ಟೆಹ್ರಾನ್: ಲೆಬನಾನ್‌ನಲ್ಲಿ ಕದನ ವಿರಾಮ ಸ್ಥಾಪನೆಯಾಗುವವರೆಗೆ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಅಧಿಕೃತವಾಗಿ ಪಾಕಿಸ್ತಾನಕ್ಕೆ ತಿಳಿಸಿದೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಪಾಕಿಸ್ತಾನದ ಮಧ್ಯಸ್ಥಿಕೆಯ ಎರಡು ವಾರಗಳ ಕದನ ವಿರಾಮಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಇಸ್ರೇಲ್ ಲೆಬನಾನ್ ಮೇಲೆ ಬಾಂಬ್ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಇತ್ತೀಚಿನ ಬೆಳವಣಿಗೆಗಳು ಬಂದಿವೆ ಎನ್ನಲಾಗಿದೆ.
ಲೆಬನಾನ್‌ನಲ್ಲಿ ಬಾಂಬ್ ದಾಳಿ ಮುಂದುವರಿದರೆ ಶಾಂತಿ ಒಪ್ಪಂದಗಳನ್ನು ಮಾತುಕತೆ ನಡೆಸಲು ಇರಾನ್ ಯಾವುದೇ ಯೋಜನೆ ಹೊಂದಿಲ್ಲ. ಮಾತುಕತೆಗಾಗಿ ಟೆಹ್ರಾನ್‌ನ ನಿಯೋಗ ಪಾಕಿಸ್ತಾನದ ರಾಜಧಾನಿಯನ್ನು ತಲುಪಿದೆ ಎಂಬ ಹೇಳಿಕೆಯನ್ನು ಇರಾನ್ ಆಡಳಿತ ಅಲ್ಲಗಳೆದಿದೆ.
ಬೈರುತ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸುತ್ತಿದ್ದರೂ, ವಾಷಿಂಗ್ಟನ್‌ನೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ಇರಾನಿನ ನಿಯೋಗ ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಹೇಳಲಾದ ವಾಲ್ ಸ್ಟ್ರೀಟ್ ಜರ್ನಲ್ ವರದಿಗೆ ಪ್ರತಿಕ್ರಿಯೆಯಾಗಿ ಇರಾನ್ ನಿಂದ ಈ ಹೇಳಿಕೆ ಬಂದಿದೆ.
ಶಾಂತಿ ಮಾತುಕತೆ ಅಮೆರಿಕದ ನಡೆ ಮೇಲೆ ಅವಲಂಬಿತ
ಅಂತೆಯೇ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಯಾವುದೇ ಮಾತುಕತೆಗಳು ವಾಷಿಂಗ್ಟನ್ ಎಲ್ಲಾ ರಂಗಗಳಲ್ಲಿ ಕದನ ವಿರಾಮ ಬದ್ಧತೆಗಳನ್ನು ಗೌರವಿಸುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದಾರೆ. ಟೆಹ್ರಾನ್‌ನ ಪ್ರಾಕ್ಸಿ ಫೋರ್ಸ್ ಹೆಜ್ಬೊಲ್ಲಾ ಕಾರ್ಯನಿರ್ವಹಿಸುವ ಲೆಬನಾನ್‌ನಲ್ಲಿಯೂ ಸಹ ಕದನವಿರಾಮ ಜಾರಿಯಾಗಬೇಕು ಎಂದು ಇರಾನ್ ಆಗ್ರಹಿಸಿದೆ.
ಲೆಬನಾನ್ ಸಮಸ್ಯೆಗೆ ಕದನ ವಿರಾಮ ಪ್ರಯತ್ನ
ಟೆಹ್ರಾನ್ ಮತ್ತು ವಾಷಿಂಗ್ಟನ್ ಎರಡೂ ದೇಶಗಳು ಗೆಲುವು ಸಾಧಿಸುವುದಾಗಿ ಹೇಳಿಕೊಳ್ಳುತ್ತಿವೆ ಮತ್ತು ಒತ್ತಡ ಹೇರುತ್ತಿವೆ, ಶಾಶ್ವತ ಒಪ್ಪಂದದ ಕುರಿತಾದ ಮಾತುಕತೆಗಳು ಶನಿವಾರ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿವೆ. ಆದರೆ ಇಸ್ರೇಲ್ ಬೈರುತ್ ಮೇಲೆ ದಾಳಿ ಮಾಡಿ ಬುಧವಾರ 300 ಕ್ಕೂ ಹೆಚ್ಚು ಜನರನ್ನು ಕೊಂದ ನಂತರ ಮಾತುಕತೆಗಳ ನಿರೀಕ್ಷೆ ಕುಂಟುತ್ತಿರುವಂತೆ ತೋರುತ್ತಿದೆ.
ಕದನ ವಿರಾಮವು ಲೆಬನಾನಿನ ಉಗ್ರಗಾಮಿ ಗುಂಪು ಹೆಜ್ಬೊಲ್ಲಾವನ್ನು ಒಳಗೊಳ್ಳುತ್ತದೆಯೇ ಎಂಬುದರ ಕುರಿತು ದೀರ್ಘಕಾಲದ ಭಿನ್ನಾಭಿಪ್ರಾಯಗಳಿವೆ. ಇರಾನ್ ತನ್ನ ಉಗ್ರ ಮಿತ್ರ ರಾಷ್ಟ್ರದ ಮೇಲಿನ ದಾಳಿಗಳು ನಿಲ್ಲದಿದ್ದರೆ "ಬಲವಾದ ಪ್ರತಿಕ್ರಿಯೆಗಳ" ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್‌ನೊಂದಿಗೆ ನೇರ ಮಾತುಕತೆಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು. ಆದರೆ ಲೆಬನಾನ್ ಸರ್ಕಾರ ತಕ್ಷಣ ಪ್ರತಿಕ್ರಿಯಿಸಿಲ್ಲ. ಲೆಬನಾನ್‌ನಲ್ಲಿ ಯಾವುದೇ ಕದನ ವಿರಾಮವಿಲ್ಲ ಮತ್ತು ಇಸ್ರೇಲ್ ಹೆಜ್ಬೊಲ್ಲಾವನ್ನು ಹೊಡೆಯುತ್ತಲೇ ಇರುತ್ತದೆ ಎಂದು ನೆತನ್ಯಾಹು ಈ ಹಿಂದೆಯೇ ಘೋಷಣೆ ಮಾಡಿದರು.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ಇಸ್ರೇಲ್-ಲೆಬನಾನ್ ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ.
ಎಲ್ಲದಕ್ಕೂ ಸಿದ್ಧವಾಗಿಯೇ ಇದ್ದೇವೆ
ಇನ್ನು ಕದನ ವಿರಾಮ ಮಾತುಕತೆಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ನಡುವೆಯೇ ಯಾವುದೇ ಸಂಭಾವ್ಯ ಸನ್ನಿವೇಶಕ್ಕೆ ಸಿದ್ಧವಾಗಿದ್ದೇವೆ ಎಂದು ಇರಾನ್ ಹೇಳಿದೆ.
ಈ ಬಗ್ಗೆ ಇರಾನ್ ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, "ಇರಾನ್ ಮತ್ತು ಪ್ರತಿರೋಧದ ಪರವಾಗಿ ಫಲಿತಾಂಶಗಳಿಲ್ಲದೆ ಕೊನೆಗೊಳ್ಳುವ ಕದನ ವಿರಾಮದ ಪರಿಣಾಮಗಳಿಂದ ಅಮೆರಿಕ ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದೂ ಹೇಳಿದೆ ಎನ್ನಲಾಗಿದೆ.
ಅಮೆರಿಕ ಮತ್ತು ಇಸ್ರೇಲ್ "ಇರಾನ್ ಮತ್ತು ಪ್ರತಿರೋಧದ ಪರವಾಗಿ ಒಪ್ಪಂದಕ್ಕೆ ಒಪ್ಪಿಕೊಂಡರೆ ಮಾತ್ರ ಮಾತುಕತೆ ಮುಂದುವರಿಯುತ್ತದೆ. ಇಲ್ಲದಿದ್ದರೆ, ಅಮೆರಿಕ ಮತ್ತು ಇಸ್ರೇಲ್ ಮತ್ತೆ ಟೀಕೆಗೆ ಗುರಿಯಾಗಬೇಕಾಗುತ್ತದೆ" ಎಂದು ಇರಾನ್ ಮೂಲಗಳು ತಿಳಿಸಿವೆ.