ಬಿಸಿ ತುಪ್ಪ
ಮನೆಯ ಗೇಟಿಗೆ ಬೀಗ ಹಾಕಿ ಕಚೇರಿಗೆ ಹೊರಡುತ್ತಿದ್ದೆ. ಪಕ್ಕದ ಮನೆಯಾತ ಆಗಲೇ ಬೈಕಿನ ಮೇಲೆ ಕೂತು, ಬಾಗಿಲತನಕ ಬೀಳ್ಕೊಡಲು ಬಂದಿದ್ದ ಹೆಂಡತಿಯೊಂದಿಗೆ ಏನನ್ನೋ ಹೇಳುತ್ತಿದ್ದ!
ಯೋಕೋ ಮನಸ್ಸಿಗೆ ಕಸಿವಿಸಿಯಾಯಿತು! ಹತ್ತು ಬಿಟ್ಟಿ ಹೊರಟಿದ್ರೆ ಚೆನ್ನಾಗಿತ್ತೇನೋ ಎಂದೆನಿಸಿತು! ಆದರೆ ಸಮಯ! ಊರಿಗೆ ಮುಂಚೇನೇ ಆಫೀಸಿಗೆ ಬರುವ ಸಾಹೇಬರ ಕೆಂಗಣ್ಣು-ನನ್ನ ಟೇಬಲ್ಲಿನ ಮೇಲೆ ಪೇರಿಸಿಟ್ಟ ಫೈಲುಗಳು ನೆನಪಾಯ್ತು. ಸರಸರ ನಡೆದೆ. ಹಿಂದೆಯೇ ಗಡಗಡ ಸದ್ದು ಮಾಡುತ್ತ ಬಂದೇಬಿಟ್ಟಿತು ಬುಲೆಟ್. ನನ್ನ ಪಕ್ಕಕ್ಕೆ ಬಂದ ಬೈಕ್ ಸ್ಲೋ ಆಯ್ತು!
'ಬನ್ನಿ, ನಿಮ್ಮ ಆಫೀಸಿಗೆ ಬಿಡ್ತೀನಿ' ಕರೆದ ಬೈಕ್ ಸವಾರ.
'ಪರ್ವಾಗಿಲ್ಲ, ಆಟೋನಲ್ಲೇ ಹೋಗ್ತೀನಿ' ನಾನು ನಯವಾಗಿ ನಿರಾಕರಿಸಿದೆ.
ಆತ ಅಲ್ಲಿಗೂ ಬಿಡದೆ 'ಮೇನ್‌ರೋಡಲ್ಲೇ ಆಟೋ ಸಿಗೋದು. ಬನ್ನಿ ಅಲ್ಲಿವರೆಗಾದ್ರೂ ಬಿಡ್ತೀನಿ' ಎಂದ.
'ಬೇಡ, ಬೇಡ ನಾನು ನಡೆದೇ ಹೋಗ್ತೀನಿ. ನೀವು ಹೊರಡಿ. ನಿಮಗೆ ತಡವಾಗಬಹುದು' ನಾನೆಂದೆ.
ಆದರೂ ಆತ ಜಗ್ಗಲಿಲ್ಲ. ಏನೇನೋ ಮಾತಿಗೆಳೆದ! 'ನಿಮ್ಮನೆಯವರು ಫೇನ್ ಮಾಡುತ್ತಿರುತ್ತಾರಾ? ಅಲ್ಲಿ ಉಳಿದುಕೊಳ್ಳುವುದಕ್ಕೆ, ಊಟಕ್ಕೆ ಏನೂ ತೊಂದರೆಯಾಗಿಲ್ಲಂತಾ? ಯಾವಾಗ ಬರುತ್ತಾರೆ? ಪಾಪ! ಇಲ್ಲಿ ನಿಮಗೂ ತೊಂದರೆ!'
ನಾನು ದಾಪುಗಾಲಿಟ್ಟಂತೆಲ್ಲಾ, ಬೈಕಿನ ಮೇಲೆ ಕುಳಿತೇ ಆಗಾಗ ಆ್ಯಕ್ಸಲರೇಟರ್ ಬಳಸುತ್ತ ಜತೆಜತೆಯಲ್ಲೇ ಬಂದ! ನನ್ನ ಮನದಲ್ಲಿ ನೂರಾರು ಆಲೋಚನೆಗಳು... ಈತನಿಗೇನು? ಸುಮ್ಮನೇ ಹೋಗಬಾರದೇಕೆ? ನಿನ್ನೆಯೂ ಹೀಗೇ ಕಾಡಿದ್ದನಲ್ಲ.
ಹಾಗಂತ ಆತ ಕೆಟ್ಟವನೇನಲ್ಲ. ಸಂಭಾವಿತ. ಮಕ್ಕಳೊಂದಿಗ. ಹೆಚ್ಚೂಕಡಿಮೆ ನನ್ನ ವಯಸ್ಸೇ. ಆದರೂ ನಾನೊಬ್ಬ ವಿವಾಹಿತ ಮಹಿಳೆ. ನನ್ನ ಸುತ್ತ ಸಮಾಜದ ಲಕ್ಷ್ಮಣರೇಖೆಗಳು. ಪರಪುರುಷನೊಂದಿಗೆ ಅಡ್ಡಾಡಿದರೆ ನೋಡಿದ ಜನ ಏನಂದಾರು? ನನ್ನ ಮರ್ಯಾದೆಯ ಪ್ರಶ್ನೆ. ಅದೂ ನನ್ನವರು ದೂರದ ಕೆನಡಾದಲ್ಲಿರುವಾಗ. ಆತನೊಂದಿಗೆ ನಾನು ಬೈಕ್ ಹತ್ತಿದರೆ? ವಿಷಯ ತಿಳಿದ ಆತನ ಹೆಂಡತಿ ಅದೆಷ್ಟು ರಂಪ ಮಾಡಬಹುದು. ನನ್ನ ಬಗ್ಗೆ ಆಕೆ ಏನು ತಿಳಿಯಬಹುದು? 'ಮಳ್ಳಿಯಂಗಿದಾಳೆ, ನನ್ನ ಗಂಡನ ಜತೆ ಬೈಕ್ ಸುತ್ತುತ್ತಾಲೆ' ಅಂದುಕೊಳ್ಳಲ್ಲವೇ? 'ಬಗಲ್ ಮೆ ದುಷ್ಮನ್' ಅಂತ ಭಾವಿಸಿಬಿಟ್ಟರೆ!
ಅಲ್ಲ ನಾನ್ಯಾಕೆ ಹಿಂಜರಿಯಬೇಕು? ಬೈಕಲ್ಲಿ ಆತನ ಜತೆ ಹೋದಾಕ್ಷಣ ಮರ್ಯಾದೆ ಹೋಗುತ್ತಾ? ಗಂಡನಿಗೆ ದ್ರೋಹ ಬಗೆದಂತಾಗುತ್ತಾ? ಯಾಕಿಷ್ಟು ಅಳುಕು? ಪ್ರಜ್ಞಾವಂತೆ, ವಿಚಾರವಂತೆ, ವಿದ್ಯಾವಂತೆ, ಉದ್ಯೋಗಶ್ಥೆ ನಾನು. ಬೇರೆ ಗಂಡಸಿನೊಂದಿಗೆ ಮಾತಾಡಿದ್ರೆ, ಪಕ್ಕ ಕೂತರೆ ತಪ್ಪೇನು? ಅದೂ ಈ ಇಪ್ಪತ್ತೊಂದನೇ ಶತಮಾನದಲ್ಲಿ, ಈ ಹೊತ್ತಿನ ಬದುಕು ಎಷ್ಟೊಂದು ಅನಿವಾರ್ಯಗಳ ಸಂತೆ ಅಲ್ಲವೇ? ನನಗೂ ಮನಸ್ಸಾಕ್ಷಿ ಇಲ್ಲವೇ? ಹೇನಿಗಂಜಿ ತಲೆ ಬೋಳಿಸಿಕೊಳ್ಳಲಿಕ್ಕಾಗುತ್ತಾ?...
ಅಯ್ಯೋ! ಒಂದೂ ಆಟೋ ಕಾಣ್ತಿಲ್ಲವೇ? ಥೂ...
'ಹೋಗು; ಸ್ನೇಹ, ವಿಶ್ವಾ ತಿರಸ್ಕರಿಸಬೇಕೇಕೆ?' ಎಂದು ಒಂದೆಡೆ ಮನ ಪ್ರೇರೇಪಿಸಿದರೆ, ಇನ್ನೊಂದೆಡೆ 'ಆಟೋ ದುಡ್ಡು ಉಳಿಸ್ತೀಯಾ, ನಿನಗೇನು ಕಡಿಮೆ ಆಗಿದೆ. ನಾಚಿಕೆ ಆಗೋಲ್ಲವಾ?' ಎಂದು ಮನ ಛೇಡಿಸಿದಂತಾಯಿತು!
ಆತನೊಂದಿಗೆ ಲೋಕಾಭಿರಾಮದ ಮಾತೂ ಬೇಡವಾಗಿತ್ತು. ಚಿಕ್ಕ ಊರಿನ ಅಥವಾ ದೊಡ್ಡ ಹಳ್ಳಿಯಂತಿರುವ ಈ ಊರಿನ ರಸ್ತೆಯಲ್ಲಿ ಅದೆಷ್ಟೋ ಜೋಡಿ ಕಣ್ಣುಗಳು ನನ್ನನ್ನೇ ಗಮನಿಸುತ್ತಿದ್ದಂತೆ ಭಾಸವಾಯ್ತು. ಬಿರಬಿರ ಹೆಜ್ಜೆ ಹಾಕಿದೆ. ಬೈಕಿನ ಗಾಲಿಗಳೂ, ನನ್ನ ಹೆಜ್ಜೆಯ ಸಮಸಮಕ್ಕೇ ಉರುಳಿದವು!
ಯಾಕೋ ಆ ಕ್ಷಣ 'ನಾಗರಹಾವು' ಸಿನಿಮಾದ ಜಲೀಲ್ ನೆನಪಾದ. ಆದರೆ ನಾನು ಅಲಮೇಲುವಲ್ಲ. ಕಾಲೇಜು ಕನ್ಯೆಯಲ್ಲ. ಮೇಲಾಗಿ ಸುಂದರಿಯೂ ಅಲ್ಲ. ಅವಿವಾಹಿತೆಯೂ ಅಲ್ಲ. ಶುದ್ಧ ಭಾರತೀಯ ನಾರಿ! ಅಪ್ಪಟ ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದವಳು.
ಅಂದು ಬೇಕರಿಯಲ್ಲಿ, ನಿನ್ನೆ ಮಾರ್ಕೆಟ್ಟಿನಲ್ಲಿ, ಮತ್ತೆ ಇಂದೂ ನಕ್ಷತ್ರಿಕನಂತೆ ಕಾಡುತ್ತಾನಲ್ಲ. ಛೇ! ಏನು ಜನಾನೋ. ನನ್ನಂತಹ ಪಾಪದವಳನ್ನು ಹಿಂದೆ ಕೂರಿಸಿಕೊಂಡು ಹೋದರೆ, ಈತನಿಗೇನು ಸಿಗುತ್ತೆ? ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡೋಲ್ಲವೇ? ಒಂಟಿ ಹೆಂಗಸನ್ನು ಕಾಡುವುದೇಕೆ? ಆಕೆಯ ಆತಂಕ, ಹಿಂಜರಿತ, ಭಯ, ಇಬ್ಬಂದಿತನ ಈ ಗಂಡಸಿಗೆ ಅರ್ಥವಾಗುವುದಿಲ್ಲವೇಕೆ? ಆ ಕ್ಷಣಕ್ಕೆ ನನ್ನವರ ಮೇಲೆಯೇ ಸಿಟ್ಟು ಬಂತು! ಹೆಂಡತಿಗಿಂತ 'ಕೆರಿಯರ್ರೇ' ಮುಖ್ಯವಾಯಿತಾ? ಕೆನಡಾ ಪ್ರೊಗ್ರಾಂ ಕ್ಯಾನ್ಸಲ್ ಮಾಡಿದ್ರೆ ಆಗುತ್ತಿರಲಿಲ್ಲವೇ? ಮೂಲವ್ಯಾಧಿಯ ರೋಗಿಯಂತೆ ನಾನು ಚಡಪಡಿಸಿದೆ!
ಪುಣ್ಯಕ್ಕೆ ದೂರದಲ್ಲೊಂದು ಆಟೋ ಕಾಣಿಸಿತು. 'ಆಟೋ...' ಗಟ್ಟಿಯಾಗಿ ಕೂಗಿದೆ. ನನ್ನ ಸುದೈವ, ಆಟೋ ಹತ್ತಿರ ಬಂದಾಗ 'ಎತ್ತ, ಎಷ್ಟು' ಯಾವುದನ್ನೂ ಹೇಳದೆ, ಕೇಳದೆ, ವಿಚಾರಿಸದೆ ಹತ್ತಿ ಕೂತೆ!
ಅಬ್ಬಾ! ಎಂದು ನಿಟ್ಟುಸಿರು ಬಿಡುವಾಗ, ಎಂದೋ ಓದಿದ್ದ, ನಿಸಾರ್ ಅಹಮದ್‌ರ ಅದ್ಭುತ ಕವನ 'ಅಮ್ಮ, ಆಚಾರ ಮತ್ತು ನಾನು' ನೆನಪಾಯ್ತು! <
-ಶೈಲಾ ಜಯಕುಮಾರ್
9482200056
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.