳ ಮದುವೆಗೆ ಕಾಣಿಕೆ ಅಂತಾ ಕೊಟ್ಟಿದ್ದು. ನಿಮಗೆ ಇಷ್ಟೊಂದು ಬೇಜಾರು ಆಗುತ್ತೆ ಅಂತಾ ಗೊತ್ತಿರ್ಲಿಲ್ಲ. ನೀವು ಈವತ್ತು ಬೇಜಾರಾದಷ್ಟು ನಾನು ಹಿಂದೆ ಯಾವಾಗಲೂ ನಿಮ್ಮನ್ನು ನೋಡಿಲ್ಲ' ಅಂದ ಆ ಗುತ್ತಿಗೆದಾರ.
ನರಸಿಂಗರಾಯಪ್ಪ ಕುರ್ಚಿ ಮೇಲೆ ಇಟ್ಟಿದ್ದ ತನ್ನ ತಲೆಯನ್ನು ಕೆಳಗೆ ತಂದು, ಟೇಬಲ್ ಮೇಲಿದ್ದ ಕಡತದ ಮೇಲೆ ಕಣ್ಣಾಡಿಸಿ, 'ನನ್ನ ಇಷ್ಟು ವರ್ಷದ ಸರ್ವೀಸ್‌ನಲ್ಲೇ ನನಗೆ ಯಾರೂ ಎದುರಾಡದವರು, ಇವತ್ತು ನನ್ನ ಮುಂದೇನೇ ಆಡಿಕೊಳ್ತಾ ಇರೋದಲ್ಲದೆ, ಆ ಫ್ಯಾನ್ ಕೂಡ ನನ್ನ ನೋಡಿ ನಗ್ತಾ ಇದೆ' ಎಂದು ನಾಚಿಕೆ, ಭಯದಿಂದ ಕಡತದಲ್ಲಿ ಏನೋ ಬರೆಯಲು ಪೆನ್ನು ಕೈಗೆತ್ತಿಕೊಂಡು ಅದನ್ನು ಹಾಗೇ ನಿಲ್ಲಿಸಿ ಅಂದಾಗ, 'ಅಯ್ಯೋ ಬಿಡಿ ಸಾರ್. ಆ ಫ್ಯಾನು 50 ವರ್ಷದಿಂದಾನೇ ಇದೆ. ಅದು ನಮ್ಮಂಥ ನಿಮ್ಮಂಥ ಎಷ್ಟು ಜನ್ರನ್ನ ನೋಡಿಲ್ಲ. ಅದಕ್ಕೆ ಕಾಣೋದು ನಮ್ಮ ತಲೆ ಮಾತ್ರಾನೇ. ಬರೀ ತಿರಗ್ತಾನೇ ಇರ್ತದೆ. ನಮ್ ಕಷ್ಟ ಅದಕ್ಕೇನು ಗೊತ್ತು?' ಎಂದು ಗುತ್ತಿಗೆದಾರ ನರಸಿಂಗರಾಯಪ್ಪನನ್ನು ಸಮಾಧಾನ ಮಾಡುವ ಧಾಟಿಯಲ್ಲಿ ಮಾತನಾಡಿದ.
ಫ್ಯಾನು ತಿರುಗುತ್ತಲೇ ಇತ್ತು. ಗುತ್ತಿಗೆದಾರ ಆಗ ತಾನೇ ಮಾತನಾಡಿದ ಮಾತು ಅದಕ್ಕೂ ನಿಜ ಅನ್ನಿಸಿತ್ತು. ಅದನ್ನು ಸೀಲಿಂಗ್‌ಗೆ ಅಳವಡಿಸಿದಾಗಿನಿಂದಲೂ ಆ ಫ್ಯಾನು ಎಷ್ಟೆಲ್ಲ ವಿಧದ ತಲೆಗಳನ್ನು ನೋಡಿಲ್ಲ. ಎಷ್ಟೋ ತಲೆಗಳನ್ನು ನೋಡಿ ನಕ್ಕಿದ್ದು, ಸಿಟ್ಟಾಗಿದ್ದು, ಭಯಪಟ್ಟಿದ್ದು, ಅತ್ತಿದ್ದು, ಅಸೂಯೆಪಟ್ಟಿದ್ದೂ ಉಂಟು. ಬೆಳಿಗ್ಗೆ ಜವಾನ ಸ್ವಿಚ್ ಅದುಮಿ ಅದನ್ನು ತಿರುಗುವಂತೆ ಮಾಡಿಬಿಟ್ಟರೆ ಸಂಜೆ ಕಚೇರಿ ಮುಚ್ಚುವ ವೇಳೆಯವರೆಗೂ ತಿರುಗುತ್ತಲೇ ಕೆಳಗಿನ ತಲೆಗಳ ಮಾತುಗಳನ್ನು ಕೇಳಿ ಕೇಳಿ ಅದಕ್ಕೂ ಏನಾದರೂ ಅನ್ನಿಸಿರಬಹುದು.
ಆದರೆ, ಅದು ನರಸಿಂಗರಾಯಪ್ಪನಷ್ಟು ಪ್ರಾಮಾಣಿಕ, ಸಜ್ಜನ ಮತ್ತು ಬುದ್ಧಿವಂತ ವ್ಯಕ್ತಿಯನ್ನು ನೋಡಿರಲಿಲ್ಲ. ಕೊನೆಗೂ ನರಸಿಂಗರಾಯಪ್ಪನನ್ನೂ ಸಹ ಬೇರೆಯವರನ್ನು ನೋಡುವ ರೀತಿಯಲ್ಲೇ ನೋಡಬೇಕಾಯಿತು ಎಂದು ಆ ಫ್ಯಾನಿಗೆ ಅನ್ನಿಸಿರಲೂ ಸಾಕು. ನರಸಿಂಗರಾಯಪ್ಪ ಈ ಹಿಂದೆ ಎಷ್ಟೋ ಸಾರಿ ತನಗೆ ಮೇಲಿರುವ ಸೀಲಿಂಗ್ ಫ್ಯಾನೇ ತನ್ನ ಫ್ಯಾನು (ಅಭಿಮಾನಿ) ಎಂದು ಹೇಳುತ್ತಿದ್ದುದನ್ನು ಕೇಳಿ ಅದೂ ಸಂತೋಷಪಟ್ಟಿತ್ತು. ಆದರೂ, ನರಸಿಂಗರಾಯಪ್ಪ ನಿವೃತ್ತಿಯಾಗುತ್ತಾನೆ, ನಾಳೆ ಇನ್ನೊಬ್ಬ ಬರುತ್ತಾನೆ ಎಂದು ಗೊತ್ತಾದಾಗ, ಆ ತಲೆ ಇನ್ನ್ಯಾವ ರೀತಿಯದ್ದೊ ಎಂದು ಅದಕ್ಕೂ ಅನ್ನಿಸಿರಬಹುದು. ಆಗಲೇ, ಕಚೇರಿ ಜವಾನ ಬಂದು ನರಸಿಂಗರಾಯಪ್ಪನ ಎದುರು ನಿಂತುಕೊಂಡು, ಜತೆಗೆ ಕರೆತಂದಿದ್ದ ನವಯುವಕನನ್ನು ಪರಿಚಯಿಸುತ್ತಾ, 'ಸಾರ್, ನಿಮ್ಮ ಜಾಗಕ್ಕೆ ಬರುವವರು ಇವರೇ. ದೊಡ್ಡ ಸಾಹೇಬ್ರು ನಿಮಗೆ ಪರಿಚಯ ಮಾಡಿಸಿ ಅಂತ ಕಳಿಸಿದ್ರು' ಎಂದ.
ಆ ಯುವಕ ತನ್ನ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡು ಗುತ್ತಿಗೆದಾರನ ಪಕ್ಕದಲ್ಲಿ ಖಾಲಿಯಿದ್ದ ಕುರ್ಚಿಯಲ್ಲಿ ಕುಳಿತು ಕೊಠಡಿಯ ಸುತ್ತಮುತ್ತಲೂ ಕಣ್ಣು ಹೊರಳಿಸಿ ಮೇಲಿದ್ದ ಫ್ಯಾನ್ ನೋಡಿ, 'ತುಂಬಾ ಹಳೆ ಫ್ಯಾನು ಅನಿಸುತ್ತೆ. ತೆಗೆಸಿಬಿಡಬೇಕು ಸಾರ್. ಎ.ಸಿ.ನೇ ಹಾಕ್ಕೋಬಹುದು' ಅಂದಾಗ, ನರಸಿಂಗರಾಯಪ್ಪನವರಿಗೆ ಒಂದು ಕ್ಷಣ ಕೈ ನಡುಗಿ ಎದೆಯಲ್ಲಿ ಸಣ್ಣ ಮಿಂಚು ಸುಳಿದ ಹಾಗಾಯಿತು. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋಗುವುದು ಸಹಜ. ನನ್ನ ನಿವೃತ್ತಿ ಜತೆಗೆ ಈ ಫ್ಯಾನು ನಿವೃತ್ತಿಯಾಗಬಹುಹು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಾಗ, ಕಣ್ಣಂಚಿನಲ್ಲಿ ನೀರಾಡಿಸಿತ್ತು. ಆದರೂ, ಆ ಫ್ಯಾನು ತಿರುಗುತ್ತಲೇ ಇತ್ತು.

-ಆನಂದ ಎಸ್.ಹಡಪದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments