ಬಲೂಚಿಸ್ತಾನ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಜುಲೈ 5 ರಂದು ಆರಂಭವಾದ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇದುವರೆಗೆ ಕನಿಷ್ಠ 88 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಒಂಬತ್ತು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಆಪರೇಷನ್ ಶಬಾನ್‌ನಲ್ಲಿ ಜುಲೈ 5 ರಿಂದ ಇದುವರೆಗೆ ಹತ್ಯೆಯಾದ ಒಟ್ಟು ಭಯೋತ್ಪಾದಕರ ಸಂಖ್ಯೆ 88ಕ್ಕೆ ತಲುಪಿದೆ" ಎಂದು ಅವರು ಹೇಳಿದ್ದಾರೆ.
ಸೇನೆ, ಅರೆಸೇನಾ ರೇಂಜರ್‌ಗಳು ಮತ್ತು ಫ್ರಾಂಟಿಯರ್ ಕಾರ್ಪ್ಸ್ ಈ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಇದು ಉಗ್ರರ ವಿರುದ್ಧ ನೆಲ ಮತ್ತು ವಾಯು ದಾಳಿಗಳನ್ನು ಒಳಗೊಂಡಿದೆ.
ಜುಲೈ 5 ರಂದು ಬಲೂಚಿಸ್ತಾನ್‌ನಾದ್ಯಂತ ದಂಗೆಕೋರರು ಹಲವಾರು ಸಂಘಟಿತ ದಾಳಿಗಳನ್ನು ನಡೆಸಿದ ನಂತರ ಪಾಕಿಸ್ತಾನ ಸರ್ಕಾರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಜಿಯಾರತ್ ಜಿಲ್ಲೆಯ ಮಂಗಿ ಅಣೆಕಟ್ಟಿನ ಪೊಲೀಸ್ ಚೆಕ್‌ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಅತ್ಯಂತ ಭೀಕರ ಉಗ್ರ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಉಗ್ರರು, ಒಂಬತ್ತು ಪೊಲೀಸರನ್ನು ಕೊಂದು ಇತರ 18 ಜನರನ್ನು ಅಪಹರಿಸಿದ್ದರು.