ಶ್ರೀಮಂತಿಕೆಗೆ ಮನ್ನಣೆ ಇಲ್ಲ, ಪರಮಾತ್ಮನ ಸೇವೆಯೇ ಎಲ್ಲ!
'ವರ್ಷಕ್ಕೆ 8 ಲಕ್ಷ ಸಂಬಳ. ಗುತ್ತಿಗೆ ಆಧಾರದ ಮೇಲೆ ಏರ್ಟೆಲ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ನನಗೆ ಲಕ್ಷ ಲಕ್ಷ ದುಡಿಮೆ ಇದ್ದರೂ ಆತ್ಮತೃಪ್ತಿ ಸಿಗುತ್ತಿರುವುದು ಇಲ್ಲಿಯೇ'- ಹೀಗೆಂದು ಹೇಳುತ್ತಿದ್ದ ಯುವಕನ ಹೆಸರು ರಾಘವೇಂದ್ರ. 35 ವರ್ಷ ಪೂರೈಸುವ ವೇಳೆಗೆ, ರಾಜಸ್ಥಾನದ ಮೌಂಟ್ ಅಬೂವಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಯಾದ ತಾನು, ತನ್ನ ಜೀವನವನ್ನು ಆ ಸಂಸ್ಥೆಗೆ ಅರ್ಪಣೆ ಮಾಡಿಕೊಳ್ಳುವ ಮೂಲಕ ಇಲ್ಲಿಯೇ ಸೇವೆಯಲ್ಲಿದ್ದೇನೆ ಎಂದು ತನ್ನನ್ನು ಪರಿಚಯಿಸಿಕೊಂಡ ಯುವಕ. 'ಸ್ವಾಮೀಜಿ ನೀವು ಕರ್ನಾಟಕದವರಾ?' ಎನ್ನುತ್ತಿದ್ದಂತೆ ನಮಗೂ ಕುತೂಹಲ. ನಮ್ಮೂರಿನ ಭಾಷೆ ಉತ್ತರ ಭಾರತದಲ್ಲಿ ಕೇಳಿದರೆ ತುಂಬಾ ಖುಷಿಯಲ್ವಾ? ಹಾಗೇನೇ ಶುರುವಾಯ್ತು ನಮ್ಮ ಸಂಭಾಷಣೆ. ಏಕೆಂದರೆ ಅಲ್ಲಿ ಯಾವುದೇ ಶಿಕ್ಷಣಸಂಸ್ಥೆಗಳಿಲ್ಲ, ವಿದ್ಯಾರ್ಥಿ ನಿಲಯಗಳಿಲ್ಲ, ನಿರ್ದಿಷ್ಟ ಆದಾಯದ ಮೂಲಗಳಿಲ್ಲ. ಆದರೂ ವರ್ಷಕ್ಕೆ ಕನಿಷ್ಟ ಮೂರು ಲಕ್ಷ ಜನರು ಭೇಟಿ ಕೊಡುತ್ತಾರೆ. ಆಗಮಿಸುವ ಯಾರೊಬ್ಬರೂ ಊಟ, ವಸತಿ ತೊಂದರೆಯಾಯ್ತು ಎಂದು ಹೇಳಿದ ಸಂದರ್ಭವೇ ಇಲ್ಲ. ಇನ್ನು ಹೀಗೆ ನಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳುತ್ತಾ ಅಡುಗೆ ಮನೆಗೆ ಕರೆದುಕೊಂಡು ಹೋದವರು ಬ್ರಹ್ಮಕುಮಾರಿ ಸಂಸ್ಥೆಗೆ ಎರಡು ದಶಕದ ಹಿಂದೆಯೇ ಬಂದಿರುವ ಅಜ್ಜಪ್ಪಣ್ಣ. ಅಜ್ಜಪ್ಪಣ್ಣ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು. ವರ್ಷಕ್ಕೆ ಲಕ್ಷ ಲಕ್ಷ ಸಂಬಳ ಕೊಡುತ್ತಿದ್ದ ಕೆಲಸ ಬಿಟ್ಟು ಬಂದ ರಾಘವೇಂದ್ರರಂಥ ನೂರಾರು ಯುವಕರು ಅಲ್ಲಿ ಬಾಣಸಿಗರಾಗಿದ್ದಾರೆ. ಅನೇಕ ಯುವಕರು ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದವರಿದ್ದಾರೆ. 'ಜೀವನದಲ್ಲಿ ಎಷ್ಟು ದುಡಿದರು ನಮಗೆ ಮುಕ್ತಿ ಮತ್ತು ಆತ್ಮಶಾಂತಿ ಸಿಗುವುದಿಲ್ಲ. ಇಲ್ಲಿ ಮಾಡುವ ಸೇವೆ ಪರಮಾತ್ಮನ ಸೇವೆ. ಇದರಲ್ಲೇ ನಾವು ಮನಃಶಾಂತಿ ಕಾಣುತ್ತೇವೆ' ಎನ್ನುತ್ತಾರೆ.
ಅವರ ಪ್ರಕಾರ ಇನ್ನು ಕೆಲವು ವರ್ಷಗಳಲ್ಲಿ ಸತ್ಯಯುಗ ಪ್ರಾರಂಭವಾಗುತ್ತದೆ, ಆಗ ಮಾತ್ರ ಪ್ರತಿಯೊಬ್ಬರೂ ಸುಖ-ಶಾಂತಿ- ಸಮೃದ್ಧಿ ಕಾಣಲು ಸಾಧ್ಯ. ಆಧ್ಯಾತ್ಮಿಕ ವಿಚಾರ ಅದೇನೆ ಇರಲಿ, ನಂಬಿಕೆ ವ್ಯಕ್ತಿಗತ. ಆದರೆ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯಕರ್ತರ ಬದ್ಧತೆ, ಸೇವಾ ಮನೋಭಾವವನ್ನು ನಾವು ಮೆಚ್ಚಲೇಬೇಕು.
ಅಂದಹಾಗೆ 1936 ರಲ್ಲಿ ವಜ್ರದ ವ್ಯಾಪಾರಿ ದಾದಾಲೇಖ್ ರಾಜ್ರವರಿಂದ ಸ್ಥಾಪನೆಗೊಂಡ ಬ್ರಹ್ಮಕುಮಾರಿ ಈಶ್ವರೀಯ ವಿಶ್ವಾವಿದ್ಯಾನಿಲಯ ಕಳೆದ 76 ವರ್ಷಗಳಲ್ಲಿ 135 ರಾಷ್ಟ್ರಗಳಲ್ಲಿ ತನ್ನ ಆಧ್ಯಾತ್ಮಿಕ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಒಂಬತ್ತು ಸಾವಿರ ಕೇಂದ್ರಗಳನ್ನು ಅದು ಹೊಂದಿದ್ದು, ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು 10,000 ಜನರು ತಮ್ಮ ಜೀವನವನ್ನು ಸೇವೆಗಾಗಿ ಮುಡಿಪಾಗಿರಿಸಿದ್ದಾರೆ. ಸದಾ ಶ್ವೇತ ವಸ್ತ್ರಧಾರಿ ಬ್ರಹ್ಮಕುಮಾರ, ಬ್ರಹ್ಮಕುಮಾರಿಯರನ್ನು 'ಅಕ್ಕ','ಅಣ್ಣ' ಎಂದು ಕರೆಯಲಾಗುತ್ತದೆ. ಇವರಿಂದ ನಡೆಯಲ್ಪಡುವ ಕೇಂದ್ರಗಳಿಗೆ ವಿಶ್ವದಾದ್ಯಂತ ಸುಮಾರು ಹತ್ತು ಲಕ್ಷ ಜನರು ಪ್ರತಿನಿತ್ಯ ಸಂಪರ್ಕದಲ್ಲಿದ್ದು, ಅವರೆಲ್ಲರೂ ತರಗತಿಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಜ್ಞಾನ ಪಡೆಯುತ್ತಿದ್ದಾರೆ. ಇಂಥವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ವಯಸ್ಸು, ಲಿಂಗ ಅಥವಾ ಧರ್ಮ ಭೇದವಿಲ್ಲದೆ ಈ ಸಂಸ್ಥೆ ಪ್ರತಿಯೊಬ್ಬರನ್ನೂ ಸಮಾನವಾಗಿ ನೋಡುತ್ತಿದೆ. ಸಂಸ್ಥೆಗೆ ಅರ್ಪಣೆಗೊಂಡ ಪ್ರತಿ ಬ್ರಹ್ಮಕುಮಾರ ಬ್ರಹ್ಮಕುಮಾರಿಯರು ಯಾವುದೇ ರೀತಿಯ ವೇತನ ಇಲ್ಲದೇ ಸೇವೆ ಮಾಡುತ್ತಾರೆ. ಇವರನ್ನೂ ಕೂಡ ಆಗಾಗ ಊರಿಂದ ಮತ್ತೊಂದು ಊರಿಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಇವರು ಸರ್ಕಾರಿ ಸವಲತ್ತು ಪಡೆಯುವ ನೌಕರರಂತೆ ಯಾವುದೇ ಅಪಸ್ವರ ತೆಗೆಯುವುದಿಲ್ಲ. ಸಂಸ್ಥೆಯ ಮುಖ್ಯಸ್ಥರು ಸೂಚಿಸಿದ ಊರಿಗೆ ತೆರಳಿ ಜ್ಞಾನ ಪ್ರಸಾರದಲ್ಲಿ ತೊಡಗುವ ಮೂಲಕ ಸಂಸ್ಥೆಯ ನಿಯಮಕ್ಕೆ ಬದ್ಧರಾಗಿರುತ್ತಾರೆ. ಇದು ಸಂಪೂರ್ಣ ಸಾರ್ವಜನಿಕ ವಲಯದ ಆಧ್ಯಾತ್ಮಿಕ ಸಂಸ್ಥೆ. ಕೇವಲ ಜನರ ನಂಬಿಕೆ, ಪ್ರೀತಿ, ವಿಶ್ವಾಸದ ಆಧಾರದ ಮೇಲೆ ನಡೆಯುತ್ತಿರುವ ಈಶ್ವರೀಯ ವಿಶ್ವವಿದ್ಯಾನಿಲಯಕ್ಕೆ 75 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಹೆಮ್ಮೆಯಿದೆ. ಈ ಸಂಸ್ಥೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಈಗಾಗಲೇ ಹೇಳಿದಂತೆ ದೇವರ ಇರುವಿಕೆಯ ಬಗ್ಗೆ ಇರುವ ಅಚಲನಂಬಿಕೆ, ಸೇವಾನಿಷ್ಠೆ, ಕಠಿಣ ಪರಿಶ್ರಮ ಅರ್ಪಣಾ ಮನೋಭಾವೇ ಕಾರಣ.
ಸಾಮಾಜಿಕ ವ್ಯವಸ್ಥೆಯಲ್ಲಿಂದು ಅಧಿಕಾರಸ್ಥರು ಹಣವಂತರು ಮಾಡುವ ಸೇವೆಯನ್ನು ಹಾಡಿ ಹೊಗಳುವುದು, ಮುಖಸ್ತುತಿ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಅಂತಹ ಸೇವೆಗೆ ಶ್ರೀಮಂತಿಕೆಗೆ ಮನ್ನಣೆ ಇಲ್ಲ. ಇವರದೇನಿದ್ದರೂ ಪರಮಾತ್ಮನ ಸೇವೆಯೇ! ಪರಮಾತ್ಮನೇ ಎಲ್ಲರಿಗಿಂತಲೂ ಶ್ರೇಷ್ಠ ಎಂಬ ಸಿದ್ಧಾಂತ. ಪರಮಾತ್ಮನ ಸೇವೆಯಲ್ಲಿ ತೊಡಗುವುದೇ ಜೀವನದ ಸಾರ್ಥಕತೆ. ಆ ಮೂಲಕ ಸಮಾಜಕ್ಕಾಗಿ ಉತ್ತಮ ವ್ಯಕ್ತಿಯಾಗಿ ಬಾಳಬೇಕು ಎನ್ನುವುದನ್ನು ಅತ್ಯಂತ ಸರಳವಾಗಿ ಕಲಿಸುವುದು ಈಶ್ವರೀಯ ವಿಶ್ವವಿದ್ಯಾನಿಲಯದ ಧ್ಯೇಯ ಮಂತ್ರ. ಇಲ್ಲಿ ಮೌನ ಮತ್ತು ಧ್ಯಾನಕ್ಕೆ ಹೆಚ್ಚಿನ ಆದ್ಯತೆ, ಇವರು ಹೇಳುವ ತತ್ವಗಳನ್ನು ಕೆಲವರು ಒಪ್ಪಬಹುದು, ಅನೇಕರು ಟೀಕಿಸಬಹುದು. ಅದಾವುದಕ್ಕೂ ಇವರು ಬೇಸರಿಸಿಕೊಳ್ಳುವುದಿಲ್ಲ. ಬಾಬಾನ ಸೇವೆ, ವಿಶ್ವಶಾಂತಿ ಸ್ಥಾಪನೆ ನಮ್ಮ ಗುರಿ ಎಂದು ತಿಳಿದು ಹೆಚ್ಚಿನ ಪ್ರಾಶಸ್ತ್ಯವನ್ನು ಸೇವೆಗೆ ನೀಡುತ್ತಾರೆ.
ಮೌಂಟ್ ಅಬೂವಿನ ವಿಶಾಲವಾದ ರಮ್ಯ ನಿಸರ್ಗ ತಾಣದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಕೇಂದ್ರ ಕಚೇರಿ ಹೊಂದಿದೆ. ಅದರ ಆಸುಪಾಸಿನಲ್ಲಿಯೇ ಪ್ರತ್ಯೇಕ ವಿಭಾಗಗಳು ವ್ಯಾಪಿಸಿಕೊಂಡಿವೆ. ಅಲ್ಲಲ್ಲಿ ಧಾರ್ಮಿಕ ಸಭೆಗಳು, ವಿಚಾರಗೋಷ್ಠಿಗಳು, ವಸ್ತುಪ್ರದರ್ಶನ, ವೈದ್ಯಕೀಯ, ವಿಜ್ಞಾನ ಹೀಗೆ ಹತ್ತಾರು ವಿಷಯಗಳಿಗೆ ಸಂಬಂಧಿಸಿದಂತೆ ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ಆಹ್ವಾನಿತ ಪರಿಣಿತರಿಂದ ಉಪನ್ಯಾಸಗಳು, ವಿಚಾರಗೋಷ್ಠಿ, ಚರ್ಚೆಗಳು ನಡೆಯುತ್ತವೆ. ಎಲ್ಲಾ ವಿಭಾಗಗಳಲ್ಲೂ ಯುವಕ ಯುವತಿಯರದೇ ಸೇವೆ. ಅಬೂ ಪರ್ವತಕ್ಕೆ ಒಮ್ಮೆ ಭೇಟಿನೀಡಿದವರಿಗೆ ಆಶ್ಚರ್ಯವಾಗಬಹುದು. ಏಕೆಂದರೆ ವರ್ಷದಲ್ಲಿ ಚಳಿಗಾಲದ ಒಂದು ತಿಂಗಳು ಹೊರೆತುಪಡಿಸಿ ಉಳಿದೆಲ್ಲಾ ದಿನಗಳು ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಭಾಗವಹಿಸಿದ ಅತಿಥಿಗಣ್ಯರಿಗೆ ದೇಶ ವಿದೇಶಗಳಿಂದ ಆಗಮಿಸುವ ಸಾವಿರಾರು ಸಭಿಕರಿಗೆ ಊಟ, ವಸತಿ, ಶುದ್ಧ ಕುಡಿಯುವ ನೀರಿನ ಕೊರತೆ ಆಗದಂತೆ ವ್ಯವಸ್ಥೆ ಮಾಡುವುದು ಇಲ್ಲಿನ ವಿಶೇಷ. ಇಲ್ಲಿ ಯಾರೂ ಯಾರಿಗೂ ಆದೇಶಿಸುವುದು, ಮೇಲುಸ್ತುವಾರಿ ನೋಡುವುದು ಕಂಡುಬರುವುದೇ ಇಲ್ಲ. ಆದರೂ ಅವರವರ ಸೇವೆಯನ್ನು ಹೇಳಿಸಿಕೊಳ್ಳದಂತೆ, ಮತ್ತೊಬ್ಬರಿಗೆ ತೋರ್ಪಡಿಸಿಕೊಳ್ಳದಂತೆ ಮಾಡುತ್ತಿರುತ್ತಾರೆ. ಹರೆಯದ ನೂರಾರು ಯುವಕರು ಅಡುಗೆ ಮನೆಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದಾರೆ. ಯಾರೊಬ್ಬರಿಗೂ ನಾನು ಪದವೀದರ ಎಂದಾಗಲಿ ಉದ್ಯೋಗ, ಮನೆ, ಬಂಧುಗಳನ್ನು ತೊರೆದು ಬಂದಿದ್ದೇನೆ ಎಂಬ ಅನಾಥ ಪ್ರಜ್ಞೆ ಕಾಡುವುದಿಲ್ಲ. ಬದಲಾಗಿ ನಾವು ಪರಮಾತ್ಮನ ಸೇವೆ ಮಾಡುತ್ತಿದ್ದೇವೆ ಆ ಮೂಲಕ ಜಗತ್ತಿನ ಒಳಿತಿಗೆ ದುಡಿಯುತ್ತಿರುವ ನಾವೆಲ್ಲರೂ ಈಶ್ವರನ ಮಕ್ಕಳು ಎಂಬ ತೃಪ್ತಿ ಅವರ ಮುಖದಲ್ಲಿ ಕಾಣುತ್ತದೆ.
ಇಲ್ಲಿರುವ ಪ್ರತಿಯೊಬ್ಬರ ಬದ್ಧತೆ, ತತ್ವ ಆದರ್ಶಗಳ ಬಗ್ಗೆ ಯಾರು ಏನೇ ಟೀಕಿಸಿದರೂ ಅವರನ್ನು 'ಓಂಶಾಂತಿ ಅಣ್ಣವರೇ, ಅಕ್ಕವರೇ ಒಮ್ಮೆ ಬನ್ನಿ ನಮ್ಮ ಈಶ್ವರೀಯ ವಿಶ್ವವಿದ್ಯಾನಿಲಯಕ್ಕೆ' ಎಂದು ಗುಣಸಂಪನ್ನರಾಗಿ ಸ್ವಾಗತಿಸುತ್ತಾರೆ. ಸಂಸ್ಥೆಯ ಸ್ಥಾಪಕರಾದ ದಾದಾಲೇಖ್ ರಾಜ್ರವರ ಭಾವಚಿತ್ರವೇ ಇವರ ಸ್ಫೂರ್ತಿ. ಅವರ ಸ್ಮಾರಕ ಇರುವ ಮಧುಬನದಲ್ಲಿ ಕುಳಿತು ಧ್ಯಾನಿಸಿದರೆ ಶಿವ ಪ್ರತ್ಯಕ್ಷ್ಯ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಈಶ್ವರೀಯ ವಿಶ್ವವಿದ್ಯಾನಿಲಯದ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಸಂಪೂರ್ಣ ಉಸ್ತುವಾರಿ ಮಹಿಳೆಯರದ್ದೇ ಎಂಬುದು. ಆಡಳಿತ, ಸಂಘಟನೆ ಸಮಾರಂಭ, ಉಪನ್ಯಾಸ, ಇನ್ಯಾವುದೇ ಸೇವೆ ಇರಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಬ್ರಹ್ಮಕುಮಾರಿಯರ ದಕ್ಷತೆ ಎಂಥವರನ್ನೂ ದಂಗುಬಡಿಸುತ್ತದೆ. ಇದಕ್ಕೊಂದು ನಿದರ್ಶನ ತೊಂಬತ್ತೇಳು ವರ್ಷದ ಬ್ರಹ್ಮಕುಮಾರಿ ದಾದಿಜಾನಕೀಜಿ ಅವರು. ಇಳಿ ವಯಸ್ಸಿನಲ್ಲೂ ಇಂತಹ ಬಹುದೊಡ್ಡ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರವರು. ಆಸ್ತಿಕರ ಮತ್ತು ನಾಸ್ತಿಕರ ತರ್ಕ ಮತ್ತು ವಾದಗಳು ಏನೇ ಇದ್ದರೂ ಜಾತಿ, ಧರ್ಮ, ಮೇಲು-ಕೀಳು ಭಾವನೆ ಇಲ್ಲದ ಈಶ್ವರೀಯ ವಿಶ್ವವಿದ್ಯಾನಿಲಯದ ಅನನ್ಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ.
- ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

