ಡೊನಾಲ್ಡ್ ಟ್ರಂಪ್-ಇರಾನ್ ಸರ್ವಾಧಿಕಾರಿ ಮೊಜ್ತಾಬಾ ಖಮೇನಿ online desk
ವಿದೇಶ

ಮೂರ್ಖತನದ ಯಾವುದೇ ಕೃತ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಅಮೆರಿಕ ದಾಳಿಗೆ ಇರಾನ್ ಕಠಿಣ ಎಚ್ಚರಿಕೆ

ಈ ದಾಳಿಗೆ ನಾವು ಖಂಡಿತವಾಗಿಯೂ ಉತ್ತರ ನೀಡುತ್ತೇವೆ. ಅದಕ್ಕಾಗಿ ಸೂಕ್ತ ಸಮಯ ಮತ್ತು ಸ್ಥಳವನ್ನು ನಾವು ಆಯ್ಕೆ ಮಾಡುತ್ತೇವೆ. ಮುಂದೆ ಯಾರಾದರೂ ಮತ್ತೊಮ್ಮೆ ಮೂರ್ಖತನದ ಕೃತ್ಯ ಎಸಗಿದರೆ, ಅದಕ್ಕೆ ನೀಡುವ ಪ್ರತಿಕ್ರಿಯೆ ಅತ್ಯಂತ ಕಠಿಣವಾಗಿರುತ್ತದೆ.

ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದು, ಇದ ಬೆನ್ನಲ್ಲೇ ಇರಾನ್ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

ಅಮೆರಿಕದ ದಾಳಿಗೆ ನೀಡುವ ಪ್ರತಿಕ್ರಿಯೆ ಈ ಬಾರಿ "ವಿನಾಶ'ಕರವಾಗಿರಲಿದೆ ಎಂದು ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಮಾಂಡ್‌ನ ಅಧಿಕೃತ ಸೇನಾ ವಕ್ತಾರ ಇಬ್ರಾಹಿಂ ಅಲ್-ಫಿಖರ್ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅವರು, "ಈ ದಾಳಿಗೆ ನಾವು ಖಂಡಿತವಾಗಿಯೂ ಉತ್ತರ ನೀಡುತ್ತೇವೆ. ಅದಕ್ಕಾಗಿ ಸೂಕ್ತ ಸಮಯ ಮತ್ತು ಸ್ಥಳವನ್ನು ನಾವು ಆಯ್ಕೆ ಮಾಡುತ್ತೇವೆ. ಮುಂದೆ ಯಾರಾದರೂ ಮತ್ತೊಮ್ಮೆ ಮೂರ್ಖತನದ ಕೃತ್ಯ ಎಸಗಿದರೆ, ಅದಕ್ಕೆ ನೀಡುವ ಪ್ರತಿಕ್ರಿಯೆ ಅತ್ಯಂತ ಕಠಿಣವಾಗಿರುತ್ತದೆ. ಆ ಪ್ರತಿಕ್ರಿಯೆ ಈ ಪ್ರದೇಶದಲ್ಲಿರುವ ಆಕ್ರಮಣಕಾರರ ಭ್ರಮೆಯನ್ನು ಸಂಪೂರ್ಣವಾಗಿ ಚೂರುಚೂರು ಮಾಡಲಿದೆ" ಎಂದು ಹೇಳಿದ್ದಾರೆ.

"ನಮ್ಮ ಪ್ರತಿಕ್ರಿಯೆ ಭೂಮಿಯನ್ನೇ ನಡುಗಿಸಲಿದೆ. ನಿಮ್ಮ ಸೇನಾ ಅಸ್ತಿತ್ವವೇ ಇಲ್ಲದಂತಾಗಲಿದೆ. ಇದು ಸಾಮಾನ್ಯ ರಾತ್ರಿ ಅಲ್ಲ, ವಿನಾಶಕಾರ ರಾತ್ರಿ. ಈ ಬಾರಿ ನಮ್ಮ ಪ್ರತೀಕಾರ ತ್ವರಿತವಾಗಿಯೂ ನಿರ್ಣಾಯಕವಾಗಿಯೂ ಇರಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ, "ಈ ಸಂಘರ್ಷಕ್ಕೆ ನಾಂದಿ ಹಾಡಿದ್ದು ನಿಮ್ಮ ದರ್ಪ. ಈಗ ಅದನ್ನು ಅಂತ್ಯಗೊಳಿಸುವುದು ನಮ್ಮ ಶಕ್ತಿಯ ವೇದಿಕೆಗಳು. ಈ ರಾತ್ರಿ ಹೊಸ ಅಧ್ಯಾಯ ಬರೆಯಲಿದೆ. ಆಕಾಶದತ್ತ ಎಲ್ಲರ ಕಣ್ಣು ನೆಟ್ಟಿದೆ. ನಮ್ಮ ಪ್ರತಿಕ್ರಿಯೆ ಈ ಬಾರಿ ಹಿಂದೆಂದೂ ಕಂಡಿರದಷ್ಟು ಪ್ರಬಲವಾಗಿರಲಿದೆ" ಎಂದು ಹೇಳಿದ್ದಾರೆ.

ಈ ಎಚ್ಚರಿಕೆ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಗುರುವಾರ ನಡೆಸಿದ ವಾಯುದಾಳಿಯ ಬೆನ್ನಲ್ಲೇ ಹೊರಬಿದ್ದಿದೆ. ಜೂನ್ 25ರಂದು ಹಾರ್ಮುಜ್ ಜಲಸಂಧಿಯಿಂದ ಒಮಾನ್ ಕರಾವಳಿಯ ಮೂಲಕ ಸಾಗುತ್ತಿದ್ದ ಸಿಂಗಾಪುರ ಧ್ವಜ ಹೊಂದಿದ್ದ ಎಂ/ವಿ ಎವರ್ ಲವ್ಲಿ (M/V Ever Lovely) ಸರಕು ಹಡಗಿನ ಮೇಲೆ ಇರಾನ್ ಏಕಮುಖ ದಾಳಿ (One-way attack) ಡ್ರೋನ್ ಮೂಲಕ ದಾಳಿ ನಡೆಸಿತ್ತು.

ಈ ಘಟನೆಯನ್ನು ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಿದ ಅಮೆರಿಕ, ಜೂನ್ 26ರಂದು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ತಾಣಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿತು.

ಸೆಂಟ್ಕಾಮ್ ತನ್ನ ಪ್ರಕಟಣೆಯಲ್ಲಿ, "ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ಯಾವುದೇ ದಾಳಿ ಆಕ್ರಮಣವಾಗಿದ್ದು, ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ, ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯಕ್ಕೂ ಧಕ್ಕೆ ತಂದಿದೆ" ಎಂದು ತಿಳಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಮಾರ್ಗದರ್ಶನ ಮತ್ತು ಭದ್ರತೆ ಒದಗಿಸುವ ಕಾರ್ಯವನ್ನು ಅಮೆರಿಕ ಸೇನೆ ಮುಂದುವರಿಸಿದ್ದು, ಇರಾನ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಎಲ್ಲ ಷರತ್ತುಗಳು ಪಾಲನೆಯಾಗುವಂತೆ ಎಚ್ಚರಿಕೆಯಿಂದ ನಿಗಾ ವಹಿಸಲಾಗುತ್ತಿದೆ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ.

ಅಮೆರಿಕದ ದಾಳಿಯ ಬಳಿಕ ಇರಾನ್ ನೀಡಿರುವ ಕಠಿಣ ಎಚ್ಚರಿಕೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯ ಬಗ್ಗೆ ಜಾಗತಿಕ ಸಮುದಾಯ ಆತಂಕ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಬರ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ; ಅಗತ್ಯವಿದ್ದರೆ ನ್ಯಾಯಾಲಯದ ಮೊರೆ: DCM ಡಾ. ಪರಮೇಶ್ವರ್‌

JDS ಪಾದಯಾತ್ರೆಯಲ್ಲಿ ರೈತರಿಲ್ಲ, ಪಕ್ಷದ ಕಾರ್ಯಕರ್ತರ ಕರೆತಂದಿದ್ದಾರೆ; ನಿಖಿಲ್‌ ರಾಜಕೀಯ ಭವಿಷ್ಯಕ್ಕಾಗಿ ಹೋರಾಟ: ಡಿಕೆ ಶಿವಕುಮಾರ್‌ ವ್ಯಂಗ್ಯ