

ಹೈದರಾಬಾದ್: ಬಾಹುಬಲಿ-2 ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಮತ್ತೊಂದು ದೊಡ್ಡ ಬಜೆಟ್ ಚಿತ್ರದ ಮುನ್ಸೂಚನೆ ನೀಡಿದ್ದು, ಐತಿಹಾಸಿಕ ಮಹಾಭಾರತ ಕಥೆಯಾಧಾರಿತ ಚಿತ್ರವನ್ನು ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ.
ಈಗಾಗಲೇ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದ್ದು, ಇದರ ಮುಂದುವರೆದ ಭಾಗ ಬಾಹುಬಲಿ-2 ಅಂತಿಮ ಹಂತದಲ್ಲಿದೆ. ಚಿತ್ರ ಇದೇ ಏಪ್ರಿಲ್ 28ರಂದು ತೆರೆ ಕಾಣುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ನಿರ್ದೇಶಕ ರಾಜಮೌಳಿ ಮತ್ತೊಂದು ದೊಡ್ಡ ಬಜೆಟ್ ಚಿತ್ರಕ್ಕೆ ಯೋಜನೆ ರೂಪಿಸಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಇದು ಆತೀ ದೊಡ್ಡ ಬಜೆಟ್ ಚಿತ್ರವಾಗಿರಲಿದ್ದು, ಈ ಬಿಗ್ ಬಜೆಟ್ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟರು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ರಾಜಮೌಳಿ ಮಹಾಭಾರತ ಕಥೆಯಾಧಾರಿತ ಚಿತ್ರ ಮಾಡುವುದು ತಮ್ಮ ಜೀವನ ಅತ್ಯಂತ ದೊಡ್ಡ ಕನಸು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದರು.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಚಿತ್ರ ನಿರ್ಮಾಣ ಮಾಡುವುದರಲ್ಲಿ ರಾಜಮೌಳಿ ಎತ್ತಿದ ಕೈ. ಹೀಗಾಗಿಯೇ ಅವರ ಯಮದೊಂಗ, ಮಗಧೀರ ಮತ್ತು ಇತ್ತೀಚಿನ ಬಾಹುಬಲಿ ಚಿತ್ರಗಳು ಅಭೂಕ ಪೂರ್ವ ಯಶಸ್ಸು ಕಂಡಿದ್ದವು. ಇದೀಗ ಬಾಹುಬಲಿ-2 ಚಿತ್ರದ ಅಂತಿಮ ಹಂತದ ಕಾರ್ಯಗಳಲ್ಲಿ ರಾಜಮೌಳಿ ಬಿಸಿಯಾಗಿದ್ದು. ಈ ಚಿತ್ರ ತೆರೆಕಂಡ ಬಳಿಕ ತಮ್ಮ ಮುಂದಿನ ಯೋಜನೆ ಕುರಿತಂತೆ ಮಾಹಿತಿ ನೀಡಲಿದ್ದಾರೆ.