ಪಾಕಿಸ್ತಾನದಲ್ಲಾಗಿದ್ದರೆ ಇಷ್ಟು ಹೊತ್ತಿಗೆ ಅವರನ್ನು ಸ್ವಂತ ಗೃಹಕ್ಕೋ ಇಲ್ಲಾ ಬೇರೆ ಗ್ರಹಕ್ಕೋ ಕಳುಹಿಸಿರುತ್ತಿದ್ದರು. ಆದರೆ ನಮ್ಮದು ಸಹನಶೀಲ ಮನಸ್ಸು. ಶಾಂತಿಪ್ರಿಯ ದೇಶ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಕೊಡಿ ಎಂದು ಗಾಂಧೀಜಿ ಹೇಳಿದ ಮಾತು ಇಂದಿಗೂ ಸತ್ಯ ಎಂದು ನಂಬಿಕೊಂಡಿರುವ ಜನರೇ ಹೆಚ್ಚು. ಕೆಲವರು ಇದನ್ನು ದೌರ್ಬಲ್ಯ ಎಂದು ಭಾವಿಸುತ್ತಾರೆ. ಪರಿಣಾಮವಾಗಿಯೇ ನಮ್ಮ ದೇಶದಲ್ಲಿ ಇಂದು ಬಹುಸಂಖ್ಯಾತರ ಭಾವನೆಗಳಿಗೆ ಬೆಲೆಯಿಲ್ಲ. ಕೆಲವರು ಮಾತನಾಡುವುದನ್ನು ನೋಡಿದರೆ ಈ ದೇಶದಲ್ಲಿ ಬಹುಸಂಖ್ಯಾತರಿಗೆ ಭಾವನೆಯೇ ಇಲ್ಲ ಎಂಬಂತಿದೆ.
ದೇಶದ ವಿರುದ್ಧ ಯುದ್ಧ ಹೂಡಿದಂತೆ ಮುಂಬಯಿ ದಾಳಿ ಮಾಡಿದ ಪಾಕಿಸ್ತಾನದ ಕಸಬ್ನನ್ನು 4 ವರ್ಷ ಸಾಕಿ, ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದರೂ ಕೂಡ ಕದ್ದುಮುಚ್ಚಿ ಗಲ್ಲಿಗೇರಿಸಿದ ಹೇಡಿಗಳಿವರು.
ನ್ಯಾಯಾಲಯದ ತೀರ್ಪಿನ ನಂತರವೂ ಅಫ್ಜಲ್ಗುರುವನ್ನು ಗಲ್ಲಿಗೇರಿಸುವ ತಾಕತ್ತಿಲ್ಲದ ಕೇಂದ್ರ ಸರ್ಕಾರ, ಪಾಕಿಸ್ತಾನೀಯರು ನಮ್ಮ ಸೈನಿಕರ ತಲೆ ಕಡಿದುಕೊಂಡು ಹೋದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡದಷ್ಟು ಪುಕ್ಕಲ ಕೇಂದ್ರ ಸರ್ಕಾರ, ಧೈರ್ಯದಿಂದ ಹಿಂದೂ ಭಯೋತ್ಪಾದನೆ ಕುರಿತು ಮಾತನಾಡುತ್ತದೆ.
ಇದೇ ಗೃಹ ಸಚಿವ ಸುಶೀಲ್ಕುಮಾರ ಶಿಂಧೆಗೆ ಕಸಬ್ನನ್ನು ನಾಳೆ ನಾವು ಗಲ್ಲಿಗೇರಿಸುತ್ತೇವೆ. ಈ ಮೂಲಕ ನಮ್ಮ ದೇಶದ ಮೇಲೆ ದಾಳಿ ಮಾಡಿದ ಆರೋಪಿಯನ್ನು ಎಲ್ಲ ಕಾನೂನು ಪ್ರಕ್ರಿಯೆಗಳೊಂದಿಗೆ ಶಿಕ್ಷೆಗೊಳಪಡಿಸುತ್ತಿದ್ದೇವೆ ಎಂದು ಘೋಷಿಸುವ ಧೈರ್ಯವಿರಲಿಲ್ಲ. ಕಸಬ್ನನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕಿತ್ತು ಎಂದಲ್ಲ. ಆದರೆ ದೇಶಕ್ಕೆಲ್ಲ ಹೇಳಿ ಗಲ್ಲಿಗೇರಿಸಬೇಕಿತ್ತು. ಅದು ನಿಜವಾದ ತಾಕತ್ತು. ಉಗ್ರರಿಗೆ, ಪಾಕಿಸ್ತಾನಕ್ಕೆ ನಮ್ಮ ಧೈರ್ಯ ತೋರಿಸಬಹುದಿತ್ತು. ನಮ್ಮ ದೇಶಕ್ಕೆ ನುಗ್ಗಿದರೆ ಇದೇ ಗತಿಯಾಗುತ್ತದೆ ಎಂಬ ಸಂದೇಶ ರವಾನಿಸಬಹುದಿತ್ತು. ಅದನ್ನೆಲ್ಲ ಬಿಟ್ಟು ಪುಕ್ಕಲರಂತೆ ಗೌಪ್ಯವಾಗಿ ಗಲ್ಲಿಗೇರಿಸಿ, ಆಮೇಲೆ ಮಹತ್ ಸಾಧನೆ ಮಾಡಿದವರಂತೆ ಕಾಲರ್ ಮೇಲೇರಿಸಿಕೊಂಡಿದ್ದು ಇದೇ ಗೃಹ ಸಚಿವರು.
ಕಸಬ್ ಗಲ್ಲಿಗೇರಿಸುವ ಸಂಗತಿ ಗೊತ್ತಾಗಿಬಿಟ್ಟರೆ ಅಲ್ಪಸಂಖ್ಯಾತರು ಸಿಟ್ಟಿಗೆದ್ದು ಗಲಾಟೆ ಮಾಡಿದರೆ ಉಗ್ರರು ಅವತ್ತೇ ಎಲ್ಲಾದರೂ ವಿಧ್ವಂಸಕ ಕೃತ್ಯ ನಡೆಸಿದರೆ ಎಂಬ ಭಯ. ಅಫ್ಜಲ್ಗುರುವನ್ನು ಗಲ್ಲಿಗೇರಿಸಿದರೆ ಎಲ್ಲಿ ಅಲ್ಪಸಂಖ್ಯಾತರು ಬೇಸರ ಮಾಡಿಕೊಂಡುಬಿಡುತ್ತಾರೋ, ಬೇಸರದಿಂದ ಚುನಾವಣೆಯಲ್ಲಿ ಮತ ಹಾಕದಿದ್ದರೆ ಎಂಬ ಭಯ. ಅದೇ ಭಯ ಹಿಂದೂ ಭಯೋತ್ಪಾದನೆ ಕುರಿತು ಮಾತನಾಡುವಾಗ ಇಲ್ಲ. ಹಿಂದು ಭಯೋತ್ಪಾದನೆ ಯಾವ ಪ್ರಮಾಣದಲ್ಲಿದೆ ಎಂಬುದು ಇದರಿಂದಲೇ ಅರಿವಾಗುತ್ತದೆ.
ಭಯೋತ್ಪಾದನೆ ಪ್ರಕರಣದಲ್ಲಿ ಮುಸ್ಲಿಮರ ಬಂಧನವಾದಾಗ ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವ ಕಾಂಗ್ರೆಸ್, ಹಿಂದುಗಳ ಬಂಧನವಾದಾಗ ಹಿಂದೂ (ಕೇಸರಿ) ಭಯೋತ್ಪಾದನೆ ಎಂದು ಧರ್ಮವನ್ನು ಸೇರಿಸುತ್ತದೆ.
ಆರೆಸ್ಸೆಸ್ ಮತ್ತು ಬಿಜೆಪಿ ಹಿಂದು ಭಯೋತ್ಪಾದಕರನ್ನು ತಯಾರು ಮಾಡುತ್ತಿವೆ. ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ ಶಿಂಧೆ ಹೇಳಿಕೆಗೆ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಬೆಂಬಲ ಸೂಚಿಸಿ, 'ಶಿಂಧೆ ಅವರು ಹೇಳಿದ್ದು ಸರಿಯಾಗಿದೆ. ಅದಕ್ಕೆ ಸರ್ಕಾರದ ಬಳಿ ದಾಖಲೆಯಿದೆ' ಎಂದಿದ್ದಾರೆ. ಇದೇ ಸಲ್ಮಾನ್ ಖುರ್ಷಿದ್ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಲಾಗಿತ್ತು. ಆಗ ಸಲ್ಮಾನ್ ಖುರ್ಷಿದ್ ಅವರು ರಾಜಿನಾಮೆ ನೀಡುವ ಬದಲು ನ್ಯಾಯಾಲಯದಲ್ಲಿ ತೀರ್ಮಾನವಾಗಲಿ ಎಂದಿದ್ದರು. ಜತೆಗೆ ಅರವಿಂದ್ ಕೇಜ್ರಿವಾಲ್ಗೆ ಧಮಕಿಯನ್ನೂ ಹಾಕಿದ್ದರು.
ತಮ್ಮ ವಿರುದ್ಧ ಆರೋಪ ಬಂದರೆ ಅದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ಹಿಂದುಗಳ ಮೇಲಾದರೆ ಸರ್ಕಾರದ ಬಳಿ ಇರುವ ದಾಖಲೆಗಳು ಸಾಕು!
ಇನ್ನು ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ಹೆಸರು ಹೇಳಿ, ಶಿಂಧೆ ಅವರು ಹೇಳಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರೆಲ್ಲ ಒಂದಲ್ಲ ಒಂದು ಸಮಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು ಅಥವಾ ಆರೆಸ್ಸೆಸ್ನೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದು ಅವರ ವಾದ.
ಕಾಂಗ್ರೆಸ್ ಕಾರ್ಯರ್ತರು ಅತ್ಯಾಚಾರ ಮಾಡೋದಿಲ್ವೇ? ರಾಜಸ್ಥಾನದಲ್ಲಿ ಬನ್ವಾರಿದೇವಿ ಪ್ರಕರಣದಲ್ಲಿ ಅಲ್ಲಿದ್ದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಾಜೀನಾಮೆ ನೀಡಿತ್ತು. ಆಸ್ಸಾಂನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ನಾಯಕನನ್ನು ಜನರೇ ಹಿಡಿದುಬಡಿದಿದ್ದರು. ಅನುಮಾನಗೊಂಡು ಹೆಂಡತಿಯನ್ನು ಕೊಂದು, ತಂದೂರ್ನೊಳಗೆ ಹಾಕಿ ಸುಟ್ಟ ಸುಶೀಲ್ ಶರ್ಮ ಕಾಂಗ್ರೆಸ್ ಯುವನಾಯಕನಾಗಿದ್ದ. ನರ್ಸ್ ಬನ್ವಾರಿದೇವಿ ಅಪಹರಣ ಪ್ರಕರಣದಲ್ಲಿ ರಾಜಸ್ಥಾನ (ಕಾಂಗ್ರೆಸ್) ಸರ್ಕಾರದ ಸಚಿವ ಮಹಿಪಾಲ ಅವರೂ ಆರೋಪಿ. ಇವರು ಆಕೆಯೊಂದಿಗೆ ಲೈಂಗಿಕ ಸಂಬಂಧಹೊಂದಿದ್ದ ಸಿಡಿ ಪರಿಣಾಮವಾಗಿಯೇ ಆಕೆಯನ್ನು ಅಪಹರಿಸಲಾಗಿದೆ ಎಂಬ ಆರೋಪ ಇತ್ತು. ಪರಿಣಾಮವಾಗಿ ರಾಜಸ್ಥಾನದ ಸಂಪೂರ್ಣ ಸಚಿವ ಸಂಪುಟ ರಾಜಿನಾಮೆ ನೀಡಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಅತ್ಯಾಚಾರಿಗಳನ್ನು ಸಾಕುತ್ತಿದೆ, ಅತ್ಯಾಚಾರಿಗಳ ತರಬೇತಿ ಕೇಂದ್ರ ನಡೆಸುತ್ತಿದೆ ಎಂದು ಆರೋಪಿಸಲು ಸಾಧ್ಯವೇ?
ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಮಾಡಿಲ್ವೇ? ದೊಡ್ಡ ದೊಡ್ಡ ಹಗರಣಗಳಲ್ಲಿ ಭಾಗಿಯಾದವರು ಕಾಂಗ್ರೆಸ್ ಸಂಪರ್ಕ ಹೊಂದಿರಲಿಲ್ಲವೇ? ಬೋಫೋರ್ಸ್, ಭೋಪಾಲ್ ದುರಂತದ ರೂವಾರಿ ಕ್ವಟ್ರೋಕಿ ಸೇರಿದಂತೆ ಅದೆಷ್ಟು ಹಗರಣದ ರೂವಾರಿಗಳು ಕಾಂಗ್ರೆಸ್ನೊಂದಿಗೆ ಸಂಪರ್ಕಹೊಂದಿರಲಿಲ್ಲ? ಅದೆಲ್ಲದರ ಹೊಣೆಯನ್ನು ಹೊರಲು ಕಾಂಗ್ರೆಸ್ ಸಿದ್ಧವಿದೆಯೇ? ಕಾರ್ಯಕರ್ತರು ಪಕ್ಷದೊಂದಿಗೆ ಸಂಪರ್ಕ ಇರುವವರು ಮಾಡಿದ ಅಪರಾಧಗಳ, ತಪ್ಪಿನ ಹೊಣೆಯನ್ನು ಪಕ್ಷ ಹೊರಲು ಸಾಧ್ಯವೇ?
ಗೃಹ ಸಚಿವ ಸುಶೀಲ್ಕುಮಾರ ಶಿಂಧೆ ಜೋಕರ್ನಂತೆ ಕಾಣಿಸುತ್ತಾರೆ. ಅವರಿಗೆ ಗಾಂಭೀರ್ಯ ಎಂದರೇನು ಎಂಬುದೇ ಗೊತ್ತಿದ್ದಂತಿಲ್ಲ. ಸದಾ ಹಾಸ್ಯೋತ್ಸವದಲ್ಲಿ ಭಾಗವಹಿಸಿದವರಂತೆ ಮಾತನಾಡುತ್ತಾರೆ. ಹಾಂ! ಇದಕ್ಕೂ ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಕೆಲವು ಸ್ಯಾಂಪಲ್ಗಳು ಇಲ್ಲಿವೆ ನೋಡಿ.
2012ರಲ್ಲಿ ಉತ್ತರ ಭಾರತದಲ್ಲಿ ವಿದ್ಯುತ್ ಗ್ರಿಡ್ ವೈಫಲ್ಯದಿಂದ ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಉತ್ತರ ಭಾರತದ 5 ರಾಜ್ಯಗಳು ಕಗ್ಗತ್ತಲಿಗೆ ಜಾರಿದ್ದವು. ಆಗ ಇಂಧನ ಸಚಿವರಾಗಿದ್ದುದು ಇದೇ ಸುಶೀಲ್ಕುಮಾರ ಶಿಂಧೆ. ವಿದ್ಯುತ್ ವೈಫಲ್ಯದಿಂದ ಕರೆಂಟ್ ಹೊಡೆದಂತಾಗಿದ್ದ ಶಿಂಧೆ ಅವರಿಗೆ ಕಲ್ಲಿದ್ದಲು ಮಸಿಯೂ ಮೆತ್ತಿಕೊಂಡಿತ್ತು.
ಶಿಂಧೆ ಅವರು ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಬಿಇಎಲ್ಗೆ (ಭೂಷಣ್ ಎನರ್ಜಿ ಲಿಮಿಟೆಡ್) ಪ್ರತ್ಯೇಕ ಕಲ್ಲಿದ್ದಲು ಗಣಿ ಮಂಜೂರು ಮಾಡುವಂತೆ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಇದು ಕಲ್ಲಿದ್ದಲು ಹಗರಣದಲ್ಲಿ ಪ್ರಸ್ತಾಪವಾಗಿತ್ತು. ಆನಂತರ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು. ಆ ಸಂದರ್ಭದಲ್ಲಿ ಪುಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸುಶೀಲ್ಕುಮಾರ ಶಿಂಧೆಯವರು 'ಭೊಫೋರ್ಸ್ ಹಗರಣದಂತೆ ಮುಂದೊಂದು ದಿನ ಕಲ್ಲಿದ್ದಲು ಹಗರಣವೂ ಮರೆತುಹೋಗುತ್ತದೆ' ಎಂದಿದ್ದರು. ಇದು ವಿವಾದವಾಗುತ್ತಿದೆ ಅನ್ನಿಸಿದಾಗ, 'ನಾನು ಪುಣೆಯಲ್ಲಿ ನನ್ನ ಸಹಪಾಠಿಯ ಸನ್ಮಾನ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಯಾರೂ ನಗುತ್ತಲೇ ಇರಲಿಲ್ಲ. ಅವರನ್ನು ನಗಿಸೋಣ ಎಂದು ಹಾಗೆ ಹೇಳಿದೆ ಹೊರತೂ ಬೇರೆ ಉದ್ದೇಶದಿಂದಲ್ಲ' ಎಂದು ಹೇಳಿದ್ದರು.
ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿದೆ. ಇತ್ತೀಚೆಗೆ ಪತ್ರಕರ್ತರು ಲೋಕಸಭೆ ಮೇಲಿನ ದಾಳಿಯ ಅಪರಾಧಿ ಅಫ್ಜಲ್ಗುರು ಕ್ಷಮಾದಾನ ಅರ್ಜಿ ಕುರಿತು ಪ್ರಶ್ನಿಸಿದಾಗ, 'ದಿಲ್ಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ಉದ್ಭವಿಸಿರುವ ಸ್ಥಿತಿ ನಿಭಾಯಿಸುವಲ್ಲಿ ಬ್ಯೂಸಿ ಆಗಿದ್ದೇನೆ. ಹೀಗಾಗಿ ಅಫ್ಜಲ್ಗುರು ಕುರಿತು ಗಮನಹರಿಸಲು ಸಮಯವಿಲ್ಲ' ಎಂದು ಹೇಳಿದ್ದರು. ಹೀಗೆ ಹೇಳುವಾಗ ದಿಲ್ಲಿ ಅತ್ಯಾಚಾರ ನಡೆದಿದ್ದು 2012ರಲ್ಲಿ ಮತ್ತು ಅಫ್ಜಲ್ಗುರುವಿಗೆ ಗಲ್ಲುಶಿಕ್ಷೆಯಾಗಿದ್ದು 2006ರಲ್ಲಿ ಎಂಬುದನ್ನು ಗೃಹ ಸಚಿವರು ಮರೆತಂತಿದೆ. ಅಷ್ಟು ವರ್ಷದಿಂದ ಬಾಕಿ ಇರುವ ಕೆಲಸಕ್ಕೆ ಇತ್ತೀಚೆಗೆ ನಡೆದ ಅತ್ಯಾಚಾರದ ನೆಪವೊಡ್ಡುತ್ತಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಹಾಸ್ಯ ಸಚಿವರ ಹುದ್ದೆ ಎಂಬುದೊಂದಿದ್ದರೆ ಅದಕ್ಕೆ ಅತ್ಯಂತ ಅರ್ಹ ವ್ಯಕ್ತಿ ಸುಶೀಲ್ಕುಮಾರ ಶಿಂಧೆ. ಅಂತಹ ಸಚಿವ ಸ್ಥಾನ ಇಲ್ಲದಿರುವುದರಿಂದ ಅವರಿಗೆ ಗೃಹ ಸಚಿವರ ಸ್ಥಾನ ನೀಡಲಾಗಿದೆ.
ದೇಶದ ಗೃಹ ಸಚಿವರಾಗಿ ನೀಡುವ ಹೇಳಿಕೆಗಳು ದೇಶ-ವಿದೇಶಗಳ ಸ್ಥಿತಿಗತಿಗಳ ಮೇಲೆ ಪರಿಣಾಮಬೀರುತ್ತದೆ. ಅವರು ಆಡುವ ಮಾತುಗಳು ಭಾರತದ ಕೇಂದ್ರ ಸರ್ಕಾರದ ಮಾತುಗಳಾಗಿರುತ್ತವೆಯೇ ಹೊರತು, ಸುಶೀಲ್ಕುಮಾರ ಶಿಂಧೆ ಅವರ ಅಥವಾ ಕಾಂಗ್ರೆಸ್ ನಾಯಕರೊಬ್ಬರ ಹೇಳಿಕೆಯಾಗಿರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮನವೊಲಿಕೆ ಅನಿವಾರ್ಯವಿರಬಹುದು. ಆ ನೆಪದಿಂದ ಗೃಹಸಚಿವರು ಹೇಳಿಕೆ ನೀಡಿದರೆ, ಪಾಕಿಸ್ತಾನದಲ್ಲಿ ಕುಳಿತ ಉಗ್ರರು ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಈಗ ಗೊತ್ತಾಗಿರಬಹುದು.
ಮುತ್ತು ಒಡೆದರೆ ಹೋಯಿತು. ಮಾತು ಆಡಿದರೆ ಹೋಯಿತು.
- ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ