

'ಹೊಸ ವರ್ಷ ಬರುತ್ತಿದೆ. ನಿಮ್ಮ ಸಂದೇಶ ಏನು?' ಎಂದು ಯೋಗಿ ದುರ್ಲಭಜೀ ಅವರನ್ನು ಕೇಳಿದೆ. 'ಪ್ರತಿ ವರ್ಷ ಸಂದೇಶ ಕೊಟ್ಟು ಕೊಟ್ಟು ಖಾಲಿಯಾಗಿದೆ' ಎಂದು ಹೇಳಿ ಜೋರಾಗಿ ನಕ್ಕರು. ಅವರ ಶಿಷ್ಯರಾದ ಯೋಗಿ ನಿಶ್ಚಿಂತಜೀ ಸಹ ಜೋರಾಗಿ ನಗುವುದು ಕೇಳಿಸಿತು. ನಾನೂ ನನ್ನ ಪಾಲಿನ ನಗುವನ್ನು ಸೇರಿಸಿದೆ.
ದುರ್ಲಭಜೀ ಅವರಿಗೆ ಏನನ್ನಿಸಿತೋ ಏನೋ?
'ಇದನ್ನು ಸಂದೇಶ ಎಂದು ಭಾವಿಸಬೇಕಿಲ್ಲ. ಒಂದು ವೇಳೆ ಭಾವಿಸಿದರೆ, ಹೊಸ ವರ್ಷದ ಆಗಮನದ ಸಂದರ್ಭದಲ್ಲಿ ಮಾತ್ರ ಅಲ್ಲ, ಜೀವನವಿಡೀ ನೆನಪಿಟ್ಟುಕೊಳ್ಳಬೇಕು ಹಾಗೂ ಪಾಲಿಸಬೇಕು. ಅದೇನೆಂದರೆ ನೀವು ಏನೇ ಮಾಡಿ ಹುಚ್ಚು ಹತ್ತಿಸಿಕೊಂಡು ಮಾಡಿ. ಸಂಪೂರ್ಣ ತಲ್ಲೀನರಾಗಿ ಮಾಡಿ' ಎಂದರು ಯೋಗಿ.
ಅವರೇ ಮುಂದುವರಿದು ಒಂದು ಪ್ರಸಂಗ ಹೇಳಿದರು.
'ಚೀನಾದಲ್ಲೊಬ್ಬ ಅಥ್ಲಿಟ್ ಇದ್ದ. ಆತನಿಗೆ ವಿಶ್ವದಾಖಲೆ ಮಾಡುವುದೆಂದರೆ ಹುಚ್ಚು. ನೂರು, ಇನ್ನೂರು, ನಾನೂರು ಮೀಟರ್ ಓಟದಲ್ಲಿ ಭಾಗವಹಿಸಿ ವಿಶ್ವದಾಖಲೆ ಮಾಡಿದ. ಅವನ ಕೊರಳಿಗೆ ಚಿನ್ನದ ಪದಕಗಳ ಸರಮಾಲೆಗಳೇ ಬೇಳುತ್ತಿದ್ದವು. ವಿಶ್ವ ದಾಖಲೆ ಮಾಡುವ ತನಕ ವಿರಮಿಸುತ್ತಿರಲಿಲ್ಲ. ಒಮ್ಮೆ ಆತ ಜ್ವರಪೀಡಿತನಾಗಿ ಆಸ್ಪತ್ರೆ ಸೇರಿದ. ವೈದ್ಯರು ಬಂದು ಅವನನ್ನು ಪರೀಕ್ಷಿಸಿದರು. ನೂರಾ ಏಳು ಡಿಗ್ರಿ ಜ್ವರವಿದೆ ಎಂದರು. ಅದಕ್ಕೆ ಆತ ಏನು ಹೇಳಿದ ಗೊತ್ತೇ? ಇನ್ನೂ ಎಷ್ಟು ಡಿಗ್ರಿ ಹೆಚ್ಚು ಜ್ವರ ಬಂದರೆ ವಿಶ್ವದಾಖಲೆಯಾಗುತ್ತದೆ?'
ಯೋಗಿ ದುರ್ಲಭಜೀ ಹೇಳಿದರು. 'ಈ ಗೀಳು, ಗುಂಗು ಹತ್ತಿಸಿಕೊಳ್ಳಿ. ನೀವು ಮಾಡುವ ಕೆಲಸ ಯಾವುದೇ ಇರಲಿ. ಇದೇ ನಿಮ್ಮನ್ನು ಗೆಲುವಿನ ಮನೆ ತನಕ ಕರೆದುಕೊಂಡು ಹೋಗುತ್ತದೆ.'
ಬಾಬುರಾವ್ ಪಟೇಲ್ ಎಂಬ ಮತ್ತೊಬ್ಬ ಉಕ್ಕಿನ ಮನುಷ್ಯ
ನಾನು 'ವಿಜಯಕರ್ನಾಟಕ'ದಲ್ಲಿದ್ದಾಗ ಸುದ್ದಿಮನೆ ಕತೆ ಅಂಕಣದಲ್ಲಿ ಪತ್ರಕರ್ತ ಬಾಬುರಾವ್ ಪಟೇಲ್ ಬಗ್ಗೆ ಮೂವತ್ಮೂರು ಕಂತುಗಳ ಮಾಲಿಕೆ ಬರೆದಿದ್ದೆ. ಸುಮಾರು ನಾಲ್ಕು ತಿಂಗಳ ಹಿಂದೆ ತುಮಕೂರಿನ ಎಚ್. ಹಿರಣ್ಣಯ್ಯ ಎಂಬ ಹಿರಿಯರು ತಮ್ಮ ಸಂಗ್ರಹದಲ್ಲಿರುವ ಬಾಬುರಾವ್ ಪಟೇಲ್ರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ 'ಮದರ್ ಇಂಡಿಯಾ' ಹಾಗೂ 'ಫಿಲ್ಮ್ ಇಂಡಿಯಾ' ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ಕೊಟ್ಟು ಹೋದರು. ಪಟೇಲ್ರ ಕಟ್ಟಾ ಅಭಿಮಾನಿಯಾಗಿದ್ದ ಅವರು ಸುಮಾರು ಮೂವತ್ತು ವರ್ಷಗಳವರೆಗೆ ಒಂದೂ ಸಂಚಿಕೆಯನ್ನೂ ತಪ್ಪಿಸಿಕೊಳ್ಳದೇ ನಿರಂತರವಾಗಿ ಓದಿದವರು.
'ಅಂಥ ಪತ್ರಕರ್ತರು ಇಲ್ಲ ಬಿಡಿ. ಇಂಗ್ಲೀಷಿನಲ್ಲಿ ಅವರಂತೆ ಬರೆಯುವ ಮತ್ತೊಬ್ಬ ಪತ್ರಕರ್ತನನ್ನು ನಾನಂತೂ ಓದಿಲ್ಲ. ನೋಡಿಲ್ಲ. ಎಷ್ಟು ಧೈರ್ಯವಾಗಿ ಬರೆಯುತ್ತಿದ್ದರು, ಯಾರಿಗೂ ಹೆದರುತ್ತಿರಲಿಲ್ಲ. ಎಂಥ ಎದೆಗಾರಿಕೆಯಿತ್ತು ಅವರಿಗೆ. ಅವರ ಪತ್ರಿಕೆ ಬರಹಗಳಿಗೆ ನಾವು ದಾಸರಾಗಿದ್ದೆವು. ಇಂದಿಗೂ ನಾನು ಅವರ ಮೋಡಿಯಿಂದ ಹೊರಬಂದಿಲ್ಲ. ಅವರ ನೆನಪು ನನ್ನಲ್ಲಿ ಅಸಂಖ್ಯ ಕತೆ ಹೇಳುತ್ತವೆ' ಎಂದು ಹಿರಣ್ಣಯ್ಯನವರು ಪೀಠಿಕೆ ಹಾಕಿದರು.
'ಒಮ್ಮೆ ಬಾಬುರಾವ್ ನೆಹರು ಅವರನ್ನು ಹೇಗೆ ಟೀಕಿಸಿದ್ದರೆಂದರೆ ನಮಗೇ ಆಶ್ಚರ್ಯವಾಗಿ ಹೋಗಿತ್ತು. ದೇಶದ ಪ್ರಧಾನಿಯನ್ನು ಪರಮಭ್ರಷ್ಟ, ಲಂಪಟ, ಸ್ತ್ರೀ ವ್ಯಾಮೋಹಿ, ಲಜ್ಜೆಗೇಡಿ ಎಂದೆಲ್ಲ ಉಗಿದು ಉಪ್ಪು ಹಾಕಿದ್ದರು. ಪ್ರಾಯಶಃ ಅಂಥ ಬರಹವನ್ನು ಈಗಿನ ಪತ್ರಕರ್ತರಿಂದ ನಿರೀಕ್ಷಿಸುವುದು ತಪ್ಪು. ಅಂಥ ನಿರ್ಭೀತಿ, ಎದೆಗಾರಿಕೆ, ನೈತಿಕಸ್ಥೈರ್ಯ ಈಗಿನ ಪತ್ರಕರ್ತರಿಗೆ ಎಲ್ಲಿಂದ ಬರಬೇಕು?' ಎಂದರು ಹಿರಣ್ಣಯ್ಯ.
ಬಾಬುರಾವ್ ಪಟೇಲ್ ಬಗ್ಗೆ ನಾನು ಪುಸ್ತಕವನ್ನು ಮುಗಿಸುತ್ತಿರುವ ಸಂದರ್ಭದಲ್ಲಿ ಅವರ ಬಗ್ಗೆ ಅಮೂಲ್ಯ ಮಾಹಿತಿ ಹಾಗೂ ಹಳೆಯ ಸಂಚಿಕೆಗಳನ್ನು ಒದಗಿಸಿದ್ದು ಹಿರಣ್ಣಯ್ಯನವರು ನನಗೊಂದೇ ಅಲ್ಲ, ಬಾಬುರಾವ್ಗೂ ಮಾಡಿದ ಮಹದುಪಕಾರವೇ. ಇಲ್ಲದಿದ್ದರೆ ನನ್ನ ಪುಸ್ತಕದಲ್ಲಿ ಬಾಬುರಾವ್ ಕುರಿತು ಕೆಲವು ರೋಚಕ ಸಂಗತಿಗಳು ಬಿಟ್ಟು ಹೋಗುತ್ತಿದ್ದವು.
1979ರ ಡಿಸೆಂಬರ್ನ 'ಮದರ್ ಇಂಡಿಯಾ' ಪತ್ರಿಕೆಯಲ್ಲಿ, ಅದಾಗಲೇ ಗತಿಸಿದ್ದ ನೆಹರು ಅವರನ್ನು ನೆನಪಿಸಿಕೊಂಡು ಬಾಬುರಾವ್ ಪಟೇಲ್ ಹೀಗೆ ಬರೆದಿದ್ದಾರೆ- 'ಪಂಜಾಬಿನ ಮುಖ್ಯಮಂತ್ರಿ ಪ್ರತಾಪ್ಸಿಂಗ್ ಖೈರಾನ್ ಅವರ ಭ್ರಷ್ಟಾಚಾರಗಳನ್ನು ಪ್ರಧಾನಿಯಾಗಿದ್ದಾಗ ನೆಹರು ಸಮರ್ಥಿಸಿಕೊಂಡಿದ್ದರು. ಮೂರ್ಖ ಪ್ರಾಮಾಣಿಕನಿಗಿಂತ ಬುದ್ಧಿವಂತನಾಗಿರುವ ಭ್ರಷ್ಟನೇ ಮೇಲು ಎಂದು ಹೇಳಿದ್ದರು. ಪ್ರಧಾನಿ ಸ್ಥಾನದಲ್ಲಿರುವವರು ಹೇಳುವ ಮಾತುಗಳಾ ಇವು? ನಾನು ಈ ಎಲ್ಲ ಸಂಗತಿಯನ್ನು ಪ್ರಸ್ತಾಪಿಸಿ ನೆಹರು ಹೇಗೆ ಮೂಲತಃ ಭ್ರಷ್ಟ ಎಂಬುದನ್ನು ಸವಿವರವಾಗಿ ಬರೆದೆ. ಅಧಿಕಾರಕ್ಕಾಗಿ ತನ್ನ ಚಾರಿತ್ರ್ಯವನ್ನೇ ಮಾರಿಕೊಂಡ ಅನೈತಿಕ, ನೀಚ ಬುದ್ಧಿಯ ಮನುಷ್ಯ ಎಂದು ಟೀಕಿಸಿದೆ. ಇದನ್ನು ನೆಹರು ಓದಿ, ನನ್ನ ಆಪ್ತ ಸ್ನೇಹಿತ ಸರ್ ಶ್ರೀರಾಮ್ ಅವರನ್ನು ಕರೆದು, ಬರಹವಿರುವ ಸಂಚಿಕೆಯನ್ನು ನೆಲದ ಮೇಲೆ ಬಿಸಾಕಿ, ಸಿಟ್ಟಿನಿಂದ ಕಾಲಿನಲ್ಲಿ ಹೊಸಕಿ ಅದರ ಮೇಲೆ ಹುಚ್ಚನಂತೆ ನರ್ತಿಸಿದರು. This man must be stopped I will teach him a lesson ಎಂದು ಕಿರುಚಾಡಿದರು. ಶ್ರೀರಾಮ್ ನನ್ನ ಬಳಿ ಬಂದು ನೆಹರು ಅವರ 'ಸಾಂಸ್ಕೃತಿಕ ಪ್ರದರ್ಶನ'ವನ್ನು ವಿವರಿಸಿ ಎಚ್ಚರವಾಗಿರುವಂತೆ ಸೂಚಿಸಿದರು. ಅಷ್ಟೇ ಅಲ್ಲ, ನೆಹರು ವಿರುದ್ಧ ಏನೂ ಬರೆಯದಂತೆ ಕಿವಿಮಾತು, ಸಲಹೆ ನೀಡಿದರು. ನೆಹರು ಆದೇಶ ಪಾಲಿಸುವುದಾದರೆ, ಅವರು ನನಗೆ 'ಪ್ರಸಾದ'ವನ್ನು ಕಳಿಸಲು ಸಿದ್ಧರಿದ್ದರು. ಆದರೆ ನಾನು ಅದಕ್ಕೆ ಬಾಗಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನೆಹರು ವಿರುದ್ಧ ಇನ್ನಷ್ಟು ತೀವ್ರವಾಗಿ ಬರೆಯಲಾರಂಭಿಸಿದೆ. ಅವರ ಯಾವ ಬೆದರಿಕೆ, ಆಮಿಷಗಳು ಕೆಲಸ ಮಾಡದಿದ್ದಾಗ, ಇನ್ಕಂ ಟ್ಯಾಕ್ಸ್ ಅಧಿಕಾರಿಗಳನ್ನು ಕಳಿಸಿ ಕಿರುಕುಳ ಕೊಡಲಾರಂಭಿಸಿದರು. ಆ ದಿನಗಳಲ್ಲಿ ನನ್ನನ್ನು ಬಂಧಿಸುವಂತೆ ಅವರು ಅಧಿಕಾರಿಗಳಿಗೆ ಹೇಳಿದ್ದರು. ಆದರೆ ನನ್ನ ರೋಮವನ್ನು ಕಿತ್ತುಕೊಳ್ಳಲು ಸಹ ಅವರಿಗೆ ಆಗಲಿಲ್ಲ.'
ಇಂಥ ಅನೇಕ ಹೊಸ ಹೊಸ ಸ್ವಾರಸ್ಯಕರ ಸಂಗತಿಗಳಿರುವ ಪುಸ್ತಕವನ್ನು ಮಾಡುತ್ತಿದ್ದೇನೆ. ಸಂಕ್ರಾಂತಿ ಹೊತ್ತಿಗೆ ಬಿಡುಗಡೆಯಾಗಲಿದೆ. ಅಂದ ಹಾಗೆ ಈ ಕೃತಿಯ ಹೆಸರು-'ಧೀಮಂತ ಪತ್ರಕರ್ತ ಬಾಬುರಾವ್ ಪಟೇಲ್, ಮತ್ತೊಬ್ಬ ಉಕ್ಕಿನ ಮನುಷ್ಯ.'
ಸುದ್ದಿಯ ಸಹವಾಸ ಒಳ್ಳೆದೋ, ಸಿಂಹದ್ದೋ?
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಒಂದು ಸರ್ಕಸ್ ಪ್ರದರ್ಶನವಾಗುತ್ತಿತ್ತು. ಬೈಕ್ನಲ್ಲಿ ಬಂದ ಸವಾರನೊಬ್ಬ ಬಗೆಬಗೆಯ ಕಸರತ್ತು ಪ್ರದರ್ಶಿಸುತ್ತಿದ್ದ. ಇದೇ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಪೋಷಕರೊಂದಿಗೆ ಕುಳಿತಿದ್ದ ಬಾಲೆಯೊಬ್ಬಳು, ಸಿಂಹ ಬಂದಿದ್ದನ್ನು ಕಂಡು ಖುಷಿಯಿಂದ 'ಹೋ' ಎಂದು ಕೂಗಿ ಚಪ್ಪಾಳೆ ತಟ್ಟಿದಳು. ಅದು ಆಫ್ರಿಕಾದ ಸಿಂಹ. ಅದನ್ನು ನೋಡಲೆಂದೇ ಹೆಚ್ಚಿನವರು ಬಂದಿದ್ದರು. ಆ ಹೊತ್ತಿನಲ್ಲೇ ಆ ಘಟನೆ ನಡೆಯಿತು.
ಪುಟಾಣಿ ಹುಡುಗಿ ಜೋರಾಗಿ ಚೀರಿದಳಲ್ಲ; ಆ ಸದ್ದಿನಿಂದ ಸಿಟ್ಟಿಗೆದ್ದ ಸಿಂಹ, ಆ ಹುಡುಗಿಯ ಕೈ ಕಚ್ಚಲು ಮುಂದಾಯಿತು. ಗುರ್ರ್ರ್ರ್ರ್ರ್ ಎಂದು ಅಬ್ಬರಿಸುತ್ತಾ ಆ ಮಗುವಿನ ಫ್ರಾಕ್ಗೆ ಬಾಯಿ ಹಾಕಿ ಎಳೆದೇ ಬಿಟ್ಟಿತು. ಸಿಂಹ ಎಳೆದ ರಭಸಕ್ಕೆ ಆ ಪುಟ್ಟ ಹುಡುಗಿಯ ಕೈ, ಮುಂದಿನ ಕೆಲವೇ ಕ್ಷಣಗಳಲ್ಲಿ ಸಿಂಹದ ಬಾಯಿ ಸೇರುವುದು ಗ್ಯಾರಂಟಿ ಎಂದು ಎಲ್ಲರಿಗೂ ಖಚಿತವಾಯಿತು. ಅನಾಹುತವನ್ನು ಊಹಿಸಿದ ಆ ಮಗುವಿನ ಪೋಷಕರು ಹೆಲ್ಪ್ ಹೆಲ್ಪ್ ಎಂದು ಚೀರಿಕೊಂಡರು.
ಈ ಚೀತ್ಕಾರದ ಕರೆ ಕಿವಿಗೆ ಬಿದ್ದೊಡನೆ ಬೈಕ್ನಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದ ಯುವಕ ಮಿಂಚಿನ ವೇಗದಲ್ಲಿ ನುಗ್ಗಿ ಬಂದು ಸಿಂಹದ ಮೂತಿಗೆ ಬಲವಾದ ಪಂಚ್ ಕೊಟ್ಟ. ಈ ಅನಿರೀಕ್ಷಿತ ಆಕ್ರಮಣದಿಂದ ಕಂಗಾಲಾದ ಸಿಂಹ, ತಕ್ಷಣವೇ ಮಗುವನ್ನು ಬಿಟ್ಟು, ಎರಡು ಹೆಜ್ಜೆ ಹಿಂದಿಟ್ಟಿತು. ಅದೇ ಕ್ಷಣಕ್ಕೆ ಮಗುವನ್ನು ಬಾಚಿ ತಬ್ಬಿಕೊಂಡ ಬೈಕ್ವಾಲಾ ಆಕೆಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ. ಬೈಕ್ ಸವಾರನ ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಅಲ್ಲಿದ್ದವರೆಲ್ಲ ಶ್ಲಾಘಿಸಿದರು.
ಇದೇ ಸರ್ಕಸ್ಗೆ ಅಮೆರಿಕದ ಪತ್ರಕರ್ತನೂ ಬಂದಿದ್ದ. ಆತ ಇಡೀ ಘಟನೆಯನ್ನು ಪ್ರತ್ಯಕ್ಷ ಕಂಡಿದ್ದ. ತಾನು ನೋಡಿದ್ದನ್ನೆಲ್ಲ ಸ್ಕೂಪ್ ನ್ಯೂಸ್ ಮಾಡಬೇಕೆಂಬ ತಹತಹದಿಂದಲೇ ಆತ ಬೈಕ್ ಸವಾರನ ಮುಂದೆ ನಿಂತು ಹೇಳಿದ: 'ಸರ್, ನಿಮ್ಮ ಸಾಹಸ, ಪಂಚ್ ಎರಡೂ ಮೈನವಿರೇಳಿಸುವಂಥಾದ್ದು. ನನ್ನ ಈವರೆಗಿನ ಜೀವನದಲ್ಲಿ ಇಂಥ ಅಪೂರ್ವ ಸಾಹಸವನ್ನು ಕಂಡೇ ಇರಲಿಲ್ಲ. ಸಿಂಹದೊಂದಿಗೆ ಹೋರಾಡುವುದೆಂದರೆ ಸುಮ್ಮನೆ ಆಯ್ತಾ ಸಾರ್?'
ಬೈಕ್ ಸವಾರ ತಕ್ಷಣವೇ ಹೇಳಿದ: 'ನೀವು ಉತ್ಪ್ರೇಕ್ಷೆ ಮಾಡ್ತಾ ಇದೀರ ಸಾರ್. ವಾಸ್ತವ ಏನು ಗೊತ್ತಾ? ಸಿಂಹ ಪಂಜರದೊಳಗಿತ್ತು. ಅದು ಪಂಜರದೊಳಗೆ ಇದೆ ಎಂದು ಗೊತ್ತಿದ್ದರಿಂದಲೇ, ಅದು ನನ್ನ ಮೇಲೆ ಆಕ್ರಮಣ ನಡೆಸಲು ಸಾಧ್ಯವಿಲ್ಲ ಎಂದು ಅರ್ಥವಾದ ಮೇಲೆಯೇ ನಾನು ಅದರ ಮೂತಿಗೆ ಬಲವಾದ ಪಂಚ್ ಕೊಟ್ಟೆ. ಪ್ರಾಣ ಭಯದಿಂದ ನಡುಗುತ್ತಿದ್ದ ಮಗುವನ್ನು ಉಳಿಸುವುದು ನನ್ನ ಕರ್ತವ್ಯ ಆಗಿತ್ತು...'
'ಸರಿ ಸರಿ. ಈಗ ಕೇಳಿ. ನಾನು ಪತ್ರಕರ್ತ. ಇಡೀ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿ. ಇವತ್ತು ನಡೆದದ್ದನ್ನೆಲ್ಲ ವಿವರವಾಗಿ, ಆಕರ್ಷಕ ಹೆಡ್ಡಿಂಗ್ನೊಂದಿಗೆ ಮುಖಪುಟದಲ್ಲೇ ಪ್ರಕಟಿಸಬೇಕೆಂಬ ಉದ್ದೇಶ ನನ್ನದು. ಈಗ ಹೇಳಿ. ನೀವು ಯಾರು? ನೀವು ಏನು ಕೆಲಸ ಮಾಡ್ತೀರಿ?'
ಈ ಪ್ರಶ್ನೆಗೆ ಆ ಬೈಕ್ ಸವಾರ ಹೀಗೆಂದ: 'ನಾನು ಒಬ್ಬ ಅಮೆರಿಕನ್. ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದೇನೆ...'
'ಥ್ಯಾಂಕ್ಸ್' ಎಂದಷ್ಟೇ ಉತ್ತರಿಸಿ ಆ ಪತ್ರಕರ್ತ ಹೊರಟು ಹೋದ. ಮರುದಿನದ ಪತ್ರಿಕೆಯಲ್ಲಿ ಆನೆ ಗಾತ್ರದ ಅಕ್ಷರದಲ್ಲಿ ಸುದ್ದಿ ಪ್ರಕಟಗೊಂಡಿತ್ತು: 'ಆಫ್ರಿಕಾದಿಂದ ವಲಸೆ ಬಂದವನ ಮೇಲೆ ಹಲ್ಲೆ ನಡೆಸಿ, ಅವನ ಆಹಾರ ಕಿತ್ತುಕೊಂಡ ಅಮೆರಿಕದ ನೌಕಾ ಸಿಬ್ಬಂದಿ...!'
- ವಿಶ್ವೇಶ್ವರ ಭಟ್