

ಮುಂಬೈ: ಕರ್ನಾಟಕ ವಿಧಾನಸಭೆ ಚುನಾವಣೆಯ ಇಂದಿನ ಫಲಿತಾಂಶದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದಿದೆ.
ಮುಂಬೈ ಷೇರು ಮಾರುಕಟ್ಟೆಯಲ್ಲಿನ ಸಂವೇದಿ ಸೂಚ್ಯಂಕ 436 ಅಂಶಗಳಷ್ಟು ಏರಿಕೆ ಕಂಡುಬಂದಿದ್ದು, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಸಹ 10,000 ಗಡಿ ದಾಟಿದೆ.
ವಿಧಾನಸಭೆ ಚುನಾವಣೆಯ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 109 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 53 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಚೇತರಿಕೆ ಕಂಡುಬಂದಿತು. ಇತ್ತೀಚಿನ ವರದಿಯಂತೆ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 149.17 ಏರಿಕೆ ಕಂಡಿದೆ. 35,707.65 ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸಹ 44.15 ಏರಿಕೆ ಕಂಡು ಇತ್ತೀಚಿನ ವರದಿಯಂತೆ 10,847.85ರಲ್ಲಿ ವಹಿವಾಟು ನಡೆಸುತ್ತಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಶೇಕಡಾ 2.38ರಷ್ಟು, ಕೊಟಾಕ್ ಬ್ಯಾಂಕ್ ಶೇಕಡಾ 2.17ರಷ್ಟು, ಯಸ್ ಬ್ಯಾಂಕ್ ಶೇಕಡಾ 2.13ರಷ್ಟು, ಪವರ್ ಗ್ರಿಡ್ ಶೇಕಡಾ 1.99ರಷ್ಟು ಮತ್ತು ಹೆಚ್ ಡಿಎಫ್ ಸಿ ಬ್ಯಾಂಕು ಶೇಕಡಾ 1.62ರಷ್ಟು ಏರಿಕೆ ಕಂಡುಬಂದಿದೆ.
ಈ ಮಧ್ಯೆ ವಿದೇಶಿ ಹೂಡಿಕೆದಾರರಿಂದ 717.99 ಕೋಟಿ ರೂಪಾಯಿ ಷೇರುಗಳು ಬಂದಿದ್ದು, ದೇಶೀಯ ಸಾಂಸ್ಥಿಕ ಹೂಡಿಕೆದಾರರು 687.23 ಕೋಟಿಗೆ ಷೇರುಗಳನ್ನು ತಂದಿವೆ ಎಂದು ಅಂಕಿಅಂಶ ತಿಳಿಸಿವೆ.