ಒಂದು ದಿನ ಮುಂಬೈ ಸ್ಟಾರ್ ಎಕ್ಸ್ಚೇಂಜ್ನ ಸಂವೇದಿ ಸೂಚ್ಯಂಕ- ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶಗಳಷ್ಟು ಕುಸಿದಿತ್ತು. ಅದು ರೇಲ್ವೆ ಬಜೆಟ್ನ ಪರಿಣಾಮವೇ? ಇಟಲಿಯ ಚುನಾವಣೆಯ ತ್ರಿಶಂಕು ಸ್ಥಿತಿಗೆ ಯಾರೋಪಿನ ಮಾರುಕಟ್ಟೆಗಳ ಬಿಕ್ಕಟ್ಟಿನ ಸೂಚನೆಯೇ?
ಯಾರೂ ಈ ವಿಚಾರದಲ್ಲಿ ಸ್ಪಷ್ಟನೆ ನೀಡುತ್ತಿಲ್ಲ, ಹೇಳಿಕೇಳಿ ಅದು ಒಂದು ದಿನದ ಅವಾಂತರವಷ್ಟೇ. 2 ದಿನಗಳ ಅನಂತರ ಅದೇ ಸೆನ್ಸೆಕ್ಸ್ ಮತ್ತೆ ತನ್ನ ಸಾಮಾನ್ಯ ಮಟ್ಟಕ್ಕೇರಿದೆ. ಇಂಥ ಚಟುವಟಿಕೆಯಿಂದ ವೈಯಕ್ತಿಕ, ಸಾಮಾನ್ಯ ಹೂಡಿಕೆದಾರರು ದೂರವಿರುವುದು ಒಳ್ಳೆಯದು. ಮೂಲತಃ ಮಂಗಳವಾರ ಪೇಟೆಯ ಕುಸಿತಕ್ಕೆ ಯಾರೂ ತೃಪ್ತಿಕರವಾದ ವಿವರಣೆ ನೀಡುವ ಸ್ಥಿತಿಯಲ್ಲಿಲ್ಲ. ಬಜೆಟ್ ಮುನ್ನಾದಿನ ಕಂಡುಬರುವಂಥ ಚಟುವಟಿಕೆ, ಈಗಲೂ ಕಂಡುಬಂದಿದೆ. ಆದರೆ ವಿತ್ತಮಂತ್ರಿ ಚಿದಂಬರಂ ಅವರ ಬಜೆಟ್ ಭಾಷಣದ ಅರ್ಧದಾರಿಯಲ್ಲೇ ಬಜಾರಿನ ಜನ ಚೇತರಿಸಿಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.್ಲ.
ಸದ್ಯದಲ್ಲಿ ಪೇಟೆಯಲ್ಲಿ ಹೆಚ್ಚಿನ ಅವಾಂತರ ಸೂಚನೆಗಳೇನೂ ಇಲ್ಲ. ಚಿದಂಬರಂ ಬಜೆಟ್ನಿಂದಲೂ ಸಾಮಾನ್ಯರ ಸಮುದಾಯಕ್ಕೆ ಹೇಳಿಕೊಳ್ಳುವಂಥ ಅನಿರೀಕ್ಷಿತವಾದ ಉಡುಗೊರೆಯೂ ಇಲ್ಲ, ಹೊಡೆತವೂ ಇಲ್ಲ. ಇದೊಂದು ಚುನಾವಣೆ ಬಜೆಟ್. ಹಿಂದಿನ ಎರಡು ವರ್ಷಗಳ ಕೆಲವು ಗಂಟುಗಳನ್ನಷ್ಟೇ ಚಿದಂಬರಂ ಬಿಡಿಸಿದ್ದಾರೆ ಎನ್ನಬಹುದಷ್ಟೇ.
ಬ್ಯಾಂಕ್ ಬಡ್ಡಿ ದರದ ವಿಚಾರ
ದೇಶದ ಅತಿದೊಡ್ಡ ಬ್ಯಾಂಕ್ ಹಾಗೂ ಸರ್ಕಾರದ ನೀತಿಯನ್ನು ಪಾಲಿಸುವ ಒಳ್ಳೆಯ ಬ್ಯಾಂಕ್ ಎನಿಸಿಕೊಂಡಿರುವ ಎಸ್ಬಿಐ ಬಜೆಟ್ ಮಂಡನೆಗೆ ಮುಂಚೆಯೇ ಠೇವಣಿಗಳ ಮೇಲಿನ ಬಡ್ಡಿ ದರದ ಏರಿಕೆಯನ್ನು ಪ್ರಕಟಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಸ್ಟೇಟ್ ಬ್ಯಾಂಕ್ ಹಿರಿಯ ನಾಗರಿಕರ ಸವಲತ್ತನ್ನು ಅರ್ಧದಷ್ಟು ಕುಗ್ಗಿಸಿದೆ. ನಿಜ. ಇದು ಬಹು ವರ್ಷ ಮೀರಿದ ಹತ್ತು ವರ್ಷಗಳ ಠೇವಣಿಗೆ ಮಾತ್ರ ಅನ್ವಯವಾಗುವಂಥ ಕ್ರಮ. ಈ ಕ್ರಮದಿಂದ ಎಸ್ಬಿಐ ನೀಡಿರುವ ಸೂಚನೆ ಸ್ಪಷ್ಟ. ಬ್ಯಾಂಕಿಂಗ್ ವಲಯಕ್ಕೆ ಈಗ ಸಾಮಾನ್ಯರ ಠೇವಣಿಯನ್ನು ಆಕರ್ಷಿಸುವುದು ಕಷ್ಟವಾಗುತ್ತಿದೆ.
ಬ್ಯಾಂಕಿನ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸಿದರೂ, ಸಾಲಕ್ಕೆ ಹೆಚ್ಚು ಬೇಡಿಕೆ ಬರುತ್ತಿಲ್ಲ. ಒಂದು ವರ್ಷದಿಂದ ಹತ್ತು ವರ್ಷಗಳ ಠೇವಣಿಗೆ ಸ್ಟೇಟ್ ಬ್ಯಾಂಕ್ ಬಡ್ಡಿ ದರ ಶೇ. 7.5ರಿಂದ 9ರ ವರೆಗೂ ಇದೆ. ಈಗಿನ ಬದಲಾವಣೆ ತುಂಬಾ ದೊಡ್ಡ ಆಕರ್ಷಣೆ ಎಂದೇನೂ ಹೇಳುವಂತಿಲ್ಲ. ಎಸ್ಬಿಐ, ಸರ್ಕಾರಕ್ಕೆ ನೀಡಲಿರುವ ಪ್ರೀಮಿಯಂ ಷೇರುಗಳ ಬೆಲೆಯನ್ನು 2312 ರು.ಗಳೆಂದು ಸದ್ಯಕ್ಕೆ ನಿಗದಿ ಮಾಡಿದೆ. ಈಗ ಬ್ಯಾಂಕಿಗೆ ಸರ್ಕಾರದಿಂದ 3004 ಕೋಟಿ ರು.ಗಳು ಈಗ ಹೊಸ ಷೇರು ಮೌಲ್ಯದ ರೂಪದಲ್ಲಿ ಬರಲಿದೆ. ಷೇರಿನ ಮುಖಬೆಲೆ 10 ರುಪಾಯಿ, ಫೆಬ್ರವರಿ 23ರ ಪೇಟೆಯ ಬೆಲೆ 2223 ರುಪಾಯಿ.
ಕೊನೆಮಾತು: ರೇಲ್ವೆ ಬಜೆಟ್ನಲ್ಲಿ ಸರ್ಕಾರ ಹಾಗೂ ಖಾಸಗಿ ವಲಯದ ನೆರವಿನಿಂದ ಆರು ಸಾವಿರ ಕೋಟಿ ರುಪಾಯಿಗಳನ್ನು ಪೇಟೆಯಿಂದ ಎತ್ತುವ ಸಲಹೆ ಇದೆ. 63,000ಕ್ಕೂ ಅಧಿಕ ಮೊತ್ತದ ಯೋಜನೆಗೆ ಈ ಸಾಲ ಸಾಲದು. ಉಳಿದ ಹಣ ಎಲ್ಲಿಂದ ಬರಬೇಕು?
-ಸತ್ಯ