ಇದೇನು ಇಶ್ರತ್ ಕುರಿತ ಕಾಳಜಿಯಾ?
ಇಶ್ರತ್ ಜಹಾನ್ಳದ್ದು ನಕಲಿ ಎನ್ಕೌಂಟರ್ ಎಂದು ನಮ್ಮನ್ನು ನಂಬಿಸುವುದಕ್ಕೆ ಸಾಧ್ಯವಾಗುವ ಕೆಲಸಗಳನ್ನೆಲ್ಲ ಸಿಬಿಐ ಮಾಡಿದೆ. ಆದರೆ ಇತ್ತೀಚೆಗೆ ಅದು ಈ ಪ್ರಕರಣದ ಸಂಬಂಧ ಸಲ್ಲಿಸಿರುವ ಆರೋಪಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ವರ್ತನೆಗಳನ್ನು ಗಮನಿಸಿದಾಗ ಸಿಬಿಐನ ಸ್ವಾಯತ್ತೆಯೇ ಪ್ರಶ್ನೆಗೆ ಒಳಗಾಗುತ್ತದೆ. ಅಲ್ಲದೇ ನಕಲಿ ಎನ್ಕೌಂಟರ್ನ ಸಂಬಂಧ ಎದ್ದಿರುವ ಉದಾರವಾದಿಗಳ ಬೊಬ್ಬೆಯು ಪೊಳ್ಳುತನದ್ದು ಎಂಬುದು ಸ್ಪಷ್ಟವಾಗುತ್ತದೆ.
ಇಶ್ರತ್ ಜಹಾನ್ಳ ಎನ್ಕೌಂಟರ್ ಕುರಿತು ಎದ್ದಿರುವ ಯಾವ ಪ್ರಶ್ನೆಗಳೂ ನಮ್ಮ 'ಸಾರ್ವತ್ರಿಕ ಪ್ರಜ್ಞೆ'ಯನ್ನು ತಿವಿದಂಥದ್ದಲ್ಲ. ಬದಲಿಗೆ ದೆಹಲಿ ಹೊರಗಿನವರಾದ ನರೇಂದ್ರ ಮೋದಿ ಎಂಬ ವ್ಯಕ್ತಿಯನ್ನು ಹಣಿಯುವ ಹಿತಾಸಕ್ತಿಯಿಂದಲೇ ರೂಪಿತಗೊಂಡಿದ್ದು. ಈ ವ್ಯಕ್ತಿ ಇಲ್ಲದಿದ್ದರೆ ಇವ್ಯಾವ ಪ್ರಶ್ನೆಗಳನ್ನೂ ಯಾರೂ ಎತ್ತುತ್ತಲೇ ಇರಲಿಲ್ಲ. ಸಿಬಿಐ 'ಪಂಜರದ ಗಿಣಿ'ಯಾಗಿಯೇ ಇರುತ್ತಿತ್ತು. ಯುಪಿಎ ಸರ್ಕಾರವು ತಾನು ಸಿಬಿಐಗೆ ಸ್ವಾಯತ್ತೆ ಕೊಡುತ್ತೇನೆ ಎನ್ನುತ್ತಿರಲಿಲ್ಲ. ಉದಾರವಾದಿಗಳೆನಿಸಿಕೊಂಡವರು ಟಿವಿ ಶೋಗಳಲ್ಲಿ, ಇಶ್ರತ್ ಜಹಾನ್ಳನ್ನು ಅನ್ಯಾಯವಾಗಿ ಹೊಡೆದುಹಾಕಲಾಯಿತು ಎಂದು ಬೊಬ್ಬೆ ಹಾಕುತ್ತಲೇ ಇರಲಿಲ್ಲ.
ವಾಸ್ತವ ಏನೆಂದರೆ ನರೇಂದ್ರ ಮೋದಿ ಉನ್ನತಿ ನೋಡಿ ಎಲ್ಲರೂ ಅಭದ್ರತೆ ಮತ್ತು ಅಸೌಖ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಅಭದ್ರತೆಗೆ ನರೇಂದ್ರ ಮೋದಿ ಎಂಥವರು ಎಂಬ ಅಂಶ ಕಾರಣವಾಗಿಲ್ಲ, ನಾವು ಎಂಥವರು ಎಂಬುದೇ ಕಾರಣವಾಗಿದೆ. ಕಳೆದ 11 ವರ್ಷಗಳಲ್ಲಿ ಸರ್ಕಾರದ ಸಂಪನ್ಮೂಲಗಳು, ಮಾಧ್ಯಮ, ನ್ಯಾಯಾಲಯ ಹಾಗೂ ಎಲ್ಲ ತನಿಖಾ ಸಂಸ್ಥೆಗಳು ಈ ಒಬ್ಬ ವ್ಯಕ್ತಿಯನ್ನು ಹೇಗಾದರೂ ಮಾಡಿ ಸಿಕ್ಕಿಸಬೇಕು ಎಂಬ ತಹತಹ ತೋರ್ಪಡಿಸಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇನ್ಯಾರ ವಿಚಾರದಲ್ಲಾದರೂ ಹೀಗಾಗಿದ್ದಿದೆಯೇ? ಇಲ್ಲ!
ಈ ಸ್ಕೀಮ್ ಅದ್ಹೇಗೆ ಕಾರ್ಯಪ್ರವೃತ್ತವಾಗುತ್ತಿದೆ ನೋಡಿ. ಕೆಳ ನ್ಯಾಯಾಲಯವು ಮೋದಿಯವರನ್ನು ತಪ್ಪಿತಸ್ಥ ಎಂದು ತೀರ್ಪ ಕೊಡುವುದಕ್ಕೆ ವಿಫಲವಾದಾಗ ಮೇಲಿನ ಕೋರ್ಟ್ಗಳಿಗೆ ಹೋಗುವುದು, ಉನ್ನತ ಹಂತದಲ್ಲಿಯೂ ಸಾಬೀತು ಮಾಡಲಾಗದಿದ್ದಾಗ ಇನ್ನೊಂದು ತನಿಖೆಯನ್ನು ಪ್ರಾರಂಭಿಸುವುದು; ಅದೂ ಕೆಲಸಕ್ಕೆ ಬರದಿದ್ದಾಗ ಸಿಟ್ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್) ರಚಿಸುವಂತೆ ನ್ಯಾಯಲಯವನ್ನು ಕೇಳುವುದು; ಸಿಟ್ ವರದಿಯೂ ತಮ್ಮ ಮೂಗಿನ ನೇರಕ್ಕೆ ಬರದಿದ್ದಾಗ ಅಮಿಕಸ್ ಕ್ಯೂರಿ ನೇಮಿಸುವುದು; ಅದೂ ಸರಿಯಾಗಿ ಸಹಾಯಕ್ಕೆ ಬರದಿದ್ದಾಗ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಸಿಟ್ ರೂಪಿಸುವುದು; ಇವ್ಯಾವುವೂ ತಮಗೆ ಬೇಕಾದ ಫಲಿತಾಂಶ ನೀಡದಿದ್ದಾಗ ಸಿಬಿಐ ಅನ್ನು ಉಪಯೋಗಿಸಿಕೊಳ್ಳುವುದು. ಹೀಗೆಯೇ ನಡೆಯುತ್ತಿದೆ.
ಈಗ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ: ಒಬ್ಬ ಮನುಷ್ಯನನ್ನು ಹೇಗಾದರೂ ಜೈಲಿಗೆ ಕಳುಹಿಸಿಬಿಡಬೇಕು ಎಂಬ ಕಾರಣಕ್ಕೆ ಜಸ್ಟೀಸ್ ನೆಪದಲ್ಲಿ ಕೋಟಿಗಟ್ಟಲೆ ರುಪಾಯಿ ಹಣವನ್ನೂ, ಅಮೂಲ್ಯ ಕಾನೂನು ವೇಳೆಯನ್ನು ವ್ಯಯ ಮಾಡುತ್ತಿರುವುದು ಯಾವ ಉದ್ದೇಶಕ್ಕೆ? ಮೋದಿ ಹೆಸರೆತ್ತಿದೊಡನೆ ಎಲ್ಲರೂ ವ್ಯತಿರಿಕ್ತ ವರ್ತನೆಗಳಿಗೆ ಶರಣಾಗುತ್ತಿದ್ದಾರೆ. ಕಾಂಗ್ರೆಸ್ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ಡಿಸೆಂಬರ್ನವರೆಗೆ ಆಡಳಿತದ ಬಗ್ಗೆಯೇ ಔದಾಸೀನ್ಯ ತಾಳಿದ್ದ ಅದು, ಮೋದಿಯನ್ನು ಹೇಗಾದರೂ ಅಧಿಕಾರ ಕೇಂದ್ರದಿಂದ ದೂರವಿರಿಸಬೇಕು ಎಂಬ ಏಕಾಏಕಿ ಜ್ಞಾನೋದಯದಲ್ಲಿ ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಸುಧಾರಣೆಗೆ ಮುನ್ನುಗ್ಗಿತು. ಒಂದು ಇಂಟಲಿಜೆನ್ಸ್ ಘಟಕವನ್ನೆ ಇನ್ನೊಂದರ ವಿರುದ್ಧ ಎತ್ತಿಕಟ್ಟಿ ರಾಷ್ಟ್ರೀಯ ಭದ್ರತೆಯ ಜತೆ ರಾಜಿ ಮಾಡಿಕೊಳ್ಳುವುದಕ್ಕೆ ಅದು ಹಿಂದೆಮುಂದೆ ನೋಡಲಿಲ್ಲ. ಗುಜರಾತ್ ಚುನಾವಣೆಗೆ ಪೂರ್ವದಲ್ಲಿ ಅಜ್ಮಲ್ ಕಸಬ್ನನ್ನು, ನಂತರದಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಮೋದಿಗೆ ವಿರುದ್ಧವಾಗಿ ತನ್ನ ಇಮೇಜ್ ವ್ಯಾಖ್ಯಾನಕ್ಕೆ ತೊಡಗಿಕೊಂಡಿತು. ಮನಮೋಹನ್ ಸಿಂಗ್ ಅವರಿಗೆ ನಿಕಟವರ್ತಿಗಳಾದ ಪವನ್ ಕುಮಾರ್ ಬನ್ಸಲ್ ಮತ್ತು ಅಶ್ವನಿ ಕುಮಾರ್ ಅವರನ್ನೂ ತ್ಯಾಗ ಮಾಡುವುದಕ್ಕೆ ಹಿಂಜರಿಯಲಿಲ್ಲ. ಏಕೆಂದರೆ ಆ ಮೂಲಕ ಸಿಬಿಐಗೆ ಸ್ವಲ್ಪಮಟ್ಟದ ವಿಶ್ವಾಸಾರ್ಹತೆ ತಂದು ಮೋದಿಯ ಬೆನ್ನು ಬೀಳುವಂತೆ ನೋಡಿಕೊಳ್ಳುವ ದರ್ದು ಅದಕ್ಕಿತ್ತು. ಮೋದಿ ವಿರುದ್ಧ ಹೋರಾಟಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ತನ್ನೆಲ್ಲ ದಾಳಗಳನ್ನೂ ಉರುಳಿಸಿಕೊಳ್ಳುವುದಕ್ಕೆ ಸಿದ್ಧ ಎಂಬ ಹಂತಕ್ಕೆ ಕಾಂಗ್ರೆಸ್ ಬಂದು ನಿಂತಿದೆ. ಕುದುರೆ ಏರಿ ಬರುವ ಒಬ್ಬ ಮನುಷ್ಯ ದೇಶದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಬಿಡಲಾರ ಎಂದಿದ್ದರು ರಾಹುಲ್ ಗಾಂಧಿ. ಅವರಿಗೆ ತಮ್ಮದೇ ಮಾತಿನ ಮೇಲೆ ನಂಬಿಕೆ ಇದೆಯೇ ಎಂಬ ಅನುಮಾನ. ಏಕೆಂದರೆ 'ಒಬ್ಬ ವ್ಯಕ್ತಿ'ಯನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸುವುದಕ್ಕೆ ಇವರಿಗೇಕೆ ಇಷ್ಟು ಕಾತುರ?
ಇದೇ ಹಿನ್ನೆಲೆಯಲ್ಲೆ ಸಿಬಿಐಗೆ ಸ್ವಾಯತ್ತೆ ನೀಡುವ ಸರ್ಕಾರದ ಹೆಜ್ಜೆಯನ್ನು ಪರಾಮರ್ಶಿಸಬೇಕಾಗುತ್ತದೆ. ಮೂರು ಕಾರಣಗಳಿಂದಾಗಿ ಇದೊಂದು ಪೊಳ್ಳು ಸ್ವಾಯತ್ತೆ ಎನ್ನಿಸಿಕೊಳ್ಳುತ್ತದೆ.
ಮೊದಲನೆಯದಾಗಿ, ಪ್ರತಿಪಕ್ಷ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಸಿಬಿಐ ಮುಖ್ಯಸ್ಥನನ್ನು ಆರಿಸುವ ಪ್ಯಾನೆಲ್ನಲ್ಲಿ ಸೇರಿಸಿಕೊಂಡಾಕ್ಷಣ ಆ ಸಂಸ್ಥೆ ಸ್ವತಂತ್ರ ಎಂದೆನಿಸಿಬಿಡುವುದಿಲ್ಲ. ಏಕೆಂದರೆ ಸರ್ಕಾರ ಮೊದಲೆ ಶಾರ್ಟ್ಲಿಸ್ಟ್ ಮಾಡಿದ್ದ ಪಟ್ಟಿಯಿಂದ ಒಬ್ಬರನ್ನು ಅಲ್ಲಿ ಆರಿಸಲಾಗುತ್ತದೆ ಅಷ್ಟೆ. ಮುಖ್ಯಸ್ಥನ ಆಯ್ಕೆಯಾದ ಬಳಿಕವೂ ದಿನನಿತ್ಯದ ಚಟುವಟಿಕೆ ಹಾಗೂ ಸಿಬ್ಬಂದಿ ಅಗತ್ಯಕ್ಕೆ ಸಿಬಿಐ, ಸರ್ಕಾರವನ್ನೇ ಅವಲಂಬಿಸಬೇಕಿರುತ್ತದೆ. ಬಹುಪಕ್ಷಗಳ ಸಂಸದೀಯ ಪರಿವೀಕ್ಷಣಾ ಸಮಿತಿಗೆ ಸಿಬಿಐ ಅನ್ನು ಉತ್ತರದಾಯಿಯನ್ನಾಗಿಸಿ, ಸರ್ಕಾರದ ಹಿಡಿತದಿಂದ ತಪ್ಪಿಸುವುದು ಆಗಬೇಕಿರುವ ಕೆಲಸ. ಅದೇನೂ ಆಗುತ್ತಿಲ್ಲ.
ಎರಡನೆಯದಾಗಿ, ಸಿಬಿಐಗೆ ಸ್ವಾಯತ್ತೆ ಎಂಬ ಸರ್ಕಾರದ ಮಾತು ಭಯದಿಂದ ಹುಟ್ಟಿರುವಂಥದ್ದು. ಸಿಬಿಐಗೆ ನೀಡಬೇಕಿರುವ ಸ್ವಾಯತ್ತೆ ಯಾವ ನಮೂನೆಯದಿರಬೇಕು ಎಂದು ನ್ಯಾಯಾಲಯಗಳು ನಿರ್ದೇಶಿಸುವ ಮುಂಚೆಯೆ ತನಗೆ ಅನುಕೂಲವಾಗುವ ರೀತಿಯಲ್ಲಿ ಈ ವ್ಯಾಖ್ಯೆ ರೂಪುಗೊಂಡುಬಿಡಲಿ ಎಂಬ ಧಾವಂತ.
ಮೂರನೆಯದಾಗಿ, ಅದು ಈಗ ನೇಮಿಸಿರುವ ಸಿಬಿಐ ನಿರ್ದೇಶಕರ ಅವಧಿ ಮುಂದಿನ ಚುನಾವಣೆಯ ಕೆಲದಿನಗಳವರೆಗೆ ಇದೆ. ಒಂದೊಮ್ಮೆ ಚುನಾವಣೆ ಸೋತರೂ ನಂತರ ಸಿಬಿಐ ಮುಖ್ಯಸ್ಥರ ನೇಮಕದಲ್ಲಿ ತನ್ನ ಮಾತೂ ಇರಲಿ ಎಂಬ ಲೆಕ್ಕಾಚಾರವನ್ನೂ ಇಲ್ಲಿ ಕಾಣಬಹುದು.
ಇಶ್ರತ್ ಜಹಾನ್ ಪ್ರಕರಣಕ್ಕೆ ಬರುವುದಾದರೆ, ಆಕೆಯ ಎನ್ಕೌಂಟರ್ ನಕಲಿ ಎಂದು ಸಿಬಿಐ ಹೇಳಿದೆ. ಆದರೆ ಈ ಎನ್ಕೌಂಟರ್ ಗುಜರಾತ್ ಪೊಲೀಸರ ಸಂಪೂರ್ಣ ವ್ಯಾಪ್ತಿಯಲ್ಲೇ ಆಗಿರಲಿಲ್ಲ ಎಂಬುದನ್ನು ಮುಚ್ಚಿಟ್ಟಿದೆ. ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿ ರಾಜಿಂದರ್ ಕುಮಾರ್ ಈ ಎನ್ಕೌಂಟರ್ನ ಮಾಸ್ಟರ್ಮೈಂಡ್ ಎಂದು ಸಿಬಿಐ ಆರೋಪಪಟ್ಟಿ ಸೂಚಿಸುತ್ತದೆಯಾದರೂ ಆ ಅಧಿಕಾರಿಯನ್ನು ಹೆಸರಿಸಿಲ್ಲ. ಬದಲಿಗೆ ಎನ್ಕೌಂಟರ್ನಲ್ಲಿ ಪಾಲುಗೊಂಡಿದ್ದ ಗುಜರಾತ್ ಪೊಲೀಸರ ಹೆಸರನ್ನಷ್ಟೆ ಪಟ್ಟಿ ಮಾಡಲಾಗಿದೆ. ರಾಣಿಯನ್ನು ರಕ್ಷಿಸುವುದಕ್ಕೆ ಕಾಲಾಳುಗಳ ಬಲಿ!
ಇಲ್ಲಿ ಎರಡು ಕಾರಣಗಳಿದ್ದಿರಬಹುದು. ಜುಲೈ 31ರಂದು ರಾಜಿಂದರ್ ನಿವೃತ್ತಿ ಹೊಂದಿದ ನಂತರ ಅವರ ಹಿಂದೆ ಬಿದ್ದರೆ ಸಾಕು. ಆಗ ಸೇವೆಯಲ್ಲಿರುವ ಅಧಿಕಾರಿಯನ್ನು ಬಂಧಿಸಬೇಕಾಗುವ ಮುಜುಗರ ತಪ್ಪಿಸಿಕೊಂಡಂತಾಗುತ್ತದೆ. ಇನ್ನೊಂದು ಶುದ್ಧ ರಾಜಕೀಯ ಕಾರಣ. ಮೋದಿ ಮತ್ತು ಬಿಜೆಪಿಯನ್ನು ಯಾವತ್ತೂ ಆತಂಕದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು. ಪ್ರಕರಣ ವಿಳಂಬವಾಗುತ್ತಿದ್ದಂತೆ ಆ ಕುರಿತ ಸೋರಿಕೆಗಳು ಹೆಚ್ಚುತ್ತವೆ. ಅದರಲ್ಲಿ ಮೋದಿ ಮತ್ತು ಅಮಿತ್ ಷಾ ಉಲ್ಲೇಖವಿರುವಂತೆ ನೋಡಿಕೊಳ್ಳುವ ಆಟ.
ಗಮನಿಸಬೇಕಾದ ಮಹತ್ತರ ಅಂಶ ಎಂದರೆ ಮೋದಿಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಹುಟ್ಟಿಕೊಳ್ಳುವ ಪೊಳ್ಳು ಆಕ್ರೋಶ. ಅಸ್ಸಾಂ- ಉತ್ತರ ಪ್ರದೇಶಗಳಲ್ಲಿ ಆಗುವ ಕೋಮು ಹಿಂಸಾಚಾರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಆಗುವ ಎನ್ಕೌಂಟರ್ಗಳ ಬಗ್ಗೆ ಯಾರಿಗೂ ಬೇಸರವಿಲ್ಲ. ಆದರೆ ಗೋಧ್ರೋತ್ತರ ಹಿಂಸೆ ಮತ್ತು ಇಶ್ರತ್ ಎನ್ಕೌಂಟರ್ ಮಾತ್ರ ಉದ್ವೇಗ ಹುಟ್ಟಿಸುತ್ತವೆ! ಇಶ್ರತ್ಳನ್ನು ಕೊಂದು ಮೋದಿಗೆ ಆಗುವ ಲಾಭವೇನು ಅಂತ ಯಾರೂ ಕೇಳುತ್ತಿಲ್ಲ. ಬಹುಶಃ ಗುಜರಾತ್ ಪೊಲೀಸರು ಇಶ್ರತ್ ವಿಚಾರದಲ್ಲಿ ಅನುಸರಿಸಿರುವುದು ದೇಶದ ಇತರೆಡೆ ಪೊಲೀಸರು ಅನುಸರಿಸುವ ಮಾರ್ಗವನ್ನೇ. ಅಂದರೆ, ಕಾನೂನಿನ ಮೂಲಕ ನಿಖರ ಸಾಕ್ಷ್ಯಗಳನ್ನು ನೀಡಿ ತಪ್ಪಿತಸ್ಥರೆಂದು ರೂಪಿಸುವುದು ಕಷ್ಟಸಾಧ್ಯವಿದ್ದಾಗ ಎನ್ಕೌಂಟರ್ ಮಾರ್ಗವನ್ನು ಆರಿಸಿಕೊಳ್ಳುವುದು.
ರಾಜಕಾರಣಿಗಳಿಗೆ ತನಿಖಾ ಸಂಸ್ಥೆಯ ಸ್ವಾಯತ್ತೆ ಬೇಕಿಲ್ಲ. ನ್ಯಾಯಾಂಗದಲ್ಲಿ ಅದರದ್ದೇ ಕಾರಣಗಳಿಗಾಗಿ ಪ್ರಕರಣಗಳು ಮುಂದೆ ಹೋಗುವುದೇ ಇಲ್ಲ. ಹೀಗಾಗಿ ಈ ಕಷ್ಟದ ಹಾದಿಯ ಬದಲಾಗಿ ಪೊಲೀಸರು ಕೊಲ್ಲುವ ಮಾರ್ಗವನ್ನೇ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇನ್ನು, ನಾಗರಿಕ ಸಮಾಜದಲ್ಲಿರುವ ನಮಗೆ ಭ್ರಷ್ಟಾಚಾರ, ಭಯೋತ್ಪಾದನೆಯನ್ನೆಲ್ಲ ಬೇರೆ ಯಾರಾದರೂ ಬಂದು ಸರಿ ಮಾಡಲಿ ಎಂಬ ಮನೋಭಾವ. ನಾವು ನಿತ್ಯದೈನಿಕದಲ್ಲಿ ಆರಾಮಾಗಿರಬೇಕು. ಇವೆಲ್ಲವುಗಳಿಂದ ಆಗಿರುವ ವೈಫಲ್ಯಕ್ಕೆ ನಿಖರವಾಗಿ ಬೊಟ್ಟುಮಾಡಿ ತೋರಿಸುವುದಕ್ಕೆ ಯಾರಾದರೂ ಬೇಕಲ್ಲ? ನರೇಂದ್ರ ಮೋದಿ ಸುಲಭದ ತುತ್ತು! ಇಶ್ರತ್ ಬಗ್ಗೆ ಕಾಳಜಿ ಎಂದಲ್ಲ, ವಿಚಾರಣೆಯಿಲ್ಲದೆ ಗಲ್ಲಿಗೇರಿಸುವುದಕ್ಕೆ ನಮಗೊಂದು ಬಲಿ ಬೇಕು ಅಷ್ಟೆ!
- ಆರ್. ಜಗನ್ನಾಥನ್
ಸಂಪಾದಕರು, ಫಸ್ಟ್ಪೋಸ್ಟ್ ಡಾಟ್ಕಾಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

