ಅಂಕಣಗಳು

ವ್ಯಾಲೆಂಟೈನ್ ದಿನದ ಹೊಸ್ತಿಲಲ್ಲಿ...

Published On :

ಫೆಬ್ರವರಿ ಹದಿನಾಲ್ಕು ಎಂದೊಡನೆ ಯುವ ಮನಸ್ಸುಗಳಲ್ಲಿ ಏನೋ ಒಂದು ಬಗೆಯ ಉತ್ಸಾಹ, ಸಡಗರ ಸಂಭ್ರಮ. ಉದ್ಯಾನವನ, ಥಿಯೇಟರ್ ಮೊದಲಾದವುಗಳಲ್ಲೆಲ್ಲ ಪ್ರೇಮಿಗಳಿಂದ ಗಿಜಿಗಿಜಿ. ನಗರದ ಮಾಲ್ಗಳಲ್ಲಿ ಮತ್ತಿತರ ಅಂಗಡಿಗಳಲ್ಲಿ ಗ್ರೀಟಿಂಗ್ ಕಾರ್ಡ್ಗಳ ಭಾರೀ ಭರಾಟೆ.. ಹೋಟೆಲ್,ಕ್ಲಬ್,ಪಬ್ಗಳಲ್ಲಿ ವಿಶೇಷ ಏಜೆಂಟ್ಗಳಿಂದ ಸ್ಪರ್ಧೆಗಳನ್ನು ಏರ್ಪಡಿಸಿ, ಲಾಭದ ಲೆಕ್ಕಾಚಾರ. ಪ್ರೇಮಿಗಳು ಕುಡಿತ,ಕುಣಿತ ಸಂಭ್ರಮದಲ್ಲಿ ತೇಲಾಡುತ್ತಾರೆ. ಇವೆಲ್ಲವುಗಳ ನಡುವೆ ಪ್ರೇಮಿಗಳ ದಿನಾಚರಣೆ. ಅನೇಕ ಹಿಂದೂ ಸಂಘಟನೆಗಳ ಬೆದರಿಕೆ ಇವೆಲ್ಲವೂ ಪ್ರತೀ ಬಾರಿ ಫೆಬ್ರವರಿ ಹದಿನಾಲ್ಕರಂದು ಸಾಮಾನ್ಯವಾಗಿ ಪತ್ರಿಕೆ,ಟಿ.ವಿಗಳಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳು. ಆದರೆ ಮರುದಿನ ಕೆಲವೊಂದು ಸುದ್ದಿಗಳು ಪ್ರಕಟಗೊಳ್ಳುತ್ತವೆ. ನಿಜಕ್ಕೂ ಮನ ಕಲಕುವಂತವು. ಮನೆಯಲ್ಲಿ ವಿರೋಧ- ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು..
ಪ್ರತಿ ವರ್ಷವೂ ಇಂತಹ ಹತ್ತಾರು ಘಟನೆಗಳು ನಮ್ಮ ಮುಂದೆ ನಡೆಯುತ್ತಲೇ ಇರುತ್ತವೆ. ವಯಸ್ಸಿನಲ್ಲಿ ಪ್ರೀತಿಸಿದ ಯುವಕ ಯುವತಿಯರು ಮನೆಯವರನ್ನು, ಸಮಾಜವನ್ನು ಒಪ್ಪಿಸುವ ಇಲ್ಲವೇ ಎದುರಿಸುವ ಪ್ರಯತ್ನಗಳಲ್ಲಿ ಸೋತು ಫೆಬ್ರವರಿ ಹದಿನಾಲ್ಕಕ್ಕೆ ಆತ್ಮಹತ್ಯೆಗೆ ಶರಣಾದರೆ, ಅಮರ ಪ್ರೇಮಿಗಳಾಗುತ್ತಾರೆ ಎಂಬ ಭ್ರಮೆ ಒಂದು ಕಾರಣ! ಹಾಗೆ ನೋಡಿದರೆ ಪ್ರೀತಿ ಪ್ರೇಮವೇನು ಪ್ರಮಾದವಲ್ಲ. ನಮ್ಮ ಪುರಾಣಗಳಲ್ಲಿ ಅನೇಕ ದೇವಾನು ದೇವತೆಗಳೇ ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ. ಇನ್ನು ಅಂತರ್ಜಾತಿ ವಿವಾಹಗಳು ಸಹ ಹಿಂದಿನ ಕಾಲದಲ್ಲಿ ಅಷ್ಟೇ ಸಹಜವಾಗಿದ್ದವು. ಧ್ಯಾನದಲ್ಲಿ ಮುಳುಗಿದ್ದ ಮಹಾ ವಿಶ್ವಾಮಿತ್ರ ಮುನಿಯೇ ಮೇನಕೆಯನ್ನು ಕಂಡು ಮೋಹಗೊಂಡ. ಪರಾಶರ ಮುನಿ ಮತ್ತು ಶೂದ್ರ ಹೆಣ್ಣು ಮತ್ಸ್ಯಗಂಧಿಯ ಜೊತೆ ಸೇರಿ ವೇದವ್ಯಾಸರ ಜನನಕ್ಕೆ ಕಾರಣವಾಗಲಿಲ್ಲವೇ? ಸ್ವತಃ ಇಂದ್ರನೇ ಅಹಲ್ಯೆಯ ಕಂಡು ಬೆರಗಾಗಲಿಲ್ಲವೇ? ಶಂತನು ಆರ್ಯಳಲ್ಲದ ಗಂಗೆಯನ್ನು ಕಂಡು ಮೋಹಿಸಲಿಲ್ಲವೇ?         
ಮನೆಯಲ್ಲಿ ವಿರೋಧ ಕಟ್ಟಿಕೊಂಡು, ಶ್ರೀಕೃಷ್ಣನೇ ಮುಂದೆ ನಿಂತು ಅರ್ಜುನನಿಂದ ಸುಭದ್ರೆಯನ್ನು ಅಪಹರಿಸುವುದಕ್ಕೆ ಸಹಾಯಕನಾಗಲಿಲ್ಲವೇ? ಪಟ್ಟಿಮಾಡುತ್ತಾ ಹೋದರೆ ಇಂತಹ ಉದಾಹರಣೆಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಹಾಗಂತ ಯುವಕರು ಇಂದು ಆತಂಕಕ್ಕೆ ಬಿದ್ದು ಮಾಡಿದ್ದೆಲ್ಲವನ್ನೂ ಸಮಾಜ ಮನ್ನಿಸಬೇಕೆಂದಿಲ್ಲ. ಅವರ ಪ್ರೀತಿ ನೈಜವಾಗಿ, ಪರಿಶುದ್ಧವಾಗಿದ್ದರೆ, ಜಾತಿ ಮತಗಳ ಸಂಕೋಲೆಗಳಿಂದಾಗಿ ಸಮಾಜದ ವಿರೋಧವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗದಿರಲಿ ಎಂಬುದೇ ಆಶಯ.
ಇಂದಿನ ಮುಂದುವರಿದ ನಾಗರಿಕ ಸಮಾಜದಲ್ಲೂ ತಲೆ ತಗ್ಗಿಸುವಂತಹ ಹೆಚ್ಚು ಹೆಚ್ಚು ಪ್ರಕರಣಗಳು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಪ್ರಸಾರಗೊಳ್ಳುತ್ತಿವೆ. ಜನ್ಮವಿತ್ತ ತಂದೆ, ಕರುಳು ಹಂಚಿಕೊಂಡು ಹುಟ್ಟಿದ ಅಣ್ಣ ತಮ್ಮಂದಿರೇ ಮಗಳು ಅಥವಾ ಅಕ್ಕ ತಂಗಿಯರ ಸಾವಿಗೆ ಕಾರಣರಾಗುವುದು ನಮ್ಮಲ್ಲಿ ಜಾತೀಯತೆಯ ತೀವ್ರತೆಗೆ ಹಿಡಿದ ಕನ್ನಡಿಯಷ್ಟೇ. ಜಾತಿಗೆ ಅಪಚಾರವಾಗುತ್ತದೆ ಎಂದು ಹೆತ್ತ ಮಗಳನ್ನೇ ಕೊಲ್ಲುವುದರಲ್ಲಿ ಯಾವ ಧರ್ಮಾರ್ಥವನ್ನೂ ಕಾಣಲು ಸಾಧ್ಯವಿಲ್ಲ. ಇನ್ನೊಂದು ಅಪಾಯಕಾರಿ ಸಂಗತಿಯೆಂದರೆ ಈ ಕುರಿತು ಯಾವೊಬ್ಬ ಮಠಾಧಿಪತಿಯೂ ಸೊಲ್ಲೆತ್ತಿಲ್ಲ. ಜಾತಿಗಾಗಿ ಈ ರೀತಿ ಅಮಾನುಷ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರನ್ನು ಸಮಾಜದಿಂದ ಹೊರಹಾಕುವ ಮಾತು ಹೋಗಲಿ, ಈ ಮರ್ಯಾದಾ ಹತ್ಯೆಗಳು ಖಂಡನಾರ್ಹ ಎಂದು ಹೇಳಿಕೆಯನ್ನೂ ನೀಡಿಲ್ಲ. ಸದಾನಂದ ಗೌಡ ರಾಜಿನಾಮೆ ನೀಡುವಾಗ, ಶೆಟ್ಟರ್ ಬಜೆಟ್ ಮಂಡಿಸುವಾಗ, ಯಡಿಯೂರಪ್ಪ ಜೈಲು ಸೇರಿದಾಗ ಅಭಯ ತೋರುವ ನಮ್ಮ ಮಠಾಧಿಪತಿಗಳಿಗೆ ಅವರ ಜಾತಿಯಲ್ಲೇ ನಡೆಯುವ ಈ ಮರ್ಯಾದಾ ಹತ್ಯೆಯ ಕುರಿತು ಮಾತನಾಡುವುದಕ್ಕೆ ಪುರುಸೊತ್ತೇ ಇಲ್ಲ.
ಈ ಹಿಂದೆ ಲೋಹಿಯಾ ಸಜಾತಿ ವಿವಾಹವನ್ನು ಹದಿನೈದು ವರ್ಷ ಕಾನೂನು ಬಾಹಿರವಾಗಿಸಬೇಕೆಂದು ಮಾತನಾಡಿದ್ದರು. ಆದರೆ ಅಂತಹ ಯೋಚನೆಗಳು, ಆಕ್ರಮಣಾಕಾರಿ ನಿಲುವುಗಳು ಪ್ರಜಾಪ್ರಭುತ್ವದ ನಾಡಲ್ಲಿ ಸ್ವತಂತ್ರವನ್ನು ಕಸಿಯುವ ಕ್ರಮಗಳಾಗುತ್ತವೆ. ಜಾತಿಪದ್ಧತಿ ನಿವಾರಣೆಗೆ ಕಾನೂನಿಗಿಂತಲೂ ಜನರ ಮನಸ್ಥಿತಿಯಲ್ಲಿ ಬದಲಾವಣೆ ಅಗತ್ಯ. ಅದಕ್ಕೆ ಎಲ್ಲ ಮಠಾಧೀಶರೂ ಈ ನಿಟ್ಟಿನಲ್ಲಿ ಯೋಚಿಸುವುದೊಂದೇ ಏಕೈಕ ಮಾರ್ಗ.
ಈ ನಿಟ್ಟಿನಲ್ಲಿ ಕೆಲವು ಹಿಂದೂ ಸಂಘಟನೆಗಳ ಕಾರ್ಯ ಶ್ಲಾಘನೀಯ. ಅವು ಸಮಾಜಕ್ಕಾಗಿ ಹಲವು ದಶಕಗಳಿಂದಲೂ ದುಡಿಯುತ್ತಿವೆ. ಆದರೆ ಅವರು ಪ್ರೇಮಿಗಳ ದಿನವನ್ನು ವಿರೋಧಿಸುವುದು ಪ್ರೇಮಿಗಳ ಅಸಹನೆಗೆ ಕಾರಣ. ಇನ್ನು ಮುಖ್ಯವಾಗಿ ಗಮನಿಸಬೇಕು, ಹಿಂದೂ ಸಂಘಟನೆಗಳಾದ ಭಜರಂಗ ದಳವೇ ಆಗಲಿ, ಶ್ರೀರಾಮ ಸೇನೆಯೇ ಆಗಲಿ ಅವರು ವಿರೋಧಿಸುವುದು ಪ್ರೇಮಿಗಳ ದಿನದ ಆಚರಣೆಯನ್ನೇ ಹೊರತು ಪ್ರೇಮಿಗಳನ್ನಲ್ಲ.
ಫೆಬ್ರವರಿ ಹದಿನಾಲ್ಕು ಪ್ರೇಮಿಗಳ ದಿನ. ಇದು ಕೆಂಗಣ್ಣಿಗೆ ಗುರಿಯಾಗಿದ್ದು ಪಾಶ್ಚಾತ್ಯರ ಅನುಕರಣೆ ಎಂಬ ಕಾರಣಕ್ಕಾಗಿ. ಇದರಿಂದ ಕುಡಿತ ಮುಂತಾದವುಗಳಿಗೆ ವೇದಿಕೆಯಾಗಿ ಅನಾಹುತಕ್ಕೆ ಕಾರಣವಾಗುತ್ತದೆ. ಪ್ರೀತಿಸಿ ಕುಡಿದು ಕುಣಿದು ಓಡಾಡಿದ ಹುಡುಗ ಕೈ ಕೊಡುವ ಅವಕಾಶಗಳೂ ಇರುತ್ತವೆ, ಆದ್ದರಿಂದ ಈ ಆಚರಣೆಯನ್ನು ವಿರೋಧಿಸುತ್ತವೆಯೇ ಹೊರತು ಪ್ರೀತಿ ಪ್ರೇಮವನ್ನಲ್ಲ. ಈ ಕಾಳಜಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.ಅನ್ಯ ಜಾತಿಯ ಹುಡುಗ ಹುಡುಗಿ ಪ್ರೀತಿಸಿ ಹೆತ್ತವರ ವಿರೋಧ ಎದುರಿಸಿದ ಅನೇಕ ಸಂದರ್ಭಗಳಲ್ಲಿ ಇದೇ ಸಂಘಟನೆಗಳು ಪಾಲಕರ ಮನಮೊಲಿಸಿ ಅಂತರ್ಜಾತೀಯ ವಿವಾಹಕ್ಕೆ ಕಾರಣವಾಗಿವೆ.
ಪ್ರೀತಿಸುವ ಮನಸ್ಸುಗಳಿಗೆ ಯಾವ ತಿಂಗಳ ಯಾವ ದಿನವಾದರೇನು? ತಂದೆ ತಾಯಿಗಳು ಮಕ್ಕಳು ಮಾಡಿದ್ದನ್ನು ಕಣ್ಣು ಮುಚ್ಚಿ ಮನ್ನಿಸಬೇಕೆಂದಲ್ಲ. ಹುಡುಗ ಹುಡುಗಿ ಯೋಗ್ಯರಾಗಿದ್ದು, ಗುಣವಂತರಾಗಿದ್ದು, ಒಬ್ಬರನ್ನೊಬ್ಬರು ಅರ್ಧಮಾಡಿಕೊಂಡು ಬಾಳಬಲ್ಲವರಾಗಿದ್ದರೆ ಜಾತಿ,ಕುಲ,ಅಂತಸ್ತುಗಳು ಅಡ್ಡಬರುವುದಿಲ್ಲ ಎಂಬುದಷ್ಟೇ ಹಾರೈಕೆ. ಜಾತಿಯ ಹೆಸರಲ್ಲಿ ಹೆತ್ತ ಮಕ್ಕಳನ್ನೇ ತಂದೆ,ಅಣ್ಣ ತಮ್ಮಂದಿರು ಕೊಲ್ಲುವುದನ್ನು ಯಾವ ಧರ್ಮವೂ ಬೋಧಿಸುವುದಿಲ್ಲ. ಜಾತಿ ಸುಡೋ ಮಂತ್ರಕಿಡಿ ಪ್ರೀತಿ ಎಂದು ಕುವೆಂಪು ಸಾರಿದರು. ಜಾತಿ ಮತ ಅಳಿಯಲಿ, ಹೆತ್ತವರ ಮನಸ್ಸು ವಿಶಾಲವಾಗಲಿ, ಪ್ರೀತಿಯ ಮೊಗ್ಗುಗಳು ಅರಳುವ ಮುನ್ನವೇ ಬಾಡದಿರಲಿ.. ನಾಳಿನ ಪತ್ರಿಕೆಯಲ್ಲಿ  ಸರಣಿ ಸುದ್ದಿಗಳು ಪ್ರಕಟವಾಗದಿರಲಿ.. ಪ್ರೀತಿಯ ಕುಸುಮಗಳು ಎಲ್ಲೆಡೆ ಹರಡಲಿ..

-ಕಿರಣ ಜೋಶಿ, ಕೊಪ್ಪಳ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.