ಫ್ರಾನ್ಸ್ ಪ್ರತಿಭಟನೆ 
ವಿದೇಶ

ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾಚಾರ: ಸ್ಥಳೀಯ ಸುದ್ದಿಗಳ ಮೇಲೆ ನಿಗಾ ಇರಿಸಿ, ಜಾಗರೂಕರಾಗಿರಿ; ಭಾರತೀಯರಿಗೆ ರಾಯಭಾರ ಕಚೇರಿ ಮಹತ್ವದ ಸೂಚನೆ..!

ಫ್ರಾನ್ಸ್‌ನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ದಯವಿಟ್ಟು ಜಾಗರೂಕರಾಗಿರಿ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದು ಬುಧವಾರ ಸಂಜೆ ಹೊರಡಿಸಿದ ಸಲಹೆಯಲ್ಲಿ ತಿಳಿಸಲಾಗಿದೆ.

ಪ್ಯಾರಿಸ್: ಫ್ರಾನ್ಸ್‌ನ ಹಲವು ಭಾಗಗಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು, ಸಂಘರ್ಷಗಳು ಮತ್ತು ಕರ್ಫ್ಯೂ ಹಿನ್ನೆಲೆಯಲ್ಲಿ, ಅಲ್ಲಿ ವಾಸಿಸುತ್ತಿರುವ ಹಾಗೂ ಪ್ರವಾಸದಲ್ಲಿರುವ ಭಾರತೀಯ ನಾಗರಿಕರಿಗಾಗಿ ಪ್ಯಾರಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಹತ್ವದ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಜನದಟ್ಟಣೆಯ ಪ್ರದೇಶಗಳು ಮತ್ತು ಪ್ರತಿಭಟನೆ ನಡೆಯುವ ಸ್ಥಳಗಳಿಂದ ದೂರವಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಫ್ರಾನ್ಸ್‌ನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ದಯವಿಟ್ಟು ಜಾಗರೂಕರಾಗಿರಿ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದು ಬುಧವಾರ ಸಂಜೆ ಹೊರಡಿಸಿದ ಸಲಹೆಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಿಗೆ ತೆರಳದಂತೆ ಹಾಗೂ ಫ್ರಾನ್ಸ್ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ರಾಯಭಾರ ಕಚೇರಿ ಭಾರತೀಯರಿಗೆ ಮನವಿ ಮಾಡಿದೆ.

ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಸಾರಿಗೆ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿರುವುದರಿಂದ, ಅಧಿಕೃತ ಮೂಲಗಳ ಮೂಲಕ ನಿರಂತರ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಭಾರತೀಯರು ಪ್ಯಾರಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು +33 6 48 34 00 63 ದೂರವಾಣಿ ಸಂಖ್ಯೆ ಅಥವಾ cons.paris@mea.gov.in ಇ-ಮೇಲ್ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಇಟಲಿಯಲ್ಲೂ ಭಾರತೀಯರಿಗೆ ಸಲಹೆ

ಇದಕ್ಕೂ ಮೊದಲು, ಇಟಲಿಯಲ್ಲಿ ಜೀವನ ವೆಚ್ಚ ಹೆಚ್ಚಳ ಮತ್ತು ಕಳಪೆ ಸಾರ್ವಜನಿಕ ಸೇವೆಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರಿಗೆ ಆ ದೇಶದ ಭಾರತೀಯ ರಾಯಭಾರ ಕಚೇರಿ ಸುರಕ್ಷತಾ ಸಲಹೆ ನೀಡಿತ್ತು.

ಭಾರತೀಯರು ಎಚ್ಚರಿಕೆ ವಹಿಸಬೇಕು, ಜನದಟ್ಟಣೆಯ ಪ್ರದೇಶಗಳು ಮತ್ತು ಪ್ರತಿಭಟನೆ ನಡೆಯುವ ಸ್ಥಳಗಳಿಂದ ದೂರವಿರಬೇಕು. ಇಂತಹ ಘಟನೆಗಳ ಕುರಿತು ಸ್ಥಳೀಯ ಸುದ್ದಿಗಳನ್ನು ಗಮನಿಸುತ್ತಿರಬೇಕು” ಎಂದು ಸೋಮವಾರ ಹೊರಡಿಸಿದ ಸಲಹೆಯಲ್ಲಿ ತಿಳಿಸಲಾಗಿತ್ತು.

ಹಿಂಸಾತ್ಮಕ ಪ್ರತಿಭಟನೆಗಳಿಂದ ತತ್ತರಿಸಿದ ಫ್ರಾನ್ಸ್

ಫ್ರಾನ್ಸ್ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ತೀವ್ರವಾದ ಅಶಾಂತಿಯನ್ನು ಎದುರಿಸುತ್ತಿದೆ. ಜೀವನ ವೆಚ್ಚದ ಹೆಚ್ಚಳ, ಸಾರ್ವಜನಿಕ ಸೇವೆಗಳ ಕುಸಿತ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಪ್ಯಾರಿಸ್, ಮಾರ್ಸೆಲ್ಲೆ ಮತ್ತು ಲಿಯಾನ್ ಸೇರಿದಂತೆ ಹಲವು ನಗರಗಳಲ್ಲಿ ಲೂಟಿ, ಬೆಂಕಿ ಹಚ್ಚುವಿಕೆ ಹಾಗೂ ಪೊಲೀಸರೊಂದಿಗೆ ಘರ್ಷಣೆಗಳು ವರದಿಯಾಗಿವೆ.

ವಿಶೇಷವಾಗಿ ಕಡಿಮೆ ಆದಾಯದ ಪ್ರದೇಶಗಳಲ್ಲಿನ ಶಾಲೆಗಳಿಗೆ ಅಗತ್ಯ ಅನುದಾನದ ಕೊರತೆ, ಕಳಪೆ ಮೂಲಸೌಕರ್ಯ ಮತ್ತು ಸಿಬ್ಬಂದಿ ಅಭಾವದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ನಡೆಯುವ ದೀರ್ಘ ಶಾಲಾ ಅವಧಿ ದಣಿವು ಉಂಟುಮಾಡುತ್ತಿದೆ ಎಂದೂ ಕೆಲ ವಿದ್ಯಾರ್ಥಿಗಳು ದೂರಿದ್ದಾರೆ. ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆಯಲ್ಲಿನ ಸಂಕೀರ್ಣತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ವಾರಾಂತ್ಯದಲ್ಲಿ ಅಶಾಂತಿ ಭುಗಿಲೆದ್ದ ಬಳಿಕ ಫ್ರಾನ್ಸ್‌ನಲ್ಲಿ ಸತತ ಎರಡು ರಾತ್ರಿಗಳ ಕಾಲ ಶಾಂತಿ ನೆಲೆಸಿದೆ. ಆದರೂ, ಪ್ಯಾರಿಸ್‌ನ ಕೆಲವು ಸೀಮಿತ ಪ್ರದೇಶಗಳು ಸೇರಿದಂತೆ ಹಲವು ಪ್ರಮುಖ ನಗರಗಳ ಭಾಗಗಳಲ್ಲಿ ಕರ್ಫ್ಯೂ ಮುಂದುವರಿದಿದೆ.

ವಿದ್ಯಾರ್ಥಿ ಸಂಘಟನೆಗಳು ಮತ್ತು ‘ಹಳದಿ ಅಂಗಿ’ ಚಳವಳಿಗೆ ಸಂಬಂಧಿಸಿದ ಗುಂಪುಗಳ ಕರೆ ಮೇರೆಗೆ ಗುರುವಾರ ಮತ್ತು ಶನಿವಾರ ಮತ್ತೆ ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಿದೆ. ಇಂಧನ ಬೆಲೆ ಏರಿಕೆ ವಿರೋಧಿಸಿ 2018 ಮತ್ತು 2019ರಲ್ಲಿ ನಡೆದ ‘ಹಳದಿ ಅಂಗಿ’ ಚಳವಳಿಯ ಪ್ರತಿಭಟನೆಗಳು ಫ್ರಾನ್ಸ್‌ನಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾಗಿದ್ದವು.

ಸಾರ್ವಜನಿಕ ಸುರಕ್ಷತೆಗೆ ಅಪಾಯವಿರುವ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಗುರುವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪ್ರತಿಭಟನೆಗಳ ಸಂದರ್ಭದಲ್ಲಿ ಮತ್ತು ನಂತರ ಬಂಧಿಸಲಾದ 2,500 ಜನರ ಪೈಕಿ 174 ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಫ್ರಾನ್ಸ್‌ನ ನ್ಯಾಯ ಸಚಿವ ಜೆರಾಲ್ಡ್ ಡಾರ್ಮನಿನ್ ಬುಧವಾರ ಹೇಳಿದ್ದಾರೆ. ಇನ್ನು 917 ಮಂದಿಯ ವಿರುದ್ಧ ಅಧಿಕೃತವಾಗಿ ಕಾನೂನು ಕ್ರಮ ಆರಂಭಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ಬುಧವಾರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಣ್ಣ ಗುಂಪುಗಳ ಗಲಭೆಯಿಂದ ಮತ್ತೆ ಹಿಂಸಾಚಾರ ಉಂಟಾಗದಂತೆ ತಡೆಯಲು ಶನಿವಾರ ಬೃಹತ್ ಭದ್ರತಾ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇತ್ತೀಚಿನ ಹಿಂಸಾಚಾರವು ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಇಲ್ಲ ಎಂದು ಮುಚ್ಚಳಿಕೆ: ತಿಹಾರ್ ಜೈಲಿನಿಂದ ಸೌರವ್ ದಾಸ್, ಆಶುತೋಷ್ ರಂಕಾ ಬಿಡುಗಡೆ

ನನಗಿಂತಲೂ ದೊಡ್ಡ ನಾಯಕರು, ನನ್ನ ಜೀವವೇ ನಿಮಗಾಗಿ ಮೀಸಲು: ಜೈಲಿನಿಂದ ಹೊರಬಂದ ಸೌರವ್ ದಾಸ್, ಅಶುತೋಷ್ ರಂಕಾ ಕೊಂಡಾಡಿದ ಅಭಿಜೀತ್ ದೀಪ್ಕೆ

AI ವಿಡಿಯೊ ಮೂಲಕ ವಿಧಾನಸೌಧ ಸ್ಫೋಟದ ದೃಶ್ಯ ತೋರಿಸಿದ ಕಿಡಿಗೇಡಿ: ಬಿಹಾರ ಮೂಲದ ಅಲಿ ಬಂಧನ; Video

ಅಸ್ಪೃಶ್ಯತೆಯಿಂದ ಹಿಂದೂ ಧರ್ಮ ಅಳಿವಿನ ಹಾದಿಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ

ವೈಭವದ ಜಂಬೂ ಸವಾರಿ, ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನ...: ಮೈಸೂರು ದಸರಾ 2026ಕ್ಕೆ ವರ್ಣರಂಜಿತ ತೆರೆ