ಉರ್ದು ಅಕಾಡೆಮಿ ಅಧ್ಯಕ್ಷರಾಗುವ ಅರ್ಹತೆ ಖಮರುಲ್ರಿಗಿದೆಯೇ?
ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾಗಿ ರಾಜ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ಯಮಗಳು, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನು ಓದುತ್ತಿದ್ದಂತೆ ಸಾಂಸ್ಕೃತಿಕ ಲೋಕದ ಹಲವರು ದಂಗಾಗಿ ಕುಳಿತಿದ್ದಾರೆ. ಇದೇ ಮೊದಲ ಬಾರಿಗೆ ಉರ್ದು ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಈ ರೀತಿಯ ಅವಘಡವೊಂದು ಸಂಭವಿಸಿದೆ. ಸಾಹಿತ್ಯದ ಗಂಧಗಾಳಿ ಇಲ್ಲದ, ಅಕ್ಷರ ಲೋಕಕ್ಕೆ ಏನೂ ನೀಡದ ರಾಜಕೀಯ ವ್ಯಕ್ತಿಯೊಬ್ಬರು ಇದರ ಅಧ್ಯಕ್ಷರಾಗಿ ಬಂದು ಕುಳಿತಿದ್ದಾರೆ. ಉರ್ದು ಅಕಾಡೆಮಿ ಆರಂಭವಾದ 1977ರ ಜೂನ್ 1ರಿಂದ ಇದುವರೆಗೆ ಯಾವತ್ತೂ ಸಹ ಸಚಿವರೊಬ್ಬರು ಉರ್ದು ಅಕಾಡೆಮಿಯ ಅಧ್ಯಕ್ಷ ಪೀಠದಲ್ಲಿ ಕುಳಿತ ಉದಾಹರಣೆಯೇ ಇಲ್ಲ.
ಒಂದು ಕಡೆ ಸಾಂಸ್ಕೃತಿಕ ಲೋಕದ ಸಮರ್ಪಕ ನಿರ್ವಹಣೆಗೆ ನೀತಿಯೊಂದನ್ನು ರೂಪಿಸಲು ಹೊರಟಿರುವ ರಾಜ್ಯ ಸರ್ಕಾರ ಇನ್ನೊಂದೆಡೆ ಅದಕ್ಕೆ ಮುಂಚಿತವಾಗಿಯೇ ತಾನು ರೂಪಿಸುವ ನೀತಿ ಯಾವ ರೀತಿ ಇರುತ್ತದೆಂದು ಹೇಳಲು ಈ ಸ್ಯಾಂಪಲ್ ನೀಡಿದಂತಿದೆ. ವಾಸ್ತವವಾಗಿ ಇಂತಹ ಅವಘಡಕ್ಕೆ ಚಾಲನೆ ಸಿಕ್ಕಿದ್ದೇ ಹಿಂದಿನ ಸರ್ಕಾರದಲ್ಲಿ. ಕಳೆದ ಮೂರುವರೆ ದಶಕದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಉರ್ದು ಅಕಾಡೆಮಿಯನ್ನು ಹೊರತಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ತಂದಿದ್ದೇ ಯಡಿಯೂರಪ್ಪ ಅವರ ಸರ್ಕಾರ. ಅದರ ನೇರ ಫಲ ಈಗ ಅದೇ ಇಲಾಖೆ ಸಚಿವರೇ ಅಧ್ಯಕ್ಷರಾಗುವ ಮೂಲಕ ಸಿಕ್ಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಅಕಾಡೆಮಿಗಳಿಗೆ ಹಿಂದಿನ ಸರ್ಕಾರದ ಸಂದರ್ಭದಲ್ಲಿ ನೇಮಕಾತಿಗಳು ರಾಜಕೀಯವಾಗಿ ನಡೆದಿವೆ ಎಂದು ಹೇಳಿ ಅವರಿಂದ ರಾಜಿನಾಮೆ ಪಡೆದಿತ್ತು. ಕೆಲವು ರಾಜಕೀಯ ನೇಮಕಗಳು ಇದ್ದರೂ ಸಹ ಬಹಳಷ್ಟು ನೇಮಕಗಳು ಅದನ್ನು ಹೊರತುಪಡಿಸಿಯೇ ನಡೆದಿದ್ದವು. ಬಿಜೆಪಿ ಸರ್ಕಾರವಿದ್ದ ಮಾತ್ರಕ್ಕೆ ಅಲ್ಲಿದ್ದವರನ್ನೆಲ್ಲಾ ಬಿಜೆಪಿಯವರು ಎಂದು ಹೇಳಲು ಸಾಧ್ಯವಿಲ್ಲ.
ಹೊಸ ಸರ್ಕಾರ ಬಂದ ನಂತರ ಅಕಾಡೆಮಿ ಅಧ್ಯಕ್ಷ ರಾಜಿನಾಮೆ ಕೇಳುವುದು-ಪಡೆಯುವುದು ಸಂಪ್ರದಾಯದಂತೆ ಆಗಿಹೋಗಿದೆ. ಈ ಬಾರಿ ಕೆಲವರು ಪ್ರತಿರೋಧ ತೋರಿದರಾದರೂ ಕೊನೆಗೆ ಎಲ್ಲರೂ ರಾಜೀನಾಮೆ ಕೊಟ್ಟರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದೇನು? ಸಚಿವರನ್ನೇ ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷರನ್ನಾಗಿ ಕೂರಿಸಿದರು. ಇದು ರಾಜಕೀಯ ನೇಮಕಾತಿ ಅಲ್ಲವೇ? ಈ ಹಿಂದೆ ಅನುವಾದ ಸಾಹಿತ್ಯ ಅಕಾಡೆಮಿಗೆ ವಸಂತ ಕುಷ್ಟಗಿ ಹಾಗೂ ರಂಜಾನ್ ದರ್ಗಾ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇವರು ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಿದವರೇ ಅಲ್ಲ. ಆದರೆ ಇವರು ಸಾಹಿತಿಗಳು ಎಂಬ ಕನಿಷ್ಠ ಸಮಾಧಾನವಾದರೂ ಇತ್ತು. ಆದರೆ ಈಗ ನೇರವಾಗಿ ಪರಿಪೂರ್ಣ ರಾಜಕೀಯ ವ್ಯಕ್ತಿಯನ್ನೇ ಸರ್ಕಾರ ಅಕಾಡೆಮಿಗೆ ತಂದು ಕೂರಿಸಿದೆ.
ವಿಚಿತ್ರವೆಂದರೆ ಕನ್ನಡ ನಾಡಿನ ಸಾಂಸ್ಕೃತಿಕ ಲೋಕವು ಉರ್ದು ಅಕಾಡೆಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೇರ್ಪಡಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿಸಿದಾಗಲೂ ಸುಮ್ಮನಿತ್ತು. ಈಗ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಿದಾಗಲೂ ಸುಮ್ಮನಿದೆ. ಉರ್ದು ಸಾಹಿತ್ಯವನ್ನು ಮುಖ್ಯವಾಹಿನಿ ಸಾಹಿತ್ಯ ಎಂದು ನಂಬಲು ಅವರಿಗೆ ಕಷ್ಟವಾಗಿರುವುದರಿಂದಲೇ ಈ ಪರಿಸ್ಥಿತಿ ಉದ್ಭವಿಸಿರಬಹುದು. ಅಥವಾ ಇತರೆ ಅಕಾಡೆಮಿಗಳಿಗೆ ಇದೇ ರೀತಿ ನೇಮಕಾತಿ ಆದ ನಂತರ ಮಾತನಾಡೋಣ ಎಂದು ಕಾಯುತ್ತಿರಬಹುದು.
ಕನ್ನಡ ಮತ್ತು ಉರ್ದು ಭಾಷೆಯ ನಡುವೆ ಕೊಡುಕೊಳ್ಳುವ ಸಂಬಂಧ ಇವತ್ತಿನದಲ್ಲ. ಅರಬ್ಬಿ ಮೂಲದ ಎಷ್ಟೋ ಪದಗಳು ಇವತ್ತು ಕನ್ನಡದಲ್ಲಿ ಹಾಸುಹೊಕ್ಕಾಗಿವೆ. ಕನ್ನಡ ನಾಡಿನ ಆಧ್ಯಾತ್ಮ ಪರಂಪರೆಯೊಂದಿಗೆ ಸೇರಿ ಹೊಸ ಧರ್ಮವೇ ಉದಯಿಸಿದೆ. ಸೂಫಿ ಸಂತರ ಹಲವು ಕೇಂದ್ರಗಳು ನಾಡಿನ ಹಲವೆಡೆ ಕಾಣಸಿಗುತ್ತವೆ.ನಿಜಾಮರ ಆಡಳಿತವಿದ್ದ ಹೈದರಾಬಾದ್ ಕರ್ನಾಟಕದ ಆಡುಭಾಷೆಯನ್ನು ಕೇಳಿದರೆ ಸಾಕು, ಉರ್ದು ಭಾಷೆಯ ಪ್ರಭಾವ, ಸಾಹಿತ್ಯದ ಸೊಗಡು ಕಾಣಸಿಗುತ್ತದೆ. ಶಾಂತರಸರಂತಹ ಹಿರಿಯ ಕವಿಗಳು, ದೇವೇಂದ್ರ ಕುಮಾರ್ ಹಕಾರಿ ಅವರಂತಹ ಲೇಖಕರು ಉರ್ದು ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿ ಕನ್ನಡದಲ್ಲಿ ಬರೆದವರು. ಎರಡೂ ಸಾಹಿತ್ಯದ ಸಾರವನ್ನು ತೆರೆದಿಟ್ಟವರು. ಉರ್ದು ಮೂಲದ ಗಜಲ್ ಪರಂಪರೆ ಕನ್ನಡದಲ್ಲಿ ಬೆಳೆಯಲು ಶಾಂತರಸರು ಕಾರಣ. ಅದನ್ನು ಹಲವರು ಈಗ ಮುಂದುವರಿಸಿದ್ದಾರೆ.
ಉರ್ದು ಸಾಹಿತ್ಯ ಪರಂಪರೆಯ ಮಹತ್ವವನ್ನು ಮನಗಂಡ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಉರ್ದು ಅಕಾಡೆಮಿಯನ್ನು ಆರಂಭಿಸಿದರು. 1977ರಲ್ಲಿ ಉರ್ದು ಅಕಾಡೆಮಿ ಆರಂಭವಾದಾಗ ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲಹೆ ಕೊಡುವ ಸಮಿತಿ ಮಾತ್ರ ಆಗಿತ್ತು. ಮರುವರ್ಷ ಅವರ ಅವಧಿಯಲ್ಲಿಯೇ 1978ರಲ್ಲಿ ಈ ಅಕಾಡೆಮಿಯು ಸ್ವಾಯತ್ತ ಸಂಸ್ಥೆಯಾಯಿತು.
ಹಿಂದಿನ ಅಧ್ಯಕ್ಷರಾಗಿದ್ದ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಅವರ ಅವಧಿಯಲ್ಲಿ ಹಲವು ಮಹತ್ವದ ಕೆಲಸಗಳಾಗಿವೆ. ಸ್ವತಃ 50 ಕೃತಿಗಳನ್ನು ರಚಿಸಿರುವ ಇವರು ಕನ್ನಡ-ಉರ್ದು ಸಂಬಂಧದ ಬಗೆಗಿನ ಸಾಹಿತ್ಯ ಪ್ರಕಟಣೆಗೆ ಅವಕಾಶ ನೀಡಿದರು. ಇವರ ಅವಧಿಯಲ್ಲಿ ಕುವೆಂಪು ಸೇರಿದಂತೆ ಕನ್ನಡದ ಪ್ರಮುಖ ಲೇಖಕರ ಕವಿತೆಗಳು, ಕೃತಿಗಳು ಉರ್ದು ಭಾಷೆಗೆ ತರ್ಜುಮೆಯಾದವು. 800 ಶಾಲೆಗಳಲ್ಲಿ ಉರ್ದು ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಾದವು. 5 ಸಾಹಿತ್ಯ ಪತ್ರಿಕೆಗಳನ್ನು ಹೊರತಂದರು. ಕನಿಷ್ಠ ಇಂತಹ ಕಾರ್ಯಕ್ರಮಗಳನ್ನಾದರೂ ಮುಂದುವರಿಸಲು ಸಚಿವ ಖಮರುಲ್ ಇಸ್ಲಾಂ ಅವರಿಗೆ ಸಾಧ್ಯವೇ? ಅಕಾಡೆಮಿ ಹೊರತರುವ ಸಾಹಿತ್ಯ ಪತ್ರಿಕೆಗೆ ಒಂದು ಅತ್ಯುತ್ತಮ ಲೇಖನವನ್ನು ಅವರು ಬರೆದುಕೊಡಬಲ್ಲರೇ? ಪೌರಾಡಳಿತ ಇಲಾಖೆ ಸೇರಿದಂತೆ ಐದು ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊತ್ತಿರುವ ಸಚಿವರು ಅಕಾಡೆಮಿಗಾಗಿ ನಿಯಮಿತವಾಗಿ ಸಮಯ ಮೀಸಲು ಇಡಬಲ್ಲರೇ?
ಸಚಿವ ಖಮರುಲ್ ಇಸ್ಲಾಂ ಅವರೇ ಅಧ್ಯಕ್ಷ ಪೀಠದಲ್ಲಿ ಬಂದು ಕುಳಿತಿರುವುದನ್ನು ನೋಡಿದರೆ ಉರ್ದು ಅಕಾಡೆಮಿಗೆ ಕೋಟಿಗಟ್ಟಲೆ ಹಣ ಬಂದು ಬೀಳುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಬಹು ವರ್ಷಗಳ ಕಾಲ ಈ ಅಕಾಡೆಮಿಗೆ ಇತರೆ ಅಕಾಡೆಮಿಗಳಂತೆ 20 ಲಕ್ಷ ರು. ಸಿಗುತ್ತಿತ್ತು. ನಂತರ 50 ಲಕ್ಷ ರು.ಗೆ ಏರಿತು. ಒಮ್ಮೆ 77 ಲಕ್ಷ ರು. ಸಿಕ್ಕಿದ್ದೇ ದೊಡ್ಡದು.
ಉರ್ದು ಅಕಾಡೆಮಿ ಅಧ್ಯಕ್ಷರಾಗುವ ಅರ್ಹತೆ ಇರುವವರು ಕರ್ನಾಟಕದಲ್ಲಿ ಇಲ್ಲವೆಂದೇನೂ ಇಲ್ಲ. ದೇಶವಿದೇಶದಲ್ಲಿ ಹೆಸರು ಮಾಡಿದ ಉರ್ದು ಸಾಹಿತಿಗಳಿದ್ದಾರೆ. ಅಲ್ಲದೇ ಉರ್ದು ಸಾಹಿತ್ಯದಲ್ಲಿ ಕೃಷಿ ಮಾಡಿರುವ ಮುಸ್ಲೀಮೇತರ ಲೇಖಕರೂ ಇದ್ದಾರೆ. ಇವರೆಲ್ಲರೂ ಈಗ ಅವಕಾಶವಂಚಿತರು.
ಅಕಾಡೆಮಿಯಂತಹ ಸಂಸ್ಥೆಯ ಅಧ್ಯಕ್ಷ ಪೀಠದಲ್ಲಿ ಅಸಾಹಿತ್ಯಿಕ ವ್ಯಕ್ತಿಯನ್ನು ತಂದು ಕೂರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಏನಾಗಿದೆ? ಸಾಂಸ್ಕೃತಿಕ ಲೋಕದ ಹಲವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಈ ಲೋಕಕ್ಕೆ ಕೊಡುಗೆ ನೀಡುವ ದಿಕ್ಕಿನ ಮೊದಲ ಹೆಜ್ಜೆಯಲ್ಲಿಯೇ ಎಡವಿದ್ದು ಗೊತ್ತಾಗಲಿಲ್ಲವೇ?
ಮೊಟ್ಟಮೊದಲನೆಯದಾಗಿ ಕರ್ನಾಟಕ ಉರ್ದು ಅಕಾಡೆಮಿಯನ್ನು ಮತ್ತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೆಕ್ಕೆಗೆ ತರಬೇಕು. ಉರ್ದು ಅಕಾಡೆಮಿ ಸೇರಿದಂತೆ ಯಾವ ಅಕಾಡೆಮಿಗೂ ಸಹ ಸಚಿವರು ಗಳು ಅಥವಾ ರಾಜಕೀಯ ವ್ಯಕ್ತಿಗಳು ಅಧ್ಯಕ್ಷರಾಗುವುದನ್ನು ತಡೆಯಬೇಕು. ಆಗ ಮಾತ್ರ ಸಿದ್ದರಾಮಯ್ಯ ಅವರ ಸರ್ಕಾರ ರೂಪಿಸಲು ಹೊರಟಿರುವ ಸಾಂಸ್ಕೃತಿಕ ನೀತಿಗೆ ಒಂದು ಅರ್ಥ ಬರುತ್ತದೆ. ಸಾಂಸ್ಕೃತಿಕ ನೀತಿ ಅದರ ಪಾಡಿಗೆ ಅದು ಇರಲಿ, ನಾವು ತಿಳಿದಂತೆ ಮಾಡೋಣ ಎಂದು ಹೊರಟರೆ ಎಡವಟ್ಟುಗಳಿಗೆ ದಾರಿ ಮಾಡಿಕೊಟ್ಟಂತೆ.
- ಹೊನ್ನಾಳಿ ಚಂದ್ರಶೇಖರ್, ಕನ್ನಡಪ್ರಭ
honnalichandra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

