ಸುರಂಗ ದಾಟಿದ್ದಾಗಿದೆ...

Updated on: 

ಭಾರತೀಯ ಬಂಡವಾಳ ಪೇಟೆಯ ವ್ಯವಹಾರ ಕೆಟ್ಟ ದಿನಗಳ ಸುರಂಗದ ಪ್ರಯಾಣ ಮುಗಿಸಿ, ಈಗ ತಾನೇ ಹುಲ್ಲುಗಾವಲಿನ ಬಿಸಿಲಿಗೆ ಈಚೆಗೆ ಬಂದಂತಾಗಿದೆ. ಸೆನ್ಸೆಕ್ಸ್ ಸೂಚ್ಯಂಕ ಒಂದೇ ದಿನ 700 ಅಂಶಗಳಷ್ಟು ಹೆಚ್ಚಿತ್ತು.

ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ರಘುರಾಮನ್ ರಾಜನ್ ತಮ್ಮ ಆರಂಭದ ಭಾಷಣದಲ್ಲಿ ಇಂಗಿತ ನೀಡಿದಂತೆ, ಕೈಗೊಂಡ ಹಲವು ಕ್ರಮಗಳು ಪೇಟೆಯ ಜನರಲ್ಲಿ ವಿಶ್ವಾಸ ಮೂಡಿಸಿದ್ದು ನಿಜ.

ಅದೇ ಸಮಯದಲ್ಲೇ ಸಿರಿಯಾದ ಮೇಲೆ ಅಮೆರಿಕದ ದಾಳಿ ನಡೆಯುವ ಸಂಭವ ಕಡಿಮೆ. ಸದ್ಯಕ್ಕೆ ಯುದ್ಧದ ಭೀತಿ ಇಲ್ಲ ಎನ್ನುವ ಭರವಸೆಯೂ ಸಿಕ್ಕಿದೆ. ಹೀಗಾಗಿ ಷೇರು ಪೇಟೆಯಲ್ಲಿ ಭಾರಿ ಧಮಾಕಾದ ದೃಶ್ಯ ಕಂಡು ಬಂದಿದ್ದು, ವಾಣಿಜ್ಯೋದ್ಯಮಿಗಳಿಗೆ ಸಂತಸದ ಸುದ್ದಿ. ಆದರೆ ಆರ್ಥಿಕ ವ್ಯವಸ್ಥೆಯ ಮೇಲೆ ಈ ಬೆಳವಣಿಗೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನುವುದು ಇನ್ನೂ ನಿಗೂಢ.

ಕೇಂದ್ರ ಸರ್ಕಾರದ ನೌಕರರಿಗೆ ಭತ್ಯೆ ಹೆಚ್ಚಾಗಿದೆ. ಅದರ ಪರಿಣಾಮ, ರಾಜ್ಯಗಳ ಸರ್ಕಾರಗಳು, ಸರ್ಕಾರಿ ಸಂಸ್ಥೆಗಳ ವೇತನದ ಮಟ್ಟದ ಮೇಲೂ ಆಗಲೇಬೇಕು. ಈಗಿನ ಸನ್ನಿವೇಶದಲ್ಲಿ ಹಣದ ಹೊಳೆಯ ಹೊಡೆತವನ್ನು ವ್ಯವಸ್ಥೆ ಸಹಿಸುವುದು ಸಾಧ್ಯವೇ? ಸ್ವಲ್ಪ ಕಾದು ನೋಡಬೇಕು.

ಇಂದಿರಾಗಾಂಧಿ ಜನ್ಮದಿನ ಮಹಿಳಾ ಬ್ಯಾಂಕ್ ಆರಂಭ
ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಸ್ಥಾಪನೆಯಾಗಲಿರುವ ಮಹಿಳಾ ಬ್ಯಾಂಕಿನ ಆರಂಭೋತ್ಸವದ ದಿನವೂ ನಿಗದಿಯಾಗಿದೆ. ಇಂದಿರಾಗಾಂಧಿ ಅವರ ಜನ್ಮದಿನವಾದ ನ.19 ರಂದು ಈ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದ್ದು, ಸರ್ಕಾರ ಅದಕ್ಕಾಗಿ ಸಾವಿರ ಕೋಟಿ ರುಪಾಯಿಗಳನ್ನು ವಿಶೇಷವಾಗಿ ಒದಗಿಸಿದೆ. ಇದೇನೂ ಹೊಸ ಯೋಜನೆಯಲ್ಲ. ಈ ವರ್ಷದ ಬಜೆಟ್ ಭಾಷಣದಲ್ಲೇ ಹಣಕಾಸು ಮಂತ್ರಿ ಚಿದಂಬರಮ್ ಈ ಬ್ಯಾಂಕಿನ ಸ್ಥಾಪನೆಯ ಉದ್ದೇಶವನ್ನು ಪ್ರಕಟಿಸಿದ್ದರು.

ನೂತನ ಬ್ಯಾಂಕಿನ ಹೆಸರು
ಭಾರತೀಯ ಮಹಿಳಾ ಬ್ಯಾಂಕ್ ಆರಂಭದಲ್ಲಿ ಆರು ನಗರಗಳಲ್ಲಿ ಶಾಖೆಗಳನ್ನು ಹೊಂದಲಿದೆ. ಸದ್ಯದಲ್ಲೇ ಎಲ್ಲ ಊರುಗಳಲ್ಲೂ ಬ್ಯಾಂಕಿನ ಶಾಖೆಗಳನ್ನು ತೆರೆಯಲು ಜಾಗದ ಹುಡುಕಾಟ ನಡೆದಿದೆ. ಇತರ ಸರ್ಕಾರಿ ಬ್ಯಾಂಕ್‌ಗಳಿಂದ ಸದ್ಯಕ್ಕೆ ಮಹಿಳಾ ಸಿಬ್ಬಂದಿಯನ್ನು ಕರೆತರಲಾಗುವುದು.

ಮಹಿಳಾ ಬ್ಯಾಂಕಿನ ಕಲ್ಪನೆಯನ್ನು ಅನೇಕರು ಮೆಚ್ಚಿದ್ದರೂ, ಬ್ಯಾಂಕಿನ ಗ್ರಾಹಕರೂ ಮಹಿಳೆಯರೇ ಆಗಿರಬೇಕೆನ್ನುವ ನಿಯಮ, ಭವಿಷ್ಯದಲ್ಲಿ ಬ್ಯಾಂಕಿನ ಪ್ರಗತಿಗೆ ಅಡ್ಡಗಾಲಿನಂತೆ ಆದರೂ ಆಗಬಹುದು. ಮಹಿಳೆಯರಿಗೆ ಮಾತ್ರ ಇಲ್ಲಿ ವ್ಯವಹಾರಕ್ಕೆ ಅವಕಾಶ ಎನ್ನುವ ನಿಯಮ ವಿಪರೀತವಾಯಿತೇನೋ ಎನಿಸುತ್ತಿದೆ.

ಶ್ರೀನಿವಾಸನ್ ಚಾರ್ಜ್‌ಶೀಟ್
ಇಂಡಿಯಾ ಸಿಮೆಂಟ್ಸ್‌ನ ಪ್ರಮುಖ, ಭಾರತದ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶ್ರೀನಿವಾಸನ್ ಅವರ ಮೇಲೆ ಸಿಬಿಐ ತನಿಖೆಯ ಅನಂತರ ಸಲ್ಲಿಸಲಾಗಿರುವ ಆರೋಪಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಜಗನ್‌ಮೋಹನ್ ರೆಡ್ಡಿ (ವೈಎಸ್ಸಾರ್ ಪುತ್ರ, ಕಡಪ ಎಂ.ಪಿ) ಅವರ ಉದ್ಯಮ- ವ್ಯವಹಾರಗಳಲ್ಲಿ ಇಂಡಿಯಾ ಸಿಮೆಂಟ್ಸ್ 140 ಕೋಟಿ ರುಪಾಯಿಗಳ ಬಂಡವಾಳ ಹೂಡುವುದೇ ಪ್ರಧಾನವಾದ ವಿಷಯ.

ಕೊನೆಮಾತು
ನರೇಂದ್ರ ಮೋದಿ ಅವರು ಪ್ರಕಟಿಸುತ್ತಿರುವ ಸಾಧನೆಗಳ ಹಿಂದಿನ ಸತ್ಯವನ್ನು ಬೆಳಕಿಗೆ ತರಲೆಂದೇ ಕಾಂಗ್ರೆಸ್ 500 ಕೋಟಿ ರುಪಾಯಿಗಳ ಪ್ರಚಾರ ಕಾರ್ಯಕ್ರಮವನ್ನು ಕೈಗೊಳ್ಳಲಿದ್ದು, ಅದಕ್ಕಾಗಿ ಪ್ರಸಿದ್ಧ ಜಾಹಿರಾತು ಸಂಸ್ಥೆ ಜೆಡಬ್ಲೂಟಿ (ಜೆ. ವಾಲ್ಟರ್ ಥಾಮ್ಸನ್) ಸಂಸ್ಥೆಯನ್ನು ನೇಮಿಸಿಕೊಂಡಿದೆಯಂತೆ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com