ಅಂಕಣಗಳು

ಇನ್ನೆಷ್ಟು ಪುರಾವೆ ಬೇಕು?

Published On :

ಇಶ್ರತ್ ಜಹಾನ್ ಮತ್ತು ಆಕೆಯ ಸಹಚರರು ಲಷ್ಕರ್-ಎ-ತಯ್ಬಾದೊಂದಿಗೆ ನಂಟು ಹೊಂದಿದ್ದರೆ ಎಂಬ ಬಗ್ಗೆ ಈಗ ಎಲ್ಲಡೆಯೂ ಚರ್ಚೆ ನಡೆದಿದೆ. ಆದರೆ ಇಶ್ರತ್‌ಗೆ ಲಷ್ಕರ್‌ನೊಂದಿಗೆ ಸಂಬಂಧವಿತ್ತು ಎನ್ನುವುದಕ್ಕೆ ದಿನದಿಂದ ದಿನಕ್ಕೆ ಹೆಚ್ಹೆಚ್ಚು ಪುರಾವೆಗಳು ಸಿಗತೊಡಗಿವೆ. ಆದರೆ ಈ ನಂಟು ಎಷ್ಟು ಗಾಢವಾಗಿತ್ತು ಎನ್ನುವುದು ತಿಳಿದಿಲ್ಲವಾದರೂ, ಗುಪ್ತಚರ ವಲಯದಲ್ಲಿ ಆಕೆಯನ್ನು ಆತ್ಮಹತ್ಯಾ ಬಾಂಬರ್ ಎಂದೇ ಪರಿಗಣಿಸಲಾಗಿದೆ.
ಗುಪ್ತಚರ ದಳ, ಗುಜರಾತ್ ಪೊಲೀಸರಿಗೆ ನೀಡಿದ ಮಾಹಿತಿಯ ಬಗ್ಗೆ ಈಗ ಅಪಸ್ವರಗಳೇಳುತ್ತಿವೆ. ಆದರೆ ಈ ಮಾಹಿತಿಗೆ ಪ್ರಮುಖವಾಗಿ ಮೂರು ಪುರಾವೆಗಳು ಪೂರಕವಾಗಿದ್ದವು. ಆ ಹಿನ್ನಲೆಯಲ್ಲಿಯೇ ಆಕೆಗೆ ಲಷ್ಕರ್‌ನೊಂದಿಗೆ ನಂಟಿದೆ ಎಂಬುದನ್ನು ಗುಪ್ತಚರ ದಳ ಹೇಳಿತ್ತು. ಮೊದಲನೆಯದು ಡೇವಿಡ್ ಹೆಡ್ಲಿ ಎಫ್‌ಬಿಐನ ಮುಂದೆ ನೀಡಿರುವ ತಪ್ಪೊಪ್ಪಿಗೆ. ಎರಡನೆಯದು, ಲಷ್ಕರ್ ಸಂಘಟನೆ ಇಶ್ರತ್ ಜಹಾನ್‌ಳನ್ನು 'ಲಷ್ಕರ್‌ನ ಹುತಾತ್ಮಳೆಂದು' ತನ್ನ ನಿಯತಕಾಲಿಕದಲ್ಲಿ ಕೊಂಡಾಡಿರುವುದು. ಮತ್ತು ಇವೆಲ್ಲದಕ್ಕಿಂತಲೂ ಮುಖ್ಯವಾಗಿ, ನಾಲ್ಕು ವರ್ಷಗಳ ಹಿಂದೆ ಗುಜರಾತ್‌ನ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ,'ಇಶ್ರತ್ ಲಷ್ಕರ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಳು' ಎಂದು ಗೃಹಸಚಿವಾಲಯವೇ ಹೇಳಿರುವುದು.
2009ರಲ್ಲಿ ಸಲ್ಲಿಸಲಾದ ಈ ಅಫಿಡವಿಟ್‌ನಲ್ಲಿ ಇಶ್ರತ್ ಮತ್ತು ಆಕೆಯೊಂದಿಗಿದ್ದ ಜಾವೆದ್‌ರನ್ನು ಲಷ್ಕರ್‌ನ ಕಾರ್ಯಕರ್ತರು ಎಂದು ಹೇಳಲಾಗಿದೆ. ಅಲ್ಲದೆ ಜಾವೆದ್ ಲಷ್ಕರ್ ಪಡೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಗುಜರಾತ್‌ನಲ್ಲಿ ಬೃಹತ್ ದಾಳಿಯೊಂದನ್ನು ನಡೆಸಲು ಯೋಜನೆ ತಯಾರಿಸುತ್ತಿದ್ದ ಎನ್ನಲಾಗಿದೆ. ಜಾವೆದ್ ಮೂಲತಃ ಹಿಂದು. ಇಸ್ಲಾಮಿಗೆ ಮತಾಂತರಗೊಂಡ ನಂತರವೂ ಈತ ಹಿಂದು ಹೆಸರಿನಲ್ಲಿಯೇ ದುಬೈಗೆ ಹೋಗಿದ್ದ. ಅಲ್ಲಿದ್ದುಕೊಂಡೇ ಲಷ್ಕರ್‌ನ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ. ಇಶ್ರತ್‌ಳನ್ನು ಮುಂಬ್ರಾದಲ್ಲಿ ಭೇಟಿಯಾದ ಜಾವೆದ್, ಲಷ್ಕರ್ ಸೇರಲು ಆಕೆಯ ಮನವೊಲಿಸಿದ ಎಂದೂ ಆ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಇಶ್ರತ್‌ಗೆ ಕ್ರಿಮಿನಲ್ ಹಿನ್ನೆಲೆಯಿರಲಿಲ್ಲ ಎಂದು ತನಿಖಾ ದಳಗಳು ಹೇಳುತ್ತಿವೆ. ಮಹಾರಾಷ್ಟ್ರ ಪೊಲೀಸರು ಕೂಡ ಇದನ್ನೇ ಹೇಳುತ್ತಿರುವುದು. ಇದೇ ಕಾರಣದಿಂದಾಗಿಯೇ ಜಾವೆದ್ ಇಶ್ರತ್‌ಳನ್ನು ತನ್ನ ಕೆಲಸಕ್ಕೆ ಆಯ್ಕೆ ಮಾಡಿ, ಆಕೆಯ ಬ್ರೇನ್‌ವಾಶ್ ಮಾಡಿದ. ಹೀಗೆ ಮಾಡುವುದರಿಂದ ಸಿಕ್ಕಿಬೀಳುವ ಸಂಭವಗಳು ಕಡಿಮೆ ಎನ್ನುವುದು ಆತನ ಎಣಿಕೆಯಾಗಿತ್ತು ಎಂದು ಹೇಳುತ್ತಾರೆ ತನಿಖಾಧಿಕಾರಿಗಳು. ಹಾಗೆ ನೋಡಿದರೆ, 2001ರಲ್ಲೇ ಈ ಕುರಿತಾದ ಎಚ್ಚರಿಕೆಯೊಂದನ್ನು ನಮ್ಮ ಗುಪ್ತಚರ ದಳ ಸರ್ಕಾರಕ್ಕೆ ನೀಡಿತ್ತು. ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ಲಷ್ಕರ್ ತಯಾರು ಮಾಡುತ್ತಿದೆ ಎಂದು ಅದು ಹೇಳಿತ್ತು. ಇನ್ನು ಇದೇ ಮಾತನ್ನೇ 2003 ಮತ್ತು 2009ರಲ್ಲಿ ಅದು ಪುನರುಚ್ಚರಿಸಿತು. ಮಹಿಳಾ ಫಿದಾಯಿನ್‌ಗಳನ್ನು ತಯಾರು ಮಾಡಿದರೆ ತಾವು ಅಂದುಕೊಂಡದ್ದನ್ನು ಸುಲಭವಾಗಿ ಸಾಧಿಸಬಹುದು, ಅವರ ಮೇಲೆ ಅಷ್ಟು ಸುಲಭವಾಗಿ ಅನುಮಾನಗಳೇಳಲಿಕ್ಕಿಲ್ಲ ಎನ್ನುವ ಲೆಕ್ಕಾಚಾರ ಲಷ್ಕರ್‌ದು. ಲಷ್ಕರ್ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳ ತಯಾರಿ ಎಲ್‌ಟಿಟಿಇಯಿಂದ ಸ್ಫೂರ್ತಿ ಪಡೆದದ್ದು ಎನ್ನಲಾಗುತ್ತಿದೆ.

- ವಿಕಿ ನಂಜಪ್ಪ, ಪತ್ರಕರ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.