ಚೀನಿ ಸುರಂಗ ದೆಹಲಿಯವರೆಗೂ..!
ಫೇಕಿಂಗ್ ನ್ಯೂಸ್, ಅಣುಕು ವರದಿ: ಭಾರತದಿಂದ ಯಾವುದೇ ಪ್ರತಿರೋಧ ವ್ಯಕ್ತವಾಗದೇ ಇರುವುದರಿಂದ ಇನ್ನಷ್ಟು ಧೈರ್ಯ ಮಾಡಿರುವ ಚೀನಾ ನೇರವಾಗಿ ದೆಹಲಿಯಲ್ಲಿ ಬಂದು ಠಿಕಾಣಿ ಹೂಡಲು ಎಲ್ಲಾ ಸಿದ್ಧತೆ ನಡೆಸಿದೆ. ಈ ಹಿಂದೆ ಲದಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಿಯರು ಯಶಸ್ವಿಯಾಗಿ ದಿಗ್ವಿಜಯಂಗೈದುದು ಭಾರತೀಯರ ನೆನಪಿನಂಗಳದಿಂದ ಮಾಸಿ ಹೋಗುವ ಮುನ್ನವೇ ಚೀನಿಯರು ಈ ನಡೆಗೆ ಮುಂದಾಗಿದ್ದಾರೆ. 'ದಿಲ್ಲಿ ಚಲೋ' ಎನ್ನುವ ಹೆಸರಿನ ತಮ್ಮ ರಹಸ್ಯ ಕಾರ್ಯಾಚರಣೆಯ ಅಂಗವಾಗಿ ಚೀನಾದ ಸೇನೆ, ಟಿಬೆಟ್ನಿಂದ ದೆಹಲಿಯವರೆಗೆ ಸುರಂಗಮಾರ್ಗವನ್ನು ಕೊರೆಯತೊಡಗಿದೆ. ಈ ಸುರಂಗ ಮಾರ್ಗದ ಕೊನೆ ಭಾರತೀಯ ಸಂಸತ್ತಿನಲ್ಲಿರಲಿದೆ ಎನ್ನಲಾಗುತ್ತಿದೆ.
'ಭಾರತದ ಶಾಸಕರು ಚೀನಾಕ್ಕೆ ದೂರ ನಿಂತುಕೊಂಡೇ ಬೈಯುತ್ತಾರೆ. ಅವರ ಮಾತನ್ನು ಸ್ಪಷ್ಟವಾಗಿ ಕೇಳಿಸಿಕೊ ಳ್ಳುವ ಕಾರಣಕ್ಕಾಗಿ ಚೀನಾ, ನೇರವಾಗಿ ಭಾರತದ ಸಂಸತ್ತಿಗೇ ಹೋಗಲಿದೆ' ಎಂದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ.
ಈ ಕುರಿತು ಪ್ರಶ್ನಿಸಿದಾಗ ಚೀನಿ ಅಧಿಕಾರಿಯೊಬ್ಬರು- 'ನಾವೇನೂ ಹಾನಿ ಮಾಡುವುದಿಲ್ಲ. ಲದಾಖ್ನಲ್ಲಿ ಮಾಡಿದಂತೆ ಸಂಸತ್ತಿನಲ್ಲೂ ಟೆಂಟ್ ಹಾಕಿ ಕೆಲದಿನಗಳವರೆಗೆ ಕುಳಿತುಕೊಳ್ಳುತ್ತೇವಷ್ಟೆ' ಎಂದು ಕಣ್ಣು ಮಿಟುಕಿಸಿದರು. 'ಹೇಗಿದ್ದರೂ ಸಂಸತ್ತು ಖಾಲಿ ಹೊಡೆಯುತ್ತಿದೆ, ಅಲ್ಲಿಗೆ ರಾಜಕಾರಣಿಗಳು ಅಪರೂಪಕ್ಕೆಂಬಂತೆ ಹೋಗುತ್ತಾರೆ ಎಂದು ಕೇಳಿದ್ದೇವೆ. ಹಾಗಾಗೇ ಆ ಸ್ಥಳವನ್ನು ಬಳಸಿಕೊಂಡರೆ ಯಾವುದೇ ತೊಂದರೆಯಾಗಲಾರದು ಎನ್ನುವ ನಂಬಿಕೆ ನಮಗಿದೆ' ಎಂದು ಕಿಲಕಿಲ ನಗುತ್ತಾರೆ ಅಧಿಕಾರಿ.
ಈ ಸುರಂಗ ಅದಾಗಲೇ ಹರ್ಯಾಣದವರೆಗೂ ತಲುಪಿದ್ದು, ಇದನ್ನು ಮೊದಲು ಪತ್ತೆಹಚ್ಚಿದವರು, ಮಿ. ರಾಬರ್ಟ್ ವಾದ್ರಾ ಎನ್ನಲಾಗುತ್ತಿದೆ. "ನೆಲದಡಿ ಏನೋ 'ಗುಡುಗುಡು' ಶಬ್ದ ಬರುತ್ತಿದೆ" ಎಂದು ವಾದ್ರಾ ಕಂಪ್ಲೆಂಟ್ ಮಾಡಿದ ನಂತರವೇ ಸರ್ಕಾರಕ್ಕೆ ಸುರಂಗದ ಸುಳಿವು ಸಿಕ್ಕಿತು ಎನ್ನಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದಾಗ ರಕ್ಷಣಾ ಸಚಿವ ಎ.ಕೆ. ಆ್ಯಂಟನಿವರು- 'ಸುರಂಗ ತೋಡಿದವರು ಚೀನಿಯರು ಎನ್ನುವುದು ಸುಳ್ಳು. ಅವರೆಲ್ಲ ಚೀನಿ ಸೇನೆಯ ಸಮವಸ್ತ್ರಧರಿಸಿದ ಪುರಾತತ್ವಜ್ಞರಷ್ಟೆ' ಎಂದು ಸತ್ಯವನ್ನು ನಿಷ್ಠುರವಾಗಿ ತಳ್ಳಿಹಾಕಿದರು.
ನಂಬಲರ್ಹವಲ್ಲದ ಮೂಲಗಳ ಪ್ರಕಾರ, 'ಚೀನಿಯರು ವಾಪಸ್ ಹೋಗುವವರೆಗೂ ಮನೆಯಿಂದ ಹೊರಗೆ ಬರಬೇಡ' ಎಂದು ಸೋನಿಯಾಗಾಂಧಿಯವರು ತಮ್ಮ ಮಗ ರಾಹುಲ್ಗೆ ಹೇಳಿದ್ದಾರಂತೆ.
ಇನ್ನು ಪ್ರಧಾನಿಗಳು ಈ ಕುರಿತು ಏಕೆ ಮಾತನಾಡುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬರು, 'ಸಿಂಗ್ ಅವರು ಇನ್ನೊಂದೆರಡು ವರ್ಷಗಳಲ್ಲಿ ಈ ಕುರಿತು ಹೇಳಿಕೆ ನೀಡಲಿದ್ದಾರೆ, ಅದಕ್ಕಾಗಿಯೇ ಅವರು ಚೀನಿ ಭಾಷೆ ಕಲಿಯುತ್ತಿದ್ದಾರೆ' ಎಂದರು.
ಇದೇ ಸಮಯದಲ್ಲೇ, ಚೀನಾದ ಟ್ರಿಕ್ ನೋಡಿ ಪ್ರಭಾವಿತವಾಗಿರುವ ಪಾಕಿಸ್ತಾನವೂ ಇಂಥದ್ದೇ ಸುರಂಗ ಮಾರ್ಗವನ್ನು ಕೊರೆದಿದೆ ಎಂಬ ಸುದ್ದಿ ಇದೆ. ಆದರೆ ಮೂಲಗಳ ಪ್ರಕಾರ, ಪಾಕಿಸ್ತಾನಿಗಳು 'ಮೇಡ್ ಇನ್ ಚೀನಾ'ದ ದಿಕ್ಸೂಚಿ ಯಂತ್ರವನ್ನು ಬಳಸಿದ್ದರಿಂದ ಹಾದಿ ತಪ್ಪಿ ಅರಬ್ಬಿ ಸಮುದ್ರದತ್ತ ಸುರಂಗ ಕೊರೆಯುತ್ತಾ ಹೊರಟಿದ್ದಾರೆ ಎನ್ನಲಾಗುತ್ತಿದೆ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

