ಲಂಡನ್: ತಮಗೆ ಮುಂದಿನ ಪ್ರಧಾನಿಯಾಗಬೇಕೆಂಬ ದೃಷ್ಟಿಕೋನವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ತನ್ನನ್ನು ತಾವು ಸೈದ್ಧಾಂತಿಕ ಯುದ್ಧವನ್ನು ಎದುರಿಸುವ ವ್ಯಕ್ತಿ ಎಂದು ಕಾಣುತ್ತೇನೆ ಎಂದು ಹೇಳಿದ್ದಾರೆ.
ಲಂಡನ್ ನಲ್ಲಿರುವ ಭಾರತೀಯ ಪತ್ರಕರ್ತರ ಒಕ್ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಪ್ರಧಾನಿಯಾಗುವ ಕುರಿತು ತಮ್ಮ ದೃಷ್ಟಿಕೋನವೇನು ಎಂದು ಕೇಳಲಾದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ನನಗೆ ಆ ರೀತಿಯ ದೃಷ್ಟಿಕೋನವಿಲ್ಲ. ಸೈದ್ಧಾಂತಿಕ ಹೋರಾಟಗಾರನಾಗಿ ನಾನು ನನ್ನನ್ನು ಕಾಣುತ್ತೇನೆ. ಈ ಬದಲಾವಣೆ ನನ್ನಲ್ಲಿ 2014ರ ನಂತರ ಬಂದಿತು. ಭಾರತಕ್ಕೆ ಅಪಾಯವಿದೆ ಎಂದು ನನಗೆ ಅರಿವಾಗಿದೆ. ಭಾರತೀಯ ರೀತಿಯಲ್ಲಿ ದೇಶವನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಬೆಳಗೆದ್ದು ಭಾರತದ ಸಾಂಸ್ಥಿಕ ರಚನೆಯನ್ನು ರಕ್ಷಿಸುವುದು ಹೇಗೆಂದು ಯೋಚಿಸುತ್ತಿರುತ್ತೇನೆ ಎಂದಿದ್ದಾರೆ.
ಕಳೆದ ಮೇ ತಿಂಗಳಲ್ಲಿ, ರಾಹುಲ್ ಗಾಂಧಿಯವರು 2019ರ ಸಾಮಾನ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಿಯಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.