ಸರ್ಕಾರ, ಉದ್ಯಮ ವಲಯ, ವ್ಯಾಪಾರೀ ಪ್ರಪಂಚದ ಒತ್ತಡಕ್ಕೆ ಮಣಿದು ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ ಬ್ಯಾಂಕ್ ಬಡ್ಡಿ ದರವನ್ನು ಇಳಿಸಿದ್ದನ್ನು ಹೊಗಳಿರುವವರೆಲ್ಲರೂ, ಎಚ್ಚರಿಕೆಯ ಹಣ ನೀತಿಯನ್ನು ಅನುಸರಿಸಬೇಕೆಂದು ಕರೆ ನೀಡಿರುವುದು ಒಂದು ವಿಪರ್ಯಾಸವೇ.
ಈ ಸಂದರ್ಭದಲ್ಲಿ ಸುಬ್ಬರಾಯರ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅವರಿಗೂ ಬಡ್ಡಿ ದರದ ಇಳಿತ ಒಳ್ಳೆಯದು ಎನಿಸಿಲ್ಲ. ಅದಕ್ಕೇ ಅವರು ಇನ್ನು ಮುಂದೆ ಬಡ್ಡಿ ದರದ ಇಳಿತದ ಯುಗ ಪ್ರಾರಂಭವಾಯಿತೆಂದು ಯಾರೂ ಭಾವಿಸಬೇಕಾಗಿಲ್ಲ, ಮುಂದಿನ ದಿನಗಳಲ್ಲಿ ಕಷ್ಟ ಕಾದಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬಡ್ಡಿ ದರದ ಇಳಿತ ನಿಜವಾಗಲೂ ಯಾರಿಗೆ ಅನುಕೂಲ ಮಾಡುತ್ತದೆ? ಬ್ಯಾಂಕ್ಗಳು ತಮಗೆ ಲಭ್ಯವಾದ ರಿಯಾಯಿತಿಯನ್ನು ತಮ್ಮ ಗ್ರಾಹಕರಿಗೆ ಒದಗಿಸಿದರೆ ಕೆಲವು ಜನ ವರ್ಗಗಳಿಗೆ ಸ್ವಲ್ಪ ಅನುಕೂಲವಾಗಬಹುದು. ಆದರೆ ದೇಶದ ನೂರು ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರಲ್ಲಿ ಬ್ಯಾಂಕ್ಗಳ ಸಾಲ ಪಡೆಯುವವರ, ಅನಂತರ ಅದನ್ನು ಬಳಸಿ ಆಸ್ತಿ ಗಳಿಸುವವರ ಸಂಖ್ಯೆ ಎಷ್ಟು? ತುಂಬಾ ಕಡಿಮೆ.
ಆದರೆ ತಜ್ಞರು ಎಚ್ಚರಿಕೆ ನೀಡಿರುವಂತೆ, ಬಡ್ಡಿ ದರದ ಇಳಿತದಿಂದ ಹಣದ ಅತಿಪ್ರಸರಣದ ವೇಗ ಹೆಚ್ಚಿದರೆ, ಅದರ ಹೊರೆಯನ್ನು ಹೊರಬೇಕಾದವರು ಎಲ್ಲ ಜನವರ್ಗಗಳಿಗೂ ಸೇರಿದವರು, ಆದ್ದರಿಂದಲೇ ಬ್ಯಾಂಕ್ಗಳೂ ಎಚ್ಚರಿಕೆಯಿಂದಲೇ ವರ್ತಿಸುತ್ತಿವೆ.
ಭಾರತೀಯ ಸ್ಟೇಟ್ ಬ್ಯಾಂಕ್
ಸರ್ಕಾರದ ಆಶಯವನ್ನು ರಿಸರ್ವ್ ಬ್ಯಾಂಕ್ ಈಡೇರಿಸಿದೆ. ಇದರ ಅಂತಿಮ ಹಂತದ ಫಲಾನುಭವಿಗಳು ಬ್ಯಾಂಕ್ಗಳಿಂದ ಸಾಲ ಪಡೆಯುವವರೇ. ಅದನ್ನು ಗಮನಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ಅತ್ಯಂತ ಕಡಿಮೆ ಪ್ರಮಾಣದ ಇಳಿತವನ್ನು ಪ್ರಕಟಿಸಿರುವುದು.
ಅನೇಕರು ಹಿಂದಿದ್ದಂತೆ ಗ್ರಾಹಕರು ಬ್ಯಾಂಕ್ಗಳಲ್ಲಿ ಇಡುವ ಠೇವಣಿಗಳ ಬಡ್ಡಿ ದರವನ್ನು ಇಳಿಸುವ ಸೂಚನೆಯನ್ನೇನೂ ನೀಡಿಲ್ಲ.
ಸ್ಟೇಟ್ ಬ್ಯಾಂಕ್, ಒಂದು ರೀತಿಯಲ್ಲಿ ಸಾಲದ ಮೇಲಿನ ಬಡ್ಡಿಯ ನೀತಿಯಲ್ಲಿ ದೇಶದ ನಾಯಕ. ಸಾಮಾನ್ಯವಾಗಿ ಸರ್ಕಾರದ ಸೂತ್ರಗಳನ್ನು ಪಾಲಿಸಬೇಕಾದ ಸಂಸ್ಥೆ. ಹೆಚ್ಚು ಕಡಿಮೆ ಆ ನೀತಿಯನ್ನೇ ಇತರ ಬ್ಯಾಂಕ್ಗಳೂ ಪಾಲಿಸುತ್ತವೆ.
ಸೆನ್ಸೆಕ್ಸ್ ವರ್ತನೆ
ಬಡ್ಡಿ ದರಗಳ ಇಳಿತದ ನಿರ್ಧಾರದಿಂದ ಷೇರು ಬಜಾರಿನ ಜನರೇನೂ ತುಂಬಾ ಉತ್ಸುಕರಾಗಿಲ್ಲ. ಮುಂಬೈ ಸ್ಟಾಕ್ ಎಕ್ಸ್ಛೇಂಜ್ನ ಸಂವೇದಿ ಸೂಚ್ಯಂಕ ಬಡ್ಡಿ ದರದ ಇಳಿತದ ಪ್ರಕಟಣೆಯಾದ ಕ್ಷಣದಿಂದಲೇ ಏರಿದರೂ,ಅನಂತರದ ಮರು ಚಿಂತನೆಯ ಪರಿಣಾಮವಾಗಿ, ಅದು ಇಳಿಮುಖವಾಯಿತು.
ಈಚಿನ ದಿನಗಳಲ್ಲಿ ಮ್ಯೂಚುಯೆಲ್ ಫಂಡ್ಗಳಲ್ಲಿ ಗ್ರಾಹಕರು ಮಧ್ಯವರ್ತಿಗಳ ನೆರವಿಲ್ಲದೇ ನೇರವಾಗಿ ಬಂಡವಾಳ ಹೂಡುವ ನಿಯಮ ಜಾರಿಗೆ ಬಂದಿದ್ದು, ಅದು ಸಾಕಷ್ಟು ಜನಪ್ರಿಯವಾಗಿದೆ. ತುಂಬಾ ಸೊರಗಿದ್ದ ಮ್ಯೂಚುಯೆಲ್ ಫಂಡ್ಗಳು ಈಗೀಗ ಸ್ವಲ್ಪ ಚೇತರಿಸಿಕೊಂಡಿದೆ.
ಅಂದರೆ, ಬ್ಯಾಂಕ್ಗಳಿಗೆ ಬರಬಹುದಾಗಿದ್ದ ಠೇವಣಿಯಲ್ಲಿ ಒಂದು ಭಾಗ ಈಗ ಮ್ಯೂಚುಯೆಲ್ ಫಂಡ್ಗಳಿಗೆ ಹೋಗುವ ಸಂಭವ ಕಂಡು ಬಂದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಬ್ಯಾಂಕ್ಗಳಿಗೇನೂ ಕಷ್ಟವಲ್ಲ. ಆದರೆ ಕೆಲವು ಸಾಲದ ಯೋಜನೆಗಳು ಸೊರಗಬಹುದು.
ಕೊನೆಮಾತು: 147 ವರ್ಷಗಳಲ್ಲಿ ಒಮ್ಮೆ ಬರುವಂತಹ ಅಲಹಾಬಾದ್- ಪ್ರಯಾಗದ ತ್ರಿವೇಣಿ ಸಂಗಮದ ಮಹಾ ಕುಂಭಮೇಳ ಆರಂಭವಾಗಿದೆ. ಅದನ್ನು ನಮ್ಮ ವ್ಯವಹಾರಸ್ಥರು ಲಾಭದಾಯಕ ವ್ಯವಹಾರವನ್ನಾಗಿ ಪರಿವರ್ತಿಸಿದ್ದಾರೆ. ಒಂದು ಲಕ್ಷ ರುಪಾಯಿಗೆ ಸಂಗಮದ ಮೇಲೆ ಹೆಲಿಕಾಪ್ಟರ್ ಹಾರಾಟ, ವೈಭವೋಪೇತ ಸೇವೆಗೆ ಈಗ ಕಂಪನಿಗಳು ಸಿದ್ಧ. ಮೇರಾ ಭಾರತ್ ಮಹಾನ್.
-ಸತ್ಯ