ರಾಜ್ಯ ರಾಜಕಾರಣದ ಗೊಂದಲದ ಹೊಸ ಆಯಾಮ

Updated on: 

ದೀರ್ಘ ಕಾಲ ದ್ವಿಪಕ್ಷೀಯ ರಾಜಕಾರಣವನ್ನು ಮಾತ್ರ ಕಂಡಿದ್ದ ಕರ್ನಾಟಕ, ಇನ್ನೇನೂ ತ್ರಿಕೋನ ರಾಜಕೀಯಕ್ಕೆ ಹೊಂದಿಕೊಳ್ಳುತ್ತಿದೆ ಎನ್ನುವ ಸ್ಥಿತಿಯನ್ನು ತಲುಪಿದ ಕೆಲವೇ ತಿಂಗಳುಗಳಲ್ಲಿ ಚತುಷ್ಕೋನದ ಮೇಲಾಟವನ್ನು ಕಾಣಬೇಕಾದ ಸ್ಥಿತಿಯನ್ನು ಮುಟ್ಟಿದೆ.
ಇದಕ್ಕೆ ಕಾರಣ ಸೆಕ್ಯುಲರ್- ಕಮ್ಯುನಲ್ ಶಕ್ತಿಗಳ ನಡುವಣ ಸಂಘರ್ಷವಾಗಲಿ, ಜಾತಿ-ಜಾತಿಗಳ ಸ್ಪರ್ಧೆಯಾಗಲಿ, ಹೊಸತು- ಹಳತುಗಳ ನಡುವಣ ತಿಕ್ಕಾಟವಾಗಲಿ ಅಲ್ಲ. ಕೆಲವು ನಾಯಕರ ಸ್ವಾರ್ಥ ಹಾಗೂ ರಾಷ್ಟ್ರೀಯ ಪಕ್ಷಗಳಲ್ಲಿ ವರಿಷ್ಠರ ನಿಯಂತ್ರಣ ಶಕ್ತಿ ರಾಜ್ಯಗಳ ಮೇಲೆ ಕಡಿಮೆಯಾಗುತ್ತ ಬಂದಿರುವುದೇ ಈ ಪರಿಸ್ಥಿತಿಗೆ ಕಾರಣ. ಸದ್ಯಕ್ಕೆ ಈ ಸ್ಥಿತಿ ದೇಶದ ಬೇರೆ ರಾಜ್ಯಗಳಲ್ಲಿ ಇಲ್ಲ. ಕೇಂದ್ರದಲ್ಲಿ ಒಕ್ಕೂಟ ರಾಜಕಾರಣ ಅನಿವಾರ್ಯವಾಗಿರುವುದರಿಂದ ಅಲ್ಲಿ ಈ ಪ್ರಶ್ನೆಯೇ ಇಲ್ಲ. ಕರ್ನಾಟಕ ಇಂದಿನ ಛಿದ್ರ- ಛಿದ್ರ- ಭಿನ್ನ- ಭಿನ್ನ ರಾಜಕೀಯ ಜಂಜಾಟಕ್ಕೆ ಬಹುಮಟ್ಟಿಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಕಂಡು ಬಂದ ಅನಿರೀಕ್ಷಿತ ಬೆಳವಣಿಗೆಗಳೇ ಕಾರಣ. ಇದರಲ್ಲಿ ಕಾಂಗ್ರೆಸ್- ಜಾತ್ಯತೀತ ಜನತಾ ದಳಗಳ ಪಾತ್ರ ಏನೇನೂ ಇಲ್ಲ.

2008ರ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆಯೇ ಇರಲಿಲ್ಲ. ಆಗಿನ ವಿಶಿಷ್ಟ ಸಂದರ್ಭದ ಶಿಶುವಾಗಿ ಯಡಿಯೂರಪ್ಪ ಅವರು ಏಕೈಕ ನಾಯಕರಾಗಿ ಕಂಡು ಬಂದಿದ್ದರು. ಆದರೆ ವಿಧಾನ ಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಅದನ್ನು ಪಡೆಯಲು ಪಕ್ಷೇತರ ಶಾಸಕರನ್ನು ಆಮಿಷ ಒಡ್ಡಿ ಓಲೈಸಿದ್ದು ಅರ್ಥವಾಗುವಂತಹದ್ದು. ಆದರೆ ಅನಂತರ ಆಪರೇಷನ್ ಕಮಲ ಅನೈತಿಕ ಹಾಗೂ ಜನತಾಂತ್ರಿಕ ರಾಜಕೀಯಕ್ಕೆ ಒಪ್ಪುವಂತಹದ್ದಲ್ಲ. ಅದೇ ಈಗಿನ ಎಲ್ಲ ಅವಾಂತರಗಳಿಗೂ ಕಾರಣವಾಯಿತು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನವನ್ನು ಬಿಡಲೇಬೇಕಾಗಿ ಬಂದ ಅನಂತರ ಅವರ ಹಾಗೂ ಅವರ ಪಾಳಯದಲ್ಲಿ ಕಂಡು ಬಂದ ಅಭದ್ರತೆಯ ಭೀತಿ, ಕೊನೆಗೆ ಪಕ್ಷವನ್ನೇ ಹೋಳು ಮಾಡುವ ಸ್ಥಿತಿಯನ್ನು ತಂದಿಟ್ಟಿತ್ತು. ವಿಧಾನ ಸಭೆಯ ಅವಧಿ ಮುಗಿಯುವ ಹಂತದತ್ತ ಸಾಗಿದಾಗ ಈ ಅಭದ್ರತೆ ಹೆಚ್ಚಾಯಿತು. ಪರಿಸ್ಥಿತಿಯನ್ನು ಈಗಲೇ ನಿಯಂತ್ರಿಸದೇ ಹೋದರೆ, ಮುಂದೆ ಅದು ತಮಗೆ ಎಟುಕುವುದಿಲ್ಲ ಎನ್ನುವುದನ್ನು ಅರಿತ ಯಡಿಯೂರಪ್ಪ ಬಿಜೆಪಿಯನ್ನು ಹೋಳು ಮಾಡಲು ಮುಂದಾದರು. ಅವರು ಊಹಿಸದೇ ಇದ್ದ ರೀತಿಯಲ್ಲಿ ವಿಧಾನ ಸಭೆ ಚುನಾವಣೆಗೆ ಮುಂಚೆಯೇ ಪೇಟೆ- ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿಢೀರನೆ ಪ್ರಕಟವಾದಾಗ ಪಕ್ಷಗಳ ರಾಜಕೀಯ ಶಕ್ತಿಯನ್ನು ಹಿಡಿದಿಟ್ಟುಕೊಂಡಿರುವ ಶಾಸಕರೇ ಸರ್ವಶಕ್ತರೆನ್ನುವ ಭಾವನೆ ಮೂಡಿದ್ದು ಸರಿಯಲ್ಲ ಎನ್ನುವುದು ಗೊತ್ತಾಯಿತು.

ಈ ಶಾಸಕರು, ಮಂತ್ರಿಗಳು ಇನ್ನೆಷ್ಟು ದಿನ ಇರ್ತಾರೆ ಎನ್ನುವ ಪ್ರಶ್ನೆ ದೊಡ್ಡ ರೀತಿಯಲ್ಲಿ ಕೇಳಿ ಬಂದಾಗ ಮಂತ್ರಿಗಳು, ಶಾಸಕರು ಕಕ್ಕಾಬಿಕ್ಕಿಯಾದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಶಕ್ತಿಯ ಪ್ರದರ್ಶನ ಸಾಧ್ಯವಾಗದೇ ಹೋದರೆ, ತಾವೆಲ್ಲಿರ್ತೀವಿ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು.

ಆಗಲೇ ಈ ನಾಯಕಮಣಿಗಳ ಪರದಾಟ ಪ್ರಾರಂಭ. ಪಕ್ಷ ಬದಲಾಯಿಸುವುದಾದರೆ ಈಗಲೇ ಆಗಬೇಕು ಆ ಕೆಲಸ. ಮುಂದೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಮ್ಮನ್ನು ಯಾರೂ ಕೇಳುವವರೇ ಇರುವುದಿಲ್ಲವೆನ್ನುವ ಭವಿಷ್ಯದ ಚಿಂತೆ ಅವರನ್ನು ಕಾಡಿತ್ತು. ಈ ಮಧ್ಯೆ ಯಡಿಯೂರಪ್ಪ ಅವರು ವಾರಕ್ಕೊಮ್ಮೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಕೊಡುತ್ತಿದ್ದ ಗಡವುಗಳ ಅವಾಂತರ ಬೇರೆ.

ಯಾರೂ ಸಿದ್ಧರಾಗಿಲ್ಲ: ಇನ್ನೇನು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು ಏರಿದೆ, ನಾಮಪತ್ರಗಳ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿದೆ ಎನ್ನುವಾಗಲೇ ಪಕ್ಷಗಳಿಗೆ ತಮ್ಮ ಚುನಾವಣೆ ಸಿದ್ಧತೆಯ ಅಭಾವ ಎದ್ದು ಕಂಡಿದ್ದು.

ಕಾಂಗ್ರೆಸ್ಸಿನಂತಹ ಪಕ್ಷವೇ (ಶತಮಾನಕ್ಕೂ ಹೆಚ್ಚಿನ ಇತಿಹಾಸ, ದಶಕಗಳ ಆಡಳಿತ ಅನುಭವ) ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳೆಂದು ಖ್ಯಾತಿ ಪಡೆದವರಿಗೆ ತನ್ನ ಬಾಗಿಲನ್ನು ತೆರೆಯಲು ಮುಂದಾಯಿತು. ಆ ಪ್ರಕ್ರಿಯೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಯದಲ್ಲೇ ಪ್ರಕಟಗೊಳ್ಳಲಿದೆ. ಈಗಿನ ಐವರು ಪಕ್ಷೇತರ- ಬಿಜೆಪಿ ಶಾಸಕರು ಟಿಕೆಟ್ ಕೊಡುವ ಖಾತ್ರಿ ಸಿಕ್ಕರೆ ವಿಧಾನ ಸಭೆಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಲು ಸಿದ್ಧವಂತೆ. ಆದರೆ ಆ ಪಕ್ಷದಲ್ಲಿ ಟಿಕೆಟ್ ಕೊಡುವ ಖಾತ್ರಿಯನ್ನು ಯಾರೂ ಕೊಡುವುದು ಸಾಧ್ಯವಿಲ್ಲ.
ಶಾಸಕರಲ್ಲಿ ವಲಸೆಯ ಪ್ರಕ್ರಿಯೆ ಆರಂಭವಾಗಿರುವುದಂತೂ ನಿಜ. ಅದರ ಹೊಡೆತ ಬೀಳುವುದು ಬಿಜೆಪಿಗೇ. ಕಾಂಗ್ರೆಸ್‌ನ ಬಾಗಿಲು ವಲಸೆಗಾರರಿಗೆ ಪೂರ್ತಿಯಾಗಿ ತೆಗೆದಿಲ್ಲ. ಜಾತ್ಯತೀತ ಜನತಾ ದಳದ ಪ್ರವೇಶ ಮೊದಲಿನಿಂದಲೂ ಸ್ವಲ್ಪ ಕಷ್ಟವೇ. ಪಕ್ಷ ಸೇರುವವರು ಕುಟುಂಬದ ನಾಯಕತ್ವವನ್ನು ಒಪ್ಪಲೇಬೇಕು. ಆ ಪಕ್ಷದಿಂದಲೂ ಚನ್ನರಾಯಪಟ್ಟಣದ ಶಾಸಕ ಸಿ.ಎಸ್. ಪುಟ್ಟೇಗೌಡರು ಹೊರಗಡೆ ಕಾಲಿಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಈ ಪಿಡುಗಿಗೆ ಜೆಡಿಎಸ್ ಅಪವಾದವಾಗಲಿಕ್ಕಿಲ್ಲ. ಈಗಲೂ ಆ ಪಕ್ಷದ ಪ್ರಭಾವ ಕೆಲವು ಪ್ರದೇಶಗಳಲ್ಲಿ ದಟ್ಟವಾಗಿದ್ದರೆ, ಉಳಿದ ಕಡೆ ಅಷ್ಟಕ್ಕಷ್ಟೇ. ಅಲ್ಲಿ ಪ್ರವೇಶ ಪಡೆಯುವುದು, ಹೊರಗೆ ಹೋಗುವುದು ಆ ಸೀಮೆಗೇ ಸೀಮಿತವಾದದ್ದು.

ಯಡಿಯೂರಪ್ಪ ಅವರು ಸರ್ಕಾರವನ್ನು ಉರುಳಿಸಲು ಬೇಕಾದಷ್ಟು ಸಂಖ್ಯೆಯ ಶಾಸಕರನ್ನು ಸೆಳೆಯುವುದು ಸಾಧ್ಯವಾಗಲಿಲ್ಲ. ಹಾಗೆಂದು ಅವರು ನಾಯಕರಿಗಾಗಿ ಜನ ಸಾಮಾನ್ಯ ವರ್ಗಗಳತ್ತ ನೋಡುತ್ತಿಲ್ಲ. ಪಕ್ಷದ ಅಂಗಡಿಯ ಬಾಗಿಲನ್ನು ತೆರೆದೇ ಇದ್ದಾರೆ. ಆ ಪಕ್ಷಕ್ಕೆ ಕಾಂಗ್ರೆಸ್, ಜೆಡಿಎಸ್‌ಗಳಿಂದ ಯಾರೂ ಹೋಗುವುದಿಲ್ಲ. ಬಿಜೆಪಿಯಿಂದಲೇ ಅವರಿಗೆ ವಲಸೆಗಾರರು ಸಿಗುವುದು. ಈಗಿನ ರಾಜಕೀಯದಲ್ಲಿ ಬಿಜೆಪಿಯ ಬಾಗಿಲು ತೆರೆದಿದ್ದರೂ, ಇತರ ಪಕ್ಷಗಳಿಂದ ಯಾರೂ ಆ ಬಾಗಿಲನ್ನು ದಾಟುವುದಿಲ್ಲ. ಅದು ನಿರ್ಗಮನದ ಬಾಗಿಲಷ್ಟೇ. ಇದೇ ಶಾಶ್ವತ ವ್ಯವಸ್ಥೆ ಎಂದೇನೂ ಅಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವದಲ್ಲಿ ಕಂಡು ಬಂದು ಪರಿಸ್ಥಿತಿ.

ನಾಯಕತ್ವದ ಪ್ರಶ್ನೆ: ಜಾತ್ಯತೀತ ಜನತಾ ದಳದಲ್ಲಿ ದೇವೇಗೌಡರು ಪ್ರಶ್ನಾತೀತ, ಏಕೈಕ ನಾಯಕರು. ಅವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು ಎಲ್ಲರೂ ಅದನ್ನು ಒಪ್ಪಲೇ ಬೇಕು. ಯಡಿಯೂರಪ್ಪ ಅವರ ಪಕ್ಷದಲ್ಲೂ ಹೆಚ್ಚು ಕಡಿಮೆ ಅದೇ ಸ್ಥಿತಿ. ಅದೂ ಏಕ ವ್ಯಕ್ತಿ ಆಧರಿತ ಹಾಗೂ ಒಂದು ನಿರ್ದಿಷ್ಟ ಓಟು ಬ್ಯಾಂಕನ್ನು ಅವಲಂಬಿಸಿದ ಪಕ್ಷ. ಕಾಂಗ್ರೆಸ್, ಈ ಗೊಂದಲದಿಂದ ಮುಕ್ತವಾಗಿದೆ. ಕಾಂಗ್ರೆಸ್ಸಿನಲ್ಲಿ ಏನಿದ್ದರೂ ದೆಹಲಿಯ ವರಿಷ್ಠರದ್ದೇ ಅಂತಿಮ ತೀರ್ಮಾನ. ಆ ಸಂಸ್ಕೃತಿಯನ್ನು ಒಪ್ಪಿದವರಷ್ಟೇ ಅಲ್ಲಿ ಉದ್ಧಾರವಾಗುವುದು.

ಎಸ್ಸೆಮ್ ಕೃಷ್ಣ ಮೌನ: ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ನಾಯಕರು ಎಂದರೆ ಯಾರು? ಸದ್ಯಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪದನಿಮಿತ್ತ ನಾಯಕರೆಂದು ಗುರ್ತಿಸಬಹುದು. ಆದರೆ ಈಗ ವಿಧಾನ ಸಭೆಯೇ ತನ್ನ ಉಪಯುಕ್ತತೆಯನ್ನು ಮುಗಿಸಿಕೊಂಡಿರುವಾಗ, ಆ ಸದನದಲ್ಲಿನ ವಿರೋಧ ಪಕ್ಷದ ನಾಯಕರಿಗೆ ಸರ್ಕಾರದ ಸೌಲಭ್ಯಗಳು, ಪರಿಕರಗಳು ಸಿಗಬಹುದಷ್ಟೇ. ಅದರಿಂದಲೇ ಯಾರೂ ನಾಯಕರಾಗಲ್ಲ.

ಕಾಂಗ್ರೆಸ್ ಪಾಳೆಯದಲ್ಲಿ ಅನೇಕರನ್ನು ಮೌನವಾಗಿ ಕಾಡಿರುವ ಸಮಸ್ಯೆ ಹಿರಿಯ ನಾಯಕ ಎಸ್ಸೆಮ್ ಕೃಷ್ಣ ಅವರ ಮೌನ. ಯಾವ ರಾಜಕೀಯ ಬೆಳವಣಿಗೆಗೂ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಬಹಿರಂಗವಾಗಿ ವರಿಷ್ಠರು ಏನು ಹೇಳ್ತಾರೋ ಅದನ್ನು ಮಾಡ್ತೀನಿ ಎನ್ನುತ್ತಾರೆಂದು ವರದಿ.

ಎಸ್ಸೆಮ್ ಕೃಷ್ಣ ಅವರ ವಯಸ್ಸು, ಅನುಭವ ಹಾಗೂ ಸಂಪರ್ಕಗಳನ್ನು ಪರಿಗಣಿಸಿ ಕಾಂಗ್ರೆಸ್ ಅವರಿಗೆ ರಾಜ್ಯ ಮಟ್ಟದಲ್ಲಿ ಒಂದು ಗೌರವಾನ್ವಿತ ಸ್ಥಾನವನ್ನು ಸೃಷ್ಟಿಸುವ ಭರವಸೆ ಅವರ ಬೆಂಬಲಿಗರಿಗೆ ಇತ್ತು. ಅದು ಇನ್ನೂ ಈಡೇರಿಲ್ಲ.

ಇನ್ನೊಬ್ಬ ಹಿರಿಯ ನಾಯಕ, ಎಲ್ಲ ಜನವರ್ಗಗಳಲ್ಲೂ ಸಂಪರ್ಕವನ್ನಿಟ್ಟುಕೊಂಡಿರುವ ಮಾಜಿ ಕೇಂದ್ರ ಮಂತ್ರಿ ಸಿ.ಕೆ. ಜಾಫರ್ ಷರೀಫ್ ವಿಧಾನ ಸಭೆ ಚುನಾವಣೆಯಲ್ಲಿ ಬೆಂಗಳೂರಿನ ಸರ್ವಜ್ಞನಗರಕ್ಕೋ, ಚಳ್ಳಕೆರೆಗೋ ಟಿಕೆಟ್‌ಗೆ ಅರ್ಜಿ ಹಾಕಿಕೊಂಡಿದ್ದಾರೆ. ಅವರನ್ನು ಪಕ್ಷದ ಸ್ಥಳೀಯ ಮುಖಂಡರೆನಿಸಿಕೊಂಡವರು ಯಾರೂ ಮಾತಾಡಿಸಿದಂತಿಲ್ಲ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪದವಿನಿಮಿತ್ತ ನಾಯಕರಷ್ಟೇ. ಅವರ ಸ್ಥಳೀಯ ಕ್ಷೇತ್ರದಲ್ಲಿನ ಪ್ರಭಾವವನ್ನು ಬಿಟ್ಟರೆ, ರಾಜ್ಯದ ಇತರ ಕಡೆಗಳಲ್ಲಿ ಅವರದ್ದೇ ಆದ ಪ್ರಭಾವವಿಲ್ಲ.

ಸದಾನಂದ ಗೌಡರ ಸ್ಥಿತಿ: ಪಕ್ಷದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೂ ಕಿರಿಕಿರಿಯಾಗಿದೆ. ಅವರು ಪ್ರದೇಶ ಬಿಜೆಪಿಯ ಮಾಜಿ ಅಧ್ಯಕ್ಷರೂ ಹೌದು. ಅವರನ್ನು ಈಗ ಯಾವ ಸಮಿತಿಯ ಸಭೆಗೂ ಕರೆಯುತ್ತಿಲ್ಲ. ಸದಾನಂದ ಗೌಡರು ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗುವಂತಹ ವ್ಯಕ್ತಿಯಲ್ಲ. ಆದರೆ ಬಿಜೆಪಿಯಲ್ಲಿ ಮರ್ಯಾದೆ ಸಿಗದಿದ್ದರೆ, ಅವರೇನು ಮಾಡಬೇಕು ?

ಈಗ ಬಿಜೆಪಿಯಿಂದ ಯಡಿಯೂರಪ್ಪ ಅವರ ಪಕ್ಷಕ್ಕೆ ಹೋಗುವ ತೀರ್ಮಾನವನ್ನು ಅಂತರಂಗದಲ್ಲಿ ಪ್ರಕಟಿಸಿ, ಬಹಿರಂಗದಲ್ಲಿ ಆ ವಿಚಾರದಲ್ಲಿ ಮೌನವನ್ನು ಪ್ರದರ್ಶಿಸಿರುವ ಮಂತ್ರಿಗಳು ಶಾಸಕರು ಬಹುಮಟ್ಟಿಗೆ ಸಂಘಪರಿವಾರ ಮೂಲದಿಂದ ಪಕ್ಷದ ಜತೆಯಲ್ಲೇ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿಕೊಂಡು ಬಂದ ವ್ಯಕ್ತಿಗಳಲ್ಲ. ಆದರೆ 2008ರ "ಗೋಲ್ಡ್ ರಷ್‌" ಪಕ್ಷಕ್ಕೆ ನುಗ್ಗಿ ಬಂದವರಲ್ಲಿ ಅನೇಕರು, ಹಾಗೂ ಅನಂತರದ ದಿನಗಳಲ್ಲಿನ ಆಪರೇಶನ್ ಕಮಲದ ಪರಿಣಾಮವಾಗಿ ಬಂದವರು ಬಿಜೆಪಿಯ ಪಾಲಿಗೆ ಈ ಜನ ನಿಜವಾಗಲೂ ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುತ್ತಿರುವವರು. ಅವರಿಗೂ ಬಿಜೆಪಿಯ ಉಪಯುಕ್ತತೆ ಮುಗಿದಿದೆ. ಬಿಜೆಪಿಗೂ ಅವರ ಒತ್ತಡದ ಸಹವಾಸ ಸಾಕಾಗಿದೆ. ಈಗ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವುದು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧದಲ್ಲಿ. ಆದರೆ ರಾಜಕಾರಣಿಗಳ ಗಮನ ಬಹುಮಟ್ಟಿಗೆ ಕೇಂದ್ರೀಕೃತವಾಗಿರುವುದು ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳತ್ತ. ಕಾಂಗ್ರೆಸ್ಸಿನಲ್ಲಿ ಪ್ರದೇಶ ಸಮಿತಿಯ ಅಧ್ಯಕ್ಷರನ್ನು (ಜಿ. ಪರಮೇಶ್ವರ) ಬದಲಾಯಿಸುವ ಸಂಭವವೇನೂ ಇಲ್ಲ. ಅದರ ಅವಶ್ಯಕತೆ ವರಿಷ್ಠರಿಗೆ ಕಂಡು ಬಂದಿಲ್ಲ.ಜಾತ್ಯತೀತ ಜನತಾದಳದಲ್ಲಿ ಕುಮಾರಸ್ವಾಮಿ ಅವರನ್ನು ಬದಲಾಯಿಸುವ ಮಾತನ್ನು ಯಾರೂ ಆಡುವಂತಿಲ್ಲ. ಅಲ್ಲಿ ಅಂತಹ ಚಿಂತನೆ ನಿಷಿದ್ಧ. ಯಡಿಯೂರಪ್ಪ ಅವರೇ ಕರ್ನಾಟಕ ಜನತಾ ಪಕ್ಷವನ್ನು ಹುಟ್ಟುಹಾಕಿದ್ದು. ಅವರನ್ನು ಕದಲಿಸುವ ಅಗತ್ಯವೇ ಇಲ್ಲ.
ಪ್ರದೇಶ ಬಿಜೆಪಿಯ ಅಧ್ಯಕ್ಷರ ಸ್ಥಾನ ನಿಜವಾಗಲೂ ಈಗ ಖಾಲಿಯಾಗಿರುವಂತೆ ಕಂಡು ಬರುತ್ತಿದೆ. ಕೆ.ಎಸ್.ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಜವಾಬ್ದಾರಿಯನ್ನು ಚುನಾವಣೆ ಸಮಯದಲ್ಲಿ ನಿಭಾಯಿಸಲಿಕ್ಕೆ ಸಾಧ್ಯವಿಲ್ಲ. ಹಾಗೆಂದು ಅವರೇನೂ ಹೇಳಿಕೊಂಡಿರಲಿಲ್ಲ. ಆದರೂ ಅದು ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ. ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಅವರೇ ಈಗ ಈ ವಿಚಾರದಲ್ಲಿ ನಿರ್ಧಾರವನ್ನು ಪ್ರಕಟಿಸಬೇಕು. ಯಾರಿದ್ದಾರೆ ಈಗಿನ ಚರ್ಚೆಯಲ್ಲಿ ಆ ಕೊರತೆಯನ್ನು ತುಂಬಬಲ್ಲಂತಹ ವ್ಯಕ್ತಿ ?
ಯಾರ್ಯಾರ್ದೋ ಹೆಸರುಗಳು ಕೇಳಿ ಬರಬಹುದು. ಆದರೆ ಸಮಗ್ರ ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿಯನ್ನು ತಿಳಿದುಕೊಂಡು, ಅದನ್ನು ಮುಂದೆ ಸಾಗಿಸಬಲ್ಲ ಸಾಮರ್ಥ್ಯವಿರುವವರು ಕಣ್ಣಿಗೆ ಬೀಳುತ್ತಿಲ್ಲ. ಸದ್ಯಕ್ಕೆ ಬಿಜೆಪಿಗೆ ರಾಜ್ಯದಲ್ಲಿ ತಲೆಯಾಳಿಲ್ಲದಂತೆ ಆಗಿರುವುದು ನಿಜ. ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರು ಯಡಿಯೂರಪ್ಪ ಪಕ್ಷಕ್ಕೆ ಹೋಗುವುದು ಖಚಿತವಂತೆ. ಬಿಜೆಪಿಯ ಸಂಘಟನೆಯ ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದವರೊಬ್ಬರು (ಜಿಲ್ಲಾ ಅಧ್ಯಕ್ಷರು) ಪಕ್ಷದಿಂದ ನಿರ್ಗಮಿಸಿದ್ದಕ್ಕೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಅಂದರೆ ಪಕ್ಷದ ಸಂಘಟನಾಂಗದಲ್ಲೂ ತಳಮಳ ಆರಂಭವಾಗಿರುವುದು ನಿಜ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಬಲವಾದರೂ ಆಶ್ಚರ್ಯವಿಲ್ಲ.

ಕಿಡಿಗೇಡಿತನ - ಬಿಜೆಪಿಯಲ್ಲಿನ ಸ್ಥಿತಿಗತಿ ಕುರಿತಂತೆ ರಾಷ್ಟ್ರಮಟ್ಟದಲ್ಲಿ ಪ್ರಕಟವಾಗುತ್ತಿರುವ ಆಶಾವಾದ ರಾಜ್ಯಮಟ್ಟದಲ್ಲೇಕೆ ಪ್ರತಿಬಿಂಬಿತವಾಗುತ್ತಿಲ್ಲ ? ಅಲ್ಲಿ ಪಕ್ಷಕ್ಕೆ ಅಧಿಕಾರವಿಲ್ಲ. ಇಲ್ಲಿ ಅಧಿಕಾರವಿದೆ. ಅಧಿಕಾರ ಇದ್ದ ಕಡೆ ಜಗಳ ಇರಲೇಬೇಕಲ್ಲ ಎಂದರೆ ಒಪ್ಪಬಹುದೇ ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com