

ಜಗತ್ತಿನ ದೊಡ್ಡಣ್ಣನಿಗೆ ಈಗ ಗರಬಡಿದಂತಾಗಿದೆ. ಆಗಿರುವುದು ಇಷ್ಟೆ. ವಾರ್ಷಿಕ ಮುಂಗಡ ಪತ್ರವನ್ನು ಅಂಗೀಕರಿಸದೇ ಇದ್ದದ್ದು ಅಮೆರಿಕ ಸರ್ಕಾರದ ವ್ಯವಸ್ಥೆಗೇ ಕೊಳ್ಳಿ ಇಟ್ಟಂತಾಗಿದೆ. ಬೆರಳೆಣಿಕೆಯ ಇಲಾಖೆಗಳನ್ನು ಬಿಟ್ಟರೆ ಉಳಿದೆಲ್ಲ ಇಲಾಖೆಯ ಅಧಿಕಾರಿಗಳು,ನೌಕರರಿಗೆ ಸಂಬಳ ಇಲ್ಲದೆ ರಜೆಯ ಮೇಲೆ ತೆರಳುವಂತೆ ಮೌಖಿಕ ಆದೇಶ ನೀಡಲಾಗಿದೆ. ಇದರಿಂದಾಗಿ, ಬರೋಬ್ಬರಿ 8 ಲಕ್ಷ ಮಂದಿ ಕೆಲಸವಿಲ್ಲದೆ ಮನೆಯಲ್ಲಿರಬೇಕಾಗುತ್ತದೆ.
ಹಣಕಾಸಿನ ಬಿಕ್ಕಟ್ಟು ಎಂಬ ವಿಚಾರ ಇತ್ತೀಚಿನ ವರ್ಷಗಳಲ್ಲಿ ಎಲ್ಲ ದೇಶಗಳಿಗೆ ಸಾಮಾನ್ಯ ಎಂಬಂತಾಗಿದೆ. ಆದರೆ ಅಮೆರಿಕದ ವ್ಯವಸ್ಥೆ ಹಾಗಲ್ಲ. ಅಲ್ಲಿನ ಅಲ್ಲಿನ ಕಂಪನಿಗಳು ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವುದರಿಂದ ಆ ರಾಷ್ಟ್ರದ ಹಣಕಾಸು ಪರಿಸ್ಥಿತಿ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಈಗಿನ ಪರಿಸ್ಥಿತಿ ದೇಶದ ಅರ್ಥವ್ಯವಸ್ಥೆಯ ಮೇಲೆ ಸದ್ಯಕ್ಕೆ ಪರಿಣಾಮ ಬೀರಲಿಲ್ಲ. ಆದರೆ, 10 ದಿನಗಳಿಗಿಂತ ಹೆಚ್ಚು ಮುಂದುವರಿದರೆ ಷೇರು ಮಾರುಕಟ್ಟೆ ಮತ್ತು ಇತರ ಹಣಕಾಸು ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದು ಖಚಿತವಾಗಿದೆ.
ಈಗ ಆಗಿರುವುದೇನು?
ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಎಂಥ ಬಿಗಿ ಅರ್ಥವ್ಯವಸ್ಥೆ ಇರುವಲ್ಲೂ ವಿರೋಧ ವ್ಯಕ್ತವಾಗುತ್ತದೆ. ಅದಕ್ಕೆ ಜ್ವಲಂತ ಸಾಕ್ಷಿ ಅಮೆರಿಕದ್ದೇ. ಹಾಲಿ ಅಧ್ಯಕ್ಷ ಒಬಾಮ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸಾಮಾನ್ಯ ಅಮೆರಿಕನ್ನನಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೌಲಭ್ಯ ಒದಗಿಸುವ ಯೋಜನೆಗೆ ಅಲ್ಲಿನ ಸಂಸತ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬಜೆಟ್ ಅಂಗೀಕಾರವಾಗಿಲ್ಲ. ಬಜೆಟ್ ಅಂಗೀಕಾರವಾಗದಿದ್ದರೆ ಸರ್ಕಾರದ ಯಾವುದೇ ಕೆಲಸ ನಡೆಯುವುದೇ ಇಲ್ಲ. ಹೀಗಾಗಿ ಅಮೆರಿಕ ಸರ್ಕಾರ ಅಗತ್ಯ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳ ನೌಕರರಿಗೆ, ಅಧಿಕಾರಿಗಳಿಗೆ ವೇತನ ಇಲ್ಲದೆ ರಜೆ ನೀಡಿದೆ.
ಒಬಾಮ ಕೇರ್
'ಒಬಾಮಾಕೇರ್' ಎಂದರೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಅದೊಂದು ಆರೋಗ್ಯ ಯೋಜನೆ. ನಮ್ಮ 'ಯಶಸ್ವಿನಿ' ಯೋಜನೆಯಂತೆ. ಅಮೆರಿಕದ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗಾಗಿ 2010ರಲ್ಲಿ ಒಬಾಮ ಸಹಿ ಹಾಕಿದ ಮಹತ್ವಾಕಾಂಕ್ಷಿ ಯೋಜನೆ ಇದು.
ಶಟ್‌ಡೌನ್
ಅಮೆರಿಕದ ಸರ್ಕಾರಿ ಇಲಾಖೆಗಳು ಬಂದ್ ಆಗಿರುವ ವ್ಯವಸ್ಥೆಯನ್ನು ಶಟ್‌ಡೌನ್ ಎಂದು ಕರೆಯುತ್ತಾರೆ. ಇದೊಂದು ರೀತಿಯ ರಾಜಕೀಯ ಬಿಕ್ಕಟ್ಟು. ಅಂದರೆ ಈ ಪರಿಸ್ಥಿತಿಯಲ್ಲಿ ಅಗತ್ಯವಿರುವ ಸರ್ಕಾರಿ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ವೇತನ ಕೊಡಲಾಗುವುದಿಲ್ಲ. ಅಮೆರಿಕದಲ್ಲಿ ಈ ತಿಂಗಳ 1ರಿಂದ ಇದುವರೆಗೆ ಸರ್ಕಾರಿ ಉದ್ಯೋಗಿಗಳಿಗೆ ವೇತನ ರಹಿತ ರಜೆ.
ಕಾರಣ ಏನು?
ಅಧ್ಯಕ್ಷರ ಮಹತ್ವಾಕಾಂಕ್ಷಿ ಯೋಜನೆಗೆ ಹೆಚ್ಚಿನ ಮೊತ್ತ ನಿಗದಿಪಡಿಸಲಾಗಿದೆ ಎನ್ನುವುದು ನೆಪ. ಆದರೆ ಇಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳೇ ಮೇಲುಗೈ ಪಡೆದಿವೆ. ಅಮೆರಿಕದ ಸಂಸತ್‌ನಲ್ಲಿ 2010ರಲ್ಲಿ ಡೆಮೊಕ್ರಾಟ್ ಸದಸ್ಯರು ಬಹುಮತ ಕಳೆದುಕೊಂಡ ನಂತರ ಈ ಗುದ್ದಾಟಗಳು ನಡೆಯುತ್ತಿವೆ. ನಿಜ ಹೇಳಬೇಕೆಂದರೆ, 2011ರಲ್ಲೇ ಶಟ್‌ಡೌನ್ ಆಗುವುದನ್ನು 2 ಪಕ್ಷಗಳೂ ಕೊನೆಯ ಗಳಿಗೆಯಲ್ಲಿ ತಪ್ಪಿಸಿಕೊಂಡಿದ್ದವು.
ಪರಿಣಾಮವೇನು?
ಯಾವುದೇ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ. ಬೊಕ್ಕಸದಿಂದ ವೆಚ್ಚ ಮಾಡಲು ಅಸಾಧ್ಯವಾಗುತ್ತದೆ. ಇದರಿಂದಾಗಿ ದೈನಂದಿನ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಈಗಾಗಲೇ ಹಣಕಾಸಿನ ಕೊರತೆ ಮತ್ತು ಸಾಲದ ಹೊಡೆತಕ್ಕೆ ಸಿಕ್ಕಿರುವ ಅಮೆರಿಕಕ್ಕೆ ನಿಜಕ್ಕೂ ಇದೊಂದು ಸವಾಲೇ ಸರಿ.
ಇದು ಹೊಸತಲ್ಲ
ಅಂದಹಾಗೆ, ಅಮೆರಿಕ ಸರ್ಕಾರಕ್ಕೆ ಇಂಥ ಬಿಕ್ಕಟ್ಟು ಹೊಸತೇನಲ್ಲ. 1995-1996ರಲ್ಲಿ ಇದೇ ರೀತಿಯಾದ ಬಿಕ್ಕಟ್ಟು ತಲೆದೋರಿ, ಸರ್ಕಾರದ ಇಲಾಖೆಗಳು ಬಂದ್ ಆಗಿದ್ದವು. ಆಗ ಅಧ್ಯಕ್ಷರಾಗಿದ್ದವರು ಬಿಲ್ ಕ್ಲಿಂಟನ್. ಆಗ ವಿದ್ಯಾಭ್ಯಾಸ, ಪರಿಸರ ಮತ್ತು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಚಾರಗಳು ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ನರ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. 1970ರ ದಶಕದಲ್ಲೂ ಇದೇ ರೀತಿಯಾಗಿತ್ತು.
ಎಲ್ಲರಿಗೂ ತೊಂದರೆ
ಅಮೆರಿಕದಲ್ಲಿ ಉಂಟಾಗಿರುವ ಬಜೆಟ್ ಬಿಕ್ಕಟ್ಟು ಶೀಘ್ರದಲ್ಲೇ ಪರಿಹಾರವಾಗದಿದ್ದರೆ, ವಿಶ್ವದ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಉಂಟಾಗಲಿದೆ ಎನ್ನುತ್ತದೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ. ಆದರೆ, ಆರಂಭದ ದಿನಗಳ ಲೆಕ್ಕಾಚಾರ ಪ್ರಕಾರ ನಮ್ಮ ದೇಶದ ಷೇರು ಮಾರುಕಟ್ಟೆ ಮೇಲೆ ತಕ್ಷಣಕ್ಕೆ ಏನೂ ಪರಿಣಾಮ ಬೀರಿಲ್ಲ. ಈ ಬಗ್ಗೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕಗಳೇ ಸಾರಿ ಹೇಳುತ್ತವೆ. ಆದರೆ ಬಿಕ್ಕಟ್ಟು ಮುಂದುವರಿದರೆ ಅದರ ಪ್ರತಿಕೂಲ ಪರಿಣಾಮ ಬೀರಲು ಹೆಚ್ಚಿನ ಸಮಯದ ಅವಕಾಶ ಬೇಕಾಗಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು.
ಒಬಾಮ ಕೇರ್ ಸ್ಥಗಿತವಾಗಿದೆಯೇ?
ಅಚ್ಚರಿಯೆಂದರೆ ವಿವಾದದ ಮೂಲ ಬಿಂದುವಾಗಿರುವ ಯೋಜನೆ ಮಾತ್ರ ಸರಾಗವಾಗಿ ಅನುಷ್ಠಾನಗೊಳ್ಳುತ್ತಿದೆ. ಅದೇ ನಮ್ಮ ದೇಶದಲ್ಲಿ ಆಗಿರುತ್ತಿದ್ದರೆ ಸಂಪೂರ್ಣ ಯೋಜನೆಯೇ ಹಳ್ಳಹಿಡಿಯುತ್ತಿತ್ತು.
ಭಾರತದ ಮೇಲೆ ಪರಿಣಾಮ?