ಅಕ್ಕಿ ರಾಜಕಾರಣದ ಅನಂತ ಅಪಾಯಗಳು
ಅನ್ನಭಾಗ್ಯ. ಇದು ನಿಜಕ್ಕೂ ಹೊಸ ಅಗಸನ ಗೋಣಿಯೇ ಸರಿ. ಬರುತ್ತಲೇ ನಾನು ಅರಸು ಅವರ ಹಾಗೆ ದಾಖಲಾರ್ಹ ಕೆಲಸ ಮಾಡಲೇಬೇಕೆಂದು ಪಣ ತೊಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ ಮೊದಲ ಘೋಷಣೆ, ಒಂದು ರುಪಾಯಿಯ ಅನ್ನಭಾಗ್ಯ ಯೋಜನೆ. ಬಡವರ ಬಗೆಗಿನ ವಿಪರೀತ ಕಾಳಜಿಯಿಂದಲೇ ಸಿದ್ರಾಮಯ್ಯನೋರು ಈ ಯೋಜನೆ ಜಾರಿಗೊಳಿಸಿದ್ದಾರೆ ಅಂತಿಟ್ಟುಕೊಂಡರೂ ಇದರ ಒಳಿತು ಕೆಡುಕುಗಳ ಬಗ್ಗೆ ಒಂದಷ್ಟು ಪರಾಮರ್ಶೆ ಮಾಡಿದ್ದರೆ ಚೆನ್ನಾಗಿತ್ತು.
ಸಿರಿ ಧಾನ್ಯಗಳ ಸಾವು: ಈಗಾಗಲೇ ನಾವು ಅದೆಷ್ಟೋ ಬಗೆಯ ಧಾನ್ಯಗಳನ್ನ ಹೆಸರೂ ಗೊತ್ತಿರದಷ್ಟು ಮರೆತುಬಿಟ್ಟಿದ್ದೇವೆ. ಗೋದಿ, ರಾಗಿ, ಸಜ್ಜೆ, ನವಣೆ, ಸಾಮೆ, ಆರ್ಕ ಮುಂತಾದ ಹೆಸರುಗಳು ನಮ್ಮ ಮಕ್ಕಳಿಗೆ ಗೊತ್ತೂ ಇಲ್ಲ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಉತ್ತರದವರ ಪ್ರಮುಖ ಆಹಾರ ಜೋಳ, ಮತ್ತು ಬಯಲುಸೀಮೆಯಲ್ಲಿ ರಾಗಿ ಹೆಚ್ಚು ಬಳಕೆಯಲ್ಲಿತ್ತು. ಮೈಸೂರು ಪಕ್ಕದ ಸಿದ್ದರಾಮನಹುಂಡಿಯ ಹುಡುಗನಾಗಿದ್ದ ಮುಖ್ಯಮಂತ್ರಿಗಳಿಗೆ 'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಂ ಹಿಟ್ಟಂ ಬಿಟ್ಟಂ ಕೆಟ್ಟಂ' ಎಂಬ ಮಾತು ಮತ್ತು ಮಹತ್ವ ಗೊತ್ತಿಲ್ಲದ್ದೇನೂ ಅಲ್ಲ. ಆದರೂ ಅವರು ಅದ್ಯಾವ ಕಾಣದ ಕಾರಣಕ್ಕೋ ಏನೊ ಅಕ್ಕಿ ಹಂಚಲು ಹೊರಟಿದ್ದಾರೆ. ಅಷ್ಟೊಂದು ಮೆಟ್ರಿಕ್ ಟನ್ಗಟ್ಟಲೆ ಅಕ್ಕಿ ಬಂದು ತುಂಬಿಕೊಂಡರೆ ಜನ ಯಾಕಾದರೂ ಬೇರೆ ಪದಾರ್ಥಗಳನ್ನ ತಿನ್ನುತ್ತಾರೆ? ತಿನ್ನದವರು ಇಲ್ಲದ ಮೇಲೆ ಬೆಳೆವ ಅಗತ್ಯವಂತು ಬರುವುದೇ ಇಲ್ಲ. ಹಾಗಾಗಿ ನಿಧಾನಕ್ಕೆ ಮರೆಯಾಗುತ್ತಿದ್ದ ಸಿರಿಧಾನ್ಯತಳಿಗಳಿನ್ನು ಸರ್ವನಾಶವೇ ಆಗಿಬಿಡುತ್ತವೆ.
ರೋಗಗಳಿಗೆ ಆಹ್ವಾನ: ಎಲ್ಲೆಲ್ಲಿ ನಾ ನೋಡಲಿ ಶುಗರನೆ ಕಾಣುವೇ... ಅನ್ನೋದು ಮನೆ ಮನೆ ಹಾಡಾಗಿದೆ ಈಗ. 50 ವರ್ಷಗಳ ಹಿಂದಿನ ಆಹಾರ ಪದ್ಧತಿಗೆ ಹೋಲಿಸಿದರೆ ಈಗಿನ ನಮ್ಮ ಆಹಾರ ಪದ್ದತಿ ಸಾಕಷ್ಟು ಬದಲಾದದ್ದೇ ಇದಕ್ಕೆ ಕಾರಣ ಅನ್ನುತ್ತಿದ್ದಾರೆ ವೈದ್ಯ ವಿಜ್ಞಾನಿಗಳು. ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಅನ್ನ ಬಲುಬೇಗ ರಕ್ತದಲ್ಲಿ ಸಕ್ಕರೆ ಅಂಶವನ್ನ ಸೇರಿಸುತ್ತದೆ. ಈ ಯೋಜನೆ ನಿಧಾನಕ್ಕೆ ಜನರಲ್ಲಿ, ಅದರಲ್ಲೂ ದುಡಿಯುವ ವರ್ಗದಲ್ಲಿ ಸಕ್ಕರೆ ಖಾಯಿಲೆ ಹೆಚ್ಚಿಸುವ ಬಲುದೊಡ್ಡ ಅಪಾಯವಿದೆ. ಅದು ಮುಂದಿನ ತಲೆಮಾರಿಗೂ ಮುಂದುವರೆಯುತ್ತಾ ಸಾಗುತ್ತದೆ. ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಇದರಿಂದ ಭವಿಷ್ಯದಲ್ಲಿ ದೊಡ್ಡಮೊತ್ತದ ಲಾಭವಾದೀತು. ಆದರೆ ಜನರ ಆರೋಗ್ಯ ಮತ್ತು ಅವರ ಮುಂದಿನ ಸಂತತಿಯ ಆರೋಗ್ಯದ ಗತಿಯೇನು? 2020ಕ್ಕೆ ಭಾರತದ ಅರ್ಧಕ್ಕರ್ಧ ಜನರಿಗೆ ಸಕ್ಕರೆ ಖಾಯಿಲೆ ಇರುತ್ತದೆ ಅಂತ ವಿಶ್ವಸಂಸ್ಥೆ ಹೇಳಿಕೊಳ್ಳುತ್ತಿದೆ. ಈ ಅನ್ನಕ್ರಾಂತಿಯಿಂದ ಕರ್ನಾಟಕದಲ್ಲಿ ಈ ಪ್ರಮಾಣ ಹೆಚ್ಚೇ ಆಗಬಹುದೇನೋ. ಬೇರೆಡೆಯಿಂದ ಅಕ್ಕಿ ಇಲ್ಲಿ ಬಂದು ಎಷ್ಟೋ ಹಂತಗಳಲ್ಲಿ ಸಂರಕ್ಷಿಸಲ್ಪಟ್ಟಿರುತ್ತದೆ. ಅಂತ ಅಕ್ಕಿಯನ್ನೂ (ಬಡತನದ ಅನಿವಾರ್ಯತೆಗಾಗೇ ಅಂದುಕೊಂಡರೂ) ತಿನ್ನೋ ಜನಕ್ಕೆ ಆಹಾರ ಧಾನ್ಯದ ಏಕತಾನತೆಯೇ ಸಾಕಷ್ಟು ರೋಗಗಳಿಗೆ ಆಹ್ವಾನ ನೀಡುತ್ತದೆ. ಇಷ್ಟಕ್ಕೂ ಇವರು ಕೊಡೋದು ಅಕ್ಕಿ ಮಾತ್ರ. ಉಳಿದ ವಸ್ತುಗಳನ್ನ ಹೊಂದಿಸಿಕೊಂಡು ಬದುಕಲಾದರೂ ಶಕ್ತಿ ಬೇಕಲ್ಲ? ಬರೀ ಅನ್ನವನ್ನೇ ತಿಂದೂ ತಿಂದೂ ಶಕ್ತಿಗುಂದೋ ಜನಕ್ಕೆ ದುಡಿಯೋ ಶಕ್ತಿಯಾದರೂ ಎಲ್ಲಿಂದ ಬರಬೇಕು? ಗೋದಾಮುಗಳಲ್ಲಿ ಬಿದ್ದು ಒದ್ದಾಡಿ ಔಷಧಿ ಲೇಪಿಸಿಕೊಂಡು ಬರೋ ಅಕ್ಕಿಯಿಂದ ಬರೋ ಕಾಯಿಲೆ ಒಂದು ಕಡೆಯಾದರೆ, ಆಹಾರಧಾನ್ಯದ ಏಕತಾನತೆಯಿಂದ ಬರೋ ಕಾಯಿಲೆ ಮತ್ತೊಂದು ಕಡೆ. ಒಟ್ಟಾರೆ ಇದು ಒಂದು ವರ್ಗದ ಜನರನ್ನ ದೈಹಿಕ ಮತ್ತು ಮಾನಸಿಕವಾಗಿ ಜಡವಾಗಿಸುವ ಕೆಲಸ. ತುತ್ತಿನ ಚೀಲ ತುಂಬುವ ನೆಪದಲ್ಲಿ ಇಲ್ಲಿ ಶಕ್ತಿಹೀರುವ ಕೆಲಸವಾಗುತ್ತಿದೆಯಷ್ಟೆ. ಅಂತಹ ಶಕ್ತಿ ಹೀನ ತಂದೆ ತಾಯಿಗಳು ಎಂತ ಶಕ್ತಿವಂತ ಮಕ್ಕಳನ್ನು ತಾನೇ ಹೆರಲು ಸಾಧ್ಯ?
ಈ ಯೋಜನೆಯನ್ನ ಒಂದು ಬಲುದೊಡ್ಡ ಸಾಮಾಜಿಕ ಕ್ರಾಂತಿಯಂತೆ ಬಿಂಬಿಸಿರೋದರಿಂದ ಮುಂಬರುವ ಸರ್ಕಾರಗಳು ಈ ಯೋಜನೆಯನ್ನು ಕೈಬಿಡಲಾಗುವುದಿಲ್ಲ. ಬೊಕ್ಕಸದ ಏರುಪೇರೇನೇ ಆದರೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನ ಮುಂದುವರೆಸಿಕೊಂಡು ಹೋಗಲೇಬೇಕಾಗುತ್ತದೆ. ಇದರಿಂದ ಮುಂದಿನ ಸಂತಿತಿಯ ಆಹಾರ, ಆರೋಗ್ಯ, ಒಟ್ಟು ವ್ಯವಸ್ಥೆಯ ಮೇಲಾಗೋ ದೀರ್ಘಕಾಲೀನ ಪರಿಣಾಮವಿದೆಯಲ್ಲ, ಅದು ಭಯಂಕರ ಅಪಾಯಕಾರಿ. ಮಕ್ಕಳಿಗೆ ಪೋಷಕಾಂಷದ ಕೊರತೆ ಕಾಡಬಾರದು ಅಂತ ಪ್ರಚಾರ ಮಾಡೋ ಸರ್ಕಾರಗಳು ಧಾನ್ಯವೊಂದನ್ನ ಈ ಪರಿ ಹಂಚುತ್ತಾ ಹೋದರೆ ಅವರ ಆರೋಗ್ಯವನ್ನು ಕಾಯ್ದಂತೆ ಎಲ್ಲಾಯಿತು? ಸಮತೋಲನ ಆಹಾರ ಸಿಕ್ಕಂತೆಲ್ಲಾಯಿತು? ಇನ್ನು ಈ ಯೋಜನೆ ಹೆಸರಲ್ಲಾಗೋ ಭ್ರಷ್ಟಾಚಾರವೋ ಯೋಜನೆ ಜಾರಿಗೆ ಮುನ್ನವೇ ಬಿಪಿಎಲ್ ಕಾರ್ಡ್ನ ಮಾರಾಟ ಜಾಲ ಆರಂಭವಾಗಿಯೇ ಬಿಟ್ಟಿದೆ.
ಈ ಯೋಜನೆ ಜನರನ್ನ ಸೋಮಾರಿಗಳನ್ನಾಗಿಸುತ್ತದೆ ಎಂಬ ವಾದವೂ ಇದೆ. ಈ ವಾದವನ್ನು ಅಲ್ಲಗಳೆದು ಪ್ರತಿವಾದ ಮಾಡುವವರಿಗೆ ಕೃಷಿಕರು ಎದುರಿಸುತ್ತಿರೋ ಬಹುದೊಡ್ಡ ಕಾರ್ಮಿಕ ಸಮಸ್ಯೆ ಖಂಡಿತವಾಗಿಯೂ ಗೊತ್ತಿಲ್ಲ. ಕರ್ನಾಟಕದ ಮೂಲೆ ಮೂಲೆಯ ರೈತನನ್ನೂ ಮಾತಾಡಿಸಿ ನೋಡಿ. ಇರೋ ಅನೇಕಾನೇಕ ಸಮಸ್ಯೆಗಳ ಜೊತೆಗೆ, ಆಳುಗಳೇ ಸಿಗದೇ ಜಮೀನನ್ನ ಮಾರಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಅದೆಷ್ಟೋ ರೈತರು. 'ಅಂದರೇನು? ಅವರು ಯಾವಾಗಲೂ ದುಡಿವ ವರ್ಗವಾಗೇ ಯಾಕಿರಬೇಕು?' ಅನ್ನೋ ಪ್ರತಿವಾದಿಗಳೇ ಕೇಳಿ. ಸಮಾಜ, ವ್ಯವಸ್ಥೆ ಎಂದ ಮೇಲೆ ಅಲ್ಲಿ ಎಲ್ಲ ಥರದ ಜನರೂ ಇರಲೇಬೇಕು. ಇತ್ತೀಚೆಗೆ ಬೆಂಗಳೂರಲ್ಲಿ ಪೌರಕಾರ್ಮಿಕರು ಮುಷ್ಕರ ಹೂಡಿದಾಗ ರಸ್ತೆಗಳಲ್ಲಿ ಕಸ ಬಿದ್ದು ಕೊಳೆತು ನಾರುತ್ತಿದ್ದದ್ದನ್ನ ನೋಡುತ್ತಾ ನಾವೆಲ್ಲಾ ಮೂಗುಮುಚ್ಚಿಕೊಂಡೆವೇ ಹೊರತು ಬೇರೇನನ್ನೂ ಮಾಡಲಿಲ್ಲ. ಕೆಲಸ ಯಾವುದಾದರೇನು. ಆ ಕೆಲಸವನ್ನ, ಅದನ್ನು ಮಾಡುವ ವರ್ಗವನ್ನು ಗೌರವಿಸೋ ಮನಸ್ಸು ನಮಗಿರಬೇಕಷ್ಟೆ. ಅಕ್ಕಿ ಕೊಡಿ ಅವರು ಹಾಯಾಗಿರಲಿ ಅನ್ನೋರಿಗಿರೋದು ಕೇವಲ ಕರುಣೆಯೇ ಹೊರತು ಅಂತಾ ಮನಸ್ಥಿತಿಯಲ್ಲ. ಹೀಗೆ ಅಕ್ಕಿ ಕೊಡೋದರಿಂದ ಆಗೋ ಉಪಯೋಗಾನ ಕಣ್ಣಾರೆ ಒಮ್ಮೆ ನೋಡ ಬನ್ನಿ ಬೇಕಾದರೆ. ಅದು ತಲುಪೋದು ಅತಿ ಕಡಿಮೆ ಸಂಖ್ಯೆ ಫಲಾನುಭವಿಗಳಿಗೆ. ಉಳಿದಂತೆ ಅದರ ನಿಜವಾದ ಫಲಾನುಭವಿಗಳ ಗುಂಪು ಬೇರೆಯೇ ಇರುತ್ತದೆ. ಈಗಾಗಲೇ ಸರ್ಕಾರದ ಅನೇಕ ಯೋಜನೆಗಳಲ್ಲಿ ಇದು ಸಾಬೀತೂ ಆಗಿದೆ. ಹೇಳಿ ನಿಜವಾದ ಬಡವನೊಬ್ಬನ ಮನೆಗೆ ಒಂದು ಹಿಡಿ ಅಕ್ಕಿ ತಲುಪಿಸಲು ಊರೆಲ್ಲ ಅಕ್ಕಿ ಚೆಲ್ಲಿಕೊಂಡು ಬರಬೇಕಾ? ಬೊಕ್ಕಸ ಸರ್ಕಾರದ್ದು ಅಂದರೆ ಪ್ರತಿ ಪ್ರಜೆಯದ್ದು. ಅದರ ಸೋರಿಕೆಯ ಹೊಣೆಯನ್ನ ಎಲ್ಲರೂ ಹೊರಬೇಕಾಗುತ್ತದೆ. ಮಾತ್ರವಲ್ಲ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪಿದೆಯಾ ಪೋಲಾಗುತ್ತಿದೆಯಾ ಅಂತ ನೋಡಿಕೊಂಡು ಕೂರಲು ಯಾವ ಸರ್ಕಾರಕ್ಕೂ ಪುರಸೊತ್ತಿಲ್ಲ ಎಂಬುದು ಕೂಡ ಎಲ್ಲರಿಗೂ ಗೊತ್ತು.
ಇಷ್ಟಕ್ಕೂ ಇದು ಬಡವರನ್ನ ಬಡವರೆಂದು, ಮತ್ತಷ್ಟು ಬಡವರೆಂದು ಹೆಮ್ಮೆಯಿಂದ ಘೋಷಿಕೊಳ್ಳುವಂತೆ ಮಾಡಿದಂತಾಯಿತು. ಇದರಿಂದ ಅವರ ಉದ್ಧಾರವೆಲ್ಲಾಯಿತು? ಸಾಮಾಜಿಕವಾಗಿ ಅವರನ್ನ ಮೇಲುಸ್ತರಕ್ಕೆ ತಂದಂತೆಲ್ಲಾಯಿತು? ಹಾಗೆ ಸಹಾಯ, ಕ್ರಾಂತಿ ಮಾಡಲೇಬೇಕೆಂದಿದ್ದರೆ ಬೇಕಾದಷ್ಟು ಮಾರ್ಗಗಳಿವೆ. ದುಡಿವ ಕೈಗಳಿಗೆ ಕೆಲಸ ಕೊಡಿ. ರೈತರ ಸಮಸ್ಯೆ ಪರಿಹರಿಸಿ, ದುಡಿವ ವರ್ಗಕ್ಕೆ ಕೈತುಂಬಾ ಕೂಲಿ ಕೊಡೋ ಶಕ್ತಿ ನೀಡಿ. ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ. ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಇಳಿಸಿ.
ಅದನ್ನು ಬಿಟ್ಟು ರುಪಾಯಿಗೆ ಕೆಜಿ ಅಕ್ಕಿ ಕೊಟ್ಟರೆ, ಮೆಟ್ರಿಕ್ ಟನ್ನುಗಳ ಲೆಕ್ಕದಲ್ಲಿ ಅಕ್ಕಿ ಬಂದು ಬೀಳುತ್ತದೆ. ತೀರಾ ಹಂಚಲೇಬೇಕೆಂಬ ಹಠಕ್ಕೆ ಬಿದ್ದರೆ ಬಗೆಬಗೆಯ ಧಾನ್ಯಗಳನ್ನು ಹಂಚಿ. ಉತ್ತರ ಕರ್ನಾಟಕಕ್ಕೆ ಜೋಳ, ಮೈಸೂರು ಭಾಗದವರಿಗೆ ರಾಗಿ, ಗೋದಿ ಮತ್ತು ಸಿರಿಧಾನ್ಯಗಳನ್ನೂ ಹಂಚಿ. ಅದನ್ನು ನಮ್ಮ ರೈತರಿಂದಲೇ ಖರೀದಿಸಿ. ಆಗ ಬೆಂಬಲ ಬೆಲೆ ಕೊಟ್ಟಂತೆಯೂ ಆಯಿತು. ವೈವಿಧ್ಯಮಯ ಧಾನ್ಯಗಳ ಬೆಳೆಗೆ ಬೆಂಬಲ, ಅದರ ಹಂಚಿಕೆ, ಎರಡೂ ಆಯಿತು. ಮಣ್ಣಿನ ಫಲವತ್ತತೆಯೂ ಹೆಚ್ಚಿ, ಜನರ ಅರೋಗ್ಯ, ಮಣ್ಣಿನ ಆರೋಗ್ಯ ಎರಡೂ ಉಳಿದಂತಾಗುವುದಿಲ್ಲವೆ? ಆಗ ಮುಂದಿನ ಸಂತತಿಯೂ ದಷ್ಟಪುಷ್ಟವಾದೀತು. ಅದನ್ನು ಬಿಟ್ಟು ಹೊರರಾಜ್ಯದಿಂದ ಅಕ್ಕಿ ಖರೀದಿಸಿ ಹಂಚುವುದು ರೈತನ ಬದುಕಿಗೆ, ಶ್ರಮಿಕರ ದೇಹಕ್ಕೆ, ಅವರ ಸ್ವಾಭಿಮಾನಕ್ಕೆ, ಮಣ್ಣಿಗೆ ಎಲ್ಲದಕ್ಕೂ ರೋಗ ಹಂಚಿದಂತೆ.
- ಪಿ. ಕುಸುಮ
ಹವ್ಯಾಸಿ ಲೇಖಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

