ರುಪೇ ದೇಶಿ ಮಾಸ್ಟರ್

ರುಪೇ ದೇಶಿ ಮಾಸ್ಟರ್
Updated on: 

ರುಪೇ..!
ಇದೇನು 'ಅಯ್ಯೋ' ಇದ್ದ ಹಾಗೆ ಮತ್ತೊಂದು ಚೀತ್ಕಾರವೇ ಎಂದು ಪ್ರಶ್ನಿಸಬೇಡಿ. ಇದೊಂದು ದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಪಾವತಿ ವ್ಯವಸ್ಥೆ. ಕಳೆದವಾರ ನವದೆಹಲಿಯಲ್ಲಿ ಇದನ್ನು ಆರಂಭಿಸಲಾಯಿತು. ವೀಸಾ, ಮಾಸ್ಟರ್‌ಕಾರ್ಡ್ ವ್ಯವಸ್ಥೆಯಂತೆಯೇ ಇದೊಂದು ಸ್ವದೇಶಿ ಬೆಳವಣಿಗೆ.
ಏನಿದರ ಹಿನ್ನೆಲೆ?
ವಿಶ್ವಾದ್ಯಂತ ಹಣಪಾವತಿಗೆ ಹಲವಾರು ವ್ಯವಸ್ಥೆಗಳಿರುತ್ತವೆ. ದೇಶದಲ್ಲಿ ರಿಟೇಲ್ ಕ್ಷೇತ್ರದ ಪಾವತಿಗಾಗಿ ಏಕರೂಪದ ವ್ಯವಸ್ಥೆ ತರಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಯೋಜನೆ ರೂಪಿಸಿತ್ತು. ಅದರ ಪ್ರಕಾರ ವಿವಿಧ ರೀತಿಯ ಪಾವತಿ ವ್ಯವಸ್ಥೆಗಳನ್ನು ಒಂದೇ ಸಂಸ್ಥೆಯಡಿ ತಂದು ಅದನ್ನು ಏಕೀಕೃತಗೊಳಿಸಬೇಕು ಎನ್ನುವುದು ಆಶಯವಾಗಿತ್ತು. ಉದ್ದಿಮೆ ವಲಯಕ್ಕೂ ಇರುವ ಈ ವ್ಯವಸ್ಥೆ ದೇಶದ ಜನಸಾಮಾನ್ಯರಿಗೂ ದೊರೆಯುವಂತಾಗಬೇಕು ಎಂದು 2008ರಲ್ಲಿ ಭಾರತದ ರಾಷ್ಟ್ರೀಯ ಪಾವತಿ ನಿಗಮವನ್ನು (ಎನ್‌ಪಿಸಿಐ) ಆರಂಭಿಸಲಾಯಿತು. 2009ರ ಏಪ್ರಿಲ್‌ನಲ್ಲಿ ಅದಕ್ಕೆ ವ್ಯಾಪಾರ ನಡೆಸುವ ಅನುಮತಿ ನೀಡಲಾಯಿತು.
ಉಪಯೋಗವೇನು?
= ದೇಶೀಯ ಮಾರುಕಟ್ಟೆಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಿಕೊಂಡು ಹೆಚ್ಚಿನ ವ್ಯವಹಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರುಪೇ ಕಾರ್ಡ್ ನಮ್ಮ ದೇಶೀಯ ಬಳಕೆದಾರರಿಗೆ ಅಗತ್ಯವಾದ ಪಾವತಿ ಮಾರ್ಗವನ್ನು ಅತ್ಯಂತ ಸರಳವಾಗಿ ಮತ್ತು ಕೈಗೆಟಕುವ ಶುಲ್ಕ ಪಾವತಿ ಮಾಡುವ ಮೂಲಕ ಬಳಸುವ ಅವಕಾಶ ಮಾಡಿಕೊಡುತ್ತದೆ.
= ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಲಭ್ಯ. ದೇಶಿಯವಾಗಿಯೇ ಇರುವುದರಿಂದ ಅದರ ನಿರ್ವಹಣಾ ವೆಚ್ಚವೂ ಕಡಿಮೆಯೇ ಆಗಿರುತ್ತದೆ. ಹೀಗಾಗಿ ವಹಿವಾಟು ಶುಲ್ಕ ಕಡಿಮೆಯಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ.
    ದೇಶದ ಗ್ರಾಹಕರ ಮನೋಭಾವನೆಗೆ ಅನುಕೂಲವಾಗಿ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡಿದಂತಾಗುತ್ತದೆ.
= ಗ್ರಾಹಕರು ನೀಡಿದ ಗೌಪ್ಯ ಮಾಹಿತಿ ಎಲ್ಲಿಯೂ ಸೋರಿಕೆಯಾಗದಂತೆ ಅದನ್ನು ವೃತ್ತಿಪರವಾಗಿ ನಿರ್ವಹಿಸಲಾಗುತ್ತದೆ.
= ಗ್ರಾಹಕರ ಕ್ಷೇತ್ರಗಳಲ್ಲಿ ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಕ್ಷೇತ್ರಗಳಿಗೆ ಇಂಥ ಒಂದು ಪಾವತಿ ವ್ಯವಸ್ಥೆ ಬಂದಿಲ್ಲ. ಅಲ್ಲೂ ಅದನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚು.
25 ಹಣಕಾಸು ಸಂಸ್ಥೆಗಳು
ಹೊಸ ವ್ಯವಸ್ಥೆ ಜಾರಿಗಾಗಿ ಎನ್‌ಪಿಸಿಐ 25 ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಈ ಕೆಳಗೆ ಇರುವ ಹಣಕಾಸು ಸಂಸ್ಥೆಗಳು ಪ್ರಮುಖವಾಗಿ ರುಪೇ ಕಾರ್ಡ್ ಅನ್ನು ಹೆಚ್ಚಾಗಿ ಬಳಸಿಕೊಳ್ಳಲು ಒತ್ತು ನೀಡುತ್ತಿವೆ.
= ಭಾರತೀಯ ಸ್ಟೇಟ್ ಬ್ಯಾಂಕ್
= ಪಂಜಾಬ್ ನ್ಯಾಷನಲ್ ಬ್ಯಾಂಕ್
= ಕೆನರಾ ಬ್ಯಾಂಕ್
= ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
= ಬ್ಯಾಂಕ್ ಆಫ್ ಇಂಡಿಯಾ
= ಐಸಿಐಸಿಐ ಬ್ಯಾಂಕ್
= ಬ್ಯಾಂಕ್ ಆಫ್ ಬರೋಡಾ
= ಸಿಟಿ ಬ್ಯಾಂಕ್
= ಎಚ್‌ಎಸ್‌ಬಿಸಿ ಬ್ಯಾಂಕ್
ಕೊಡುವವರು ಯಾರು?
ಸಾರ್ವಜನಿಕ ಸ್ವಾಮ್ಯದ ಮತ್ತು ಖಾಸಗಿ ರಂಗದ ಬ್ಯಾಂಕುಗಳು ತಮ್ಮ ಗ್ರಾಹಕರಿಗಾಗಿ ರುಪೇ ಪಾವತಿ ಕಾರ್ಡುಗಳನ್ನು ನೀಡುತ್ತವೆ. ಹಣಕಾಸು ವ್ಯವಸ್ಥೆಗೆ ಸೇರ್ಪಡೆ (ಫೈನಾನ್ಷಿಯಲ್ ಇನ್‌ಕ್ಲೂಷನ್) ಯೋಜನೆಯಡಿಯಲ್ಲಿ 200 ಸಹಕಾರ ಸಂಘಗಳಿಂದಲೂ ಈ ಕಾರ್ಡುಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
ರುಪೇ ಇಎಂವಿ
ಎನ್‌ಪಿಸಿಐ ಗ್ರಾಹಕರಿಗಾಗಿ ಹೆಚ್ಚು ಸುರಕ್ಷಿತ ವ್ಯವಹಾರ ನಡೆಸುವ ದೃಷ್ಟಿಯಿಂದ ಯುರೋಪೆ ಮಾಸ್ಟರ್‌ಕಾರ್ಡ್ ಮತ್ತು ವೀಸಾ (ಇಎಂವಿ)ವನ್ನು ಜಾರಿಗೊಳಿಸಿದೆ. ಜಾಗತಿಕವಾಗಿ ಮಾನ್ಯತೆ ಪಡೆದಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳಂತೆ ವ್ಯವಹಾರ ನಡೆಸಲು ಅನುಕೂಲವಾಗುತ್ತದೆ. ಇದರಲ್ಲಿ ಎಂಬೆಡೆಡ್ ಮೈಕ್ರೋಪ್ರೊಸೆಸರ್ ಇದೆ.
ರೈತರಿಗಾಗಿ ರುಪೇ
ರೈತರಿಗಾಗಿ ಏಕೀಕೃತ ಕಿಸಾನ್ ಕಾರ್ಡ್ ದೇಶಾದ್ಯಂತ ವಿವಿಧ ಬ್ಯಾಂಕುಗಳ ಮೂಲಕ ನೀಡುವ ಪ್ರಯತ್ನ ನಡೆದಿದೆ. ಈ ಮೂಲಕ ಎಟಿಎಂಗಳು ಮತ್ತು ಪಾಯಿಂಟ್ ಆಫ್ ಸೇಲ್ಸ್ ಪಾಯಿಂಟ್‌ಗಳಲ್ಲಿ ರೈತರಿಗೆ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗುತ್ತದೆ. ಪಂಜಾಬ್‌ನಲ್ಲಿ ಪಂಜಾಬ್ ಕಾಳು ಪರಿಷ್ಕರಣಾ ನಿಗಮ ಕಮಿಷನ್ ಏಜೆಂಟ್‌ಗಳಿಗೆ ಕಮಿಷನ್ ಪಾವತಿಸಲು ರುಪೇ ಕಾರ್ಡನ್ನೇ ಬಳಸಲಾರಂಭಿಸಿದೆ. ರುಪೇ ಮತ್ತು ಕೊಟಕ್ ಮಹೀಂದ್ರಾ ರೈತರಿಗಾಗಿ ಹಣಕಾಸು ಸೇರ್ಪಡೆ ಯೋಜನೆ ಜಾರಿಗೊಳಿಸಿದೆ. ಹೈನು ವ್ಯವಸಾಯಗಾರರಿಗೆ ಅಮೂಲ್‌ನ 75 ಸಹಕಾರ ಸಂಘಗಳ ಮೂಲಕ, ಪಶ್ಚಿಮ ಬಂಗಾಳದ ಬರ್ದ್ವಾನ್ ಮತ್ತು ಹೂಗ್ಲಿ ಜಿಲ್ಲೆಗಳಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ.
ದಾರಿ ತಪ್ಪಿಸುವ ಜಾಹೀರಾತುಗಳು!
ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಐಟಿಸಿ, ಡಾಬರ್ ಸೇರಿದಂತೆ ಪ್ರಮುಖ ಕಂಪನಿಗಳ ಕೆಲ ಜಾಹೀರಾತುಗಳು ದಾರಿತಪ್ಪಿಸುವಂತಿವೆ ಎಂದು ಭಾರತೀಯ ಜಾಹೀರಾತು ಗುಣಮಟ್ಟ ಸಮಿತಿ (ಎಎಸ್‌ಸಿಐ) ಹೇಳಿದೆ. ಸಾರ್ವಜನಿಕರಿಂದ ಬಂದಿರುವ ಒಟ್ಟು 136 ದೂರುಗಳಲ್ಲಿ 99 ಜಾಹೀರಾತುಗಳು ಜನರ ದಿಕ್ಕು ತಪ್ಪಿಸುತ್ತವೆ ಎಂದು ಈ ಜಾಹೀರಾತು ಕಾವಲು ಸಂಸ್ಥೆ ತಿಳಿಸಿದೆ. ಎಎಸ್‌ಸಿಐನ ಕಸ್ಟಮರ್ ಕೇರ್ ಕೌನ್ಸಿಲ್ ಪ್ರಕಾರ ಆರೋಗ್ಯ ಮತ್ತು ವೈಯಕ್ತಿಕ ವಿಭಾಗಕ್ಕೆ ಸೇರುವ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳೇ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ದಿಕ್ಕುತಪ್ಪಿಸುವಂತಿವೆ.
ಬೇಕಾ ಡಾಬರ್ ಮಿಠಾಯಿ?
ದೇಶದ ಜನಪ್ರಿಯ ಎಫ್‌ಎಂಸಿಜಿ ಸಂಸ್ಥೆಯಾಗಿರುವ ಡಾಬರ್ ಹೊಸ ಮಿಠಾಯಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾಜ್‌ಮೋಲ ಚುಸ್ಕರ ಎಂಬ ಜೆಲ್ಲಿಯನ್ನು ಇತ್ತೀಚೆಗೆ ಪರಿಚಯಿಸಿದೆ. ಬಾಲಿವುಡ್ ತಾರೆ ಅಜಯ್ ದೇವಗನ್ ಇದರ ರುಚಿಯನ್ನು ದೃಢೀಕರಿಸಿದ್ದಾರೆ. ಇದರ ಪ್ರತಿ ಪ್ಯಾಕೆಟ್‌ಗೆ ರು. 2 ನಿಗದಿ ಮಾಡಲಾಗಿದೆ. ರುಚಿ ಮತ್ತು ಆಕರ್ಷಕ ಜಾಹೀರಾತಿನಿಂದ ಡಾಬರ್ ಚುಸ್ಕರ್ ಮಿಠಾಯಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಲಿದೆ ಎಂಬ ಆಶಯ ಕಂಪನಿಯದ್ದು.

ಎಲ್ಲೆಲ್ಲಿ ಸ್ವೀಕಾರ?
ದೇಶದ ಎಲ್ಲ ಎಟಿಎಂ ಕೇಂದ್ರಗಳಲ್ಲಿ ಈ ಕಾರ್ಡುಗಳನ್ನು ಸ್ವೀಕರಿಸುತ್ತಾರೆ.
1,45,270 ಎಟಿಎಂಗಳಲ್ಲಿ ಸ್ವೀಕಾರ
10,000 ಇ- ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ
8,75,000 ಪಾಯಿಂಟ್ ಆಫ್ ಸೇಲ್ ಕೇಂದ್ರಗಳಲ್ಲಿ


= ಸದಾಶಿವ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com