ಈ ಮೂರ್ಖತನಕ್ಕೆ ಏನೆನ್ನಬೇಕು?

ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದು ಇಷ್ಟು ದಿನಗಳಾದರೂ ಆರೋಪಿಯನ್ನು ಪತ್ತೆ ಮಾಡಿಲ್ಲವೇಕೆ ನಮ್ಮ ಪೊಲೀಸರು? ಈ ಪ್ರಶ್ನೆಯಲ್ಲೇ ಉತ್ತರವಿದೆ. ಆರೋಪಿ ಪತ್ತೆಯಾಗದಿರಲು ಪೊಲಿಸರೇ ಕಾರಣ. ಕೆಲವು ಮಾಧ್ಯಮದವರೂ ಸಹ ಪೋಲೀಸರಷ್ಟೇ ಕಾರಣ!
ಆರೋಪಿ ತಪ್ಪಿಸಿಕೊಂಡು ಹೋಗಲು ಪೊಲೀಸರೇ ಸಹಕರಿಸಿದ್ದಾರೆ. ಜೊತೆಗೆ ಕೆಲವು ಮಾಧ್ಯಮಗಳೂ ಕೈ ಜೋಡಿಸಿವೆ. ಹೇಗಂತೀರಾ? "ಎಟಿಎಂನಲ್ಲಿ ಮಹಿಳೆಯಿಂದ ದೋಚಿದ ಮೊಬೈಲ್ ಫೋನನ್ನು ಆರೋಪಿಯು 500 ರು.ಗೆ ಮಾರಿದ್ದ. ಆ ಮೊಬೈಲ್ ಕೊಂಡವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಈಗಲೂ ಅದೇ ಅಂಗಿ ಅದೇ ಪ್ಯಾಂಟ್ ಧರಿಸಿದ್ದಾನೆ. ಅದೇ ಬ್ಯಾಗ್ ಹಿಡಿದು ಓಡಾಡುತ್ತಿದ್ದಾನೆ. ಆತನಿಗೆ ಬುದ್ಧಿ ಇಲ್ಲವಾ?" ಎಂದು ವರದಿ ಮಾಡಿ ಟಿವಿ/ಪತ್ರಿಕೆ... ಇತ್ಯಾದಿ ಮಾಧ್ಯಮಗಳು ಆತ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿವೆ. ಪೊಲೀಸರ ಪ್ರಚಾರ ಪ್ರಿಯತೆಯಿಂದ ಆರೋಪಿ ಆರಾಮವಾಗಿ ತಪ್ಪಿಸಿಕೊಂಡಿದ್ದಾನೆ.
ಪೊಲೀಸರಿಗೂ ಬುದ್ಧಿಯಿಲ್ಲ. ಮಾಧ್ಯಮದವರಿಗೆ ವಿವೇಚನೆಯಿಲ್ಲ. ಇದರಿಂದಾಗಿ ಆರೋಪಿ ಆರಾಮವಾಗಿದ್ದಾನೆ. ಮತ್ತೊಂದು ಹಲ್ಲೆ/ ಕೊಲೆಗೆ ಹೊಂಚು ಹಾಕುತ್ತಿದ್ದಾನೆ. ನಮ್ಮ ಪೊಲೀಸರು ಮತ್ತು ನಮ್ಮ ಮಾಧ್ಯಮದವರೇಕೆ ಹೀಗೆ?
ಮೈಸೂರು ದಸರಾ ಸಮಯದಲ್ಲೂ ಪೊಲೀಸರು ಇಂತಹುದೇ ಮೂರ್ಖತನ ಪ್ರದರ್ಶಿಸಿದ್ದರು. ಮಾಧ್ಯಮದ ಕೆಲವರೂ ಅವರನ್ನು ಅನುಸರಿಸಿದ್ದರು. ಉಗ್ರರ ದಾಳಿ ಹಿನ್ನೆಲೆಯಲ್ಲಿ ಮೈಸೂರಿನ ಹಲವೆಡೆ ರಹಸ್ಯ ಕ್ಯಾಮರಾ ಅಳವಡಿಸಲಾಗಿದೆ ಎಂದು ಕಮೀಷನರ್ರವರೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ನಮ್ಮ ಮಾಧ್ಯಮದವರು ಈ ರಹಸ್ಯ ಕ್ಯಾಮರಾಗಳೆಲ್ಲಿವೆ ಎಂಬುದನ್ನು ಫೋಟೋ ಸಹಿತ ವರದಿ ಮಾಡಿದ್ದವು. ರಹಸ್ಯ ಕ್ಯಾಮರಾಗಳು ಎಲ್ಲೆಲ್ಲಿವೆ ಎಂಬುದು ರಹಸ್ಯವಾಗಿರಬೇಕಲ್ಲವೇ? ಅದು ಬಹಿರಂಗಗೊಂಡರೆ ಅದನ್ನು ರಹಸ್ಯ ಕ್ಯಾಮೆರಾ ಎಂದೇಕೆ ಕರೆಯಬೇಕು? ಈ ರೀತಿ ಅವು ಎಲ್ಲೆಲ್ಲಿ ಇವೆ ಎನ್ನುವುದನ್ನು ತೋರಿಸುವುದರಿಂದ ಉಗ್ರರಿಗೆ ಮಾಹಿತಿ ನೀಡಿದಂತಾಗುವುದಿಲ್ಲವೇ? ಇದು ನಮ್ಮ ಪೊಲೀಸರಿಗಾಗಲೀ, ಮಾಧ್ಯಮದವರಿಗಾಗಲೀ ಏಕೆ ಅರ್ಥವಾಗುತ್ತಿಲ್ಲ?
- ಪಿ.ಜೆ. ರಾಘವೇಂದ್ರ
ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


