ಎಣ್ಣೆ ಕಾದಿದೆ...

ಅಬ್ಬಾ..! ಚುನಾವಣೆ, ಮತ ಎಣಿಕೆ ಮುಗೀತು. ಎನ್ಡಿಎ ನೂತನ ಸರ್ಕಾರ ಅಧಿಕಾರ ವಹಿಸಿಕೊಳ್ಳೋದಷ್ಟೇ ಬಾಕಿ. ಇನ್ನಾದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಕಡಿಮೆ ಆಗ್ಬಹುದೆಂದು ಅಂದುಕೊಂಡಿದ್ದೀರಾ?
- ಬೇಡ. ಈಗಲೇ ಹೀಗಂದುಕೊಳ್ಳಬೇಡಿ. ದೇಶದ ನಾಲ್ಕನೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ತೈಲೋತ್ಪನ್ನ ಕಂಪನಿಗಳು ಬೆಟ್ಟದಷ್ಟು ಹೊರೆಯನ್ನು ಹೊರುತ್ತಿವೆ. ನಿತ್ಯ ಸುಮಾರು ರು. 342 ಕೋಟಿ ಹಾನಿಯನ್ನು ಮೈಮೇಲೆ ಎಳೆದುಕೊಳ್ಳುತ್ತಿವೆ. ಇದನ್ನು ಸರಿದೂಗಿಸಿಕೊಂಡು ಹೋಗುವುದು ಸರ್ಕಾರಕ್ಕೆ ಅಗ್ನಿಪರೀಕ್ಷೆಯೇ ಸರಿ.
ಆದರೆ ಹೊರೆಯನ್ನು ಇಳಿಸಿಕೊಳ್ಳಲು ಮತ್ತೆ ತೈಲ ಬೆಲೆ ಏರಿಕೆ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಸಹಜ. ಹೀಗೆ ಮಾಡದಿರಲು ಮುಖ್ಯ ಕಾರಣ ಚುನಾವಣೆ. ಈಗಾಗಲೇ ಬೆಲೆಯೇರಿಕೆಯಿಂದ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಚುನಾವಣೆ ಸಮಯದಲ್ಲಿ ಮತ್ತೆ ತೈಲ ಬೆಲೆ ಏರಿಕೆ ಮಾಡದಂತೆ ತೈಲೋತ್ಪನ್ನ ಕಂಪನಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿತ್ತು. ತತ್ಪರಿಣಾಮ ಕೋಟ್ಯಂತರ ರುಪಾಯಿ ಹಾನಿಯಿದ್ದರೂ ಸುಮ್ಮನಾಗಿದ್ದವು.
ಈವರೆಗೆ ಹಾನಿ ಅನುಭವಿಸಿದ ತೈಲೋತ್ಪನ್ನ ಕಂಪನಿಗಳಾದ ಐಒಸಿ, ಎಚ್ಪಿಸಿಎಲ್, ಬಿಪಿಸಿಎಲ್ಗಳು ಇನ್ನು ನಾವು ಸುಮ್ಮನಿರಲಾಗದೆಂದು ಈಗಾಗಲೇ ಪರೋಕ್ಷವಾಗಿ ಹೇಳಿಕೊಂಡಿವೆ. ಅದಕ್ಕೆ ಕೆಲ ಪ್ರಮುಖ ಕಾರಣಗಳನ್ನೂ ನೀಡಿವೆ. ಅವುಗಳು ಅವು ಕೆಳಗಿನಂತಿವೆ...
1. ಅಧಿಕ ಬೇಡಿಕೆ
ಜಗತ್ತಿನ ಎರಡನೇ ಅತ್ಯಧಿಕ ಜನಸಂಖ್ಯೆ ಮತ್ತು ನಾಲ್ಕನೇ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪನ್ನ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ತೈಲಕ್ಕೆ ಭಾರಿ ಬೇಡಿಕೆಯಿದೆ. ಅಲ್ಲದೆ ಕಚ್ಚಾ ತೈಲೋತ್ಪನ್ನಕ್ಕೆ ಅನ್ಯ ದೇಶಗಳೇ ಆಧಾರವಾಗಿದ್ದು, ಆಮದು ಮಾಡಿಕೊಳ್ಳಲು ವಿಧಿಯಿಲ್ಲದೆ ಕೇಳಿದಷ್ಟು ಹಣ ತೆರಬೇಕಾಗಿದೆ. ಇದರ ಪರಿಣಾಮ ನೇರವಾಗಿ ಸ್ವದೇಶಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲದ ಮೇಲೆ ಬೀಳುತ್ತಿದೆ.
2. ಸದ್ಯದ ಹಾನಿ ಎಷ್ಟು?
ತೈಲೋತ್ಪನ್ನ ಕಂಪನಿಗಳು ಸದ್ಯ ಪ್ರತಿ ಲೀಟರ್ ಡೀಸೆಲ್ ಮೇಲೆ ರು. 6.80, 14.2 ಕೆ.ಜಿ.ಯ ಅಡುಗೆ ಅನಿಲ(ಎಲ್ಪಿಜಿ) ಸಿಲಿಂಡರ್ಗಳ ಚಿಲ್ಲರೆ ಮಾರಾಟದಲ್ಲಿ ರು. 449.13 ಹಾನಿಯನ್ನು ಅನುಭವಿಸುತ್ತಿವೆ. ಅದಕ್ಕಾಗಿ ಸೀಮೆಎಣ್ಣೆಯನ್ನು ಪ್ರತಿ ಲೀಟರ್ಗೆ ರು. 33.85ಕ್ಕೆ ಹೆಚ್ಚಿಸಲಾಗಿದೆ. 2014ರ ಏ.16ರಿಂದ ತೈಲೋತ್ಪನ್ನ ಕಂಪನಿಗಳು ಡೀಸೆಲ್, ಸೀಮೆಎಣ್ಣೆ ಮತ್ತು ಗೃಹೋಪಯೋಗಿ ಅಡುಗೆ ಅನಿಲದಿಂದ ನಿತ್ಯ ರು. 342 ಕೋಟಿ ನಷ್ಟ ಭರಿಸಬೇಕಾಗಿದೆ.
3. ಬಗೆಹರಿಯದ ಸಮಸ್ಯೆ
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ವರ್ಷ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲಕ್ಕಾಗಿ ಲಕ್ಷಾಂತರ ಕೋಟಿ ತೆರುತ್ತಿವೆ. ಯಾವಾಗ ಈ ಕಂಪನಿಗಳು ಸರ್ಕಾರದ ನಿಯಂತ್ರಣವನ್ನು ಕಳೆದುಕೊಂಡವೋ ಆಗಿನಿಂದಲೇ ಕಚ್ಚಾ ತೈಲ ಶುದ್ಧೀಕರಣ ವಿಸ್ತರಿಸುವ ಸಾಮರ್ಥ್ಯವೂ ಕುಗ್ಗಿಸಿಕೊಂಡಿವೆ. ವರ್ಷದಿಂದ ವರ್ಷಕ್ಕೆ ತೈಲ ಬೇಡಿಕೆ ಹೆಚ್ಚುತ್ತಿದೆಯೇ ವಿನಾ ದೇಶದಲ್ಲಿ ಕಚ್ಚಾ ತೈಲ ಮೂಲಗಳನ್ನು ಕಂಡುಕೊಳ್ಳಲಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಆಮದಿನ ಮೊರೆ ಹೋಗಬೇಕಾಗಿದೆ. ಇದರಿಂದ 2013- 14ರಲ್ಲಿ ಸರ್ಕಾರಿ ಸ್ವಾಮ್ಯದ ಈ ಮೂರು ಕಂಪನಿಗಳು 1,39,869 ಕೋಟಿ ನಷ್ಟವನ್ನು ಅನುಭವಿಸಿವೆ.
4. ನಷ್ಟಕ್ಕೆ ಒಳಗಾಗೋದು ಹೇಗೆ?
ಆಡಳಿತರೂಢ ಸರ್ಕಾರಗಳು ಸಾರ್ವಜನಿಕರ ಮೇಲಿನ ತೆರಿಗೆ ಹೊರೆ ಮತ್ತು ತೈಲ ದರದ ಹೊರೆಯನ್ನು ಕುಗ್ಗಿಸಲು, ಜನಸ್ನೇಹಿಯಾಗಲು ಸಬ್ಸಿಡಿ ಹೆಚ್ಚಳ ಮಾಡುವುದು, ಇಲ್ಲವೇ ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಪೂರೈಸಲು ಮುಂದಾಗುತ್ತವೆ. ಇವೇ ನಿರ್ಧಾರಗಳು ತೈಲೋತ್ಪನ್ನ ಕಂಪನಿಗಳಿಗೆ ನುಂಗಲಾರದ ತುತ್ತಾಗುತ್ತಿವೆ.
5. ರುಪಾಯಿ ಏರಿಳಿತದ ಪರಿಣಾಮ
ಅಮೆರಿಕನ್ ಡಾಲರ್ ಎದುರು ದೇಶದ ರುಪಾಯಿ ಏರಿಳಿತವೂ ಕಚ್ಚಾತೈಲ ಆಮದಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದರಿಂದ ಪ್ರತಿವರ್ಷ ರು. 9,100 ಕೋಟಿ ನಷ್ಟಕ್ಕೆ ಒಳಗಾಗುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಡಾಲರ್ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಅತ್ಯಧಿಕ ಹಣವನ್ನು ತೆರಬೇಕಾಗುತ್ತದೆ. ಹೀಗಾಗಿ ಪೆಟ್ರೋಲ್ ಹೊರತುಪಡಿಸಿ ಡೀಸೆಲ್, ಎಲ್ಪಿಜಿ ಮತ್ತು ಸೀಮೆಎಣ್ಣೆಯಿಂದಲೇ ರು. 3,745 ಕೋಟಿ ಹೊರೆ ಹೊರುತ್ತಿವೆ.
6. ಡೀಸೆಲ್ ಬೆಲೆ ಏರಿಕೆ ಸಲೀಸಾಗಿಲ್ಲ
ದೇಶದಲ್ಲಿ ಅತ್ಯಧಿಕ ಮಾರಾಟವಾಗುವ ಡೀಸೆಲ್ ಬೆಲೆಯೇರಿಕೆಯನ್ನು ಪೆಟ್ರೋಲಿಯಂ ಕಂಪನಿಗಳು ಸರಳವಾಗಿ ಮಾಡುವಂತಿಲ್ಲ. ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಮೂಲವಾಗಿರುವ ಇದರ ದರವನ್ನು ಹೆಚ್ಚಳ ಮಾಡಿದರೂ ಸರ್ಕಾರ ತನ್ನ ಸಾಮರ್ಥ್ಯವನ್ನು ತೋರಿಸದೇ ಬಿಡದು. ತನ್ನ ಹಣಕಾಸಿನ ನೆರವನ್ನು ನೀಡದೇ ಇದ್ದರೆ ಎಂಬ ಭಯವೂ ಉಂಟು. ಅಲ್ಲದೆ ಮತ್ತಷ್ಟು ಸಬ್ಸಿಡಿ ಘೋಷಿಸಿದರೆ ಎಂಬ ಬೇಗುದಿಯಲ್ಲಿವೆ ಕಂಪನಿಗಳು.
ತೈಲ ಬೆಲೆಯೇರಿಕೆ ಸಾಧ್ಯವೇ?
ಚುನಾವಣೆ ಬಳಿಕ ತೈಲ ಬೆಲೆ ಏರಿಕೆ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ- ಈಗಾಗಲೇ ತೀವ್ರ ನಷ್ಟದಲ್ಲಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಹೊರೆಯನ್ನು ತಗ್ಗಿಸಿಕೊಳ್ಳಲು ಮುಂದಾಗಿವೆ. ಒಂದು ವೇಳೆ ಮೇ ಮಾಸಾಂತ್ಯದದಿಂದ ರುಪಾಯಿ ಮೌಲ್ಯ ಕುಸಿದರೆ ಬೆಲೆಯೇರಿಕೆ ಬಿಸಿ ತಟ್ಟೋದು ನಿಶ್ಚಿತ. ಡಾಲರ್ ಎದುರು ರುಪಾಯಿ ಮೌಲ್ಯ ಕಳೆದುಕೊಳ್ಳದಿದ್ದರೆ ಮಾತ್ರ ತೈಲ ಬೆಲೆ ಏರಿಕೆ ನಿಯಂತ್ರಣ ಸಾಧ್ಯ ಎಂದಿರುವ ಪೆಟ್ರೋಲಿಯಂ ಇಲಾಖೆ, ತೈಲ ಬೆಲೆ ಹೆಚ್ಚಳ ಮಾಡದೆ ವಿಧಿಯಿಲ್ಲ ಎಂದೇ ಹೇಳುತ್ತಿದೆ.
ಮೋದಿ ನೀಡುವರೇ ಅಭಯ?
ಈವರೆಗೆ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿಯನ್ನೇ ಕಟುವಾಗಿ ಟೀಕಿಸಿಕೊಂಡು ಬಂದಿರುವ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ (ಅಧಿಕಾರ ವಹಿಸಿಕೊಳ್ಳಬೇಕಷ್ಟೇ) ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಕುಗ್ಗಿಸುತ್ತಾರೆ ಎಂಬ ಮಹದಾಸೆಯನ್ನು ದೇಶದ ಜನತೆ ಹೊಂದಿದ್ದಾರೆ. ಇದಕ್ಕೆ ಅವರು ಹೇಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ಸರ್ಕಾರ ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಹಾನಿಯನ್ನು ನಿಭಾಯಿಸದೇ ವಿಧಿಯಿಲ್ಲ. ಇಲ್ಲದಿದ್ದರೆ ಮತ್ತೆ ಗ್ರಾಹಕರ ಮೇಲೆ ಬೆಲೆ ಏರಿಕೆ ಬರೆ ಬೀಳುವುದರಲ್ಲಿ ಸಂದೇಹವಿಲ್ಲ.
-ವೀರೇಶ ಜಿ. ಮಠ
mathvg@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


