ವಾಣಿಜ್ಯ

ಮನಿ ಕೃಷಿ

ಮನಿ ಕೃಷಿ
Published On :

ಹೂಡಿಕೆ ಮಾಡುವುದು ಎಂದರೆ ಬೇಕಾಬಿಟ್ಟಿ ಮನ ಬಂದಂತೆ ಕೈಯಲ್ಲಿ ನಾಲ್ಕು ಕಾಸು ಮಿಗತೆಯಾದಾಗ ಹೂಡುವುದು ಅಲ್ಲ. ಅದಕ್ಕೆ ಅದರದ್ದೇ ಆದ ಒಂದು ಶಿಸ್ತು ಹಾಗೂ ಧ್ಯೇಯೋದ್ದೇಶಗಳು ಇರುತ್ತವೆ. ಒಂದು ಕ್ರಮಬದ್ಧವಾದ ರೀತಿಯಲ್ಲಿ ಹೂಡಿಕೆಯ ಪ್ರವೇಶ ಮಾಡುವುದು ಅಗತ್ಯ.
ಗುರಿ
ಮೊತ್ತ ಮೊದಲನೆಯದಾಗಿ ಜೀವನದ ಮುಂದಿನ ವಿವಿಧ ಹಂತಗಳಲ್ಲಿ ಬರುವ ಆರ್ಥಿಕ ಅಗತ್ಯಗಳನ್ನು ಗುರುತಿಸಬೇಕು. ಉದಾಹರಣೆಗಾಗಿ 5 ವರ್ಷಗಳಲ್ಲಿ ಮದುವೆಯ ವೆಚ್ಚ, ಹತ್ತು ವರ್ಷಗಳಲ್ಲಿ ಮನೆಕಟ್ಟುವ ವೆಚ್ಚ, 20 ವರ್ಷಗಳಲ್ಲಿ ವಿದ್ಯಾಭ್ಯಾಸಕ್ಕೆ, 35 ವರ್ಷಗಳಲ್ಲಿ ನಿವೃತ್ತಿ ಜೀವನದ ಅಗತ್ಯಕ್ಕೆ, ಇತ್ಯಾದಿ ಗುರಿಗಳನ್ನು ಹಾಕಿಕೊಳ್ಳಬೇಕು. ಈ ಮುಖ್ಯ ಗುರಿಗಳಲ್ಲದೆ, ತುರ್ತು ಪರಿಸ್ಥಿತಿಗೆ ಎಂದು ಸದಾ ಒಂದಿಷ್ಟು ತಿಂಗಳುಗಳ ವೆಚ್ಚವನ್ನು ಪ್ರತ್ಯೇಕವಾಗಿ ಎಸ್‌ಬಿ ಖಾತೆಯಲ್ಲಿ, ಲಿಕ್ವಿಡ್ ಫಂಡ್‌ಗಳಲ್ಲಿ ಸುಲಭವಾಗಿ ಸಿಗುವಂತೆ ತೆಗೆದಿಡಬೇಕು.
ಅದಲ್ಲದೆ ಅವರವರ ಆರ್ಥಿಕ ಸ್ಥಿತಿಗತಿ ಮತ್ತು ಅಗತ್ಯಗಳನ್ನು ಅನುಸರಿಸಿಕೊಂಡು ಕೌಟುಂಬಿಕ ಭದ್ರತೆಗಾಗಿ ಸೂಕ್ತ ಮೊತ್ತದ ಜೀವವಿಮೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಗಳಿಸುವವನ ಜೀವದ ಮೇಲೆ ವಿಮೆ ಮಾಡಿಸಿಕೊಳ್ಳುವುದು ಅತಿ ಮುಖ್ಯ. ಗಳಿಸುವವನು ತೀರಿ ಹೋದಲ್ಲಿ ಕುಟುಂಬದ ಭದ್ರತೆಗಾಗಿ ಜೀವ ವಿಮೆಯ ದುಡ್ಡು ಸಕಾಲದಲ್ಲಿ ಸಹಾಯಕವಾದೀತು. ಅದಕ್ಕಾಗಿ ಸೂಕ್ತ ಮೊತ್ತದ ಟರ್ಮ್ ಇನ್ಶೂರೆನ್ಸ್ ಮಾಡಿಸಿಕೊಳ್ಳಬೇಕು.
ಬಹುತೇಕ ವಿಮಾ ಯೋಜನೆಗಳು ವಿಮೆ ಮತ್ತು ಹೂಡಿಕೆಯ ಮಿಶ್ರಣವಾಗಿರುತ್ತದೆ (ಉದಾ: ಎಂಡೋಮೆಂಟ್, ಮನಿ ಬ್ಯಾಕ್, ಯುಲಿಪ್) ಆದರೆ ವಿಮೆಯನ್ನು ಒಂದು ಹೂಡಿಕೆಯ ಮಾಧ್ಯಮವಾಗಿ ಬಳಸಬಾರದು. ವಿಮಾ  ಸಂಸ್ಥೆಗಳು ಹೂಡಿಕೆಗೆ ಒಂದು ಉತ್ತಮ ಸಂಸ್ಥೆಗಳಲ್ಲ. ವಿಮಾ ಸಂಸ್ಥೆಗಳನ್ನು ವಿಮೆಗಾಗಿ (ಟರ್ಮ್) ಮತ್ತು ಹೂಡಿಕೆಗಾಗಿ ಪ್ರತ್ಯೇಕವಾಗಿ ಇತರ ಉತ್ತಮ ಸ್ಕೀಮುಗಳ ಮೊರೆ ಹೋಗುವುದು ಒಳ್ಳೆಯದು. (ಉದಾ: ಪಿಪಿಎಫ್, ಎಫ್‌ಡಿ, ಶೇರು, ಭೂಮಿ, ಚಿನ್ನ ಇತ್ಯಾದಿ)
ಭವಿಷ್ಯದ ಅಗತ್ಯ
ಭವಿಷ್ಯದ ವಿವಿಧ ಹಂತಗಳಲ್ಲಿ ಬೇಕಾಗುವ ಮೊತ್ತವನ್ನು ಸದ್ಯದ ಹಣದ ಬೆಲೆಯ ಆಧಾರದಲ್ಲಿ ಗುರುತು ಹಾಕಿಕೊಳ್ಳಿ. ಉದಾಹರಣೆಗೆ ಇವತ್ತಿನ ವೆಚ್ಚದ ಪ್ರಕಾರ ವಿದ್ಯಾಭ್ಯಾಸಕ್ಕೆ 20 ಲಕ್ಷ, ಇತ್ಯಾದಿ.  ಆ ಬಳಿಕ ಹಣದುಬ್ಬರದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡೂ ಆ ಮೊತ್ತವನ್ನು ಭವಿಷ್ಯದ ಹಣದ ಬೆಲೆಗನುಗುಣವಾಗಿ ಲೆಕ್ಕ ಹಾಕಿ. ಉದಾ: ಶೇ. 8ರಷ್ಟು ಹಣದುಬ್ಬರವನ್ನು ತೆಗೆದುಕೊಂಡರೆ 20 ವರ್ಷಗಳಲ್ಲಿ ಎಷ್ಟು ದುಡ್ಡು ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ. ಶೇ.8ರ ದರವನ್ನು 20 ವರ್ಷಗಳ ಕಾಲಕ್ಕೆ ಚಕ್ರ ಬಡ್ಡಿ ಲೆಕ್ಕದಲ್ಲಿ ತಾಳೆಹಾಕಬೇಕು.  ಇದಕ್ಕಾಗಿ ಭವಿಷ್ಯದ ಮೊತ್ತ ಸದ್ಯದ ಮೊತ್ತ (1೤ ಹಣದುಬ್ಬರ/100)ಅವಧಿ ಎಂಬ ಸೂತ್ರವನ್ನು ಉಪಯೋಗಿಸಿಕೊಳ್ಳಬಹುದು.
ಸ್ಕೀಮುಗಳ ಆಯ್ಕೆ
ಮೇಲೆ ಲೆಕ್ಕ ಹಾಕಿದ ದುಡ್ಡಿನ ಅಗತ್ಯಗಳನ್ನು ತುಂಬಲು ಹೆಚ್ಚುವರಿ ಹೂಡಿಕೆ ಬೇಕಾಗಬಹುದು. ಅದಕ್ಕಾಗಿ ಯಾವ ಸ್ಕೀಮಿನಲ್ಲಿ ಎಷ್ಟು ದುಡ್ಡು ಹೂಡಬೇಕು ಎನ್ನುವುದರ ಬಗ್ಗೆ ಪ್ಲಾನ್ ಮಾಡಿಕೊಳ್ಳಬೇಕು. ಉದಾಹರಣೆ: ಪಿಪಿಎಫ್‌ನಲ್ಲಿ 50 ಸಾವಿರ, ಷೇರುಗಳಲ್ಲಿ ರು. 2 ಲಕ್ಷ ಇತ್ಯಾದಿ. ನಿಮ್ಮ ಆದಾಯದಿಂದ ಖರ್ಚು ಕಳೆದು ಮಾಸಿಕ/ವಾರ್ಷಿಕ ಎಷ್ಟರ ಮಟ್ಟಿಗೆ ಉಳಿತಾಯ ಮಾಡಲು ಸಾಧ್ಯ ಎಂಬುದನ್ನು ನೋಡಿಕೊಂಡೇ ಈ ಪ್ಲಾನ್ ಮಾಡಿಕೊಳ್ಳಲು ಸಾಧ್ಯ.
ಸ್ಕೀಮುಗಳನ್ನು ಆಯ್ಕೆ ಮಾಡುವಲ್ಲಿ ಪ್ರತಿಯೊಂದರ ವಿವರಗಳು, ಅವುಗಳ ಕಾಲಾವಧಿ, ಅವುಗಳಿಂದ ಸಿಗಬಹುದಾದ ಕರ ವಿನಾಯಿತಿ, ಅವುಗಳು ನೀಡಬಹುದಾದ ಪ್ರತಿಫಲವಲ್ಲದೆ ವೈಯಕ್ತಿಕ ರಿಸ್ಕ್ ಧಾರಣಾ ಶಕ್ತಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಪ್ರತಿಫಲ ಮಾತ್ರ ನೋಡಿ ಹೂಡಿಕೆ ಮಾಡಬಾರದು. ಹೆಚ್ಚು ಪ್ರತಿಫಲ ಬಹುತೇಕ ಹೆಚ್ಚು ರಿಸ್ಕಿನೊಂದಿಗೆ ಬರುತ್ತದೆ.  ರಿಸ್ಕ್ ಧಾರಣಾ ಶಕ್ತಿ ಶಕ್ತಿ ಎನ್ನುವುದು ಕೇವಲ ಮನೋಸ್ಥೈರ್ಯದ  ವಿಚಾರವಲ್ಲ ಎನ್ನುವುದನ್ನೂ ಗಮನಿಸಬೇಕು.  ಅದು ಅವರವರ ಜೀವನದ ಹಂತ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಹೊಂದಿಕೊಂಡಿದೆ. ಸಾಮಾನ್ಯವಾಗಿ ಸಣ್ಣ ವಯಸ್ಸಿನಲ್ಲಿ ಗರಿಷ್ಠ ರಿಸ್ಕ್ ಧಾರಣಾ ಶಕ್ತಿ ಇದ್ದುಕೊಂಡು ವಯಸ್ಸು ಏರಿದಂತೆಲ್ಲಾ ಅದು ಕಡಿಮೆಯಾಗುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳಬಲ್ಲವರು ಶೇರು, ಭೂಮಿ, ಚಿನ್ನ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಾರೆ. ಕಡಿಮೆ ರಿಸ್ಕ್ ಬಯಸುವವರು ಪಿಪಿಎಫ್, ಎಫ್‌ಡಿ, ಎನ್‌ಎಸ್‌ಸಿ ಇತ್ಯಾದಿ ಭದ್ರ ಹಾಗೂ ನಿಗದಿತ ಆದಾಯದ ಸ್ಕೀಮುಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ.
ಶಿಸ್ತು
ಹೂಡಿಕೆಗೆ ಶಿಸ್ತು ಮುಖ್ಯ. ಹಾಕಿಕೊಂಡ ಯೋಜನೆಯಂತೆ ನಿಯತಕಾಲಿಕವಾಗಿ ಹೂಡುತ್ತಾ ಹೋಗುವುದು ಅತಿ ಮುಖ್ಯ. ಒಂದು ಪೂರ್ವ ಯೋಜನೆಯನ್ನು ಅನುಸರಿಸುತ್ತಾ ಹೋಗುವುದರಲ್ಲಿ ವಿತ್ತೀಯ ಯೋಜನೆಯ ಗುಟ್ಟು ಅಡಗಿದೆ. ಅತಿಯಾದ ದುಂದು ವೆಚ್ಚ, ಬೇಕಾಬಿಟ್ಟಿ ಖರ್ಚು ಮಾಡುವುದು, ಪೂರ್ವ ಯೋಜನೆ ಇಲ್ಲದೆ ಖರ್ಚು ಮಾಡುವುದು ಇತ್ಯಾದಿಗಳಿಂದ ದೂರವಿರಬೇಕು.
ಗ್ಯಾಪ್ ಅಂದಾಜು
ಭವಿಷ್ಯದ ವಿವಿಧ ಹಂತಗಳಲ್ಲಿ ಅಗತ್ಯ ಹಾಗೂ ಅದೇ ಹಂತಗಳಲ್ಲಿ ಸದ್ಯದ ಸಂಪತ್ತಿನಿಂದ ಎಷ್ಟು ಪೂರೈಕೆ ಎಂದು ತಿಳಿದ ಬಳಿಕ ಅವೆರಡರ  ನಡುವಿನ ಗ್ಯಾಪ್ ಅಥವಾ ವ್ಯತ್ಯಾಸವನ್ನು ತಾಳೆ ಹಾಕುವುದು ಸುಲಭ. ಅದರ ಮೊತ್ತವೇ ಮುಂದಕ್ಕೆ ಮಾಡಬೇಕಾದ ಹೆಚ್ಚುವರಿ ಉಳಿತಾಯಕ್ಕೆ ಮಾದರಿ. ಉದಾ: 5 ವರ್ಷ ರು. 4 ಲಕ್ಷ ಬೇಕು  10 ವರ್ಷಗಳಲ್ಲಿ 12 ಲಕ್ಷ ಬೇಕು ಇತ್ಯಾದಿ.
ಮೋಸಗಾರರಿದ್ದಾರೆ!
ಹೂಡಿಕೆಯ ಸಂದರ್ಭದಲ್ಲಿ ಯಾವತ್ತೂ ನೆನಪಿನಲ್ಲಿಡಬೇಕಾದ ನಾಣ್ಣುಡಿ ಎಂದರೆ ಅತಿ ಆಸೆ ಗತಿಗೇಡು ಎನ್ನುವುದು. ಅತಿಯಾದ ಪ್ರತಿಫಲದ ಆಸೆ ತೋರಿಸಿ ಎಲ್ಲ ದುಡ್ಡನ್ನು ದೋಚಿಕೊಂಡು ಓಡಿಹೋಗುವ ಮೋಸಗಾರರಿಂದ ದೂರವಿರಿ. ಮಿತಿ ಮೀರಿದ ಬಡ್ಡಿ ದರ ನೀಡುವ ಆಮಿಷಗಳಿಂದ ದೂರವಿರಿ. ಭದ್ರತೆಯ ಬಗ್ಗೆಯೂ ಗಮನವಿಟ್ಟುಕೊಂಡು ಉತ್ತಮ ಪ್ರತಿಫಲದ ಹೂಡಿಕೆಗಳತ್ತ ಗಮನಕೊಡಿ. ಬ್ಯಾಂಕೇತರ ವಿತ್ತೀಯ ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ.  ಅದಲ್ಲದೆ ಲಾಟರಿ, ಹೊಸ ಕೆಲಸ, ಆಫ್ರಿಕಾದಿಂದ ನಿಮ್ಮ ಖಾತೆಗೆ ಸಂಪತ್ತು ರವಾನೆ, ಇತ್ಯಾದಿ ಮೋಸದಾಟಗಳಿಗೆ ಬಲಿಯಾಗಬೇಡಿ. ಇಂತಹ ಪ್ರಲೋಭನೆಗಳನ್ನು ತೋರಿಸಿ ಜನರನ್ನು ಮರುಳು ಮಾಡಲಾಗುತ್ತದೆ. ಬಳಿಕ ಅಂತಹ ಮೊತ್ತ ಪಡೆಯಲು ಮುಂಗಡವಾಗಿ ನಿಗದಿತ ಮೊತ್ತ ಕಳುಹಿಸಿ  ಎಂದು ಆದೇಶ ಬರುತ್ತದೆ. ಇಂತಹ ಮೋಸದಾಟಗಳ ಮೂಲಕ ಮುಗ್ದ ಜನರನ್ನು ದೋಚಲಾಗುತ್ತದೆ. ಇವುಗಳಿಂದ ದೂರವಿರಿ.  ಹೂಡಿಕೆಯ ಜತೆಗೆ ಅವುಗಳಿಗೆ ಸರಿಯಾದ ನಾಮಿನಿ ಮಾಡಿಸಿಕೊಳ್ಳಿ. ಇದು ಅನಾವಶ್ಯಕ ಉಂಟಾಗುವ ತೊಡಕುಗಳನ್ನು ನಿವಾರಿಸುತ್ತದೆ. ಆದರೆ ಸೂಕ್ತವಾದ ಉಯಿಲು ಬರೆದಿಡುವುದು ಕೂಡಾ ಅಷ್ಟೇ ಅಗತ್ಯ. ಇದು ಕಾನೂನಿನ ತೊಡಕುಗಳನ್ನು ಹಾಗೂ ಅನಗತ್ಯ ಕೋರ್ಟ್‌ಕಚೇರಿಗಳ ವಹಿವಾಟು ತಪ್ಪಿಸುತ್ತದೆ.
ಸದ್ಯದ ಸಂಪತ್ತು
ಮೇಲಿನ ಅಗತ್ಯಗಳನ್ನು ತುಂಬಲು ಸದ್ಯಕ್ಕೆ ಕೈಯಲ್ಲಿ ಇರುವ ಎಲ್ಲ ರೀತಿಯ ಹೂಡಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಭವಿಷ್ಯದಲ್ಲಿ ಎಷ್ಟು ದುಡ್ಡು ಪೂರೈಕೆಯಾಗುತ್ತದೆ ಎನ್ನುವುದನ್ನೂ ಲೆಕ್ಕ ಹಾಕಿರಿ. ಕೈಯಲ್ಲಿರುವ ಹೂಡಿಕೆಯನ್ನನುಸರಿಸಿ ಚಕ್ರ ಬಡ್ಡಿ ಲೆಕ್ಕದಲ್ಲಿ ಭವಿಷ್ಯದಲ್ಲಿ ಎಷ್ಟು ದುಡ್ಡು ದೊರಕಬಹುದು ಎನ್ನುವುದನ್ನು ಲೆಕ್ಕ ಹಾಕಿ. ಇದಕ್ಕೂ ಮೇಲೆ ಹೇಳಿದ ಸೂತ್ರವನ್ನೇ ಉಪಯೋಗಿಸಬಹುದು.


-ಜಯದೇವ ಪ್ರಸಾದ ಮೊಳೆಯಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.