ಪ್ರಧಾನ ಸುದ್ದಿ

ಬರಪೀಡಿತ ಪ್ರದೇಶಗಳಿಗೆ ಖಾತ್ರಿ ಹಣ ಬಿಡುಗಡೆ ಮಾಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Rashmi Kasaragodu
ನವದೆಹಲಿ: ಬರಪೀಡಿತ ರಾಜ್ಯಗಳ ರೈತರಿಗೆ ನೀಡಬೇಕಾಗಿರುವ ಎಲ್ಲಾ ಬಾಕಿ ಹಣ ಹಾಗೂ ಅಗತ್ಯ ಸೌಲಭ್ಯವನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ (ಮನ್ರೇಗಾ) ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಶುಕ್ರವಾರ ಈ ಬಗ್ಗೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಹಣಕಾಸು ಕೊರತೆ ಇದೆ ಎಂದು ಸರ್ಕಾರ ತೆರೆಮರೆಯಲ್ಲಿ ಮುಖಮುಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಂ.ಬಿ. ಲೋಕೂರ್, ಎನ್‌.ವಿ. ರಮಣ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಏತನ್ಮಧ್ಯೆ, ಬರಗಾಲಕ್ಕೆ ಒಳಗಾಗದ ಪ್ರದೇಶಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಆಯುಕ್ತರನ್ನು ನೇಮಕ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಬರಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಬೆಳೆ ನಷ್ಟ ಖಚಿತಪಡಿಸಿಕೊಳ್ಳಲು ಹಾಗೂ ಪರಿಹಾರ ಕಾರ್ಯ ಕೈಗಳ್ಳಲು ಅನುಕೂಲವಾಗುವಂತೆ ಕೇಂದ್ರ ಉದ್ಯೋಗ ಖಾತರಿ ಕೌನ್ಸಿಲ್ ಸ್ಥಾಪಿಸುವಂತೆ ಕೋರ್ಟ್ ಸೂಚನೆ ನೀಡಿದ್ದು, ಬರ ಪೀಡಿತ ಪ್ರದೇಶಗಳ ಶಾಲೆಗಳಲ್ಲಿ ಬೇಸಿಗೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವಂತೆಯೂ ಸುಪ್ರೀಂ ಸೂಚಿಸಿದೆ.
SCROLL FOR NEXT