ನಮಗೂ ಲೀ ಅವರಂಥ ಪ್ರಧಾನಿ ಬರಲಿ!

ಮೊನ್ನೆ 'ನೂರೆಂಟು ನೋಟ' ಅಂಕಣದಲ್ಲಿ ಸಿಂಗಾಪುರ ಪ್ರಧಾನಿ ಲೀ ಅವರು ತಮ್ಮ ...
Updated on: 

ಮೊನ್ನೆ 'ನೂರೆಂಟು ನೋಟ' ಅಂಕಣದಲ್ಲಿ ಸಿಂಗಾಪುರ ಪ್ರಧಾನಿ ಲೀ ಅವರು ತಮ್ಮ ದೇಶದ ಸ್ವಾತಂತ್ರ್ಯ ದಿನೋತ್ಸವದಂದು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ್ದೆನಷ್ಟೆ. ಆ ಭಾಷಣವನ್ನು ಮೆಚ್ಚಿ ಹಲವು ಓದುಗರು ಪ್ರತಿಕ್ರಿಯಿಸಿದ್ದಾರೆ. ಗಮನಾರ್ಹ ಸಂಗತಿಯೇನೆಂದರೆ ಅದೇ ದಿನ ಅಂದರೆ ಅಂಕಣ ಪ್ರಕಟವಾದದ್ದು ಆಗಸ್ಟ್ 15ರಂದು ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಭಾಷಣ ಕೇಳಿ ಅವರೆಲ್ಲ ಪ್ರತಿಕ್ರಿಯಿಸಿದ್ದರು.
ನಮ್ಮ ಪ್ರಧಾನಿ ಗ್ರೇಟ್ ಬೋರ್. ಅವರು ಮಾತುಗಾರರಲ್ಲ, ಅವರ ಮಾತಿನಲ್ಲಿ ಸತ್ವವೇ ಇರುವುದಿಲ್ಲ. ಪ್ರಧಾನಿಯೊಬ್ಬ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲಿಂದ ಮಾತಿಗೆ ನಿಂತರೆ ರೋಮಾಂಚನವಾಗಬೇಕು. ನೆಹರು, ಇಂದಿರಾಗಾಂಧಿ ಅವರ ಭಾಷಣವನ್ನು ನಾವು ರೇಡಿಯೋದಲ್ಲಿ ಆಲಿಸುತ್ತಿದ್ದರೆ ನಿಜಕ್ಕೂ ಪುಳಕಗೊಳ್ಳುತ್ತಿದ್ದೆವು. ಮೊದಲ ಎರಡು ವರ್ಷ ವಾಜಪೇಯಿ ಭಾಷಣದಲ್ಲಿ ಸಹ ಜೋಶ್ ಇತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಡಾ. ಸಿಂಗ್ ಅವರ ಕೆಂಪುಕೋಟೆ ಭಾಷಣ ನ್ಯಾಷನಲ್ ಬೋರ್! ಯಾರೋ ಬರೆದು ಕೊಟ್ಟ ಒಂದಷ್ಟು ಪುಟಗಳನ್ನು ಅವರು ಓದಿ ಒಪ್ಪಿಸುತ್ತಾರೆ. ಅವರ ದನಿಯಲ್ಲಿ ತುಸುವೂ ಏರಿಳಿತ ಇರುವುದಿಲ್ಲ. ಭಾವನಾರಹಿತವಾಗಿ, ಸಂವೇದನಾರಹಿತವಾಗಿ ಓದುತ್ತಾ ಹೋಗುತ್ತಾರೆ. ಅವರು ತಮ್ಮ ಮಾತಿನಿಂದ ಯಾರನ್ನೂ ತಟ್ಟುವುದಿಲ್ಲ, ಯಾರನ್ನೂ ಪ್ರಭಾವಿಸುವುದಿಲ್ಲ. ಅವರ ಮಾತಿನಿಂದ ಪ್ರೇರಣೆ ಪಡೆದವರಿದ್ದರೆ, ದಯವಿಟ್ಟು ಕೈ ಎತ್ತಬೇಕು. ಅವರ ಭಾಷಣವನ್ನು ರೆಕಾರ್ಡ್ ಮಾಡಿಕೊಂಡು ಪುನಃ ಅವರೇ ಅದನ್ನು ವೀಕ್ಷಿಸಲು ಕುಳಿತಾಗ ಆಕಳಿಸದಿದ್ದರೆ ಕೇಳಿ. ಪ್ರಧಾನಿಯವರ ಮಾತು ನಾಲ್ಕು ಮಂದಿ ನಡುವೆ ಚರ್ಚೆಗೂ ವಸ್ತುವಾಗುವುದಿಲ್ಲ. ಹತ್ತು ವರ್ಷ ಕಳೆದು ಬಿಟ್ಟರು. ನೆಹರು, ಇಂದಿರಾ ತರುವಾಯ ಅತಿ ಹೆಚ್ಚಿನ ಸಲ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತಾಡಿದ ಪ್ರಧಾನಿಯವರ ಸಾಲಿಗೆ ಡಾ. ಸಿಂಗ್ ಸೇರಿಬಿಟ್ಟರು! ಇದೂ ಸಹ ಸ್ವತಂತ್ರ ಭಾರತದ ಅಚ್ಚರಿ ಹಾಗೂ ವಿಪರ್ಯಾಸಗಳಲ್ಲೊಂದು. ದೇಶದ ಜನತೆಯೊಂದಿಗೆ ಡಾ. ಸಿಂಗ್ ್ಠಜಟಛಡಿಜ ಆಗಲೇ ಇಲ್ಲ. ಜನರಿಗೆ ತಟ್ಟುವಂಥ ಮಾತುಗಳನ್ನು ಹೇಳಲೇ ಇಲ್ಲ.
ಲೀ ಭಾಷಣ ಯಾಕೆ ಪ್ರಸ್ತುತವಾಗುತ್ತದೆ ಹಾಗೂ ಯಾಕೆ ಮುಖ್ಯವೆನಿಸುತ್ತದೆ ಅಂದ್ರೆ ಅವರು ದೇಶದ ಪ್ರತಿ ಪ್ರಜೆಯೊಂದಿಗೆ ತಮ್ಮನ್ನು ್ಠಜಟಛಡಿಜ ಮಾಡಿಕೊಂಡದ್ದು. ಸಿಂಗಾಪುರ ಪುಟ್ಟ ದೇಶವಿದ್ದಿರಬಹುದು, ಅದನ್ನು ನಮ್ಮ ದೇಶದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲದಿರಬಹುದು, ಆದರೂ ದೇಶದ ಪ್ರಧಾನಿಯಾದವನು ಸ್ವಾತಂತ್ರ್ಯ ದಿನದಂದು ಈ ವರ್ಷ ಎಷ್ಟು ಹೊಸ ಬಸ್‌ಗಳನ್ನು ರೋಡಿಗೆ ಬಿಟ್ಟಿದ್ದೇವೆ, ಎಷ್ಟು ಹೊಸ ಬಸ್ ರೂಟ್‌ಗಳನ್ನು ಆರಂಭಿಸಿದ್ದೇವೆ, ಈ ವರ್ಷ ಎಷ್ಟು ಹೊಸ ರೈಲುಗಳನ್ನು ಸೇರಿಸುತ್ತೇವೆ ಎಂದು ಹೇಳಿದರೆ, ಬಸ್ಸು, ರೈಲಿನಲ್ಲಿ ಓಡಾಡುವ ಸಾಮಾನ್ಯ ಜನರಿಗೆ ಎಷ್ಟು ಖುಷಿಯಾಗಲಿಕ್ಕಿಲ್ಲ ಹೇಳಿ. 'ಸಿಂಗಾಪುರದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನ್ನದೇ ಆದ ಮನೆ ಹೊಂದಿರಬೇಕು, ಈ ವರ್ಷ ಮನೆಗಾಗಿ ಕಾಯುತ್ತಿರುವವರ ಕ್ಯೂ ಕಿರಿದಾಗಿದೆ. ವಿದೇಶಿಯರು ಸಿಂಗಾಪುರಕ್ಕೆ ಬರುತ್ತಿದ್ದಾರೆ, ಬರಲಿ. ಬೇಡ ಅಂದರೆ ನಮ್ಮಲ್ಲಿ ಬಂಡವಾಳ ಹೂಡಿಕೆಗೆ ತೊಂದರೆಯಾಗಬಹುದು. ಆದರೆ ಸಿಂಗಾಪುರ ಐಡೆಂಟಿಟಿಯನ್ನು ಬಿಟ್ಟು ಕೊಡುವುದು ಬೇಡ. ಜಾಗತಿಕರಣದ ಭರಾಟೆಯಲ್ಲಿ ನಮ್ಮತನ ಕಳೆದುಕೊಳ್ಳಬಾರದು. ವಿಶ್ವದಾದ್ಯಂತ ಬ್ರ್ಯಾಂಡ್ ಸಿಂಗಾಪುರವನ್ನು ಪ್ರಚಾರ ಮಾಡೋಣ. ಜನ ನಮ್ಮನ್ನು ನೋಡಿ ಬೆರಗಾಗಬೇಕು, ಆ ರೀತಿಯ ದೇಶ ಕಟ್ಟೋಣ. ನಮ್ಮ ಸಿಂಗಾಪುರಿಗರು ವಿಶ್ವದ ಯಾವುದೇ ದೇಶಕ್ಕೆ ಹೋಗಲಿ, ಅವರಿಗೆ ಮರ್ಯಾದೆ ಸಿಗಬೇಕು. ರಾಜಾತಿಥ್ಯ ಸಿಗಬೇಕು. ಅಂಥ ಸಿಂಗಾಪುರವನ್ನು ಕಟ್ಟೋಣ. ನೀವು ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾದರೆ ಮಾತ್ರ ಸಿಂಗಾಪುರ ಯಶಸ್ವಿಯಾಗುತ್ತದೆ. ನೀವು ಉದ್ಧಾರವಾಗದೇ, ದೇಶವನ್ನು ಉದ್ಧಾರ ಮಾಡಲಾರಿರಿ. ಮೊದಲು ನೀವು ಉದ್ಧಾರವಾಗಿ, ಸಾಧನೆ ಮಾಡಿ. ಅದರ ಫಲ ದೇಶಕ್ಕೆ ಸಿಕ್ಕೇ ಸಿಗುತ್ತದೆ. ಅಂಥ ವಾತಾವರಣವನ್ನು ನಮ್ಮ ಸರ್ಕಾರ ನಿಮಗೆ ಒದಗಿಸಿಕೊಡುತ್ತದೆ' ಎಂದು ಪ್ರಧಾನಿ ಹೇಳಿದರೆ ಅಲ್ಲಿನ ಜನರಿಗೆ ಎಷ್ಟು ಸಮಾಧಾನ, ಎಷ್ಟು ನೆಮ್ಮದಿ! ಒಬ್ಬ ಪ್ರಧಾನಿ ತನ್ನ ದೇಶವಾಸಿಗಳೊಂದಿಗೆ ್ಠಜಟಛಡಿಜ ಆಗುವ ಪರಿ ಅಂಥದು. ನಮ್ಮ ದೇಶದ ಪ್ರಧಾನಿ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸ್ವತಃ ಪ್ರಧಾನಿಯೂ ನಂಬುವುದಿಲ್ಲ. ಮೊದಲ ಸ್ವಾತಂತ್ರ್ಯ ದಿನಾಚರಣೆಯಿಂದ ಅದೇ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ.
  ನಮಗೂ ಲೀ ಅವರಂಥ ಪ್ರಧಾನಿ ಬರಲಿ.

ಮನಸ್ಸಿಗೆ ಆಗುವ ಗಾಯಕ್ಕೆ ಮದ್ದಿಲ್ಲ

ಅವನು ಅಪ್ಪನ ಮುದ್ದಿನ ಮಗ. ಒಬ್ಬನೇ ಮಗ ಎಂಬ ಕಾರಣಕ್ಕೆ ಪೋಷಕರ ಪ್ರೀತಿ ಅವನಿಗೆ ದಂಡಿಯಾಗಿ ಸಿಕ್ಕಿತ್ತು. ತುಂಬಾ ಮುದ್ದಿನಿಂದ ಬೆಳೆದ ಕಾರಣಕ್ಕೇ ಇರಬೇಕು: ಆ ಮಗುವಿಗೆ ತುಂಬ ಬೇಗ ಸಿಟ್ಟು ಬರುತ್ತಿತ್ತು. ಆ ಸಂದರ್ಭದಲ್ಲಿ ವಿಪರೀತ ಅನಾಹುತಗಳಾಗುತ್ತಿದ್ದವು. 18 ವರ್ಷ ದಾಟಿದ ನಂತರವೂ ತನ್ನ ಸಿಟ್ಟು ಕಂಟ್ರೋಲ್‌ಗೆ ಬರುತ್ತಿಲ್ಲ ಎಂಬುದು ಅರ್ಥವಾದಾಗ ಆ ಮಗನೇ ಕಂಗಾಲಾದ. ಕಡೆಗೊಮ್ಮೆ ತಂದೆಯ ಎದುರು ನಿಂತು ಸಂಕೋಚದಿಂದ ಹೇಳಿದ: 'ಅಪ್ಪಾ, ದಿಢೀರನೆ ಬರುವ ಸಿಟ್ಟಿನಿಂದ ನಾನು ಮಾಡಬಾರದ ತಪ್ಪುಗಳನ್ನೆಲ್ಲ ಮಾಡುತ್ತಿದ್ದೇನೆ. ಸಿಟ್ಟನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆಂದು ದಯವಿಟ್ಟು ತಿಳಿಸಿ...'
ಮಗನನ್ನೇ ಒಮ್ಮೆ ಅಪ್ಯಾಯತೆಯಿಂದ ನೋಡಿದ ತಂದೆ ಹೇಳಿದ: 'ಮಗೂ, ಒಂದು ಕೆಲಸ ಮಾಡು. ನಾಳೆಯಿಂದ, ನಿನಗೆ ಸಿಟ್ಟು ಬರುತ್ತದಲ್ಲ, ಆಗ ಎದುರಿಗಿರುವ ಗೋಡೆಗೆ ಒಂದು ಮೊಳೆ ಹೊಡಿ. ನಿನಗೆ ಸಿಟ್ಟು ಬಂದಾಗಲೆಲ್ಲ ಒಂದೊಂದು ಮೊಳೆ ಹೊಡೆಯುತ್ತಲೇ ಇರು.' ಹೀಗೆ ಹೇಳಿದ ತಂದೆ, ಮೊಳೆಗಳಿಂದ ತುಂಬಿದ ಬ್ಯಾಗ್ ಹಾಗೂ ಒಂದು ಸುತ್ತಿಗೆಯನ್ನು ಮಗನ ಕೈಲಿಟ್ಟು ಹೋದ.
ಮೊದಲ ದಿನ 38 ಬಾರಿ ಮಗನಿಗೆ ಸಿಟ್ಟು ಬಂತು. ಪರಿಣಾಮ, ಗೋಡೆಯ ಮೇಲೆ 38 ಮೊಳೆಗಳು ಸ್ಥಾನ ಪಡೆದವು. ಎರಡನೇ ದಿನ 36 ಬಾರಿ ಸಿಟ್ಟು ಬಂತು. ಮಗ ಅವತ್ತು 36 ಮೊಳೆಗಳನ್ನು ಗೋಡೆಗೆ ಬಡಿದ. ಮೂರನೇ ದಿನ 30 ಬಾರಿ, ನಾಲ್ಕನೇ ದಿನ 28 ಬಾರಿ, ಐದನೇ ದಿನ 26 ಬಾರಿ... ಹೀಗೆ ಸಿಟ್ಟಾಗುವ ಸಂದರ್ಭ ಕಡಿಮೆಯಾಗುತ್ತಾ ಹೋಯಿತು. ಈ ಸಂದರ್ಭದಲ್ಲಿ, ವಿನಾಕಾರಣ ಸಿಟ್ಟಿಗೆದ್ದು ಗೋಡೆಗೆ ಮೊಳೆ ಹೊಡೆದು ಕೈ ನೋಯಿಸಿಕೊಳ್ಳುವುದರ ಬದಲು, ಸಿಟ್ಟಿಗೇಳದೆ ತೆಪ್ಪಗಿರುವುದೇ ಒಳ್ಳೆಯದು ಎಂದು ಮಗನಿಗೂ ಅನಿಸಿತ್ತು. ಎರಡು ತಿಂಗಳು ಹೀಗೆ ಮಾಡಿದ ನಂತರ, ಕಡೆಗೊಂದು ದಿನ ಅವನಿಗೆ ಸಿಟ್ಟು ಬರಲೇ ಇಲ್ಲ. ತಕ್ಷಣವೇ ಆತ ತಂದೆಯ ಬಳಿಗೆ ಓಡಿ ಹೋಗಿ-'ಅಪ್ಪಾ, ಇವತ್ತು ಇಡೀ ದಿನ ನನಗೆ ಸಿಟ್ಟೇ ಬರಲಿಲ್ಲ. ನಾನು ನಿಜವಾಗಿಯೂ ಹೊಸ ಮನುಷ್ಯನಾದೆ' ಎಂದ.
ಆಗ ತಂದೆ ಹೇಳಿದ: 'ಮಗೂ, ಈಗ ನೀನು ಮಾಡಲೇಬೇಕಾದ ಒಂದು ಬಹುಮುಖ್ಯ ಕೆಲಸವಿದೆ. ಏನೆಂದರೆ-ಈವರೆಗೂ ಗೋಡೆಗೆ ಹೊಡೆದಿದ್ದೀಯಲ್ಲ, ಅಷ್ಟೂ ಮೊಳೆಗಳನ್ನು ಬಿಚ್ಚಿಡು...'. ಈ ಕೆಲಸಕ್ಕೆ ಹದಿನೈದು ದಿನಗಳು ಬೇಕಾದವು. ಎಲ್ಲ ಮೊಳೆಗಳನ್ನು ಕಿತ್ತ ನಂತರ ನೋಡಿದರೆ, ಗೋಡೆಯ ತುಂಬ ತೂತುಗಳು ಎದ್ದು ಕಾಣುತ್ತಿದ್ದವು. ಗೋಡೆ ವಿಕಾರವಾಗಿ ಕಾಣುತ್ತಿತ್ತು. ಅದನ್ನೇ ಶಾಕ್‌ನಿಂದ ನೋಡುತ್ತಾ ನಿಂತು ಬಿಟ್ಟಿದ್ದ ಮಗನಿಗೆ ತಂದೆ ಹೇಳಿದ: 'ನೋಡಿದೆಯಾ, ಇದೆಲ್ಲಾ ಸಿಟ್ಟಿನ ಕೈಗೆ ನೀನು ಬುದ್ಧಿ ಕೊಟ್ಟಿದ್ದರಿಂದ ಆದ ಅನಾಹುತ. ಸಿಟ್ಟಿನ ಕಾರಣಕ್ಕೆ ನಿನ್ನಿಂದ ಕೆಟ್ಟ ಮಾತುಗಳು ಹೊರಬರುತ್ತವೆ. ನಿನಗಿಂತ ದುರ್ಬಲರ ಮೇಲೆ ಬಲಪ್ರಯೋಗವೂ ನಡೆದು ಬಿಡುತ್ತದೆ. ಅಂಥ ಅವಿವೇಕದ ಕೆಲಸದಿಂದ ಎದುರಾಳಿಯ ಮನಸ್ಸಿಗೆ ಘಾಸಿಯಾಗುತ್ತದೆ, ಗಾಯವಾಗುತ್ತದೆ. ಅದು ಉಳಿಸುವ ಕಲೆ ಎಂಥಾದ್ದು ಗೊತ್ತಾ? ಈಗ ಗೋಡೆಯ ಮೇಲೆ ಮೊಳೆಗಳಿಂದ ಉಂಟಾದ ವಿರೂಪ ಕಾಣಿಸುತ್ತಿದೆಯಲ್ಲ? ಅಂಥ, ಅಳಿಸಲಾರದ ಕಲೆಗಳು ಉಳಿದು ಹೋಗುತ್ತವೆ. ಅದೆಷ್ಟೋ ಹೊತ್ತಿನ ನಂತರ ನಿನಗೆ ಪಶ್ಚಾತ್ತಾಪವಾಗಬಹುದು. ತಪ್ಪು ಮಾಡಿದೆ ಅನ್ನಿಸಬಹುದು. ಅದೇ ಕಾರಣಕ್ಕೆ ನೀನು ಎದುರಾಳಿಯ ಕ್ಷಮೆ ಯಾಚಿಸಬಹುದು. ಆದರೆ ಹೀಗೆಲ್ಲಾ ಮಾಡುವುದರಿಂದ, ಮನಸ್ಸಿಗೆ ಆದ ಗಾಯವನ್ನು ವಾಸಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಪರಿತಪಿಸುವ ಬದಲು, ಶಾಂತ ರೀತಿಯಿಂದ ವರ್ತಿಸಿ ಸಭ್ಯ ಅನ್ನಿಸಿಕೊಳ್ಳುವುದೇ ಮೇಲು...
ತಂದೆಯ ಮಾತು ಹಾಗೂ ಅದರಲ್ಲಿರುವ ನೀತಿ ಮಗನಿಗೆ ಅರ್ಥವಾಯಿತು. ಆತ ಮುಗುಳ್ನಕ್ಕು- ನಾಳೆಯಿಂದ ನಾನು ಸಿಟ್ಟು ಮಾಡ್ಕೊಳಲ್ಲಾ, ಪ್ರಾಮಿಸ್... ಅಂದ.

ಪ್ರಪಂಚದ ಆರ್ಥಿಕತೆಯ ಚಿತ್ರಣ

ಆ ಊರು ಸಾಲದಿಂದ ಸೊರಗಿತ್ತು. ಅಲ್ಲಿನ ಏಕಮಾತ್ರ ಹೊಟೆಲ್ ಒಂದಕ್ಕೆ ಒಂದು ದಿನ ಯಾತ್ರಿಕನೊಬ್ಬ ಬಂದ. ಕಿಸೆಯಿಂದ 500 ರುಪಾಯಿಯ ನೋಟೊಂದನ್ನು ತೆಗೆದ ಆ ಯಾತ್ರಿಕ, ಅದನ್ನು ಹೋಟೆಲ್ ಮಾಲೀಕನ ಟೇಬಲ್ ಮೇಲಿಟ್ಟು ರೂಮಿನ ತಲಾಷಿ ಮಾಡಲು ಹೋದ.
ಹೋಟೆಲ್ ಮಾಲೀಕ ಆ ನೋಟನ್ನು ಕೂಡಲೇ ತೆಗೆದುಕೊಂಡು ಮಾಂಸದಂಗಡಿಯವನ ಬಳಿ ಓಡಿ ತಾನು ಮಾಡಿದ್ದ ಸಾಲವನ್ನು ತೀರಿಸಿದ.
ಆ ಮಾಂಸದಂಗಡಿಯವನು ರೈತನೊಬ್ಬನ ಬಳಿ ಸಾಲ ಮಾಡಿ ಕುರಿ ಖರೀದಿಸಿದ್ದ. ಹಾಗಾಗೇ ಆ 500 ರುಪಾಯಿ ನೋಟನ್ನು ಆ ರೈತನಿಗೆ ಕೊಟ್ಟು ಆತನೂ ಸಾಲದಿಂದ ಮುಕ್ತನಾದ. ಆ ರೈತ ಓಡಿಹೋಗಿ, ತನಗೆ ಕುರಿ ಮಾರಿದ್ದ ಆ ಊರಿನ ದೊಡ್ಡ ವ್ಯಕ್ತಿಗೆ ಅದೇ 500 ರುಪಾಯಿ ಹಣ ಕೊಟ್ಟ. ಆ ಶ್ರೀಮಂತ ತನಗೆ ಕಷ್ಟ ಕಾಲದಲ್ಲಿ ಸಾಲದ ಮೇಲೆ ಸೇವೆ ಮಾಡಿದ ವೇಶ್ಯೆಯೊಬ್ಬಳಿಗೆ ಆ ನೋಟು ಕೊಟ್ಟು ನಗೆಬೀರಿದ. ಕೂಡಲೇ ಆ ವೇಶ್ಯೆ ತನಗೆ ರೂಮು ಕೊಟ್ಟಿದ್ದ ಹೊಟೆಲ್ ಮಾಲೀಕನ ಬಳಿ ತೆರಳಿ ಆತನಿಗೆ 500 ರುಪಾಯಿ ಕೊಟ್ಟಳು!
 ಹೋಟೆಲ್ ಮಾಲೀಕ ತನ್ನ ಬಳಿ ಹಿಂದಿರುಗಿ ಬಂದ ಅದೇ 500 ರುಪಾಯಿಯ ನೋಟನ್ನು ಇನ್ನೇನು ಜೇಬಿಗಿಳಿಸುವುದರಲ್ಲಿದ್ದ, ಅಷ್ಟರಲ್ಲೇ ಆ ಯಾತ್ರಿಕ ತನಗೆ ಯಾವ ರೂಮೂ ಇಷ್ಟವಾಗಲಿಲ್ಲ ಎಂದು ಹೇಳಿ ತನ್ನ ಹಣವನ್ನು ವಾಪಸ್ ತೆಗೆದುಕೊಂಡ!
ಈಗ ಆ ಊರಿನಲ್ಲಿ ಸಾಲಗಾರರಿರಲಿಲ್ಲ. ಎಲ್ಲರೂ ತಮ್ಮ ಸಾಲ ತೀರಿಸಿದ್ದರು. ಈಗವರೆಲ್ಲ ಆಶಾವಾದದಿಂದ ಭವಿಷ್ಯದತ್ತ ನೋಡುತ್ತಿದ್ದರು. (ಪ್ರಪಂಚದಲ್ಲಿ ಇಂದು ವ್ಯವಹಾರ ನಡೆಯುತ್ತಿರುವುದು ಹೀಗೆಯೇ!)


-ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com