ಪೆಂಡಲ್ಟನ್ (ಅಮೆರಿಕ): ಜಾಗತಿಕ ಮಟ್ಟದ ಪ್ರಮುಖ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿರುವ ಟ್ರಂಪ್ನ ಮತ್ತೊಂದು ವಿಚಿತ್ರ ಬೇಡಿಕೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಹೌದು, ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹಾಗಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಎಂದು ಕಳೆದ ಎರಡು ವರ್ಷದಿಂದ ಬೊಬ್ಬೆ ಹೊಡೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಈ ಕನಸು ಭಗ್ನಗೊಂಡ ಬೆನ್ನಲ್ಲೇ, ಇದೀಗ ತಮ್ಮ ಟ್ವೀಟ್, ಬರಹಗಳಿಗೂ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ದಕ್ಷಿಣ ಕೆರೊಲಿನಾದ ಪೆಂಡಲ್ಟನ್ನಲ್ಲಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮೇಲಿನ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದು, "ನನಗೆ ನೊಬೆಲ್ ಪ್ರಶಸ್ತಿಯೂ ಸಿಗಲಿಲ್ಲ, ಪುಲಿಟ್ಜರ್ ಪ್ರಶಸ್ತಿಯೂ ಸಿಗಲಿಲ್ಲ. ಆದರೆ ನನ್ನ ಬರವಣಿಗೆಗಾಗಿ ನನಗೆ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು" ಎಂದು ವೇದಿಕೆಯ ಮೇಲೆ ಪ್ರತಿಪಾದಿಸಿದ್ದಾರೆ. ಇದರೊಂದಿಗೆ, 2016ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತು ವರದಿ ಮಾಡಿ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. "ರಷ್ಯಾ, ರಷ್ಯಾ, ರಷ್ಯಾ ಎಂಬ ವಿಷಯದ ಮೇಲೆ ಬರೆದವರಿಗೆ ಪ್ರಶಸ್ತಿ ನೀಡಲಾಗಿದೆ, ಆದರೆ ಅವರ ವರದಿಗಳು ಸಂಪೂರ್ಣ ಸುಳ್ಳಾಗಿದ್ದವು" ಎಂದು ದೂರಿದ್ದಾರೆ.
ಮುಂದುವರೆದು, ಜಾಗತಿಕವಾಗಿ ಎಂಟು ದೊಡ್ಡ ಸಂಘರ್ಷಗಳನ್ನು ಬಗೆಹರಿಸಿದ್ದರೂ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದೆ, ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈ ಅವರಿಗೆ ನೀಡಿರುವುದನ್ನು ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. ನೊಬೆಲ್ ಸಮಿತಿಯ ಈ ನಿರ್ಧಾರ ಅತ್ಯಂತ ನಾಚಿಕೆಗೇಡಿನದ್ದು ಎಂದು ಅವರು ಕರೆದಿದ್ದಾರೆ. ಈ ವೇಳೆ ಆತುರದಲ್ಲಿ ನೊಬೆಲ್ ಪ್ರಶಸ್ತಿಯ ಹೆಸರನ್ನೇ ಮರೆತು ಪುಲಿಟ್ಜರ್ ಪ್ರಶಸ್ತಿಯನ್ನು ಯುವತಿಯೊಬ್ಬರಿಗೆ ನೀಡಿದರು ಎಂದು ಹೇಳಿ ಸಭಿಕರಲ್ಲಿ ನಗೆ ತರಿಸಿದರು. ಏತನ್ಮಧ್ಯೆ, ಟ್ರಂಪ್ ಅವರು ತಮ್ಮ ಯಾವ ಬರವಣಿಗೆಗೆ ಪ್ರಶಸ್ತಿ ಬೇಕು ಎಂದು ಸ್ಪಷ್ಟಪಡಿಸದಿದ್ದರೂ, ಅವರು ಇದುವರೆಗೆ ವ್ಯಾಪಾರ, ರಾಜಕೀಯ ಮತ್ತು ಕಾರ್ಯತಂತ್ರದ ಕುರಿತು ಸುಮಾರು 20 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಏನಿದು ಪುಲಿಟ್ಜರ್ ಪ್ರಶಸ್ತಿ?
ಪುಲಿಟ್ಜರ್ ಪ್ರಶಸ್ತಿ ಎಂಬುದು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮೂಲದ ಈ ಪ್ರಶಸ್ತಿಯನ್ನು ಪತ್ರಿಕೋದ್ಯಮದ ಅತ್ಯುನ್ನತ ಗೌರವ ಎಂದು ಪರಿಗಣಿಸಲಾಗುತ್ತದೆ. ಹಂಗೇರಿಯನ್-ಅಮೆರಿಕನ್ ಮೂಲದ ಪ್ರಸಿದ್ಧ ಪತ್ರಿಕಾ ಪ್ರಕಾಶಕ ಹಾಗೂ ಉದ್ಯಮಿ ಜೋಸೆಫ್ ಪುಲಿಟ್ಜರ್ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಜೋಸೆಫ್ ಪುಲಿಟ್ಜರ್ ಅವರು ತಮ್ಮ ಮರಣೋಯಿಲಿನಲ್ಲಿ (Will) ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ನೀಡಿದ ನಿಧಿಯ ಸಹಾಯದಿಂದ 1917 ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ನೀಡಲು ಆರಂಭಿಸಲಾಯಿತು. ಎತನ್ಮಧ್ಯೆ, ಭಾರತ ಮೂಲದ ಹಲವು ಪತ್ರಕರ್ತರು ಮತ್ತು ಕಾವ್ಯಪ್ರೇಮಿಗಳು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 1937 ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಶಸ್ತಿ ಪಡೆದ ಗೋಬಿಂದ್ ಬಿಹಾರಿ ಲಾಲ್ ಅವರು ಪುಲಿಟ್ಜರ್ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲೂ ಭಾರತೀಯ ಮೂಲದ ಪತ್ರಕರ್ತರು ಮತ್ತು ಛಾಯಾಗ್ರಾಹಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.