ಧ್ವನಿ ಗ್ರಹಣದ ಬಾಸ್, ಈ ಬೋಸ್

ಬೋಸ್ ಮನಸ್ಸು ಮಾಡಿದ್ದರೆ, ಇತರ ಉದ್ಯಮಿಗಳಂತೆ ಪಕ್ಕಾ ವ್ಯಾಪಾರಿ...
ಅಮರ್ ಗೋಪಾಲ್ ಬೋಸ್
ಅಮರ್ ಗೋಪಾಲ್ ಬೋಸ್
Updated on: 

ಬೋಸ್ ಮನಸ್ಸು ಮಾಡಿದ್ದರೆ, ಇತರ ಉದ್ಯಮಿಗಳಂತೆ ಪಕ್ಕಾ ವ್ಯಾಪಾರಿ ಬುದ್ಧಿಯವರಾಗಬಹುದಿತ್ತು. ಆದರೆ ಬೋಸ್ ಫಿಲಾಸಫಿಯೇ ಬೇರೆ ಇತ್ತು. ಅವರ ಪಾಲಿಗೆ ತಮ್ಮ ಸಂಸ್ಥೆ ಉನ್ನತ ಮಟ್ಟದ ಸಂಶೋಧನೆಗೆ ವೇದಿಕೆಯಾಗಿತ್ತಷ್ಟೆ.

1950ರ ದಶಕ. ಕೈಗಾರಿಕಾ, ಆರ್ಥಿಕ ಕುಸಿತದಿಂದ ಚೇತರಿಸಿಕೊಂಡು ಅಭಿವೃದ್ಧಿಯತ್ತ ಅಮೆರಿಕ ಕಾಲಿಡುತ್ತಿತ್ತು. ಆರ್ಥಿಕ ಸಂಕಷ್ಟದಿಂದ ಹೊರಬರಲು ಅಮೆರಿಕ ಕಂಡುಕೊಂಡ ಮಾರ್ಗಗಳಲ್ಲಿ ಕೌಶಲ್ಯ ಅಭಿವೃದ್ಧಿ ಸಹ ಒಂದಾಗಿತ್ತು. ಹೀಗೆ ಮಾಡುವ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಅದು ನಂಬಿತ್ತು. ಇದರ ಫಲವಾಗಿ ಯುವ ಸಮೂಹದಲ್ಲಿ ಇಂಜಿನಿಯರುಗಳ ಸಂಖ್ಯೆ ಹೆಚ್ಚಿತ್ತು. ಅದರಲ್ಲಿಯೂ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ತಂತ್ರಜ್ಞರ ದಂಡೇ ಅಲ್ಲಿತ್ತು. ಆಟಿಕೆಗಳಿಂದ ಹಿಡಿದು ಯಂತ್ರೋಪಕರಣಗಳವರೆಗೆ ಎಲ್ಲವನ್ನೂ ಜೋಡಿಸುವ, ಬಿಡಿಬಿಡಿಯಾಗಿ ಬಿಚ್ಚಿ ಅದರೊಳಗಿನ ಗುಟ್ಟನ್ನು ರಟ್ಟು ಮಾಡುವ ಕಲೆ ಅಲ್ಲಿನ ಯುವ ಜನರಿಗೆ ಕರಗತವಾಗಿತ್ತು. ಇದೆಲ್ಲದರ ಫಲವಾಗಿ ಹೊಸ ಆವಿಷ್ಕಾರಗಳು, ಸಾಧನ, ಉಪಕರಣಗಳು ಜನರ ಕೈಗೆಟುಕುವಂತಾಗಿತ್ತು. ಇಂತಹ ಸಂದರ್ಭದಲ್ಲಿಯೇ ಪ್ರತಿಷ್ಠಿತ ಮೆಸ್ಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (MIT)ಯಲ್ಲಿ ಪದವಿ ಪಡೆದಿದ್ದ ವಿದ್ಯಾರ್ಥಿಯೊಬ್ಬ ತನಗಿಷ್ಟದ ಸಂಗೀತ ಆಲಿಸಲು ಆಗಿನ ಕಾಲದಲ್ಲಿ ಭಾರೀ ಬೇಡಿಕೆಯಿದ್ದ ಮತ್ತು ಬ್ರ್ಯಾಂಡೆಡ್ ಎನಿಸಿದ್ದ ಆಸ್ಟ್ರಾವಿಡಿಯಸ್ ಮ್ಯೂಸಿಕ್ ಸಿಸ್ಟಮ್ ಖರೀದಿಸಿ ಮನೆಗೆ ತಂದ. ಪದವಿ ನಂತರ ಆತ ಫುಲ್ಬ್ರೈಟ್ ಸ್ಕಾಲರ್ಶಿಪ್ ಮೇಲೆ ಹೊಸದಿಲ್ಲಿಯಲ್ಲಿನ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಗೆ (NPL) ವರ್ಷದ ಮಟ್ಟಿಗೆ ಬರುವುದಿತ್ತು. ತೀರಾ ಚಿಕ್ಕ ವಯಸ್ಸಿನಿಂದಲೇ ವಯೊಲಿನ್ ನುಡಿಸುವುದನ್ನು ಅಭ್ಯಾಸ ಮಾಡಿದ್ದ ಈ ಯುವಕ ಕ್ಲಾಸಿಕಲ್ ಶೈಲಿಯ ಸಂಗೀತಕ್ಕೆ ಮಾರುಹೋಗಿದ್ದ. ವಯೊಲಿನ್ ತಂತಿಗಳಿಂದ ಹೊರ ಹೊಮ್ಮುವ ನಾದ ತರಂಗಗಳಿಗೆ ಮನಸೋತಿದ್ದ. ಓದಿನ ಮಧ್ಯೆ ಬಿಡುವು ಸಿಕ್ಕಾಗಲೆಲ್ಲ ನಾದಲೋಕದಲ್ಲಿ ಮುಳುಗೇಳುತ್ತಿದ್ದ. ದೆಹಲಿಗೆ ತೆರಳುವ ಮುನ್ನ ಸಿಕ್ಕ ಬಿಡುವಿನ ವೇಳೆಯಲ್ಲಿ ಸಂಗೀತ ರಸಾಸ್ವಾದಕ್ಕೆಂದೇ ಆತ ಹೊಸದಾದ ಮ್ಯೂಸಿಕಲ್ ಸಿಸ್ಟಂ ಖರೀದಿಸಿದ್ದ. ತನ್ನ ಮೆಚ್ಚಿನ ರಿಕಾರ್ಡ್ ಹಾಕಿ ನಾದಗ್ರಹಣಕ್ಕೆ ಕುಳಿತ ಆ ಯುವಕನಿಗೆ ತೀರಾ ಕಿರಿಕಿರಿ ಎನಿಸಿತು. ಸ್ಪೀಕರ್ನಿಂದ ಹೊರಬರುತ್ತಿದ್ದ ಧ್ವನಿ ಶುದ್ಧವಾಗಿರದೆ ಒಂದು ರೀತಿಯ ಅಸಹನೆ ಆತನನ್ನು ಆವರಿಸಿತು. ದುಬಾರಿ ಬೆಲೆ ಕೊಟ್ಟು ಖರೀದಿಸಿದ್ದ ಉಪಕರಣವೂ ಆತನ ನಾದ ಗ್ರಹಣಕ್ಕೆ ಅಡ್ಡಿಯಾಗುತ್ತಿದೆ ಎನಿಸಿತು. ಸಂಗೀತದ  ತರಂಗಗಳ ಜೊತೆಗೆ ಬಾಹ್ಯ ತರಂಗಗಳು ಸೇರಿ ಒಂದು ರೀತಿ ಖಿಚಡಿ ಧ್ವನಿ ಕಿವಿಗೆ ಅಪ್ಪಳಿಸುತ್ತಿರುವಂತೆ ಆತನಿಗೆ ಭಾಸವಾಯಿತು. ವಾಲ್ಯೂಮ್ ಕಂಟ್ರೋಲನ್ನು ಅತ್ತಿಂದಿತ್ತ ಸರಿಸಿದ. ಬ್ಯಾಸ್ ಹೊಂದಿಸಿ ನೋಡಿದ. ವಾಲ್ಯೂಮ್ ಬ್ಯಾಲೆನ್ಸ್ ಸರಿ ಮಾಡಿದ. ಉಹೂಂ, ಏನೇ ಮಾಡಿದರೂ ಸಂಗೀತದ ಮೂಲಧ್ವನಿ ಕಿವಿಗೆ ಬೀಳಲೇ ಇಲ್ಲ. ಅದಾಗಲೇ ರಾತ್ರಿಯ ಅಪರ ವೇಳೆ ಹಿಂದುಮುಂದು ಯೋಚಿಸದೆ ತನ್ನ ಮೆಚ್ಚಿನ ಮೇಸ್ಟ್ರಿಗೆ ಫೋನಾಯಿಸಿದ. ತನ್ನ ಪಾಡು ಹೇಳಿಕೊಂಡು ತಾನು ಧ್ವನಿಗ್ರಹಣದ ಕುರಿತಾಗಿ ಹೆಚ್ಚಿನ ಸಂಶೋಧನೆ ಮಾಡಲು ಉತ್ಸುಕನಾಗಿರುವುದಾಗಿ ತಿಳಿಸಿದ. ಈತನ ತಳಮಳ ಅರಿತ ಮೇಸ್ಟ್ರು ಆಯ್ತು ಮಾಡು ಎಂದು ಫೋನಿಟ್ಟರು. ನಂತರ ಕಾಲೇಜಿನಲ್ಲಿಯೇ ಇಂತಹದ್ದೊಂದು ಸಂಶೋಧನೆ ಮಾಡಲು ಅವಕಾಶ ಕೊಡಿ ಎಂದು ದುಂಬಾಲು ಬಿದ್ದ. ಪ್ರಾಧ್ಯಾಪಕರು ಅದಕ್ಕೂ ಅಸ್ತು ಎಂದರು. ಅಂದು ಮೊಳಕೆಯೊಡೆದ ಕನಸು, ಆರಂಭವಾದ ಸಂಶೋಧನೆಯ ಫಲವೇ ಇಂದಿನ ಬೋಸ್ ಸ್ಪೀಕರ್ಗಳು ಮತ್ತು ಆಡಿಯೊ ಸಿಸ್ಟಂಗಳು. ಇಂದು ಧ್ವನಿಗ್ರಹಣ ವಿಷಯಕ್ಕೆ ಬಂದರೆ ಈ ಸಾಧನಗಳನ್ನು ಮೀರಿಸುವ ಮತ್ತೊಂದು ಸಾಧನ ಇಲ್ಲ. ಅಂದು ಒಂದು ಕನಸು ಕಂಡು, ಕನಸಿನ ಬೆನ್ನೇರಿ ಯಶಸ್ಸಿನ ಬಾನಲ್ಲಿ ವಿಹರಿಸಿದ ವ್ಯಕ್ತಿ 83 ವರ್ಷಗಳ ತುಂಬು ಬುದುಕು ನಡೆಸಿ ಕಳೆದ ವಾರ ನಿಧನರಾದ ಅಮರ್ ಗೋಪಾಲ್ ಬೋಸ್.
1920ರ ದಶಕ. ಭಾರತದಲ್ಲಿ ಬ್ರಿಟನ್ ದಾಸ್ಯದ ವಿರುದ್ಧದ ಕೂಗು ವ್ಯಾಪಿಸಿದ್ದ ಕಾಲ. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನೋನಿ ಬೋಸ್ ಬ್ರಿಟಿಷ್ ವಿರುದ್ಧದ ಕ್ರಾಂತಿಕಾರಿಗಳ ಸಂಗಡ ಗುರುತಿಸಿಕೊಂಡಿದ್ದರು. ಇದರ ಪರಿಣಾಮವಾಗಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದರು. ವಾರ್ಷಿಕ ಪರೀಕ್ಷೆ ಬರೆಯಲು ಕೆಲವೇ ದಿನ ಇದೆ ಎನ್ನುವಾಗ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡರು. ಅದು ಹೇಗೊ ಪೊಲೀಸರಿಗೆ  ಚಳ್ಳೆಹಣ್ಣು ತಿನಿಸಲು ಯಶಸ್ವಿಯಾದ ನೋನಿ ಅಮೆರಿಕಕ್ಕೆ ಪಲಾಯನಗೈದರು. ಅಲ್ಲಿ ತಾರಕನಾಥ್ ದಾಸ್ರೊಡಗೂಡಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಲ್ಲಿಂದಲೇ ಕೊಡುಗೆ ನೀಡುತ್ತಿದ್ದರು. ಕಾಲಕ್ರಮೇಣ ಅಲ್ಲಿಯೇ ಆಫ್ರಿಕನ್ ಮೂಲದ ಮಹಿಳೆಯನ್ನು ವರಿಸಿದರು. ಅಮರ್ ಬೋಸ್ ಈ ದಂಪತಿಯ ಕುಡಿ. ಅವರ ತಾಯಿ ಭಾರತೀಯ ಮೂಲದವರಲ್ಲದಿದ್ದರೂ ಇಲ್ಲಿನ ಸಂಸ್ಕೃತಿಗೆ ಗಾಢವಾಗಿ ಆಕರ್ಷಿತರಾಗಿದ್ದರು. ಹೀಗಾಗಿ ಮನೆಯಲ್ಲಿ ಭಾರತೀಯ ಸಂಸ್ಕೃತಿ ನೆಲೆಸಿತ್ತು. ಅಮರ್ ಬೋಸ್ ಪ್ರಕಾರ ಅವರ ತಾಯಿ ಅವರಿಗಿಂತ ಹೆಚ್ಚು ಭಾರತೀಯಳು! ಅಲ್ಲಿನ ಪರಿಸರಕ್ಕೆ ತಕ್ಕಂತೆಯೇ ಬೆಳೆದ ಅಮರ್ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ಇಲೆಕ್ಟ್ರಾನಿಕ್ ಸಾಧನಗಳ ಬಗ್ಗೆ ಆಕರ್ಷಣೆ ಬೆಳೆಸಿಕೊಂಡಿದ್ದ. 13ನೇ ವರ್ಷಕ್ಕೆ ಕಾಲಿಡುತ್ತಲೇ ರೇಡಿಯೊ ರಿಪೇರಿಯಲ್ಲಿ ಎತ್ತಿದ ಕೈ ಎನಿಸಿದ್ದ. ಅಲ್ಲದೆ ಫಿಲೆಡೆಲ್ಫಿಯಾದಾದ್ಯಂತ ರೇಡಿಯೊ ರಿಪೇರಿ ಜಾಲವನ್ನೂ ಸ್ಥಾಪಿಸಿದ. ಇದರಿಂದ ಬರುವ ಆದಾಯ ಆತನ ವಿದ್ಯಾಭ್ಯಾಸ ಮತ್ತು ಪಾಕೆಟ್ ಮನಿಗೆ ಸಾಕಾಗುತ್ತಿತ್ತು. ಓದಿನಲ್ಲಿ ಮುಂದಿದ್ದ ಕಾರಣ ಎಂಐಟಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಕಷ್ಟಕರವಾಗಲಿಲ್ಲ. ಒಂದು ವರ್ಷದ ಮಟ್ಟಿಗೆ ದಿಲ್ಲಿಗೆ ಬಂದು ಮತ್ತೆ ವಾಪಸಾದ ಬೋಸ್ ಎಂಐಟಿಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಅದರ ಜೊತೆ ಜೊತೆಗೇ ಧ್ವನಿಗ್ರಹಣದಲ್ಲಿ ತನ್ನದೇ ಸಂಶೋಧನೆಗೆ ಮುಂದಾದರು. ಕಾಲೇಜಿನ ಪ್ರೋತ್ಸಾಹ ಅವರ ಬೆನ್ನಿಗಿತ್ತು. ಅದೇ ಉಮೇದಿನಲ್ಲಿ ಹೊಸತಂತ್ರಜ್ಞಾನ ಅಳವಡಿಸಿದ ಜೋಡಿ ಸ್ಪೀಕರ್ಗಳನ್ನು ಸೃಷ್ಟಿಸಿದರು. ಮೊದಲ ಪ್ರಯತ್ನ ಹೆಚ್ಚಿನ ಫಲ ನೀಡಲಿಲ್ಲ. ಆದರೆ ಇದರಿಂದ ಧೃತಿಗೆಡದ ಅಮರ್ ತಮ್ಮದೇ ಬೋಸ್ ಕಾರ್ಪೊರೇಷನ್ ಆರಂಭಿಸಿದರು. ಅದರಲ್ಲಿದ್ದುದು ಬೋಸ್ ಮತ್ತು ಅವರ ಶಿಷ್ಯ ಮಾತ್ರ. ಒಂದು ವರ್ಷದ ಸಂಶೋಧನೆಯ ನಂತರ ಬಾಹ್ಯ ತರಂಗಗಳ ಅಡ್ಡಿ ಇಲ್ಲದೆ ಧ್ವನಿ ತರಂಗಗಳು ಮೂಲದಿಂದ ನೇರವಾಗಿ ಕೇಳುಗರನ್ನು ತಲುಪುವಂತಹ ಅಪರೂಪದ ಸ್ಪೀಕರ್ಗಳನ್ನು ತಯಾರಿಸಿದರು. ಜೊತೆಗೆ ಇದೇ ತಂತ್ರಜ್ಞಾನವನ್ನು ಅಳವಡಿಸಿ ಚಿಕ್ಕ ರೇಡಿಯೋ ಸೆಟ್ಗಳನ್ನು ಸಹ ಹೊರತಂದರು. ಇದಾದ ಬಳಿಕ ಹಿಂತಿರುಗಿ ನೋಡುವ ಪ್ರಮೇಯವೇ ಅವರಿಗೆ ಬರಲಿಲ್ಲ. ಸಂಗೀತ ಕಛೇರಿಗಳು ನಡೆಯುವ ಸಭಾಂಗಣಗಳಲ್ಲಿ ಪ್ರತಿಯೊಂದು ಆಸನಕ್ಕೂ ಈ ವ್ಯವಸ್ಥೆ ಅಳವಡಿಸಿ ಸಂಗೀತದ ರಸಾಸ್ವಾದದ ಅನುಭವವನ್ನು ಶ್ರೀಮಂತಗೊಳಿಸಿದರು. ಇಷ್ಟಾದರೂ ಈ ಸಾಧನಗಳ ವಾಣಿಜ್ಯಕ ಉತ್ಪಾದನೆಗೆ ಬೋಸ್ ಆಗ ಮುಂದಾಗಲಿಲ್ಲ. ನಂತರ ಆ ಪ್ರಯತ್ನವೂ ಆಯಿತು. 1980ರ ವೇಳೆಗೆ ಪ್ರತಿಷ್ಠಿತ ಕಾರುಗಳ ತಯಾರಕರು ತಮ್ಮ ಕಾರುಗಳಲ್ಲಿ ಬೋಸ್ ಧ್ವನಿ ಸಾಧನಗಳನ್ನು ಬಳಸಿ ಅದರ ಜನಪ್ರಿಯತೆ ಹೆಚ್ಚಿಸಿದರು. ಆ ವೇಳೆಗೆ ಬೋಸ್ ಕಾರ್ಪೊರೇಷನ್ ಭದ್ರವಾಗಿ ತಳವೂರಿತ್ತು. ಬೋಸ್ ಮನಸ್ಸು ಮಾಡಿದ್ದರೆ, ಇತರ ಉದ್ಯಮಿಗಳಂತೆ ಪಕ್ಕಾ ವ್ಯಾಪಾರಿ ಬುದ್ಧಿಯವರಾಗಬಹುದಿತ್ತು. ಆದರೆ ಬೋಸ್ ಫಿಲಾಸಫಿಯೇ ಬೇರೆ ಇತ್ತು. ಅವರೆಂದೂ ಬೋಸ್ ಕಾರ್ಪೊರೇಷನ್ ಅನ್ನು ಬಂಡವಾಳ ಆದಾಯದ ಉದ್ಯಮವಾಗಿಸಲಿಲ್ಲ. ಅದರ ಷೇರುಗಳನ್ನು ಮಾರಾಟ ಮಾಡಲಿಲ್ಲ. ಅವರ ಪಾಲಿಗೆ ಈ ಸಂಸ್ಥೆ ಉನ್ನತ ಮಟ್ಟದ ಸಂಶೋಧನೆಗೆ ವೇದಿಕೆಯಾಗಿತ್ತಷ್ಟೆ. ಹಾಗಾಗಿಯೇ ಅವರೆಂದೂ ತಮ್ಮ ಸಂಸ್ಥೆಯ ತ್ರೈಮಾಸಿಕ ವರದಿಗಳನ್ನು ಬಿಡುಗಡೆ ಮಾಡಲಿಲ್ಲ. ಬರುವ ಆದಾಯವನ್ನು ಸಂಶೋಧನೆಗೆ ಸುರಿಯುವುದು,  ಅದರಿಂದ ಉತ್ಕೃಷ್ಟ ಮಟ್ಟದ ಉತ್ಪನ್ನಗಳನ್ನು ತಯಾರಿಸುವುದು ಅವರ ಹವ್ಯಾಸವಾಯಿತು. ದುಬಾರಿ ಬೆಲೆಯ ಕಾರುಗಳಿಗೆ ತಕ್ಕಂತೆ ಧ್ವನಿ ಸಾಧನಗಳನ್ನು ತಯಾರಿಸಿ ಕೊಡಲು ಮುಂದಾಗುವ ಮೊದಲೇ ಬೋಸ್ ಕೋಟ್ಯಂತರ ಡಾಲರ್ಗಳನ್ನು ಸಂಶೋಧನೆಗೆ ಸುರಿದಿದ್ದರು. ಇಷ್ಟೆಲ್ಲ ಆದರೂ ಬೋಸ್ ತಮ್ಮ ಭೋದನ ವೃತ್ತಿ ಬಿಡಲಿಲ್ಲ. 1956ರಲ್ಲಿ ಎಂಐಟಿಯಲ್ಲಿ ಬೋಧನೆ ಆರಂಭಿಸಿದ ಬೋಸ್ 45 ವರ್ಷ ಕಾಲ ಅಧ್ಯಾಪಕ ಗಿರಿ ಮಾಡಿದರು. ಅವರೆಂದೂ ಬಿಲ್ಗೇಟ್ಸ್ ಅಥವಾ ಕಾರ್ಲೊಸ್ ಸ್ಲಿಮ್ ಆಗಲು ಬಯಸಲಿಲ್ಲ. ಆದರೂ ಅವರೆಲ್ಲರಿಗಿಂತ ಮುಂಚೆ ಅಮೆರಿಕದ ಕೋಟ್ಯಧಿಪತಿ ಎನಿಸಿದರು. ಜೀವನದಲ್ಲಿ ತಮಗೆ ಇಷ್ಟೆಲ್ಲ ಸಾಧನೆ ಮಾಡಲು ಪ್ರೇರೇಪಿಸಿದ್ದ, ಅನುಕೂಲ ಮಾಡಿಕೊಟ್ಟ ಎಂಐಟಿ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೆಂದೇ 2011ರಲ್ಲಿ ತಮ್ಮ ಸಂಸ್ಥೆಯ ಬಹುತೇಕ ಷೇರುಗಳನ್ನು ಎಂಐಟಿ ಹೆಸರಿಗೆ ಬರೆದರು. ಈ ಹಣ ಕೇವಲ ಸಂಶೋಧನೆಯ ಸಲುವಾಗಿಯೇ ಹೊರತು ಷೇರುಗಳನ್ನು ಮಾರುವುದಕ್ಕಾಗಲಿ, ತಮ್ಮ ಸಂಸ್ಥೆಯ ಆಡಳಿತದ ಮೇಲೆ ಸವಾರಿ ಮಾಡುವುದಕ್ಕಾಗಲಿ ಅವಕಾಶ ನೀಡಲಿಲ್ಲ. ಇಂದು ಅಮೆರಿಕದಲ್ಲಿ ಅನೇಕ ಮಂದಿ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ಭಾರತದಲ್ಲಿ ಕಂಡ ಕನಸುಗಳನ್ನು ಅಮೆರಿಕದಲ್ಲಿ ನನಸು ಮಾಡಿಕೊಂಡಿದ್ದಾರೆ. ವ್ಯವಹಾರದ ಒಳಗುಟ್ಟನ್ನು ಬಿಟ್ಟುಕೊಟ್ಟು ಆರ್ಥಿಕ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದ ಕಳಂಕ ಬರುವವರೆಗೆ ಅಮೆರಿಕದ ಉದ್ಯಮಪತಿಗಳ ಡಾರ್ಲಿಂಗ್ ಆಗಿದ್ದ ರಜತ್ ಗುಪ್ತಾ, ಈಗ ಅಮೆರಿಕದ ಎರಡನೇ ಅತ್ಯುನ್ನತ ಕೋರ್ಟ್ನ ನ್ಯಾಯಮೂರ್ತಿಯಾಗಿರುವ ಶ್ರೀಕಾಂತ್ ಶ್ರೀನಿವಾಸನ್, ಬಾಹ್ಯಾಕಾಶ ಯಾನಿಗಳಾದ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, ಅಮೆರಿಕದ ಭವಿಷ್ಯದ ಅಧ್ಯಕ್ಷರಾಗುವ ಅವಕಾಶ ಹೊಂದಿರುವ ಬಾಬ್ಬಿ ಜಿಂದಾಲ್, ಖಗೋಳ, ಭೌತ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ನೊಬೆಲ್ ಪುರಸ್ಕೃತ ಎಸ್. ಚಂದ್ರಶೇಖರ್, ರಾಸಾಯನಶಾಸ್ತ್ರದ ಸಂಶೋಧನೆಗಾಗಿ 2009 ನೊಬೆಲ್ ಪಡೆದ ವಿ. ರಾಮಕೃಷ್ಣನ್, ಕಳೆದ ದಶಕದಿಂದೀಚೆಗೆ ಅಮೆರಿಕದ ಯಾವುದೇ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳಿರಲಿ, ಅದರಲ್ಲಿ ಮಿಂಚುತ್ತಿರುವುದು ಎಳೆಯ ಭಾರತದ ಮಿದುಳುಗಳೆ. ಈ ಎಲ್ಲ ಸಾಧಕರ ಸಾಲಿನಲ್ಲಿ ಅಮರ್ ಬೋಸ್ ಸಾಧನೆ ಸಹ ಅತ್ಯುತ್ಕೃಷ್ಟವಾದದ್ದೇ ಸರಿ. ಅಮರ್ ಬೋಸ್ ಹೆಚ್ಚಾಗಿ ಭಾರತಕ್ಕೆ ಬರಲಿಲ್ಲ. ಇಲ್ಲಿ ಯಾವುದೇ ಚಾರಿಟಿಗಳನ್ನು ಸ್ಥಾಪಿಸಲಿಲ್ಲ. ಆದರೆ ಇದಾವುದನ್ನು ಮಾಡದೆ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವ್ಯಕ್ತಿತ್ವವನ್ನು ಬಿಟ್ಟು ಹೋಗಿದ್ದಾರೆ. ಅದೇ ಅವರ ಹೆಗ್ಗಳಿಕೆ.

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com