ಈ ತಲ್ಲಣಗಳಿಗೆ ಯಾರು ಕಾರಣರು?
ಪ್ರತಿ ನಿತ್ಯ ಬೆಳಗಿನ ದಿನಪತ್ರಿಕೆಗಳಲ್ಲಿನ ಕೆಲವು ವಿಷಯಗಳನ್ನು ಓದಿದಾಗ ಮನಸ್ಸಿಗೆ ಆಘಾತವಾಗುತ್ತದೆ. ಛೇ, ನಿಜಕ್ಕೂ ಈ ರೀತಿ ಆಗಲು ಸಾಧ್ಯವಾ ಎನ್ನುವ ಯೋಚನೆ ಮೂಡುತ್ತದೆ. ಹಿಂದೆ ಬಹಳ ಅಪರೂಪದ ಸುದ್ದಿಯಾಗುತ್ತಿದ್ದ ವಿಷಯ ಇಂದು ದಿನನಿತ್ಯದ ಸುದ್ದಿಗಳಾಗುತ್ತಿರುವುದು ವಿಷಾದನೀಯ.
ಪ್ರಿಯಕರನ ಸಹಕಾರದಿಂದ ತನ್ನ ಗಂಡನನ್ನೇ ಕೊಲ್ಲಿಸಿದ ಹೆಂಡತಿ, ಪ್ರೇಮಿಸುವ ನಾಟಕ ಮಾಡಿ ಮೋಸ ಮಾಡಿದ ಹೆಣ್ಣು, ಗಂಡುಗಳು. ಶೀಲ ಶಂಕಿಸಿ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ. ಕೆಲವೊಮ್ಮೆ ತಾನೂ ಸಾವಿಗೆ ಶರಣಾದ ಗಂಡ, ಹೆಣ್ಣು ಮಕ್ಕಳ ಅಪಹರಣ. ತನ್ನ ಪ್ರೀತಿಯನ್ನು ತಿರಸ್ಕರಿಸಿದ ಹರೆಯ ಹೆಣ್ಣಿನ ಮುಖಕ್ಕೆ ಕುಪಿತ ಯುವಕನಿಂದ ಆಸಿಡ್ ದಾಳಿ. ಹಿರಿಯರು ವಿವಾಹಕ್ಕೆ ಅನುಮತಿ ಕೊಡಲಿಲ್ಲವೆಂದು ಪ್ರೇಮಿಗಳ ಆತ್ಮಹತ್ಯೆ. ಮರ್ಯಾದಾ ಹತ್ಯೆಗಳು, ಜನ್ಮಕೊಟ್ಟ ತಂದೆಯನ್ನೇ ಆಸ್ತಿಗಾಗಿ ಕೊಲೆ ಮಾಡಿದ ಮಗ. ಜನನಕ್ಕೆ ಕಾರಣವಾದ ಜನಕನೇ ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡಿದ್ದು. ಸೋದರನಿಂದ ಸೋದರಿಯ ಮೇಲೆಯೇ ನಿರಂತರ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ. ಒಲ್ಲದ ಸೊಸೆಯನ್ನು ಜೀವಂತ ದಹಿಸಿದ ಕ್ರೂರಿ ಅತ್ತೆ. ಅತ್ತೆಯನ್ನು ಕೆಲಸದಾಳಿಗಿಂತಲೂ ನಿಕೃಷ್ಟವಾಗಿ ನೋಡುವ ಸೊಸೆ. ಕಷ್ಟಪಟ್ಟು ಸಾಕಿ ಸಲಹಿದ ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಜವಾಬ್ದಾರಿ ಕಳೆದುಕೊಳ್ಳುತ್ತಿರುವ ಗಂಡು ಮಕ್ಕಳು. ಆಸ್ತಿಗಾಗಿ ತನ್ನ ಅಣ್ಣ ತಮ್ಮಂದಿರ ಮೇಲೆ ಕೇಸು ಹಾಕಿ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿರುವ ಸೋದರಿಯರು, ಸಹನೆ ಇಲ್ಲದೆ ಕ್ಷಣಿಕ ಆವೇಶಕ್ಕಾಗಿ ದುಡುಕಿ ಹಸುಕಂದಮ್ಮಗಳನ್ನು ಬಾವಿಗೆ ತಳ್ಳಿ ಅಥವಾ ವಿಷ ಕುಡಿಸಿ ತಾವೂ ಸಾಯುತ್ತಿರುವ ತಾಯಂದಿರು, ಬಡತನದಿಂದಾಗಿ ತಾಯಿ ತಂದೆಯರೇ ತಮ್ಮ ಹೆಣ್ಣು ಮಗಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿರುವುದು. ಬಾಲ್ಯವಿವಾಹ, ಹಸುಕಂದಮ್ಮಗಳ ಮೇಲಿನ ಅತ್ಯಾಚಾರ, ಒಂದೇ ಎರಡೇ ಇಂತಹ ನೂರಾರು ವಿಷಯಗಳನ್ನು ಪ್ರಸಾರ ಮಾಧ್ಯಮ ಹಾಗೂ ದೃಶ್ಯಮಾಧ್ಯಮಗಳ ಮೂಲಕ ತಿಳಿದಾಗ ಮನಸ್ಸಿಗೆ ನೋವಾಗುತ್ತದೆ. ಸ್ವೇಚ್ಛಾಚಾರವನ್ನೇ ಸ್ವಾತಂತ್ರ್ಯವೆಂದು ತಪ್ಪಾಗಿ ತಿಳಿದುಕೊಂಡು ಮನಬಂದಂತೆ ವರ್ತಿಸುತ್ತಿರುವ ಯುವ ಜನಾಂಗವೇ? ಕುಟುಂಬವನ್ನು ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ತಂದೆ ತಾಯಿಯರು ಸಹನೆ ಸಾಮರಸ್ಯವಿಲ್ಲದೆ ವಿಚ್ಛೇದನದ ಮೊರೆ ಹೋಗುತ್ತಿರುವುದರಿಂದ ಮಕ್ಕಳು ಮಾನಸಿಕ ಸ್ಥಿಮಿತ ಕಳೆದುಕೊಂಡು ಸಮಾಜಪೀಡಕರಾಗುತ್ತಿದ್ದಾರೆ ಅಥವಾ ಇಂದಿನ ಸ್ವಾರ್ಥ ಜಗತ್ತು ಆಧುನಿಕ ತಂತ್ರಜ್ಞಾನ ಕಾರಣವೇ? ಅಥವಾ ಬದಲಾಗುತ್ತಿರುವ ಭಾವನೆಗಳು, ಜೀವನಶೈಲಿ ಕಾರಣವೇ? ಹಿಂದೆ ತುಂಬು ಕುಟುಂಬಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಇರುತ್ತಿದ್ದರಿಂದ ಮಗುವಿನ ಅಸಹಜ ಬೇಡಿಕೆಗೆ ಹಿರಿಯರು ಬಗ್ಗುತ್ತಿರಲಿಲ್ಲ. ತಮ್ಮ ಹಠ ನಡೆಯಲಿಲ್ಲ ಎಂದು ತಿಳಿದ ಮಕ್ಕಳು ಹಿರಿಯರ ಮಾತಿಗೆ ಬೆಲೆ ಕೊಡುತ್ತಿದ್ದರು. ಗೌರವದಿಂದ ಕಾಣುತ್ತಿದ್ದರು. ಜೊತೆಗೆ ರಾಮಾಯಣ, ಮಹಾಭಾರತ, ಪಂಚತಂತ್ರ, ಬೋಧಿಸತ್ವನ ಕಥೆಗಳು. ಆ ಕಥೆಗಳಲ್ಲಿ ಬರುವ ನೀತಿಗಳನ್ನು ತಿಳಿಸುತ್ತಿದ್ದುದಲ್ಲದೇ, ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎನ್ನುವ ಭಯ ಬಿತ್ತುತ್ತಿದ್ದರು.
ಧೃವನ ಕತೆ, ಪುಣ್ಯಕೋಟಿ ಗೋವಿನ ಸತ್ಯಸಂಧತೆ, ವೃದ್ಧರಾದ ತಂದೆ ತಾಯಿಯರನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಪುಣ್ಯಕ್ಷೇತ್ರ ದರ್ಶನ ಮಾಡಿಸಿದ ಶ್ರವಣಕುಮಾರನ ಕತೆಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತಿದ್ದಲ್ಲದೇ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದವು. ಆದರೆ ಇಂದು ಅಂತಹ ನೀತಿ ಕತೆ ಹೇಳುವ ಅಜ್ಜ, ಅಜ್ಜಿಯರು, ತಾವು ಹೆತ್ತ ಮಕ್ಕಳಿಂದಲೇ ತಿರಸ್ಕಾರಕ್ಕೊಳಗಾಗಿ ಬಾಳಮುಸ್ಸಂಜೆಯಲ್ಲಿ ವೃದ್ಧಾಶ್ರಮದಲ್ಲೋ, ದೇವಸ್ಥಾನದ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ. ಅಲ್ಲದೇ, ಒಂದೇ ಮಗು ಸಾಕು, ಆ ಮಗುವಿಗೆ ಸಕಲ ಸೌಭಾಗ್ಯ ಕೊಡೋಣ ಎನ್ನುತ್ತಾ ಆ ಮಗು ಕೇಳಿದ್ದೆಲ್ಲಾ ಕೊಡಿಸುತ್ತಾ ತಪ್ಪು ಮಾಡಿದಾಗ ತಿದ್ದದೆ, ಶಿಕ್ಷಿಸದೇ, ಆ ಮಗು ದೊಡ್ಡವನಾದಾಗ ತಾನು ಕೇಳಿದ್ದು ಸಿಗದೆ (ಹಣ ಇರಬಹುದು ಅಥವಾ ಬೇರೆ ಕಾರಣ ಇರಬಹುದು) ಸಮಾಜ ಕಂಟಕನಾಗುವುದರಲ್ಲಿ ತಂದೆ ತಾಯಿ ಪಾತ್ರವೇ ಹೆಚ್ಚು. ಹಿಂದೆ ಶಾಲೆಗಳಲ್ಲಿ ಶಿಕ್ಷಕರು ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆ ಕೊಡುತ್ತಿದ್ದರು. ಇದಕ್ಕೆ ಪೋಷಕರ ತಕರಾರು ಇರುತ್ತಿರಲಿಲ್ಲ. ಈಗ ಶಿಕ್ಷೆ ಕೊಟ್ಟ ಶಿಕ್ಷಕರ ಮೇಲೆ ಕಾನೂನು ಜಾರಿಗೆ ಬರುವಂತೆ ಆಗಿರುವುದರಿಂದ ಶಾಲೆಯಲ್ಲಿ ಶಿಕ್ಷಕರ ಶಿಕ್ಷೆ ಇಲ್ಲದೇ ಮನೆಯಲ್ಲಿ ಏಕಾಂಗಿಯಾಗಿ (ಅಪ್ಪ, ಅಮ್ಮ ಇಬ್ಬರೂ ದುಡಿಯಲು ಹೋಗುವ ಕಾರಣ) ಬೆಳೆದ ಇಂದಿನ ಮಕ್ಕಳು ಮುಂದೆ ದೊಡ್ಡವರಾದಾಗ ಸಮಾಜಕಂಟಕರಾಗುವುದರಲ್ಲಿ ಸಂಶಯವಿಲ್ಲ. ಇಂದಿನ ತಂದೆ ತಾಯಿಯರು ಕೇವಲ ಹಣ ಸಂಪಾದನೆಗೆ ಹೆಚ್ಚು ಗಮನ ಕೊಡದೆ ಮಕ್ಕಳ ನಡೆ-ನುಡಿ ಪೂರ್ಣ ಗಮನ ಕೊಟ್ಟು, ತಪ್ಪಿ ನಡೆದಾಗ ಶಿಕ್ಷಿಸಿ. ಒಪ್ಪಿ ನಡೆದಾಗ ಮುದ್ದಿಸಿ ತಿಳಿವಳಿಕೆ ನೀಡಿದರೆ ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳವು ಅಲ್ಲವೇ?
- ಶಾರದ ಗುರುಮೂರ್ತಿ
ಸಕಲೇಶಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

