'ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ದೊಡ್ಡ ತಪ್ಪು': ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಅದ್ಭುತ; ಕಾಜೋಲ್ ಸಹೋದರಿ ತನಿಷಾ ಮುಖರ್ಜಿ!

ಬಾಲಿವುಡ್ ನಟಿ ಕಾಜೋಲ್ ಅವರ ಸಹೋದರಿ ಮತ್ತು ನಟಿ ತನಿಶಾ ಮುಖರ್ಜಿ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಿದ್ದು 'ಸಂಪೂರ್ಣವಾಗಿ ತಪ್ಪು' ಎಂದು ಕರೆದಿದ್ದಾರೆ. ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿದ್ದ ತನಿಶಾ, ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಅವರನ್ನು ಹೊಗಳಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಈ ತಿಂಗಳ ಆರಂಭದಲ್ಲಿ ಚಿತ್ರದ ಅದ್ಧೂರಿ ಬಿಡುಗಡೆಯವರೆಗೆ, ರಣಬೀರ್ ಕಪೂರ್ ರಾಮನಾಗಿ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ನಟಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಪರ ಮತ್ತು ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಮುಖೇಶ್ ಖನ್ನಾ ಅವರಂತಹ ಹಿರಿಯ ನಟರು ಚಿತ್ರದಲ್ಲಿ ಸೀತೆಯನ್ನು ರಾಮನೊಂದಿಗೆ ರಾಕ್ಷಸರ ವಿರುದ್ಧ ಹೋರಾಡುವ ರೀತಿಯಲ್ಲಿ ತೋರಿಸಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಒಬ್ಬ ಸೆಲೆಬ್ರಿಟಿ ಸಾಯಿ ಪಲ್ಲವಿ ಅವರನ್ನು ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿದ್ದು ತಪ್ಪು ಎಂದು ಸಾರ್ವಜನಿಕವಾಗಿ ಕರೆದಿರುವುದು ಇದೇ ಮೊದಲು.
'ಸಾಯಿ ಪಲ್ಲವಿ ಒಬ್ಬ ಶ್ರೇಷ್ಠ ನಟಿ ಎಂಬುದು ನಿಜ, ಆದರೆ ದುರದೃಷ್ಟವಶಾತ್ ಸೀತೆ ಪಾತ್ರಕ್ಕೆ ಅವರು ಅಷ್ಟು ಸೂಕ್ತವಾಗಿಲ್ಲ! ಇದರಿಂದಾಗಿ, ಅವರು ಪರದೆ ಮೇಲಿನ ದೃಶ್ಯದೊಂದಿಗೆ ಸಂಪರ್ಕವನ್ನೇ ಕಡಿದುಹಾಕುತ್ತಾರೆ!' ಎಂದು ತನಿಷಾ ಬರೆದಿದ್ದಾರೆ.
ರಾಮ ಮತ್ತು ರಾವಣರನ್ನು ಶ್ಲಾಘಿಸುತ್ತಾ, ಅವರು ಪರಸ್ಪರ ಪೂರಕವಾಗಿದ್ದಾರೆ ಎಂದು ಹೇಳಿರುವ ತನಿಷಾ, 'ತುಂಬಾ ತಡವಾಗಿಯಾದರೂ ಅಂತಿಮವಾಗಿ ರಾಮಾಯಣ ನೋಡುತ್ತಿದ್ದೇನೆ! ಈ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ! ಮಾಧ್ಯಮಗಳು ಎಷ್ಟು ತಪ್ಪು ಮಾಹಿತಿ ನೀಡುತ್ತವೆ ಎಂದು ಹೇಳಲೇಬೇಕು. ಇಲ್ಲಿ ಎಲ್ಲವೂ ರಾಮನೇ! ರಣಬೀರ್ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ. 'ಅನಿಮಲ್' ಚಿತ್ರದಲ್ಲಿನ ಅವರ ಅಭಿನಯವನ್ನು ಇಷ್ಟಪಟ್ಟಿದ್ದ ನನಗೆ, ಅವರನ್ನು ಶ್ರೀರಾಮನ ಪಾತ್ರದಲ್ಲಿ ಒಪ್ಪಿಕೊಳ್ಳಲು ಕಷ್ಟವಾಗಬಹುದು ಎಂದುಕೊಂಡಿದ್ದೆ. ಆದರೆ, ಅಬ್ಬಾ! ಅವರು ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿದ್ದಾರೆ!' ಎಂದಿದ್ದಾರೆ.
'ರಾವಣನ ಪಾತ್ರದಲ್ಲಿ ಯಶ್ ಅದ್ಭುತವಾಗಿದ್ದಾರೆ! ಅವರು ತಮ್ಮ ಪಾತ್ರವನ್ನು ಅತ್ಯಂತ ಪರಿಪೂರ್ಣವಾಗಿ ನಿರ್ವಹಿಸುವ ಮೂಲಕ ಎಲ್ಲರ ನಿರೀಕ್ಷೆಗಳನ್ನು ಮೀರಿ ನಿಂತಿದ್ದಾರೆ! ಶ್ರೀರಾಮ ಮತ್ತು ರಾವಣ - ಇಬ್ಬರೂ ನಟರು ತಮ್ಮ ಪಾತ್ರಗಳಿಗೆ ಸಂಪೂರ್ಣವಾಗಿ ಜೀವ ತುಂಬಿದ್ದಾರೆ! ರಾಮನಿಗೆ ರಾವಣನ ಪಾತ್ರವು ಅತ್ಯುತ್ತಮವಾಗಿ ಒಪ್ಪುತ್ತದೆ! ಖಂಡಿತವಾಗಿಯೂ ನೋಡಲೇಬೇಕಾದ ಚಿತ್ರ' ಎಂದು ಅವರು 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
ಚಿತ್ರದ ಪಾತ್ರವರ್ಗದ ಆಯ್ಕೆಯ ಕುರಿತು ಪ್ರೇಕ್ಷಕರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ 'ರಾಮಾಯಣ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ.
ಬಿಡುಗಡೆಯಾದ 20 ದಿನಗಳ ನಂತರ, ಈ ಚಿತ್ರದ ದೇಶೀಯ ಗಳಿಕೆಯು ₹972.95 ಕೋಟಿಯಾಗಿದ್ದರೆ, ಒಟ್ಟು ಗಳಿಕೆಯು 1,162.15 ಕೋಟಿ ರೂಪಾಯಿಗಳಷ್ಟಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ 'ಸ್ಯಾಕ್ನಿಲ್ಕ್' (Sacnilk) ವರದಿ ಪ್ರಕಾರ, 'ರಾಮಾಯಣ' ಚಿತ್ರದ ಜಾಗತಿಕ ಗಳಿಕೆಯು ₹1,735.15 ಕೋಟಿ ರೂಪಾಯಿಗಳಷ್ಟಿದೆ. ಇದೇ ವೇಳೆ, 'ಪುಷ್ಪ 2' (2024) ಚಿತ್ರವು ಜಾಗತಿಕವಾಗಿ ₹1,742 ಕೋಟಿ ಗಳಿಸಿದೆ. ಹೀಗಾಗಿ, 'ಪುಷ್ಪ 2' ಚಿತ್ರದ ಒಟ್ಟು ಗಳಿಕೆಯನ್ನು ಹಿಂದಿಕ್ಕಲು ಮತ್ತು ಸಾರ್ವತ್ರಿಕವಾಗಿ ಅತಿ ಹೆಚ್ಚು ಗಳಿಕೆ ಕಂಡ ಚಲನಚಿತ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮೇಲೇರಿಸಿಕೊಳ್ಳಲು 'ರಾಮಾಯಣ'ಕ್ಕೆ ಇನ್ನೂ ಕೇವಲ 7 ಕೋಟಿ ರೂಪಾಯಿಗಳ ಅಗತ್ಯವಿದೆ. 'ಪುಷ್ಪ 2' ಅನ್ನು ಹಿಂದಿಕ್ಕಿದ ನಂತರ, ಈ ಪಟ್ಟಿಯಲ್ಲಿ 'ರಾಮಾಯಣ'ದ ಮುಂದೆ 'ದಂಗಲ್' ಮತ್ತು 'ಧುರಂಧರ್ 2' ಎಂಬ ಕೇವಲ ಎರಡು ಸ್ಪರ್ಧಿಗಳು ಮಾತ್ರ ಉಳಿಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


