ಇವರು ಯಾವ ದೇಶದ ರಕ್ಷಣಾ ಮಂತ್ರಿ?
ರಕ್ಷಣಾ ಮಂತ್ರಿ ಎ.ಕೆ. ಆ್ಯಂಟನಿಯವರು ಸಜ್ಜನಿಕೆ, ಶಾಂತ ಸ್ವಭಾವ ಮತ್ತು ಎಲ್ಲರೊಂದಿಗೆ ಬೆರೆಯುವ ತಮ್ಮ ಗುಣದಿಂದಾಗಿ ಎಲ್ಲರಿಗೆ ಸುಪರಿಚಿತರು. ಹೀಗಾಗಿಯೇ ಉಳಿದವರೂ ಕೂಡ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಅವರ ಈ ಗುಣಗಳಿಂದಾಗಿಯೇ ರಕ್ಷಣಾ ಸಚಿವಾಲಯದ ಗೊಡವೆಗಳೆಲ್ಲವೂ ಸದನದಲ್ಲಿ ಸುಲಭವಾಗಿ ಬರೆಹರಿದುಬಿಡುತ್ತವೆ. ಇದರಿಂದ ಕಾಂಗ್ರೆಸ್ಗೂ ಲಾಭವಿದೆ ಎನ್ನಿ. ಆದರೆ ಇಂಥ ಸರಳತೆ ಮತ್ತು ಸಜ್ಜನಿಕೆ, ಬಾಲ ವಿಕಾಸ ಅಥವಾ ಸಮಾಜ ಕಲ್ಯಾಣ ಸಚಿವಾಲಯಗಳಿಗಳಷ್ಟೇ ಸರಿಯಾಗಿ ಹೇಳಿ ಮಾಡಿಸಿದಂಥದ್ದು. ರಕ್ಷಣಾ ಸಚಿವಾಲಯದಂಥ ಅತ್ಯಂತ ಕಠಿಣ, ಸಂವೇದನಾಶೀಲ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಕಠೋರ, ಚುರುಕು ಮತಿಯ, ರಾಷ್ಟ್ರೀಯ ಭಾವನೆಗಳನ್ನು ಅರ್ಥಮಾಡಿಕೊಂಡು ಸೇನೆ ಮತ್ತು ಗಡಿಯನ್ನು ರಕ್ಷಿಸುವಂಥನಾಯಕರ ಜರೂರತ್ತಿದೆ.
ಕೆಲವು ದಿನಗಳ ಹಿಂದೆ ಆ್ಯಂಟನಿಯವರು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪಾಕಿಸ್ತಾನದ ಹೇಡಿ ಕೃತ್ಯದ ಬಗ್ಗೆ ನೀಡಿದ ಹೇಳಿಕೆ ಎಲ್ಲರನ್ನೂ ಚಕಿತಗೊಳಿಸಿದೆ. ರಕ್ಷಣಾ ಮಂತ್ರಿಗಳು ಪಾಕಿಸ್ತಾನದ ಪರವಾಗಿ ಅದೇಕೆ ಮಾತನಾಡುತ್ತಿದ್ದಾರೋ ತಿಳಿಯದೆ ಬಹುತೇಕರು ಗೊಂದಲಕ್ಕೊಳಗಾದರು. ಇಷ್ಟೇ ಅಲ್ಲ, ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಭಾರತದ ಐವರು ಯೋಧರ ಸಾವಿಗೆ ಪಾಕಿಸ್ತಾನಿ ಸೇನೆಯ ಬಾರ್ಡರ್ ಆ್ಯಕ್ಷನ್ ತಂಡ ಕಾರಣ ಎಂದು ಹೇಳಿತ್ತು. ಒಂದೇ ಸಚಿವಾಲಯದ, ಒಂದೇ ಸರ್ಕಾರದ ಈ ಎರಡೂ ವಿರೋಧಾಭಾಸದ ಹೇಳಿಕೆಗಳು ಏನನ್ನು ಸೂಚಿಸುತ್ತವೆ?
ಪಾಕಿಸ್ತಾನ ನಿರಂತರವಾಗಿ ನಮ್ಮ ಸೈನಿಕರ ಅಪಮಾನ ಮಾಡುತ್ತಿದೆ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮಾತಿರಲಿ, ಈ ಬೆನ್ನೆಲುಬಿಲ್ಲದ, ಹೃದಯಹೀನ ಸರ್ಕಾರ, 'ಈ ದಾಳಿಯನ್ನು ಪಾಕಿಸ್ತಾನಿ ಸೈನಿಕರು ಮಾಡಿಲ್ಲ. ಸೈನಿಕರ ವೇಷದಲ್ಲಿದ್ದ ಉಗ್ರರಿಂದ ನಮ್ಮವರು ಹತ್ಯೆಯಾಗಿದ್ದಾರೆ' ಎಂದು ಪಾಕಿಸ್ತಾನಿಯರ ಪರ ವಾದಿಸುತ್ತಿದೆ.
ಸರ್ಕಾರ ನಮ್ಮ ಸೇನೆಯನ್ನು ಅವಮಾನಿಸುವುದನ್ನು ಆಚರಣೆಯನ್ನಾಗಿ ಮಾಡಿಕೊಂಡುಬಂದಿದೆ. ಒಂದು ವರ್ಷದಲ್ಲಿ ಪಾಕಿಸ್ತಾನಿಗಳು ನಮ್ಮ ನಾಲ್ವರು ಯೋಧರ ಶಿರಚ್ಛೇದ ಮಾಡಿ ಕಳುಹಿಸಿಕೊಡುತ್ತಾರೆ. ಆಗ ನಾವೇನು ಮಾಡಿದೆವು? ದೊಡ್ಡ ದೊಡ್ಡ ಹೇಳಿಕೆಗಳನ್ನು ಹರಿಬಿಟ್ಟೆವು. ಅಷ್ಟೇ ಅಲ್ಲದೆ, ಪಾಕಿಸ್ತಾನದೊಂದಿಗಿನ ನಮ್ಮ ಸ್ನೇಹ ಮುಂದುವರಿಯುತ್ತದೆ ಎಂದೂ ನಾಚಿಕೆಯಿಲ್ಲದೆ ಹೇಳಿದೆವು. ಯಾವೊಬ್ಬ ರಾಜಕಾರಣಿಯ ಮಗನಾದರೂ ಇಂದು ಸೇನೆಯಲ್ಲಿದ್ದಾನಾ? ಒಂದು ವೇಳೆ ತಮ್ಮ ಮಗನದ್ದೇ ರುಂಡವಿಲ್ಲದ ದೇಹವನ್ನು ನೋಡಿ- 'ಶಾಂತಿ ಮತ್ತು ಸಂಯಮ' ಎಂದು ಬಡಬಡಿಸಲು ನಮ್ಮ ರಾಜಕಾರಣಿಗಳಿಗೆ ಸಾಧ್ಯವೇ? ಪತ್ರಿಕೆಯಲ್ಲಿ ದೊಡ್ಡದಾಗಿ 'ಶ್ರದ್ಧಾಂಜಲಿ' ಅರ್ಪಿಸುವುದು, ಸಂಸತ್ತಿನಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿಯುವುದು ಮತ್ತು ಏನೂ ಆಗೇ ಇಲ್ಲವೇನೋ ಎನ್ನುವಂತೆ ಯಥಾಸ್ಥಿತಿಗೆ ಮರಳುವುದು ನಿಜಕ್ಕೂ ಪಾಖಂಡಿ ಸ್ವಭಾವವಲ್ಲದೆ ಮತ್ತೇನು? ಗಡಿ ರಕ್ಷಣೆಯಲ್ಲಿ ಮಡಿದ ಸೈನಿಕರ ಮನೆಗೆ ಎಷ್ಟು ಜನ ಹೋಗಿಬರುತ್ತಾರೆ? ಬರೀ ಪರಿಹಾರ ಕೊಟ್ಟರಾಯಿತೆ? ಅದೇ ದೊಡ್ಡ ಸಾಧನೆ ಎಂದು ಭಾವಿಸಬೇಕೇ? ತನ್ನ ಪತಿಯನ್ನು ಕಳೆದುಕೊಂಡು ವಿಧವೆಯನ್ನು ಕೇಳಿ ನೋಡಿ, ಆಕೆ ಎಂಥ ಕಷ್ಟದಲ್ಲಿದ್ದಾಳೆಂದು. ತಮ್ಮ ತಂದೆಯನ್ನು ಕಳೆದುಕೊಂಡ 5-6 ವರ್ಷದ ಮಕ್ಕಳನ್ನು ಕೇಳಿ ನೋಡಿ, ಅವು ಹೇಗೆ ಬದುಕುತ್ತಿದ್ದಾವೆಂದು. ದೌರ್ಭಾಗ್ಯದ ಸಂಗತಿಯೆಂದರೆ, ದೇಶಕ್ಕಾಗಿ ಮಡಿದವರ ಮನೆಗಳಿಗೆ ಹೋಗಿಬರುವುದಕ್ಕೂ ರಾಜಕಾರಣಿಗಳು ಮನಸ್ಸು ಮಾಡುವುದಿಲ್ಲ. ಅಮೆರಿಕದ ಸೈನಿಕನೊಬ್ಬ ಸತ್ತನೆಂದರೆ, ಖುದ್ದು ಆ ದೇಶದ ರಾಷ್ಟ್ರಪತಿ ಆತನ ಅಂತ್ಯ ಸಂಸ್ಕಾರಕ್ಕೆ ತೆರಳುತ್ತಾರೆ. ಅಲ್ಲವರು ನುಡಿಯುವ ಪ್ರತಿಯೊಂದು ಪದಗಳೂ ಹೃದಯಸ್ಪರ್ಷಿಯಾಗಿರುತ್ತವೆ. ಅವರ ಮಾತು ಕೇಳಿ ಜನರು ಕಂಬನಿಗರೆಯುತ್ತಾರೆ.
ಇಡೀ ದೇಶವೇ ಯೋಧನಿಗಾಗಿ ರೋಧಿಸುತ್ತದೆ. ಇನ್ನು ಅಲ್ಲಿನ ಮಾಧ್ಯಮಗಳೂ ಕೂಡ ಅಷ್ಟೇ ಜವಾಬ್ದಾರಿಯುತವಾಗಿ ವರ್ತಿಸುತ್ತವೆ. ಸೈನಿಕರ ಪರಿವಾರಗಳ ಆಕ್ರಂದನವನ್ನು ತೋರಿಸಿ ಟಿ.ಆರ್.ಪಿ ಹೆಚ್ಚು ಮಾಡಿಕೊಳ್ಳುವ ಹಪಾಹಪಿ ಅವುಗಳಿಗಿರುವುದಿಲ್ಲ. ಆದರೆ ನಮ್ಮ ದೇಶದ ಮಾಧ್ಯಮಗಳ ವರ್ತನೆ? ಅಬ್ಬಬ್ಬ! ಯೋಧರ ಪರಿವಾರದ ನೋವನ್ನು ಪದೇ ಪದೇ ತೋರಿಸಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತವವು. ದೇಶಭಕ್ತಿಯ ಅರ್ಥ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದಲ್ಲ ಎನ್ನುವುದು ಇವಕ್ಕೆ ಯಾರು ಹೇಳಬೇಕು?
ಭಾರತದಂತಹ ವಿಶಾಲ ಮತ್ತು ಮಹಾನ್ ದೇಶವನ್ನು ನೋಡಿ ಉಳಿದ ರಾಷ್ಟ್ರಗಳೀಗ ಹಲ್ಲುಕಿಸಿಯುತ್ತಾ, ಹಾಸ್ಯ ಮಾಡುತ್ತಿವೆ. ಪಾಕಿಸ್ತಾನಿಯರು ಭಾರತೀಯ ಸೈನಿಕರ ಮೇಲೆ ಅನವಶ್ಯಕವಾಗಿ ದಾಳಿ ಮಾಡುತ್ತಾರೆ. 'ನಿಮ್ಮ ರಕ್ಷಣಾ ಮಂತ್ರಿಯೇ ನಮ್ಮ ವಕಾಲತ್ತು ವಹಿಸುತ್ತಿದ್ದಾರೆ!' ಎಂದು ನಮ್ಮ ದೇಶವನ್ನವರು ಹಂಗಿಸುತ್ತಾರೆ.
ನಮ್ಮ ದೇಶಕ್ಕೆ ಯಾವುದಾದರೂ ವಿಷಯಕ್ಕೆ ಅತಿಹೆಚ್ಚು ಹಾನಿಯಾಗಿದೆಯೆಂದರೆ ಅದು ನಮ್ಮ ರಕ್ಷಣಾ ವಿಭಾಗಕ್ಕೆ ಮತ್ತು ನಮ್ಮ ಸೈನಿಕರ ಆತ್ಮ ಸಮ್ಮಾನಕ್ಕೆ. ಕೆಲವು ದಿನಗಳ ಹಿಂದೆ, ಸಿಬಿಐ ಮತ್ತು ಗುಪ್ತಚರ ದಳದ ನಡುವಿನ ಜಗಳ ಬೀದಿಗೆ ಬಂದಿತು. ಅದಾದ ನಂತರ ಗುಪ್ತಚರ ದಳದ ವರಿಷ್ಠ ಅಧಿಕಾರಿಯೊಬ್ಬರು ಬರೆದ ಪತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿ ವಿವಾದವೆಬ್ಬಿಸಿತು.
ಇನ್ನೊಬ್ಬ ಹಿರಿಯ ಅಧಿಕಾರಿಯ ಮೇಲೆ ಆರೋಪ ಮಾಡುತ್ತಾ '26/11 ಮುಂಬೈ ದಾಳಿಗೆ ಪಾಕಿಸ್ತಾನ ಕಾರಣವಲ್ಲ. ಇದೆಲ್ಲ ಭಾರತವೇ ನಡೆಸಿದ್ದು, ಎಂದು ಅವರು ಭಾವಿಸುತ್ತಾರೆ' ಎಂದು ಗುಪ್ತಚರದಳದ ಅಧಿಕಾರಿ ಬರೆದಿದ್ದರು. ಈ ವಿಷಯ ವಾರಗಟ್ಟಲೇ ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸುದ್ದಿಯಾಯಿತು. 'ಪಾಕಿಸ್ತಾನದ ಮೇಲೆ ಅನವಶ್ಯಕವಾಗಿ ಆರೋಪ ಮಾಡುವುದೇ ಭಾರತದ ಕೆಲಸ' ಎಂದು ಅಲ್ಲಿನ ಪತ್ರಿಕೆಗಳು ಬರೆದವು.
ಇವೆಲ್ಲ ವಿಷಯಗಳಿಂದ ಭಾರತೀಯ ಯೋಧರ ಮನಸ್ಸಿನ ಮೇಲೆ ಪರಿಣಾಮ ಆಗುವುದಿಲ್ಲವೆಂದು ಭಾವಿಸಿದ್ದೀರಾ? ಸರ್ಕಾರದ ಹಿರಿಯ ಮಂತ್ರಿಗಳು ಮತ್ತು ಅಧಿಕಾರಿಗಳು ಸೇನೆ ಮತ್ತು ಸುರಕ್ಷತೆಯ ಬಗ್ಗೆ ಈ ಪರಿ ನಿಷ್ಕಾಳಜಿ ತೋರಿಸುತ್ತಿದ್ದರೆ, ದೇಶದ ಭದ್ರತೆ ದುರ್ಬಲವಾಗುವುದಿಲ್ಲವೇ? ಸೈನಿಕರ ಮನೋಬಲ ಕುಗ್ಗುವುದಿಲ್ಲವೇ?
ಇವರು ಭಾರತದ ರಕ್ಷಣಾ ಮಂತ್ರಿಗಳೋ ಅಥವಾ ಪಾಕಿಸ್ತಾನದ ರಕ್ಷಣಾ ಮಂತ್ರಿಗಳೋ ಎಂದು ಜನರು ಆ್ಯಂಟನಿಯವರತ್ತ ನೋಡುತ್ತಿದ್ದಾರೆ. ಹಾಗೆ ನೋಡಿದರೆ ಆ್ಯಂಟನಿ ಒಳ್ಳೆಯ ವ್ಯಕ್ತಿಯೇ, ಆದರೆ ಶತ್ರುಗಳ ಜೊತೆಕಠಿಣವಾಗಿ ನಡೆದುಕೊಳ್ಳುವುದನ್ನು ಮೊದಲು ಅವರು ಕಲಿಯಬೇಕಿದೆ.
- ತರುಣ್ ವಿಜಯ್,
ಅಂಕಣಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

