

ಬೆಂಗಳೂರು: ಭಾರಿ ನಿರೀಕ್ಷೆಯೊಂದಿಗೆ ವಿಶ್ವಾದ್ಯಂತ ಬಾಹುಬಲಿ-2 ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಚಿತ್ರದ ಮೇಲಿನ ನಿರೀಕ್ಷೆಯಿಂದಾಗಿ ಥಿಯೇಟರ್ ಗಳತ್ತ ಜನಸಾಗರವೇ ಹರಿಯುತ್ತಿದ್ದು, ಥಿಯೇಟರ್ ಮಾಲೀಕರು ದುಬಾರಿ ಬೆಲೆಗೆ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಬೆಂಗಳೂರಿನ ಹಲವು ಥಿಯೇಟರ್ ಗಳಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭಿಸಲಾಗಿದ್ದು, ಒಂದು ವಾರದ ಟಿಕೆಟ್ ಗಳು ಈಗಾಗಲೇ ಬುಕ್ ಆಗಿವೆ ಎಂದು ತಿಳಿದುಬಂದಿದೆ. 200 ರುಗಳ ಟಿಕೆಟ್ ಬೆಲೆ 1000 ರುಗಳಿಂದ ಬರೊಬ್ಬರಿ 5000 ರುಗಳಿಗೆ ಮಾರಾಟವಾದ ಕುರಿತು ಮಾಹಿತಿಗಳು ಲಭ್ಯವಾಗಿವೆ. ಆಂಧ್ರ ಪ್ರದೇಶದ ಕೆಲ ಚಿತ್ರಮಂದಿರಗಳಲ್ಲಿ ಥಿಯೇಟರ್ ಮಾಲೀಕರೇ ತಮ್ಮ ಸಿಬ್ಬಂದಿಗಳ ಮೂಲಕ ಬ್ಲಾಕ್ ಟಿಕೆಟ್ ಮಾರಾಟ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದ್ದು, 2000 ದಿಂದ 5000 ರುಗೆ. ಟಿಕೆಟ್ ಮಾರಾಟ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಹುಬಲಿ ಮೇನಿಯಾವನ್ನೇ ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಥಿಯೇಟರ್ ಮಾಲೀಕರು ಟಿಕೆಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮತ್ತೆ ಕೆಲವು ಥಿಯೇಟರ್ ಗಳಲ್ಲಿ ಟಿಕೆಟ್ ಇದ್ದರೂ ನಕಲಿ ಟಿಕೆಟ್ ಅಭಾವ ಸೃಷ್ಟಿಸಿ ಟಿಕೆಟ್ ಗಳನ್ನು ಭಾರಿ ಪ್ರಮಾಣದ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಕೋಲಾರ, ಮಂಡ್ಯದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ
ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಪಡೆಯುವ ನಿಟ್ಟಿನಲ್ಲಿ ವಿಶ್ವಾದ್ಯಂತ ಪ್ರೇಕ್ಷಕರು ಥಿಯೇಟರ್ ಗಳಲ್ಲಿ ಮುಗಿಬಿದ್ದಿದ್ದಾರೆಯಾದರೂ, ಭಾರಿ ನಿರೀಕ್ಷಿತ ಚಿತ್ರಕ್ಕೆ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ನೀರಸ ಪ್ರತಿಕ್ರಿಯ ಕಂಡುಬಂದಿದೆ ಎಂಬ ವರದಿಗಳು ಕೂಡ ಕೇಳಿಬಂದಿವೆ ಖಾಸಗಿ ವಾಹಿನಿಗಳು ವರದಿ ಮಾಡಿರುವಂತೆ ಕೋಲಾರ ಮತ್ತು ಮಂಡ್ಯ ಜಿಲ್ಲೆಯ ಕೆಲ ಥಿಯೇಟರ್ ಗಳಲ್ಲಿ ಬಾಹುಬಲಿ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಕಂಡುಬಂದಿದ್ದು, ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಥಿಯೇಟರ್ ಮಾಲೀಕರು ಬೆಳಗ್ಗೆ 4 ಗಂಟೆಯಿಂದಲೇ ಟಿಕೆಟ್ ಮಾರಾಟ ಆರಂಭಿಸಿದ್ದಾರೆಯಾದರೂ ಪ್ರೇಕ್ಷಕರಿಲ್ಲದೇ ಬೆಳಗ್ಗೆ 8 ಗಂಟೆಗೆ ಮೊದಲ ಷೋ ಆರಂಭಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.