ನೂರು ಕಣ್ಣು ಸಾಲದು ಅಣ್ಣಾವ್ರ ಈ ಅನಿಮೇಶನ್ ಹಾಡು ನೋಡಲು: ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ!

ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಹೊಸಬರ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ತಂಡ ಇತ್ತೀಚಿಗಷ್ಟೆ 'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎನ್ನುವ ಅಣ್ಣಾವ್ರ ಅನಿಮೇಷನ್ ಹಾಡನ್ನು ಯೂಟ್ಯೂಬಿನಲ್ಲಿ ಬಿಡುಗಡೆಗೊಳಿಸಿತ್ತು. ಬಹು ಬೇಗನೆ 1.9 ಲಕ್ಷ ನೋಟಗಳನ್ನು ಸಂಪಾದಿಸಿ, ಹೊಸ ಸೆನ್ಸೇಷನ್ ಸೃಷ್ಟಿಸುತ್ತಿದೆ.
ಮ್ಯೂಸಿಕ್ ವಿಡಿಯೊ ಸ್ಟಿಲ್
ಮ್ಯೂಸಿಕ್ ವಿಡಿಯೊ ಸ್ಟಿಲ್

ಬೆಂಗಳೂರು: ಮೇರು ನಟ ಡಾ.ರಾಜಕುಮಾರ್ ಅನಿಮೇಷನ್ ಹಾಡನ್ನು ನೀವೆಲ್ಲರೂ ನೋಡಿಯೇ ಇರುತ್ತೀರಾ! ಇಲ್ಲದಿದ್ದಲ್ಲಿ  ಒಮ್ಮೆಯಾದರೂ ನೋಡಿ ಆನಂದಿಸಿ. ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಹೊಸಬರ 'ಡೇರ್ಡೆವಿಲ್ ಮುಸ್ತಾಫಾ'(Daredevil Mustafa) ಸಿನಿಮಾ ತಂಡ ಇತ್ತೀಚಿಗಷ್ಟೆ 'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎನ್ನುವ ಅಣ್ಣಾವ್ರ ಅನಿಮೇಷನ್ ಹಾಡನ್ನು ಯೂಟ್ಯೂಬಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹಾಡನ್ನು ಪ್ರತಿಭಾನ್ವಿತ ಗಾಯಕ ವಾಸುಕಿ ವೈಭವ್ ಹಾಡಿದ್ದಾರೆ.

ಶಶಾಂಕ್ ಸೋಗಾಲ್
ಶಶಾಂಕ್ ಸೋಗಾಲ್

ಬಹು ಬೇಗನೆ ಒಂದು ಲಕ್ಷ ನೋಟಗಳನ್ನು ಸಂಪಾದಿಸಿದ್ದ ಆ ಹಾಡು ಇದೀಗ 2 ಲಕ್ಷದತ್ತ ಮುನ್ನುಗ್ಗಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ. ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟಾಫೀಸು' ಪುಸ್ತಕದಿಂದ ಆಯ್ದ ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನು ಆಧರಿಸಿದ ಈ ಸಿನಿಮಾವನ್ನು ಶಶಾಂಕ್ ಸೋಗಾಲ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಸಂಗೀತ ನಿರ್ದೇಶನ ನವನೀತ್ ಶ್ಯಾಮ್ ಅವರದು. ಈ ಹಾಡಿನ ಮೂಲ ಸಂಗೀತ ಸಂಯೋಜಕರು ಖ್ಯಾತ ರಂಗಕರ್ಮಿ ಬಿ.ವಿ. ಕಾರಂತರು.

ಈ ಅನಿಮೇಶನ್ ಹಾಡು ಹುಟ್ಟಿದುದರ ಹಿಂದೆ ಒಂದು ಕುತೂಹಲ ಕತೆಯೇ ಇದೆ. ಈ ಮೊದಲು ಅದೇ ಹಾಡನ್ನು ಸಿನಿಮಾ ಭಾಗವಾಗಿ ಶೂಟ್ ಮಾಡಿತ್ತು ಚಿತ್ರತಂಡ. ನಂತರ ಅದೊಂದೇ ಹಾಡನ್ನು ಇಟ್ಟುಕೊಂಡು ಪ್ರತ್ಯೇಕವಾಗಿ ಅನಿಮೇಷನ್ ಹಾಡೊಂದನ್ನು ತಯಾರಿಸಬಾರದೇಕೆ ಎನ್ನುವ ಆಲೋಚನೆ ಶಶಾಂಕ್ ಅವರಿಗೆ ಮೂಡಿತ್ತು. ಒಡನೆಯೇ ಆಸಕ್ತ 2ಡಿ ಅನಿಮೇಟರ್ ಗಳಿಗಾಗಿ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಿದ್ದರು. ಹಾಗೆ ಅವರ ಸಂಪರ್ಕಕ್ಕೆ ಬಂದಿದ್ದು ಮಂಗಳೂರಿನ ಪ್ಲಾಂಗಲ್ ಸ್ಟುಡಿಯೊ.

ಪ್ಲಾಂಗಲ್ ಸ್ಟುಡಿಯೋದವರು ಶಶಾಂಕ್ ಗ್ರೀನ್ ಸಿಗ್ನಲ್ ಕೊಡುವುದಕ್ಕೂ ಮುನ್ನವೇ ಸ್ಟೋರಿ ಬೋರ್ಡ್ ತಯಾರಿಸಿ ಶಶಾಂಕ್ ಅವರಿಗೆ ಕಳಿಸಿಬಿಟ್ಟಿದ್ದರು. ಪ್ಲಾಂಗಲ್ ತಂಡದ ಹುರುಪು ಕಂಡು ಸಂತಸಗೊಂಡ ಶಶಾಂಕ್ ಅಣ್ಣಾವ್ರ ಅನಿಮೇಷನ್ ಹಾಡು ನಿರ್ಮಾಣ ಮಾಡುವ ಹೊಣೆಯನ್ನು ಅವರಿಗೇ ಕೊಟ್ಟುಬಿಟ್ಟರು. ಹಾಗೆ ಲಾಕ್ ಡೌನ್ ಸಮಯದಲ್ಲಿ ಪ್ಲಾಂಗಲ್ ಸ್ಟುಡಿಯೋ ತಂಡದ ಪರಿಶ್ರಮ ಹಾಗೂ ಶಶಾಂಕ್ ಸೋಗಾಲ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದೇ 'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಅಣ್ಣಾವ್ರ ಅನಿಮೇಷನ್ ಹಾಡು. 

ಪ್ಲಾಂಗಲ್ ಸ್ಟುಡಿಯೋ ತಂಡ
ಪ್ಲಾಂಗಲ್ ಸ್ಟುಡಿಯೋ ತಂಡ

'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಸುಮಾರು 40 ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡ ಅಭಿನಯಿಸಿದ ಪ್ರಸನ್ನ ನಿರ್ದೇಶಿಸಿದ, ಡಾ ಕೆ.ವಿ.ನಾರಾಯಣ ರಚಿಸಿದ 'ಹುತ್ತವ ಬಡಿದರೆ' ನಾಟಕಕ್ಕಾಗಿ ಡಾ.ಸಿ ವೀರಣ್ಣ ರಚಿಸಿದ ಈ ಹಾಡಿನ ಸಂಗೀತ ಸಂಯೋಜನೆ ಮಾಡಿದವರು ಶ್ರೀ ಬಿ.ವಿ.ಕಾರಂತ.
 
ಈ ಪ್ರಸಿದ್ಧ ರಂಗಗೀತೆಯನ್ನು  'ಡೇರ್ಡೆವಿಲ್ ಮುಸ್ತಾಫಾ' ಚಿತ್ರದಲ್ಲಿ ಕಾಲೇಜು ಹುಡುಗರು ವಾರ್ಷಿಕೋತ್ಸವದಲ್ಲಿ ಹಾಡಿ ಕುಣಿಯುವಂತೆ ಚಿತ್ರಿಸಲಾಗಿದೆ. ಈ ಹಾಡೊಳಗೆ ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆಯಿದೆ. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಹೊಳೆದದ್ದು ಡಾ. ರಾಜಕುಮಾರ್ ಅನಿಮೇಷನ್. ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಈ ಮೂಲಕ ಮಾಡಲಾಗಿದೆ.  ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com