

ಅನಿರೀಕ್ಷಿತ ಸಾವು, ಅಂಗವೈಕಲ್ಯದಂಥ ದುರ್ಘಟನೆ ವೇಳೆ ಜೀವವಿಮೆಯು ನಿಮ್ಮ ಇಡೀ ಕುಟುಂಬಕ್ಕೆ ಹಣಕಾಸು ಭದ್ರತೆ ಒದಗಿಸುತ್ತದೆ ನಿಜ. ಹಾಗಂತ ಪ್ರತಿಯೊಬ್ಬರೂ ಜೀವವಿಮೆ ಮಾಡಿಸಿಕೊಳ್ಳುವ ಅಗತ್ಯವೇನೂ ಇಲ್ಲ. ಯಾವ ಸಂದರ್ಭದಲ್ಲಿ ಜೀವವಿಮೆಯ ಅಗತ್ಯ ಇರುವುದಿಲ್ಲ ಎನ್ನುವ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ತೆರಿಗೆ ಉಳಿತಾಯಕ್ಕೆ
ಬಹುತೇಕ ಮಂದಿ ತೆರಿಗೆ ಉಳಿತಾಯಕ್ಕಾಗಿ ಜೀವವಿಮೆ ಮಾಡಿಸಿಕೊಳ್ಳುತ್ತಾರೆ. ಜೀವವಿಮೆ ಮಾಡಿಸಿಕೊಂಡರೆ ಭವಿಷ್ಯವೂ ಭದ್ರವಾಗಿರುತ್ತದೆ, ತೆರಿಗೆಯೂ ಉಳಿತಾಯ ಆಗುತ್ತದೆ ಎನ್ನುವ ಭಾವನೆ ಅವರಲ್ಲಿರುತ್ತದೆ. ಆದರೆ, ತೆರಿಗೆ ಉಳಿತಾಯ ಮಾಡುವ ಏಕೈಕ ಉದ್ದೇಶದಿಂದ ಜೀವವಿಮೆ ಮಾಡಿಸಿಕೊಳ್ಳುವುದು ಸರಿಯಲ್ಲ. ಜೀವವಿಮೆ ಪಾಲಿಸಿಗಳು ತೆರಿಗೆ ವಿನಾಯ್ತಿ ಹೊಂದಿರುತ್ತವೆ ನಿಜ. ಆದರೆ, ತೆರಿಗೆ ಉಳಿತಾಯಕ್ಕಾಗಿ ಫಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಂಥ ಅನೇಕ ಅನ್ಯ ವಿಧಾನಗಳೂ ಇವೆ. ಪಿಂಚಣಿ ಯೋಜನೆಗಳನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ತಿಂಗಳು ಅಥವಾ ವಾರ್ಷಿಕ ಪ್ರೀಮಿಯಂ ಅನ್ನು ನಿರ್ದಿಷ್ಟ ವರ್ಷಗಳ ವರೆಗೆ ಪಾವತಿಸಬೇಕಾಗುತ್ತದೆ. ಅದರ ಬಳಿಕ ಇನ್ಸೂರೆನ್ಸ್ ಕಂಪನಿಯು ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಪಿಂಚಣಿ ಪಾವತಿಸುತ್ತದೆ.
ಅವಲಂಬಿತರು ಇಲ್ಲದಿದ್ದರೆ
ಸಾಮಾನ್ಯವಾಗಿ ಜೀವವಿಮೆಯನ್ನು ಹೆಂಡತಿ, ಮಕ್ಕಳು ಅಥವಾ ತಂದೆ- ತಾಯಿಗಳ ಭವಿಷ್ಯದ ದೃಷ್ಟಿಯಿಂದ ಮಾಡಲಾಗುತ್ತದೆ. ಒಂದು ವೇಳೆ ನಿಮಗೆ ಮದುವೆಯಾಗಿರದಿದ್ದರೆ ಅಥವಾ ನಿಮ್ಮ ತಂದೆ- ತಾಯಿಗಳು ನಿಮ್ಮ ಮೇಲೆ ಅವಲಂಬಿತರಾಗಿರದಿದ್ದರೆ ಹೂಡಿಕೆಗಾಗಿ ಜೀವವಿಮೆಯಲ್ಲಿ ಹಣ ಹೂಡುವುದು ಉತ್ತಮ ಆಯ್ಕೆ ಅಲ್ಲ.
ಹಣದ ಬಾಧ್ಯತೆ ಇರದಿದ್ದರೆ
ಗೃಹ ಸಾಲ ಅನ್ನುವುದು ಯಾವತ್ತೂ ತಲೆ ನೋವಿನ ಸಂಗತಿ. ಈ ದೀರ್ಘಾವಧಿಯ ಸಾಲ ತೀರಿಸಲು ನೀವು ಸಾಕಷ್ಟು ಹಣಕಾಸು ಭದ್ರತೆಯನ್ನೂ ಒಳಗೊಂಡಿರುವುದು ಅಗತ್ಯ. ಒಂದು ವೇಳೆ ನೀವು ಯಾವುದೇ ಗೃಹ ಸಾಲ ಮಾಡಿರದಿದ್ದರೆ ಅಥವಾ ಇನ್ಯಾವುದೇ ಹಣಕಾಸು ಬಾಧ್ಯತೆ ಇಲ್ಲದಿದ್ದರೆ ಮತ್ತು ನಿಮ್ಮ ಅವಲಂಬಿತರಿಗಾಗಿ ಸಾಕಷ್ಟು ಹಣವನ್ನು ಕೂಡಿಟ್ಟಿದ್ದರೆ ಜೀವವಿಮೆ ಮಾಡಿಸಿಕೊಳ್ಳಬೇಕೆಂದೇನೂ ಇಲ್ಲ. ಇದಕ್ಕೂ ಮೊದಲು ನೀವು ಕೂಡಿಟ್ಟಿರುವ ಹಣ ಅವಲಂಬಿತರಿಗೆ ಸಾಕಾಗುವಷ್ಟಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಆದಾಯ ಇಲ್ಲದಿದ್ದರೆ
ನಿವೃತ್ತಿಯ ಬಳಿಕ ಅಥವಾ ನಿರ್ದಿಷ್ಟ ವರಮಾನ ಇಲ್ಲದಿದ್ದರೆ ಜೀವವಿಮೆ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲದೆ, ನೀವು ನಿಮ್ಮ ಹೆಂಡತಿ, ತಂದೆ- ತಾಯಿಗಳು ಅಥವಾ ಮಕ್ಕಳ ಆದಾಯದ ಮೇಲೆ ಅವಲಂಬಿತರಾಗಿದ್ದರೆ ಅಥವಾ ಅಗತ್ಯ ಬಿದ್ದಾಗ ಸುಲಭವಾಗಿ ಅದನ್ನು ಹಣಕ್ಕೆ ಪರಿವರ್ತಿಸಿಕೊಳ್ಳಬಹುದಾದ ಆಸ್ತಿ ಹೊಂದಿದ್ದರೆ ಜೀವವಿಮೆ ವಿಚಾರವನ್ನು ಮರೆತುಬಿಡಬಹುದು.
ಪ್ರೀಮಿಯಂ ತೀರಾ ಹೆಚ್ಚಿದ್ದಾಗ
ಜೀವವಿಮೆಗೂ ನಿಮ್ಮ ವಯಸ್ಸು ಹಾಗೂ ಆರೋಗ್ಯಕ್ಕೂ ಸಂಬಂಧ ಇದೆ. ವಯಸ್ಸು ಕಡಿಮೆ ಇದ್ದಾಗ ಪ್ರೀಮಿಯಂ ಮೊತ್ತವೂ ಕಡಿಮೆ ಇರುತ್ತದೆ. ಅಲ್ಲದೆ, ಅನಾರೋಗ್ಯಕ್ಕೆ ತುತ್ತಾಗಿರುವವರು, ಈ ಹಿಂದೆ ಕುಡಿತ, ಸಿಗರೇಟು ಸೇವನೆ ಮುಂತಾದ ಚಟಗಳಿಂದಾಗಿ ಆಸ್ಪತ್ರೆಗೆ ದಾಖಲಾದವರು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹಾಗಾಗಿ ಜೀವವಿಮೆ ಮಾಡಿಸಿಕೊಳ್ಳುವ ಮೊದಲು ಈ ವಿಚಾರದತ್ತ ಗಮನ ಹರಿಸುವುದು ಒಳಿತು.